ತುಳುವರ ‘ಪರ್ಬ’ ದೀಪಾವಳಿ

Update: 2017-10-17 18:07 GMT

ಭಾರತಾದ್ಯಂತ ದೀಪಾವಳಿ ಎಂದು ಆಚರಣೆಯಲ್ಲಿರುವ ಹಬ್ಬವು ತುಳುನಾಡಿನಲ್ಲಿ ‘ಪರ್ಬ’ವೆಂದು ಆಚರಣೆಯಲ್ಲಿದೆ. ಬೊಂತೆಲ್(ಅಕ್ಟೋಬರ್-ನವೆಂಬರ್) ತಿಂಗಳಲ್ಲಿ ಬರುವ ಚತುರ್ದಶಿ, ಅಮಾವಾಸ್ಯೆ ಮತ್ತು ಪಾಡ್ಯದಂದು ಈ ಪರ್ಬವನ್ನು ಆಚರಿಸಲಾಗುತ್ತದೆ. ನಿರಂತರವಾಗಿ ನಡೆಯುವ ಮೂರು ದಿನಗಳ ಹಬ್ಬವಾದ ದೀಪಾವಳಿಯನ್ನು ತುಳುವರು ಮೊದಲನೆಯ ದಿನ ನರಕ ಚತುರ್ದಶಿಯನ್ನು ಮೀಪಿನ ಪರ್ಬ(ಮೀಯುವ ಹಬ್ಬ), ಎರಡನೆಯ ದಿನವಾದ ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆ ಮತ್ತು ಮೂರನೆಯ ದಿನವಾದ ಪಾಡ್ಯವನ್ನು ಬಲಿಪಾಡ್ಯಮಿ ಎಂದು ಆಚರಿಸುತ್ತಾರೆ. ತುಳುವರು ಬೇರೆ ಹಬ್ಬಕ್ಕಿಂತ ವಿಶಿಷ್ಟವಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

ನರಕ ಚತುರ್ದಶಿಯ ಹಿಂದಿನ ದಿನವೇ ಹಬ್ಬಕ್ಕೆ ತಯಾರಿ ಮಾಡಲಾಗುತ್ತದೆ. ಅಂದು ಸ್ನಾನದ ನೀರಿನ ಹಂಡೆಯನ್ನು ತೊಳೆದು ಶುಚಿಗೊಳಿಸಿ ಜೇಡಿ ಮಣ್ಣಿನಿಂದ ಅದಕ್ಕೆ ಚಿತ್ತಾರ ಬಿಡಿಸಲಾಗುತ್ತದೆ. ಹಂಡೆಯ ಕೊರಳಿಗೆ ಮುಳ್ಳು ಸೌತೆಯ ಬಳ್ಳಿ ಅಥವಾ ಗೋಲಂಬೂರು ಎಂಬ ಬಳ್ಳಿಯನ್ನು ಕಟ್ಟಲಾಗುತ್ತದೆ. ನರಕ ಚತುರ್ದಶಿಯಂದು ನಸುಕಿನಲ್ಲೇ ಎದ್ದು ಹಂಡೆನೀರನ್ನು ಬಿಸಿಮಾಡುತ್ತಾರೆ. ನಂತರ ಮನೆಮಂದಿಯೆಲ್ಲಾ ಶರೀರಕ್ಕೆ ಎಣ್ಣೆ ಹಚ್ಚಿ ಅಭ್ಯಂಜನ ಸ್ನಾನಮಾಡುತ್ತಾರೆ. ಕೆಲವೊಂದು ಕಡೆ ಸ್ನಾನ ಮಾಡುವಾಗ ಎಲ್ಲರೂ ಹಂಡೆಗೆ ಪಾವಲಿ(ನಾಣ್ಯ)ಗಳನ್ನು ಹಾಕುವ ಕ್ರಮವಿದೆ. ಕೊನೆಗೆ ಯಾರು ಸ್ನಾನ ಮಾಡುವರೋ ಅವರಿಗೆ ಆ ಪಾವಲಿಗಳು ಸೇರುತ್ತವೆ. ಅಂದು ಅವಲಕ್ಕಿ ಕಜ್ಜಾಯ ವಿಶೇಷ ತಿನಿಸಾಗಿ ಮಾಡಿ ಮನೆಮಂದಿಯೆಲ್ಲಾ ಸೇರಿ ತಿನ್ನುತ್ತಾರೆ. ಅಲ್ಲದೆ ಅವಲಕ್ಕಿಯನ್ನು ಮನೆಗೆ ಬಂದವರಿಗೂ ಯಥೇಚ್ಛವಾಗಿ ಹಂಚಲಾಗುತ್ತದೆ. ಇದನ್ನು ತುಳುವರು ಪರ್ಬದ ಬಜಿಲ್(ಹಬ್ಬದ ಅವಲಕ್ಕಿ) ಎಂದು ಕರೆಯುತ್ತಾರೆ. ಹಬ್ಬದ ಅವಲಕ್ಕಿಯು ಧಾರಾಳತನದ ಸಂಕೇತವೂ ಹೌದು.

