ಅಮಾಯಕರ ಬದುಕಲ್ಲಿ ಕತ್ತಲು ತುಂಬಿ ಹೋದ ಪಟಾಕಿ ಹಬ್ಬ

Update: 2017-10-20 08:29 GMT

‘‘ಬೆಳಕ ಬಿತ್ತಲು ಬಂದಿದ್ದೇನೆ ಎಂದಿತಂತೆ ಹಣತೆ. ಇಲ್ಲ ನಮಗೆ ಕತ್ತಲೇ ಇಷ್ಟ ಎಂದು ಅವರು ಪಟಾಕಿಗಳನ್ನು ಆರಿಸಿಕೊಂಡರಂತೆ’’ ಈ ಎರಡೇ ಸಾಲಿನ ಕತೆ ದೀಪಾವಳಿಯ ಮರುದಿನ ಕತ್ತಲನ್ನು ತಬ್ಬಿಕೊಂಡು ಕೂತ ಜನರ ದುರಂತವನ್ನು ಹೇಳುತ್ತಿದೆ. ದೀಪಾವಳಿಯ ಹಿಂದಿನ ದಿನ ‘ಹಬ್ಬಕ್ಕೆ ಭರ್ಜರಿ ಸಿದ್ಧತೆ’ ಎಂದು ಪತ್ರಿಕೆಗಳು ವರದಿ ಮಾಡುತ್ತವೆ. ವಿಪರ್ಯಾಸವೆಂದರೆ, ಅದರ ಮರುದಿನ, ಹಬ್ಬದಿಂದ ಕಣ್ಣು ಕಳೆದುಕೊಂಡ ಅಮಾಯಕರು ಎಂಬ ವರದಿಯನ್ನು ಪ್ರಕಟಿಸಬೇಕಾಗುತ್ತದೆ. ಕೆಲವೇ ಕೆಲವು ಮಂದಿಯ ಹಿತಾಸಕ್ತಿಗಾಗಿ ಅಮಾಯಕರು ಶಾಶ್ವತವಾಗಿ ಕತ್ತಲನ್ನು ತಮ್ಮದಾಗಿಸಿಕೊಳ್ಳುವ ವರದಿಗಳು ಪ್ರತೀ ವರ್ಷ ಪ್ರಕಟವಾಗುತ್ತಲೇ ಇರುತ್ತವೆ. ‘‘ದೀಪಾವಳಿ ಹಬ್ಬವೆಂದರೆ ಪಟಾಕಿ ಹಬ್ಬವಲ್ಲ, ಹಣತೆಗಳ ಹಬ್ಬ’’ ಎಂದು ತಿಳಿದವರು ಸಮಾಜಕ್ಕೆ ತಿಳಿ ಹೇಳುತ್ತಲೇ ಇದ್ದಾರೆ. ಈ ಬಾರಿ ನ್ಯಾಯಾಲಯವೂ ಪಟಾಕಿಗಳನ್ನು ನಿಷೇಧಿಸಲು ಪ್ರಯತ್ನಿಸಿತು. ಪ್ರಾಯೋಗಿಕವಾಗಿ ಕೆಲವೆಡೆ ತಾತ್ಕಾಲಿಕವಾಗಿ ಪಟಾಕಿಗಳನ್ನು ನಿಷೇಧಿಸಿ ಆದೇಶ ನೀಡಿತು. ಆದರೆ ಕೆಲವು ಹಿತಾಸಕ್ತಿಗಳು ಇದರ ವಿರುದ್ಧವೇ ದಂಗೆಯೆದ್ದವು.

