ಬ್ರೆಝಿಲ್ ಗೆ ಅಜೇಯ ಗೆಲುವಿನ ಓಟ ಮುಂದುವರಿಸುವ ಗುರಿ

Update: 2017-10-17 18:04 GMT

ಕೊಚ್ಚಿ, ಅ.17: ಗ್ರೂಪ್ ಹಂತದ ಎಲ್ಲ ಮೂರು ಪಂದ್ಯಗಳಲ್ಲೂ ಜಯ ಗಳಿಸಿ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಬ್ರೆಝಿಲ್ ತಂಡ ಫಿಫಾ ಅಂಡರ್-17 ವಿಶ್ವಕಪ್‌ನ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬುಧವಾರ ಹೊಂಡುರಾಸ್ ತಂಡವನ್ನು ಎದುರಿಸಲಿದೆ.

ನಾಲ್ಕನೆ ಬಾರಿ ಪ್ರಶಸ್ತಿ ಗೆಲ್ಲುವ ಪ್ರಯತ್ನದಲ್ಲಿರುವ ಬ್ರೆಝಿಲ್ ತಂಡ ‘ಡಿ’ ಗುಂಪಿನ ಎಲ್ಲ ಮೂರು ಪಂದ್ಯಗಳಲ್ಲೂ ಜಯ ಗಳಿಸಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿತ್ತು. ಸ್ಪೇನ್ ವಿರುದ್ಧ 2-1 ಅಂತರದಲ್ಲಿ ಜಯ ಗಳಿಸುವ ಮೂಲಕ ವಿಶ್ವಕಪ್‌ನಲ್ಲಿ ಅಭಿಯಾನ ಆರಂಭಿಸಿದ್ದ ಬ್ರೆಝಿಲ್ ತಂಡ ಬಳಿಕ ಎರಡು ಪಂದ್ಯಗಳಲ್ಲಿ ಉತ್ತರ ಕೊರಿಯಾ ಮತ್ತು ನೈಜರ್ ವಿರುದ್ಧ 2-0 ಅಂತರದಲ್ಲಿ ಗಳಿಸಿತ್ತು.

 ಬ್ರೆಝಿಲ್‌ಗೆ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಇ’ ಗುಂಪಿನಲ್ಲಿ ಮೂರನೆ ಸ್ಥಾನ ಪಡೆದ ಹೊಂಡುರಾಸ್ ತಂಡ ಕಠಿಣ ಸವಾಲು ನೀಡುವ ನಿಟ್ಟಿನಲ್ಲಿ ತಯಾರಿ ನಡೆಸಿದೆ.ಹೊಂಡುರಾಸ್ ತಂಡ 1 ಪಂದ್ಯದಲ್ಲಿ ಜಯ ಗಳಿಸಿ ಪ್ರಿ ಕ್ವಾರ್ಟರ್ ಫೈನಲ್ ತಲುಪಿದೆ. ಬ್ರೆಝಿಲ್ ತಂಡ ಈ ಪಂದ್ಯದಲ್ಲಿ ಜಯ ಗಳಿಸಿದರೆ ಅ.22ರಂದು ಕೋಲ್ಕತಾದಲ್ಲಿ ನಡೆಯಲಿರುವ ಕ್ವಾರ್ಟರ್ ಫೈನಲ್‌ನಲ್ಲಿ ಜರ್ಮನಿಯ ಸವಾಲು ಎದುರಾಗಲಿದೆ. ಜರ್ಮನಿಯು ಸೋಮವಾರ ಹೊಸದಿಲ್ಲಿಯಲ್ಲಿ ನಡೆದ ಪ್ರಿ ಕ್ವಾರ್ಟರ್ ಫೈನಲ್‌ನಲ್ಲಿ ಕೊಲಂಬಿಯಾ ವಿರುದ್ಧ 4-0 ಅಂತರದಲ್ಲಿ ಭರ್ಜರಿ ಜಯ ಗಳಿಸಿ ಕ್ವಾರ್ಟರ್ ಫೈನಲ್ ತಲುಪಿದೆ.

ಬ್ರೆಝಿಲ್ ಮತ್ತು ಹೊಂಡುರಾಸ್ ಫಿಫಾ ಅಂಡರ್-17 ವಿಶ್ವಕಪ್‌ನಲ್ಲಿ 2ನೆ ಬಾರಿ ಮುಖಾಮುಖಿಯಾಗಲಿದೆ. ಈ ಮೊದಲು ಯುಎಇಯಲ್ಲಿ 2013ರಲ್ಲಿ ನಡೆದ ಫೈನಲ್‌ನಲ್ಲಿ ಹೊಂಡುರಾಸ್‌ನ್ನು ಬ್ರೆಝಿಲ್ 3-0 ಅಂತರದಲ್ಲಿ ಮಣಿಸಿತ್ತು.

ಹೊಂಡುರಾಸ್ ತಂಡ ಗ್ರೂಪ್ ಹಂತದ ಪಂದ್ಯದಲ್ಲಿ ಜಪಾನ್ ವಿರುದ್ಧ 1-6 ಮತ್ತು ಫ್ರಾನ್ಸ್ ವಿರುದ್ಧ 1-5 ಅಂತರದಲ್ಲಿ ಸೋಲು ಅನುಭವಿಸಿತ್ತು. ಆದರೆ ನ್ಯೂ ಕ್ಲಾಡೋನಿಯಾ ವಿರುದ್ಧ 5-0 ಭರ್ಜರಿ ಗೆಲುವಿನೊಂದಿಗೆ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಅವಕಾಶ ದೃಢಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News