ಎರಡನೆಯ ದಿನವಾದ ಅಮಾವಾಸ್ಯೆಯಂದು ವೈದಿಕರು ಲಕ್ಷ್ಮೀ ಪೂಜೆ ಮಾಡುತ್ತಾರೆ. ಆದರೆ ಬ್ರಾಹ್ಮಣೇತರ ವರ್ಗದಲ್ಲಿ ಅಂತಹ ಯಾವುದೇ ಆಚರಣೆ ಕಂಡು ಬರುವುದಿಲ್ಲ. ಅಂದು ವ್ಯಾಪಾರಸ್ಥರು ತಮ್ಮ ತೂಕದ ಪುಸ್ತಕ, ತಕ್ಕಡಿ, ಹಣ ಇಡುವ ಕಪಾಟುಗಳಿಗೆ ಪೂಜೆ ಮಾಡುತ್ತಾರೆ.

ಮೂರನೆಯ ದಿನವಾದ ಪಾಡ್ಯದಂದು ವಿಶೇಷವಾಗಿ ಬಲೀಂದ್ರ ಪೂಜೆ ಹಾಗೂ ಹಾಗೂ ಗೋಪೂಜೆ ಮಾಡಲಾಗುತ್ತದೆ. ಅಂದು ಮಧ್ಯಾಹ್ನ ತಮ್ಮ ಹಟ್ಟಿಯಲ್ಲಿರುವ ದನ, ಕರು, ಎಮ್ಮೆ, ಕೋಣಗಳನ್ನು ಸ್ನಾನ ಮಾಡಿಸಿ ಅವುಗಳ ಕೊರಳಿಗೆ ಚೆಂಡು ಹೂವಿನ ಮಾಲೆಗಳನ್ನು ಹಾಕಿ ಅಲಂಕರಿಸುತ್ತಾರೆ. ಅದೇ ರೀತಿ ನೊಗ, ನೇಗಿಲು, ಭತ್ತ ಕುಟ್ಟುವ ಒನಕೆ, ಹಾರೆ, ಪಿಕ್ಕಾಸು, ಕತ್ತಿ, ಪರ್ದತ್ತಿ(ಪೈರು ಕೊಯ್ಯುವ ಕತ್ತಿ), ಕಳಸೆ, ಇಸ್‌ಮುಳ್ಳು (ಹಟ್ಟಿಗೊಬ್ಬರ ತೆಗೆಯುವ ಸಾಧನ) ಮುಂತಾದ ಕೃಷಿ ಪರಿಕರಗಳನ್ನು ತೊಳೆದು ಜೋಡಿಸಿಡುತ್ತಾರೆ. ನಂತರ ಇವುಗಳಿಗೆ ಅಕ್ಕಿಹಿಟ್ಟಿನ ನೀರು ಚಿಮುಕಿಸಿ ಹೂಗಳಿರುವ ಕೆಲವು ಬಳ್ಳಿಗಳಿಂದ ಮತ್ತು ಚೆಂಡು ಹೂ, ಕಿಸ್ಗಾರ ಹೂ, ಪಾದೆ ಹೂ, ಮಿಠಾಯಿ ಹೂ, ರಥ ಹೂ, ಹಿಂಗಾರದಿಂದ ಅಲಂಕರಿಸಲಾಗುತ್ತದೆ. ಬಳಿಕ ನಾಲ್ಕೈದು ಅಡಿ ಉದ್ದದ ಹಾಲೆ ಮರದ ಕಂಬವೊಂದನ್ನು ಗದ್ದೆಯ ಹುಣಿಯೊಂದರಲ್ಲಿ ವಿಧಿವತ್ತಾಗಿ ನೆಡುತ್ತಾರೆ. ಇದಕ್ಕೆ ಎರಡು ಮೂರು ಕವಲುಗಳಿರುವ ಕಂಬಗಳನ್ನೇ ಆರಿಸುತ್ತಾರೆ. ಆ ಕವಲಿಗೆ ಅಡ್ಡಲಾಗಿ ಕೋಲುಗಳನ್ನು ಕಟ್ಟುತ್ತಾರೆ. ಅದರ ಆಧಾರದಲ್ಲಿ ಹೂವಿನ ಮಾಲೆಗಳಿಂದ ಅಲಂಕಾರ ಮಾಡುತ್ತಾರೆ. ಇದನ್ನು ಬಲೆಕಿ ಮರ ಅಥವಾ ಬಲೀಂದ್ರ ಮರವೆಂದು ಕರೆಯುತ್ತಾರೆ. ಅದರ ತುದಿಗೆ ಬಟ್ಟೆಯೊಂದನ್ನು ದೊಂದಿಯಾಕಾರದಲ್ಲಿ ಕಟ್ಟಿ ಅದನ್ನು ತೆಂಗಿನ ಎಣ್ಣೆಯಿಂದ ಅದ್ದಿ ದೀಪ ಉರಿಯುವಂತೆ ಮಾಡುತ್ತಾರೆ. ಈ ಕಂಬವು ಬಲೀಂದ್ರನನ್ನು ಪ್ರತಿನಿಧಿಸುವ ಸಂಕೇತವಾಗಿದೆ.