ನ್ಯಾಯಾಲಯದ ಆದೇಶಕ್ಕೆ ಕೋಮು ಬಣ್ಣ ಹಚ್ಚಲು ನೋಡಿದವು. ಈ ಬಗ್ಗೆ ಸರ್ವೋಚ್ಚ ನ್ಯಾಯಾಲಯವೇ ಖೇದದಿಂದ ಸ್ಪಷ್ಟೀಕರಣ ನೀಡುವಂತಹ ಸನ್ನಿವೇಶ ನಿರ್ಮಾಣವಾಯಿತು. ವಿಪರ್ಯಾಸವೆಂದರೆ ರಾಮ್‌ದೇವ್‌ರಂತಹ ಬಾಬಾ ವೇಷದಲ್ಲಿರುವ ಉದ್ಯಮಿಗಳೂ ಪಟಾಕಿಗಳನ್ನು ಬೆಂಬಲಿಸಿ ಹೇಳಿಕೆ ನೀಡಿದರು. ಅಷ್ಟೇ ಅಲ್ಲ, ಸಂಘಪರಿವಾರದ ಕಾರ್ಯಕರ್ತರು ಸುಪ್ರೀಂಕೋರ್ಟ್‌ನ ಎದುರೇ ಪಟಾಕಿ ಸಿಡಿಸಿ, ನ್ಯಾಯವ್ಯವಸ್ಥೆಯನ್ನು ಅಣಕಿಸಿದರು. ಕೆಲವು ಸಂಘಪರಿವಾರದ ಮುಖಂಡರು ‘‘ಹಿಂದೂಗಳ ಹಬ್ಬಗಳಲ್ಲಿ ಹಸ್ತಕ್ಷೇಪ ನಡೆಯುತ್ತಿದೆ’’ ಎಂದರು. ಕೆಲವರು ಇತರ ಧರ್ಮೀಯರ ಶಬ್ದ ಮಾಲಿನ್ಯಗಳನ್ನು ಮುಂದಿಟ್ಟುಕೊಂಡು ಪಟಾಕಿಗಳನ್ನು ಸಮರ್ಥಿಸಲು ಯತ್ನಿಸಿದರು. ಸ್ಫೋಟಕ ಉತ್ಪಾದನೆಗಳ ಹಿಂದಿರುವ ಕೆಲವು ಶಕ್ತಿಗಳೇ ಇವರಿಂದ ‘ಪಟಾಕಿ ಪರ’ ಹೇಳಿಕೆಗಳನ್ನು ನೀಡಿಸುತ್ತಿವೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ದೀಪಾವಳಿ ಹಬ್ಬದ ಹೊತ್ತಿಗೆ ವಿವೇಕಿಗಳ, ಪ್ರಾಜ್ಞರ ಹಣತೆಯ ಬೆಳಕಿನಂತಹ ಮಾತುಗಳು ಮೂಲೆಗುಂಪಾಯಿತು. ರಾಜಕೀಯ ಹಿತಾಸಕ್ತಿಯುಳ್ಳ ಜನರ ಪಟಾಕಿ ಸದ್ದಿನಂತಹ ಮಾತುಗಳೇ ಮುನ್ನೆಲೆಗೆ ಬಂತು. ಈ ಬಾರಿಯ ದೀಪಾವಳಿಯ ಸಂದರ್ಭದಲ್ಲಿ ಕರ್ನಾಟಕವೊಂದರಲ್ಲೇ 30ಕ್ಕೂ ಅಧಿಕ ಮಂದಿ ಪಟಾಕಿಯಿಂದಾಗಿ ಗಾಯಗೊಂಡಿದ್ದಾರೆ. ಹಲವರು ಕಣ್ಣುಗಳನ್ನೇ ಕಳೆದುಕೊಂಡಿದ್ದಾರೆ. ಈ ದುರಂತದ ಅಂಕಿಸಂಕಿ ಇನ್ನೆರಡು ದಿನಗಳಲ್ಲಿ ಹೆಚ್ಚಲಿವೆ ಎನ್ನುವುದರ ಸೂಚನೆಯೂ ಈಗಾಗಲೇ ಸಿಕ್ಕಿದೆ. ದೇಶಾದ್ಯಂತ ಈ ಪಟಾಕಿ ದುರಂತ ವಿಸ್ತರಿಸಿದೆ. ಒಡಿಶಾದಲ್ಲಿ ಪಟಾಕಿ ಕಾರ್ಖಾನೆಯೊಂದು ಸ್ಫೋಟಗೊಂಡು 8ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಕೆಲವರು ಶಾಶ್ವತವಾಗಿ ಕಣ್ಣುಗಳನ್ನೇ ಕಳೆದುಕೊಂಡಿದ್ದಾರೆ. ಸತ್ತವರಲ್ಲಿ, ಗಾಯಗೊಂಡವರಲ್ಲಿ ಕಾರ್ಮಿಕರೇ ಹೆಚ್ಚು ಎನ್ನುವುದನ್ನು ನಾವು ಗಮನಿಸಬೇಕು. ಪಟಾಕಿ ಪರವಾಗಿ ಹೇಳಿಕೆ ನೀಡುವ ಬಾಬಾಗಳು, ಸ್ವಾಮೀಜಿಗಳು, ರಾಜಕಾರಣಿಗಳಾರೂ ಈ ಪಟಾಕಿಗಳಿಂದ ಹಾನಿ ಅನುಭವಿಸಿಲ್ಲ. ಅನುಭವಿಸಿದವರೆಲ್ಲರೂ ಅಮಾಯಕರು. ಅದರಲ್ಲೂ ಪುಟಾಣಿ ಮಕ್ಕಳು. ಇದರಲ್ಲಿ ಎಲ್ಲರೂ ಪಟಾಕಿ ಕೊಂಡು ಸಿಡಿಸಿದವರಲ್ಲ ಎನ್ನುವುದು ಗಮನಾರ್ಹ.

