ಶೀಘ್ರವೇ 500 ದೂರಪ್ರಯಾಣದ ರೈಲುಗಳ ವೇಗದಲ್ಲಿ ಹೆಚ್ಚಳ

Update: 2017-10-20 12:37 GMT

ಹೊಸದಿಲ್ಲಿ,ಅ.20: ಭಾರತೀಯ ರೈಲ್ವೆಯು ಶೀಘ್ರವೇ 500ಕ್ಕೂ ಅಧಿಕ ದೂರ ಅಂತರ ರೈಲುಗಳ ವೇಗವನ್ನು ಹೆಚ್ಚಿಸುವ ಮೂಲಕ ಪ್ರಯಾಣಾವಧಿಯನ್ನು 15 ನಿಮಿಷಗಳಿಂದ ಎರಡು ಗಂಟೆಗಳಷ್ಟು ತಗ್ಗಿಸಲಿದೆ ಎಂದು ಹಿರಿಯ ರೈಲ್ವೆ ಅಧಿಕಾರಿಯೋರ್ವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಈ ರೈಲುಗಳ ಪ್ರಯಾಣ ವೇಳೆಗಳನ್ನು ರೈಲ್ವೆಯ ನವಂಬರ್ ವೇಳಾಪಟ್ಟಿಯಲ್ಲಿ ಪರಿಷ್ಕರಿಸಲಾಗುವುದು. ನೂತನ ವೇಳಾಪಟ್ಟಿಯು ನಿರ್ವಹಣಾ ಕಾಮಗಾರಿಗಳಿಗಾಗಿ ಪ್ರತಿ ರೈಲ್ವೆ ವಿಭಾಗಕ್ಕೆ 2ರಿಂದ 4 ಗಂಟೆಗಳ ಸಮಯಾವಕಾಶವನ್ನು ನೀಡಲಿದೆ.

ರೈಲ್ವೆಯು ಆಂತರಿಕ ಆಡಿಟ್ ಆರಂಭಿಸಿದ್ದು, 50 ಮೇಲ್ ಮತ್ತು ಪ್ಯಾಸೆಂಜರ್ ರೈಲುಗಳನ್ನು ಸುಪರ್ ಫಾಸ್ಟ್ ರೈಲುಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು.

ಭೋಪಾಲ-ಜೋಧಪುರದಂತಹ ರೈಲುಗಳು 95 ನಿಮಿಷ ಮೊದಲೇ ತಮ್ಮ ಗಮ್ಯವನ್ನು ತಲುಪಲಿವೆ. ಗುವಾಹಟಿ-ಇಂದೋರ ಸ್ಪೆಷಲ್ ತನ್ನ 2,330 ಕಿ.ಮೀ.ದೂರದ ಪ್ರಯಾಣದ ಅವಧಿಯನ್ನು 115 ನಿಮಿಷಗಳಷ್ಟು ತಗ್ಗಿಸಿಕೊಳ್ಳಲಿದೆ. ಇದೇ ರೀತಿ 1929 ಕಿ.ಮೀ. ಅಂತರದ ಘಾಝಿಪುರ-ಬಾಂದ್ರಾ ಟರ್ಮಿನಸ್ ರೈಲಿನ ಪ್ರಯಾಣಾವಧಿಯು 95 ನಿಮಿಷಗಳಷ್ಟು ಕಡಿತಗೊಳ್ಳಲಿದೆ ಎಂದು ಅಧಿಕಾರಿ ವಿವರಿಸಿದರು.

ನಿಲ್ದಾಣಗಳಲ್ಲಿ ರೈಲುಗಳ ನಿಲುಗಡೆ ಅವಧಿಯನ್ನು ಕಡಿತಗೊಳಿಸಲಾಗಿದೆ. ಪ್ಲಾಟ್‌ಫಾರ್ಮ್‌ಗಳ ಎತ್ತರ ಕಡಿಮೆಯಿರುವ ನಿಲ್ದಾಣಗಳಲ್ಲಿ ರೈಲುಗಳನ್ನು ನಿಲ್ಲಿಸಲಾಗುವುದಿಲ್ಲ.

ಹಳಿಗಳು ಮತ್ತು ಮೂಲಸೌಕರ್ಯ ಮೇಲ್ದರ್ಜೆಗೇರುವಿಕೆ, ಸ್ವಯಂಚಾಲಿತ ಸಿಗ್ನಲಿಂಗ್ ವ್ಯವಸ್ಥೆ ಮತ್ತು 130 ಕಿ.ಮೀ.ವೇಗಲ್ಲಿ ಚಲಿಸಲು ಅನುಕೂಲಿಸುವ ಹೊಸ ಲಿಂಕ್-ಹಾಫ್‌ಮನ್-ಬುಷ್ ಬೋಗಿಗಳಿಂದಾಗಿ ರೈಲುಗಳು ಇನ್ನಷ್ಟು ವೇಗವಾಗಿ ಚಲಿಸುವ ನಿರೀಕ್ಷೆಯಿದೆ.

ಕಾಯಂ ವೇಗ ನಿರ್ಬಂಧಗಳ ಪುನರ್‌ಪರಿಶೀಲನೆಯನ್ನು ರೈಲ್ವೆ ನಡೆಸಲಿದೆ ಎಂದು ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News