ಸೂರ್ಯಾಸ್ತವಾಗುತ್ತಿದ್ದಂತೆ ಗೋಪೂಜೆ, ಬಲೀಂದ್ರ ಪೂಜೆಗಳಿಗೆ ಸಿದ್ಧತೆ ಮಾಡಲಾಗುತ್ತದೆ. ಮನೆಯ ಅಂಗಳ, ಕಿಟಕಿ-ಬಾಗಿಲುಗಳ ಮುಂದೆ, ಹೊಸ್ತಿಲು, ನಡುಮನೆ, ಒಳಮನೆ, ಹೊರಗಿನ ಹಜಾರ, ಹಟ್ಟಿ, ಗೊಬ್ಬರದ ರಾಶಿ, ಬೈಹುಲ್ಲಿನ ತುಪ್ಪೆಗಳಿಗೆ ಸಣ್ಣಸಣ್ಣ ಮಣ್ಣಿನ ಹಣತೆಗಳನ್ನು ಇಟ್ಟು ದೀಪ ಬೆಳಗಿಸಲಾಗುತ್ತದೆ. ಇದು ಸಾಂಕೇತಿಕವಾಗಿ ಬಲೀಂದ್ರನನ್ನು ಸ್ವಾಗತಿಸುವ ಸಂಭ್ರಮವೂ ಹೌದು. ನಂತರ ಒಂದು ಗೆರಸೆ(ತಡ್ಪೆ)ಯಲ್ಲಿ ಮೂರು ಸಾಲಿನಲ್ಲಿ ಅಕ್ಕಿ, ಭತ್ತ ಮತ್ತು ಅವಲಕ್ಕಿಯಿಡುತ್ತಾರೆ. ಬಳಿಕ ತೆಂಗಿನಕಾಯಿಯನ್ನು ಎರಡು ಹೋಳು ಮಾಡಿ ಇಟ್ಟು, ದೀಪ ಬೆಳಗಿಸಿ ದನಗಳಿಗೆ ಆರತಿ ಮಾಡುತ್ತಾರೆ. ಈ ಸಂದರ್ಭ ಗೋವುಗಳಿಗೆ ತಿನ್ನಲು ಚಪ್ಪೆಗಟ್ಟಿ(ಸಪ್ಪೆ ಕಡುಬ)ಯನ್ನು ಕೊಡಲಾಗುತ್ತದೆ. ಬಳಿಕ ದೀಪ ಬೆಳಗುತ್ತಿರುವ ಗೆರಸೆಯನ್ನು ಬಲೀಂದ್ರನ ಸಂಕೇತವಾಗಿ ನೆಟ್ಟಿರುವ ಕಂಬದ ಬುಡದಲ್ಲಿ ಶುದ್ಧವಾಗಿ ತೊಳೆದಿರಿಸಿದ ಮಣೆಯ ಮೇಲಿಟ್ಟು ಆರತಿ ಮಾಡಿ, ಬಲಿಚಕ್ರವರ್ತಿಯ ಕಥೆಯನ್ನು ಸಾರುವ ಕಥೆಯನ್ನು ಪಾಡ್ದನ ಅಥವಾ ಗಾಯನವನ್ನು ಹಾಡುತ್ತಾರೆ. ಇದನ್ನು ‘ಬಲಿಯೇಂದ್ರ ಲೆಪ್ಪುನು’(ಬಲಿಯೇಂದ್ರ ಕರೆಯುವುದು) ಎಂದು ಹೇಳುತ್ತಾರೆ.

