ಇರಾಕ್‌ನಲ್ಲಿ ಭಾರತೀಯರ ನಾಪತ್ತೆ ಪ್ರಕರಣ: ಡಿಎನ್‌ಎ ಮಾದರಿ ನೀಡಲು ಸಂಬಂಧಿಕರಿಗೆ ಸೂಚನೆ

Update: 2017-10-21 17:54 GMT

ಹೊಸದಿಲ್ಲಿ, ಅ.21: ಕಳೆದ ಮೂರು ವರ್ಷಗಳಿಂದ ಇರಾಕ್‌ನಲ್ಲಿ ನಾಪತ್ತೆಯಾಗಿರುವ 39 ಭಾರತೀಯರ ಡಿಎನ್‌ಎ ಮಾದರಿಯನ್ನು ಒಪ್ಪಿಸುವಂತೆ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ. ಇರಾಕ್‌ನಲ್ಲಿ ಸಾಮೂಹಿಕ ಸಮಾಧಿಸ್ಥಳ ಪತ್ತೆಯಾದ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದ್ದು ನಾಪತ್ತೆಯಾಗಿರುವವರ ಸುರಕ್ಷತೆ ಕುರಿತು ಸಂದೇಹ ಮೂಡುವಂತಾಗಿದೆ.

 ರಕ್ತದ ಪರೀಕ್ಷೆ ನಡೆಸಬೇಕಿರುವ ಕಾರಣ ನಿಗದಿತ ಪ್ರಯೋಗಾಲಯಕ್ಕೆ ಆಗಮಿಸಿ ರಕ್ತದ ಮಾದರಿಯನ್ನು ನೀಡುವಂತೆ ತನಗೆ ಜಿಲ್ಲಾಧಿಕಾರಿಯ ಕಚೇರಿಯಿಂದ ದೂರವಾಣಿ ಕರೆ ಬಂದಿರುವುದಾಗಿ ಪಂಜಾಬಿನ ಕುಟುಂಬವೊಂದು ಸುದ್ದಿಸಂಸ್ಥೆಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಕುಟುಂಬದ ಎಂಟು ಸದಸ್ಯರು ಪ್ರಯೋಗಾಲಯಕ್ಕೆ ತೆರಳಿ ರಕ್ತದ ಮಾದರಿಯನ್ನು ನೀಡಿದ್ದೇವೆ. ಆದರೆ ರಕ್ತ ಪರೀಕ್ಷೆಯ ಅಗತ್ಯ ಏನಿದೆ ಎಂಬುದರ ಮಾಹಿತಿಯನ್ನು ಯಾರೂ ನೀಡಿಲ್ಲ ಎಂದು ನಾಪತ್ತೆಯಾಗಿರುವ ಓರ್ವ ಭಾರತೀಯನ ಸೋದರಿ ಹೇಳಿದ್ದಾರೆ.

   ನಾಪತ್ತೆಯಾಗಿರುವ ಭಾರತೀಯರು ಪಂಜಾಬ್, ಹರ್ಯಾನ, ಹಿಮಾಚಲ ಪ್ರದೇಶ ಮತ್ತು ಬಿಹಾರ ರಾಜ್ಯದ ನಿವಾಸಿಗಳಾಗಿದ್ದಾರೆ. ನಾಪತ್ತೆಯಾದವರ ಕುಟುಂಬ ಸದಸ್ಯರಿಂದ ರಕ್ತದ ಮಾದರಿ ಸಂಗ್ರಹಿಸುವಂತೆ ಈ ರಾಜ್ಯದ ಸರಕಾರಗಳಿಗೆ ವಿದೇಶ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ನಾಪತ್ತೆಯಾದವರ ಸುರಕ್ಷತೆ ಬಗ್ಗೆ ವದಂತಿ ಹಬ್ಬಿಸುವುದು ಸರಿಯಲ್ಲ ಎಂದೂ ಮೂಲಗಳು ತಿಳಿಸಿವೆ.

ನಿರ್ಣಾಯಕ ಪುರಾವೆ ದೊರಕುವವರೆಗೆ ನಾಪತ್ತೆಯಾದ ಭಾರತೀಯರು ಸಾವನ್ನಪ್ಪಿದ್ದಾರೆ ಎನ್ನಲಾಗದು ಎಂದು ಕೇಂದ್ರ ಸರಕಾರ ಸ್ಪಷ್ಟನೆ ನೀಡಿದೆ. ಯಾವುದೇ ಆಧಾರವಿಲ್ಲದೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ಹೇಳುವುದು ಮಹಾ ಪಾಪ ಎಂದು ಸುಷ್ಮಾ ಸ್ವರಾಜ್ ಇತ್ತೀಚೆಗೆ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರು.