ಯಾರದೋ ಸಂಭ್ರಮಕ್ಕೆ ಇನ್ನಾರೋ ಬಲಿಯಾಗಿರುವ ಪ್ರಕರಣಗಳೇ ಅಧಿಕ. ಇದಕ್ಕೆ ಉದಾಹರಣೆಯಾಗಿ ಬೆಂಗಳೂರಿನ ಎಲ್. ಆರ್. ನಗರ ನಿವಾಸಿ ಶಾರುಖ್ ಎಂಬಾತ ನಮ್ಮ ಮುಂದಿದ್ದಾರೆ. ಬುಧವಾರ ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ಯಾರೋ ಹಚ್ಚಿದ ರಾಕೆಟ್ ಕಣ್ಣಿನ ಬಳಿ ಸಿಡಿದಿದೆ. ಅದರಿಂದ ಆತನ ಎಡಗಣ್ಣಿಗೆ ಗಂಭೀರವಾದ ಗಾಯವಾಗಿದೆ. ರಾಕೆಟ್ ತಾಗಿ ಕಣ್ಣಿನ ರೆಪ್ಪೆ ಹರಿದಿದ್ದರಿಂದ ಹೊಲಿಗೆ ಹಾಕಲಾಗಿದ್ದು, ದೃಷ್ಟಿ ಬರುವ ಸಾಧ್ಯತೆ ಇಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಅದೇ ರೀತಿ, ಶಿವಾಜಿನಗರ ನಿವಾಸಿ ಪ್ರದೀಪ್ ಕುಮಾರ್ ಎಂಬಾತ ಗೆಳೆಯನೊಂದಿಗೆ ಮಾತನಾಡುತ್ತ ಕುಳಿತಿದ್ದ ವೇಳೆ ಬೇರೆಯವರು ಹಚ್ಚಿದ ಪಟಾಕಿ ಕಿಡಿ ಸಿಡಿದು ಎಡಗಣ್ಣು ಕಾಣದಂತಾಗಿದೆ. ತಮ್ಮ ಒಂದು ಕ್ಷಣದ ಪಟಾಕಿ ಸದ್ದಿನ ತೆವಲಿಗಾಗಿ, ಒಬ್ಬ ಯುವಕನ ಕಣ್ಣನ್ನೇ ಶಾಶ್ವತವಾಗಿ ಕಿತ್ತುಕೊಂಡವರು ದೀಪಾವಳಿಯ ಹಬ್ಬದಿಂದ ಏನನ್ನು ಪಡೆದುಕೊಂಡರು? ಪಟಾಕಿ ಹಚ್ಚಿದವರಿಗಷ್ಟೇ ಅದರ ನೋವು ಮತ್ತು ನಷ್ಟ ಎಂದಾಗಿದ್ದರೆ ಅವರವರ ಇಷ್ಟ ಸುಮ್ಮಗಿರಬಹುದು.