ಬಲಿಯೇಂದ್ರನನ್ನು ವಿಶಿಷ್ಟವಾಗಿ ಕರೆಯಲಾಗುತ್ತದೆ. ಉದಾ: ಕರ್ಗಲ್‌ಲ್ ಕಾಯ್ಪೋನಗ, ಬೊಲ್‌ಕಲ್‌ಲ್ ಪೂ ಪೋನಗ, ಉಪ್ಪು ಕರ್ಪೂರ ಆನಗ, ಜಾಲ್ ಪಾದೆ ಆನಗ, ಉರ್ದು ಮದ್ದೋಲಿ ಆನಗ, ಗೊಡ್ಡೆರ್ಮೆ ಗೋಣೆ ಆನಗ, ಎರು ದಡ್ಡೆ ಆನಗ, ನೆಕ್ಕಿದಡಿಟ್ ಆಟ ಆನಗ, ತುಂಬೆದಡಿಟ್ ಕೂಟ ಆನಗ, ದೆಂಬೆಲ್‌ಗ್ ಪಾಂಪು ಪಾಡ್‌ನಗ, ಅಲೆಟ್ಟ್ ಬೊಲ್ನೆಯಿ ಮುರ್ಕುನಗ, ದಂಟದಜ್ಜಿ ಮದ್ಮಲಾನಗ, ಗುರ್ಗುಂಜಿದ ಕಲೆ ಮಾಜಿನಗ ಒರಬತ್ತ್ ಪೋ... ಬಲಿಯೇಂದ್ರ... ಕೂ... ಕೂ... ಕೂ... ಎಂದು ಅಕ್ಕಿ ಹಾರಿಸಿ ಕರೆಯುತ್ತಾರೆ. (ಕಗ್ಗಲ್ಲು ಕಾಯಿಕೊಡುವಾಗ, ಬೆಳ್ಗಲ್ಲು ಹೂಬಿಡುವಾಗ, ಉಪ್ಪುಕರ್ಪೂರ ಆಗುವಾಗ, ಅಂಗಳ ಬಂಡೆಹಾಸು ಆಗುವಾಗ, ಉದ್ದು ಮದ್ದಳೆ ಆಗುವಾಗ, ಗೊಡ್ಡೆಮ್ಮೆ ಕೋಣ ಆಗುವಾಗ, ಎತ್ತು ಮಂಗ ಆಗುವಾಗ, ನೆಕ್ಕಿ ಗಿಡದಡಿ ಯಕ್ಷಗಾನ ಆಗುವಾಗ, ತುಂಬೆ ಗಿಡದಡಿ ಕೂಟ ಆಗುವಾಗ, ಹೊಲದ ಬಿರುಕಿಗೆ ಕಾಲು ಸೇತುವೆ ಆಗುವಾಗ, ಮಜ್ಜಿಗೆಯಲ್ಲಿ ಬೆಣ್ಣೆ ಮುಳುಗುವಾಗ, ದಂಟೆಯಜ್ಜಿ ಮೈನೆರೆದಾಗ, ಗುರುಗುಂಜಿಯ ಕಲೆ ಮಾಸುವಾಗ ನಿನ್ನ ಊರು, ನಿನ್ನ ಸೀಮೆ ಆಳಿಕೊಂಡು ಬಾ... ಬಲೀಂದ್ರ... ಕೂ... ಕೂ... ಕೂ... ಎಂದು ಬಲೀಯೆಂದ್ರನನ್ನು ಕರೆಯುತ್ತಾರೆ.) ಇಲ್ಲಿಗೆ ಗೋಪೂಜೆ, ಬಲಿಯೇಂದ್ರ ಪೂಜೆ ಮುಗಿಯುತ್ತದೆ.