   ಜುಲೈ 9ರಂದು ಇರಾಕ್ ದೇಶದ ಮೊಸೂಲ್ ನಗರವನ್ನು ಐಸಿಸ್ ಉಗ್ರರ ಹಿಡಿತದಿಂದ ಮುಕ್ತಗೊಳಿಸಿದ ಬಳಿಕ ಆ ನಗರದಲ್ಲಿ ಸಾಮೂಹಿಕ ಗೋರಿಯನ್ನು ಇರಾಕ್ ಸೈನಿಕರು ಪತ್ತೆಹಚ್ಚಿದ್ದರು. ಗೋರಿಯಲ್ಲಿ ಉಳಿದಿರುವ ಅವಶೇಷಗಳನ್ನು ಪ್ರಯೋಗಾಲಯದ ಪರೀಕ್ಷೆಗೆ ಕಳಿಸಲಾಗಿದ್ದು , ನಾಪತ್ತೆಯಾದವರ ಕುಟುಂಬದವರ ಡಿಎನ್‌ಎ ಮಾದರಿ ಕಳಿಸಿದರೆ ಇದರ ಸಾಮ್ಯತೆಯನ್ನು ಪರಿಶೀಲಿಸಬಹುದು ಎಂದು ಇರಾಕ್ ಅಧಿಕಾರಿಗಳು ಭಾರತಕ್ಕೆ ತಿಳಿಸಿದ್ದರು.

 ನಾಪತ್ತೆಯಾಗಿರುವ ಭಾರತೀಯರನ್ನು 2016ರ ಆರಂಭದಲ್ಲಿ ಬಾದುಷ್ ಜೈಲಿನಲ್ಲಿ ಬಂಧಿಸಿಡಲಾಗಿದೆ ಎಂದು ವರದಿಯಾಗಿತ್ತು. ಆದರೆ ಈ ವರ್ಷದ ಮಾರ್ಚ್‌ನಲ್ಲಿ ಇರಾಕ್ ಸೈನಿಕರು ಬಾದುಷ್ ಜೈಲನ್ನು ತಮ್ಮ ನಿಯಂತ್ರಣಕ್ಕೆ ಪಡೆದ ಸಂದರ್ಭ ಈ ಜೈಲನ್ನು ನಾಮಾವಶೇಷಗೊಳಿಸಲಾಗಿತ್ತು. ಇದರಿಂದ ನಾಪತ್ತೆಯಾದ ಭಾರತೀಯರ ಸುರಕ್ಷತೆಯ ಕುರಿತ ಕಳವಳ ಇನ್ನಷ್ಟು ಹೆಚ್ಚಾಗಿತ್ತು. ಇರಾಕ್‌ನಲ್ಲಿ ಕೆಲಸ ಮಾಡುತ್ತಿದ್ದ 40 ಭಾರತೀಯರನ್ನು ಐಸಿಸ್ ಉಗ್ರರು 2014ರಲ್ಲಿ ಅಪಹರಿಸಿದ್ದರು. ಇವರಲ್ಲಿ ಹರ್ಜಿತ್ ಮಸೀಹ್ ಎಂಬಾತ ತಪ್ಪಿಸಿಕೊಂಡಿದ್ದು, ಉಳಿದ ಅಪಹೃತರನ್ನು ಬಾದೂಷ್ ಸನಿಹದ ಮರುಭೂಮಿಯಲ್ಲಿ ಕೊಲ್ಲಲಾಗಿದೆ ಎಂದು ತಿಳಿಸಿದ್ದ. ಆದರೆ ಈತನ ಹೇಳಿಕೆಯನ್ನು ಕೇಂದ್ರ ಸರಕಾರ ತಳ್ಳಿಹಾಕಿತ್ತು.

ಜುಲೈಯಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಇರಾಕ್‌ನ ವಿದೇಶ ಸಚಿವರು, ನಾಪತ್ತೆಯಾಗಿರುವ ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ತಾವು ಭಾವಿಸಿರುವುದಾಗಿ ಮತ್ತು ಇವರ ಪತ್ತೆ ಕಾರ್ಯಾಚರಣೆ ಮುಂದುವರಿಸುವುದಾಗಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News