ಜಮ್ಮು-ಕಾಶ್ಮೀರ ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ

Update: 2017-10-19 13:15 GMT

ಶ್ರೀನಗರ,ಒ.19: ಜಮ್ಮು-ಕಾಶ್ಮೀರದ ಗುರೇಜ್ ವಿಭಾಗದಲ್ಲಿಯ ನಿಯಂತ್ರಣ ರೇಖೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರೊಂದಿಗೆ ಗುರುವಾರ ದೀಪಾವಳಿಯನ್ನು ಆಚರಿಸಿದ ಪ್ರಧಾನಿ ನರೇಂದ್ರ ಮೋದಿಯವರು, ಸೈನಿಕರ ಶ್ರಮ ಮತ್ತು ತ್ಯಾಗವನ್ನು ಪ್ರಶಂಸಿಸಿದರಲ್ಲದೆ, ತಾನು ಅವರನ್ನು ತನ್ನ ಕುಟುಂಬವನ್ನಾಗಿ ಪರಿಗಣಿಸಿದ್ದೇನೆ ಎಂದು ಹೇಳಿದರು.

ಸೇನೆಯ ಯೋಧರು ಮತ್ತು ಬಿಎಸ್‌ಎಫ್ ಸಿಬ್ಬಂದಿಗಳೊಂದಿಗೆ ದೀಪಾವಳಿಯನ್ನು ಆಚರಿಸಲು ಯಾವುದೇ ಪೂರ್ವಸೂಚನೆಯಿಲ್ಲದೆ ಪ್ರಧಾನಿ ಗುರುವಾರ ಬೆಳಿಗ್ಗೆ ಗುರೇಜ್‌ಗೆ ಆಗಮಿಸಿದರು ಎಂದು ಅಧಿಕಾರಿಗಳು ತಿಳಿಸಿದರು.

 ಪಾಕ್ ಆಕ್ರಮಿತ ಕಾಶ್ಮೀರದಿಂದ ಕೂಗಳತೆಯ ದೂರದಲ್ಲಿರುವ, ಕಳೆದ 27ವರ್ಷಗಳಲ್ಲಿ ನುಸುಳುಕೋರ ಉಗ್ರರೊಂದಿಗೆ ಹಲವಾರು ಗುಂಡಿನ ಕಾಳಗಗಳಿಗೆ ಸಾಕ್ಷಿಯಾಗಿರುವ ಗುರೇಜ್ ಕಣಿವೆಯಲ್ಲಿ ಯೋಧರೊಂದಿಗೆ ಮೋದಿ ಎರಡು ಗಂಟೆಗಳ ಕಾಲವನ್ನು ಕಳೆದರು.

ಅವರು ಗಡಿಯಲ್ಲಿ ಯೋಧರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದು ಇದು ನಾಲ್ಕನೇ ಬಾರಿಯಾಗಿದೆ.

ಸೇನಾ ಮುಖ್ಯಸ್ಥ ಜ.ಬಿ.ಎಸ್.ರಾವತ್ ಮತ್ತು ಇತರ ಹಿರಿಯ ಸೇನಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಯೋಧರಿಗೆ ಸಿಹಿಗಳನ್ನು ಹಂಚಿ ಶುಭಾಶಯಗಳನ್ನು ವಿನಿಮಯಿಸಿಕೊಂಡ ಪ್ರಧಾನಿ, ಇತರರಂತೆ ತಾನೂ ತನ್ನ ಕುಟುಂಬದೊಂದಿಗೆ ದೀಪಾವಳಿಯನ್ನು ಆಚರಿಸಲು ಬಯಸಿ ದ್ದೇನೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News