ಇದನ್ನೆಲ್ಲ ಕಂಡಾಗ ಬಲಿ ಚಕ್ರವರ್ತಿಯು ಕೃಷಿಕನಾಗಿದ್ದ. ಬೇಸಾಯವು ಆತನ ಪ್ರಮುಖ ವೃತ್ತಿಯಾಗಿರಬಹುದು ಎಂದೆನಿಸುತ್ತದೆ. ಗೋವು, ಕೃಷಿ ಮತ್ತು ಭೂಮಿಯ ಜೊತೆ ಆತನ ಕಥೆಯು ತಳಕು ಹಾಕಿಕೊಂಡಂತಿದೆ. ಈ ಕಾರಣದಿಂದಲೇ ತುಳುನಾಡಿನಲ್ಲಿ ಬಲೀಂದ್ರನನ್ನು ಭೂಮಿಪುತ್ರನೆಂದು ಕರೆಯುತ್ತಾರೆ. ಬಲಿಪಾಡ್ಯಮಿಯಂದು ನಡೆಯುವ ಎಲ್ಲಾ ಆಚರಣೆಗಳು ಒಂದಲ್ಲ ಒಂದು ರೀತಿಯಲ್ಲಿ ಕೃಷಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ. ಆದರೆ ದೀಪಾವಳಿಯ ಮೂರು ದಿನ ತುಳುವರು ನೊಗ, ನೇಗಿಲು, ಹಾರೆ, ಪಿಕ್ಕಾಸು ಮುಂತಾದ ಕೃಷಿ ಸಾಮಗ್ರಿಗಳನ್ನು ಕೆಲಸಕ್ಕೆ ಬಳಸಲಾರರು. ಅಂದು ಅನ್ನಕೊಡುವ ಭೂಮಾತೆಗೆ ಋಣಿಯಾಗಿ ಆಕೆಯ ಮೂರ್ತರೂಪವಾದ ಭೂಮಿಯನ್ನು ಪೂಜಿಸುವ ಪ್ರಕ್ರಿಯೆ ನಡೆಯಲ್ಪಡುತ್ತವೆ. ಅಂದು ಅವರು ಎಷ್ಟೇ ಒತ್ತಡದಲ್ಲಿದ್ದರೂ ಗದ್ದೆ ಉಳಲಾರರು, ನೇಜಿ ನೆಡಲಾರರು, ನಾಟಿ ಮಾಡಲಾರರು, ಕಳೆ ಕೀಳಲಾರರು, ಹಾರೆ, ಪಿಕ್ಕಾಸುಗಳಿಂದ ಭೂಮಿ ಅಗೆಯಲಾರರು. ಈ ರೀತಿ ಮಾಡುವುದರಿಂದ ಭೂಮಾತೆಯು ಗಾಯಗೊಂಡು ನೋವು ಅನುಭವಿಸುತ್ತಾಳೆ. ಇದರಿಂದ ತಾವು ಅವಳ ಅವಕೃಪೆಗೆ ಒಳಗಾಗಿ ಅವನತಿ ಕಾಣುತ್ತೇವೆ ಎಂಬ ಧಾರ್ಮಿಕ ನಂಬಿಕೆ, ಭಯ, ಭಕ್ತಿ ಈ ಹಬ್ಬದ ಹಿನ್ನೆಲೆಯಲ್ಲಿದೆ.

ಇಂದು ಕೆಡ್ಡೆಸ, ಕಾವೇರಿ ಸಂಕ್ರಮಣ, ಕುರಲ್ ಪರ್ಬ(ಕದಿರು ಹಬ್ಬ) ಮುಂತಾದ ಹಬ್ಬಗಳು ಆಧುನಿಕತೆಯ ಸೋಗಿಗೆ ಒಳಗಾಗಿ ತಮ್ಮತನ ಕಳೆದುಕೊಂಡಿವೆ. ತುಳುನಾಡಿನ ಹೆಮ್ಮೆಯ ಪರ್ಬ ದೀಪಾವಳಿಯಾದರೂ ತುಳುವ ಸಂಪ್ರದಾಯದಂತೆ ನೂರ್ಕಾಲ ಬಾಳಲಿ.

ನಿರಂತರವಾಗಿ ನಡೆಯುವ ಮೂರು ದಿನಗಳ ಹಬ್ಬವಾದ ದೀಪಾವಳಿಯನ್ನು ತುಳುವರು ಮೊದಲನೆಯ ದಿನ ನರಕ ಚತುರ್ದಶಿಯನ್ನು ಮೀಪಿನ ಪರ್ಬ(ಮೀಯುವ ಹಬ್ಬ), ಎರಡನೆಯ ದಿನವಾದ ಅಮಾವಾಸ್ಯೆಯ ದಿನ ಲಕ್ಷ್ಮೀ ಪೂಜೆ ಮತ್ತು ಮೂರನೆಯ ದಿನವಾದ ಪಾಡ್ಯವನ್ನು ಬಲಿಪಾಡ್ಯಮಿ ಎಂದು ಆಚರಿಸುತ್ತಾರೆ. ತುಳುವರು ಬೇರೆ ಹಬ್ಬಕ್ಕಿಂತ ವಿಶಿಷ್ಟವಾಗಿ ದೀಪಾವಳಿ ಹಬ್ಬವನ್ನು ಆಚರಿಸುತ್ತಾರೆ.

Writer - ವಿಶ್ವನಾಥ ಪಂಜಿಮೊಗರು

contributor

Editor - ವಿಶ್ವನಾಥ ಪಂಜಿಮೊಗರು

contributor

Similar News