ಆದರೆ ನಗರಗಳಲ್ಲಿ ಹಗಲೂ ರಾತ್ರಿ ಸದ್ದು ಮಾಡುವ ಪಟಾಕಿಗಳಿಂದ ಅವುಗಳೊಂದಿಗೆ ಸಂಬಂಧವೇ ಇಲ್ಲದ ಅಮಾಯಕರು ತೊಂದರೆ ಅನುಭವಿಸುತ್ತಿದ್ದಾರೆ. ಪಾದಚಾರಿಗಳು ರಸ್ತೆಯಲ್ಲಿ ಸಂಚರಿಸದಂತಹ ಸನ್ನಿವೇಶವಿದೆ. ಆಸ್ಪತ್ರೆಗಳಲ್ಲಿ ಮಲಗಿರುವ ವೃದ್ಧರು ಎದೆ ಒಡೆದು ಹೋಗುವಂತಹ ಪಟಾಕಿಗಳಿಗೆ ಬಾರಿ ಬಾರಿಗೂ ಬೆಚ್ಚಿ ಬೀಳಬೇಕಾಗುತ್ತದೆ. ದುರ್ಬಲ ಹೃದಯಿಗಳು ಹೃದಯಾಘಾತದಂತಹ ಸ್ಥಿತಿಗೂ ಒಳಗಾದ ಪ್ರಕರಣಗಳಿವೆ. ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳಿಂದಾಗಿ ಯಾರ್ಯಾರೆಲ್ಲ ಕಣ್ಣು ಕಳೆದುಕೊಂಡಿದ್ದಾರೆಯೋ ಅದರ ಹೊಣೆಯನ್ನು ಯಾರೆಲ್ಲ ಪಟಾಕಿಯನ್ನು ಸಮರ್ಥಿಸಿಕೊಂಡಿದ್ದಾರೋ ಅವರು ಹೊರಬೇಕು. ಬಾಬಾರಾಮ್‌ದೇವ್‌ರಂತಹ ಉದ್ದಿಮೆದಾರರು ಅವರಿಗೆ ಕಣ್ಣುಗಳನ್ನು ಮರಳಿಸಬೇಕಾಗಿದೆ. ಕಣ್ಣು ಕಳೆದುಕೊಂಡ ಮಕ್ಕಳ ದುಃಖ, ಅವರ ಕುಟುಂಬದ ನೋವು ಈ ಪಟಾಕಿಯನ್ನು ಬೆಂಬಲಿಸಿದ ಜನರನ್ನು ಬದುಕಿನ ಪೂರ್ತಿ ಕಾಡಲಿದೆ.

ಕಣ್ಣು ಕಳೆದುಕೊಂಡ ಅಮಾಯಕರಿಗೆ ಯಾವ ಪರಿಹಾರವೂ ಹೊಸ ದೃಷ್ಟಿಯನ್ನು ಕೊಡಲಾರವು ಎನ್ನುವುದು ನಮಗೆ ತಿಳಿದಿರಬೇಕಾಗಿದೆ. ಮುಂದಿನ ದೀಪಾವಳಿಯ ದಿನ ಅವರು ಹಣತೆಯ ಬೆಳಕನ್ನು ಕೂಡ ನೋಡಲಾರರು ಎನ್ನುವುದು ವೇದನೆಯ ಸಂಗತಿಯಾಗಿದೆ. ದೀಪಾವಳಿ ಹಬ್ಬ ಜನರ ಬದುಕಿಗೆ ಹೊಸ ಬೆಳಕನ್ನು ತರಬೇಕು. ಬದಲಿಗೆ ಶಾಶ್ವತ ಕತ್ತಲನ್ನು ಬಿತ್ತಿ ಹೋಯಿತು. ಇದು ದೀಪಾವಳಿ ಹಬ್ಬದ ವೌಲ್ಯಕ್ಕೆ ಎಸಗಿದ ಅಪಚಾರವಾಗಿದೆ. ಯಾರೆಲ್ಲ ಪಟಾಕಿಗಳನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆಯೋ, ಬೀದಿಗಿಳಿದು ಪಟಾಕಿ ಬೇಕು ಎಂದು ಬೊಬ್ಬಿರಿದಿದ್ದಾರೆಯೋ ಅವರೆಲ್ಲ ದೀಪಾವಳಿ ಹಬ್ಬದ ವಿರೋಧಿಗಳೇ ಆಗಿದ್ದಾರೆ. ಯಾವುದೇ ಧರ್ಮದ ಹಬ್ಬ, ಆಚರಣೆಗಳಲ್ಲಿ ಪಟಾಕಿಗಳನ್ನು ಸಾರ್ವಜನಿಕವಾಗಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸುವ ಮೂಲಕ, ಪಟಾಕಿಗಳಿಂದ ಕಣ್ಣು ಕಳೆದುಕೊಂಡ ದೇಶದ ನೂರಾರು ಅಮಾಯಕರಿಗೆ ನ್ಯಾಯ ನೀಡುವ ಸರಿಯಾದ ದಾರಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News