ಹಜ್ ಯಾತ್ರೆಗೆ ವಿಮಾನವನ್ನೇರುವ ನಿಗದಿತ ತಾಣಗಳ ಮುಂದುವರಿಕೆ

Update: 2017-10-17 13:18 GMT

ಹೊಸದಿಲ್ಲಿ,ಅ.17: ಹಜ್ ಯಾತ್ರಾರ್ಥಿಗಳು ಸೌದಿ ಅರೇಬಿಯಾಕ್ಕೆ ತೆರಳಲು ವಿಮಾನವನ್ನು ಹತ್ತುವ ತಾಣಗಳ ಸಂಖ್ಯೆಯನ್ನು ಒಂಭತ್ತಕ್ಕೆ ತಗ್ಗಿಸುವಂತೆ ತಜ್ಞರ ಸಮಿತಿಯೊಂದು ಶಿಫಾರಸು ಮಾಡಿದೆಯಾದರೂ, ಯಾತ್ರಾರ್ಥಿಗಳು ಮತ್ತು ರಾಜ್ಯ ಸರಕಾರಗಳ ಕಳವಳಗಳನ್ನು ನಿವಾರಿಸಲು ಹಾಲಿ ಇರುವ ಇಂತಹ ಎಲ್ಲ 21 ತಾಣಗಳನ್ನು ಮುಂದುವರಿಸಲು ಕೇಂದ್ರ ಸರಕಾರವು ನಿರ್ಧರಿಸಿದೆ.

ಹಜ್ ಯಾತ್ರೆಗೆ ಸಬ್ಸಿಡಿ ರದ್ದತಿ ಮತ್ತು ಪುರುಷರ ಅನುಪಸ್ಥಿತಿಯಲ್ಲಿ 45 ವರ್ಷಕ್ಕೂ ಮೇಲ್ಪಟ್ಟ ಮಹಿಳೆಯರು ಕನಿಷ್ಠ ನಾಲ್ವರ ಗುಂಪುಗಳಲ್ಲಿ ಹಜ್‌ಗೆ ತೆರಳಲು ಅವಕಾಶ ಸೇರಿದಂತೆ ಸರಕಾರವು ನೇಮಿಸಿದ್ದ ಸಮಿತಿಯ ಇತರ ಎಲ್ಲ ಶಿಫಾರಸುಗಳನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಕ್ವಿ ಅವರು ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಆದರೆ ತಮಗೆ ಸಿದ್ಧತೆಗೆ ಇನ್ನಷ್ಟು ಕಾಲಾವಕಾಶ ಅಗತ್ಯವಿರುವುದರಿಂದ ಈ ವರ್ಷ ಯಾವದೇ ಬದಲಾವಣೆಗಳನ್ನು ಮಾಡುವುದು ಬೇಡ ಎಂದು ಬಿಹಾರ, ರಾಜಸ್ಥಾನ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಕೇಂದ್ರಕ್ಕೆ ಪತ್ರ ಬರೆದಿದ್ದವು. ಅವು ಎತ್ತಿರುವ ವಿಷಯಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿದ ಬಳಿಕ ಅವುಗಳ ಮೊರೆಯನ್ನು ಕೇಳುವುದು ಅಗತ್ಯ ಎಂಬ ಅಭಿಪ್ರಾಯಕ್ಕೆ ಬಂದಿದ್ದೇವೆ ಎಂದು ನಕ್ವಿ ಹೇಳಿದರು.

ಹಜ್ ನೀತಿಯನ್ನು ಪುನರ್‌ಪರಿಶೀಲಿಸಲು ಮತ್ತು 2018-2022ರ ಅವಧಿಗೆ ನೂತನ ನೀತಿಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯವು ಈ ವರ್ಷದ ಆರಂಭದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ಕೇಂದ್ರ ಕಾರ್ಯದರ್ಶಿ ಅಫ್ಝಲ್ ಅಮಾನುಲ್ಲಾ ನೇತೃತ್ವದ ಸಮಿತಿಯು ಕಳೆದ ವಾರ ಸರಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News