ವಿಜಯ್ ಅಭಿನಯದ ‘ಮೆರ್ಸಲ್’ ಚಿತ್ರ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದೇಕೆ ಗೊತ್ತೇ?
ತಮಿಳುನಾಡು, ಅ.20: ಇತ್ತೀಚೆಗೆ ಬಿಡುಗಡೆಯಾದ ತಮಿಳು ನಟ ವಿಜಯ್ ಅಭಿನಯದ ‘ಮೆರ್ಸಲ್’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಿಡುಗಡೆಯಾದ ದಿನವೇ 45 ಕೋಟಿ ರೂ. ಗೂ ಅಧಿಕ ಕಲೆಕ್ಷನ್ ಗಳಿಸಿದ ಈ ಚಿತ್ರದ ವಿರುದ್ಧ ಬಿಜೆಪಿ ನಾಯಕರಿಂದ ಅಪಸ್ವರ ಕೇಳಿಬಂದಿದೆ.
ಇದಕ್ಕೆ ಕಾರಣ ಚಿತ್ರದಲ್ಲಿ ಜಿಎಸ್ ಟಿ ಹಾಗು ಡಿಜಿಟಲೈಸೇಶನ್ ಬಗ್ಗೆ ಇರುವ ಕೆಲ ಸಂಭಾಷಣೆಗಳು. “ಸಿಂಗಾಪುರದಲ್ಲಿ 8 ಶೇ. ಜಿಎಸ್ ಟಿ ಇದ್ದರೆ, ಭಾರತದಲ್ಲಿ 25 ಶೇ. ಇದೆ”, “ನಮ್ಮ ದೇಶದಲ್ಲಿ ಯಾರ ಬಳಿಯೂ ಹಣವಿಲ್ಲ. ಎಲ್ಲರೂ ಕ್ಯೂನಲ್ಲಿದ್ದಾರೆ” ಎನ್ನುವ ಸಂಭಾಷಣೆಗಳು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ.
“ಜಿಎಸ್ ಟಿ ಬಗ್ಗೆ ಚಿತ್ರದಲ್ಲಿರುವ ಸುಳ್ಳುಗಳನ್ನು ನಿರ್ಮಾಪಕರು ತೆಗೆದುಹಾಕಬೇಕು” ಎಂದು ಕೇಂದ್ರ ಸಚಿವ ಪೊನ್ ರಾಧಾಕೃಷ್ಣನ್ ಹೇಳಿದ್ದಾರೆ ಎನ್ನಲಾಗಿದೆ.
ಸಿನೆಮಾ ಮೂಲಕ ತಪ್ಪು ಮಾಹಿತಿಯನ್ನು ನೀಡಬಾರದು ಹಾಗು ಈ ಮೂಲಕ ರಾಜಕೀಯ ಮೈಲೇಜ್ ಪಡೆಯಲು ನಟರು ಜನರನ್ನು ಗೊಂದಲಕ್ಕೀಡು ಮಾಡಬಾರದು ಎಂದವರು ಹೇಳಿದ್ದಾರೆ.
ಜಿಎಸ್ ಟಿ ಬಗ್ಗೆ ಸಿನೆಮಾದಲ್ಲಿರುವ ಸಂಭಾಷಣೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಎಚ್. ರಾಜ ಇದು ಆರ್ಥಿಕತೆಯ ಅರಿವಿನ ಕೊರತೆಯನ್ನು ಮಾತ್ರ ತೋರಿಸುತ್ತದೆ ಎಂದಿದ್ದಾರೆ.