​ಕದ್ದ ಜಾಗದಲ್ಲಿ ತಾಜ್‌ಮಹಲ್: ಸುಬ್ರಮಣಿಯನ್ ಸ್ವಾಮಿ ಹೊಸ ಬಾಂಬ್

Update: 2017-10-20 03:43 GMT

ಹೊಸದಿಲ್ಲಿ, ಅ.20: ''ಜೈಪುರದ ರಾಜನಿಂದ ಮೊಘಲ್ ದೊರೆ ಶಹಜಹಾನ್ ಕದ್ದ ಜಾಗದಲ್ಲಿ ತಾಜ್‌ಮಹಲ್ ನಿರ್ಮಿಸಲಾಗಿದೆ ಎನ್ನುವುದಕ್ಕೆ ಪುರಾವೆ ದೊರಕಿದೆ'' ಎಂದು ಭಾರತೀಯ ಜನತಾ ಪಕ್ಷದ ವಿವಾದಾತ್ಮಕ ಮುಖಂಡ ಸುಬ್ರಮಣಿಯನ್ ಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

"ತಾಜ್‌ಮಹಲ್ ಇರುವ ಜಾಗವನ್ನು ಮಾರಾಟ ಮಾಡುವಂತೆ ಜೈಪುರದ ರಾಜ-ಮಹಾರಾಜರಿಗೆ ಶಹಾಜಹಾನ್ ಒತ್ತಡ ತಂದಿರುವುದಕ್ಕೆ ದಾಖಲೆ ಇದೆ. ಇದಕ್ಕೆ ಪ್ರತಿಯಾಗಿ ಆತ 40 ಗ್ರಾಮಗಳನ್ನು ಪರಿಹಾರವಾಗಿ ನೀಡಿದ್ದ. ಆದರೆ ಈ ಆಸ್ತಿಯ ಮೌಲ್ಯವನ್ನು ಇದರ ಜತೆ ಹೋಲಿಸಲು ಸಾಧ್ಯವಿಲ್ಲ" ಎಂದು ಹೇಳಿರುವ ಸುಬ್ರಮಣಿಯನ್, ಈ ಕುರಿತ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಸದ್ಯದಲ್ಲೇ ಬಹಿರಂಗಪಡಿಸುವುದಾಗಿ ಪ್ರಕಟಿಸಿದ್ದಾರೆ.

"ಆ ಜಾಗದಲ್ಲಿ ದೇವಾಲಯ ಇತ್ತು ಎಂದೂ ದಾಖಲೆ ಹೇಳುತ್ತದೆ. ಆದರೆ ದೇವಾಲಯವನ್ನು ಧ್ವಂಸಗೊಳಿಸಿ, ತಾಜ್‌ಮಹಲ್ ನಿರ್ಮಿಸಲಾಗಿದೆಯೇ ಎನ್ನುವುದು ಸ್ಪಷ್ಟವಾಗಿಲ್ಲ" ಎಂದು ವಿವರಿಸಿದ್ದಾರೆ.

"ಬಿಜೆಪಿಗೆ ತಾಜ್‌ಮಹಲ್ ಧ್ವಂಸ ಮಾಡುವ ಉದ್ದೇಶ ಇಲ್ಲ. ಆದರೆ ಮುಸ್ಲಿಂ ಆಡಳಿತದ ಅವಧಿಯಲ್ಲಿ ಧ್ವಂಸಗೊಳಿಸಲಾದ ಸಾವಿರಾರು ದೇವಾಲಯಗಳ ಪೈಕಿ ಮೂರು ದೇವಾಲಯಗಳನ್ನಷ್ಟೇ ಬಯಸಿದೆ. ಅಯೋಧ್ಯೆ ರಾಮಮಂದಿರ, ಮಥುರಾ ಕೃಷ್ಣ ದೇವಾಲಯ ಹಾಗೂ ವಾರಾಣಾಸಿಯ ಕಾಶಿ ವಿಶ್ವನಾಥ ಮಂದಿರಗಳು ನಮ್ಮ ಕೈಸೇರಿದರೆ ಉಳಿದ 40 ಸಾವಿರ ದೇವಾಲಯಗಳ ಬಗ್ಗೆ ನಾವು ಚಿಂತಿಸುವುದಿಲ್ಲ" ಎಂದು ಸುದ್ದಿಗಾರರ ಜತೆ ಮಾತನಾಡುತ್ತಾ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News