ಅಧಿಕ ರಕ್ತದೊತ್ತಡ ಅಪಾಯಕಾರಿ, ಅದು ಗಂಭೀರ ಸಮಸ್ಯೆಗೆ ಕಾರಣವಾಗಬಹುದು

Update: 2017-10-21 09:35 GMT

 ಸಾಮಾನ್ಯ ರಕ್ತದೊತ್ತಡವು ನಾವು ಆರೋಗ್ಯವಂತರಾಗಿರಲು ಅತ್ಯಗತ್ಯವಾಗಿದೆ. ರಕ್ತದೊತ್ತಡ ಅಧಿಕವಾದರೂ, ಕಡಿಮೆಯಾದರೂ ಅಪಾಯ ಕಟ್ಟಿಟ್ಟ ಬುತ್ತಿ. ಅಧಿಕ ರಕ್ತದೊತ್ತಡವಿರುವರು ಹೃದಯ ಕವಾಟಕ್ಕೆ ಸಂಬಂಧಿಸಿದ ಸಮಸ್ಯೆಗೆ ಸಿಲುಕುವ ಅಪಾಯ ಹೆಚ್ಚು ಎನ್ನುವುದನ್ನು ಇತ್ತೀಚಿನ ಅಧ್ಯಯನವೊಂದು ಬಹಿರಂಗಗೊಳಿಸಿದೆ.

 ಮಧ್ಯ ವಯಸ್ಸಿನಲ್ಲಿಯೇ ಅಧಿಕ ರಕ್ತದೊತ್ತಡವು ಕಾಣಿಸಿದರೆ ಅದು ಭವಿಷ್ಯದ ದಿನಗಳಲ್ಲಿ ‘ಮೈಟ್ರಾಲ್ ರೆಗರ್ಜಿಟೇಷನ್’ನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅಧ್ಯಯನ ವರದಿಯು ಹೇಳಿದೆ. ಹೃದಯವು ರಕ್ತವನ್ನು ಹೊರಕ್ಕೆ ಪಂಪ್ ಮಾಡುವಾಗ ಮೈಟ್ರಾಲ್ ಕವಾಟವು ಸರಿಯಾಗಿ ಮುಚ್ಚಿಕೊಳ್ಳದಿದ್ದಾಗ ಅಂತಹ ಸ್ಥಿತಿಯನ್ನು ‘ಮೈಟ್ರಾಲ್ ರೆಗರ್ಜಿಟೇಷನ್’ ಎಂದು ಕರೆಯುತ್ತಾರೆ. ಇದರಿಂದಾಗಿ ಶರೀರಕ್ಕೆ ಶುದ್ಧ ರಕ್ತವನ್ನು ಪೂರೈಸುವ ಹೃದಯದ ಕ್ಷಮತೆ ