ಬೋಫೋರ್ಸ್‌ ಹಗರಣದ ಮರು ತನಿಖೆ

Update: 2017-10-21 17:50 GMT

ಹೊಸದಿಲ್ಲಿ, ಅ. 21: ಬೋಫೋರ್ಸ್‌ ಹಗರಣಕ್ಕೆ ಸಂಬಂಧಿಸಿ ತನಿಖೆ ಮರು ಆರಂಭಿಸಲು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ರಜಾ ಕಾಲದ ಅರ್ಜಿ ಸಲ್ಲಿಸಲು ಸಿಬಿಐ ಕೇಂದ್ರ ಸರಕಾರದ ಅನುಮತಿ ಕೋರಿದೆ. ಈ ಪ್ರಕರಣದ ವಿಚಾರಣೆ ರದ್ದುಗೊಳಿಸಿ 2005ರಲ್ಲಿ ದಿಲ್ಲಿ ಉಚ್ಚ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ತಾನು ರಜಾ ಕಾಲದ ಅರ್ಜಿ ಸಲ್ಲಿಸಲು ಅನುಮತಿ ನಿರಾಕರಿಸಿದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೋರಿ ವೈಯುಕ್ತಿಕ ಹಾಗೂ ತರಬೇತಿ ಇಲಾಖೆ (ಡಿಒಪಿಟಿ) ಮೂಲಕ ಸಿಬಿಐ ಸಂವಹನ ನಡೆಸಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.

ಒಂದು ವೇಳೆ ಕೇಂದ್ರ ಸರಕಾರ ಸಿಬಿಐ ಕೋರಿಕೆಗೆ ಒಪ್ಪಿಗೆ ನೀಡಿದರೆ, ಬೋಫೋರ್ಸ್‌ ಹಗರಣದ ತನಿಖೆ ಮರು ಆರಂಭವಾಗಲಿದೆ. ಬೋಫೋರ್ಸ್‌ ಹಗರಣದ ಕುರಿತಂತೆ ದಿಲ್ಲಿ ಉಚ್ಚ ನ್ಯಾಯಾಲಯ 2005ರಲ್ಲಿ ನೀಡಿದ ತೀರ್ಪು ಪ್ರಶ್ನಿಸಿ ನ್ಯಾಯವಾದಿ ಅಜಯ್ ಅಗರ್‌ವಾಲ್ ಸಲ್ಲಿಸಿದ ರಜಾ ಕಾಲದ ಅರ್ಜಿಯ ವಿಚಾರಣೆ ನಡೆಸಲು ಒಂದು ದಿನ ಬಾಕಿ ಇರುವಂತೆ ಈ ಬೆಳವಣಿಗೆ ನಡೆದಿದೆ.

ಅಗರ್‌ವಾಲ್ ಸಲ್ಲಿಸಿದ ರಜಾಕಾಲದ ಅರ್ಜಿಯಲ್ಲಿ ಸಿಬಿಐಯನ್ನು ಪ್ರತಿವಾದಿ ಎಂದು ಪರಿಗಣಿಸಲಾಗಿದೆ. ಆದುದರಿಂದ ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ಸಂದರ್ಭ ಪ್ರಕರಣದ ಮರು ತನಿಖೆ ಆರಂಭಿಸುವ ಬಗ್ಗೆ ಸಿಬಿಐ ತನ್ನ ನಿಲುವು ತಿಳಿಸಬೇಕಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ರಜಾ ಕಾಲದ ಅರ್ಜಿ ಸಲ್ಲಿಸಬೇಕು ಎಂಬ ನಿಲುವನ್ನು ಸಿಬಿಐ ಹೊಂದಿದೆ. 2005 ಸೆಪ್ಟಂಬರ್ 8ರಂದು ಡಿಒಪಿಟಿ ನಿರ್ದೇಶಕರಿಗೆ ಪ್ರಸ್ತಾಪ ಕಳುಹಿಸಲಾಗಿದೆ. ಡಿಒಪಿಟಿ 2005 ನವೆಂಬರ್ 25ರಂದು ನೀಡಿದ ಆದೇಶದಲ್ಲಿ ರಜಾಕಾಲದ ಅರ್ಜಿ ಸಲ್ಲಿಸಲು ಅನುಮತಿ ನಿರಾಕರಿಸಿದೆ ಎಂದು ಈ ವರ್ಷದ ಆರಂಭದಲ್ಲಿ ರಕ್ಷಣೆಗಿರುವ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಉಪ ಸಮಿತಿಗೆ ಸಿಬಿಐ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News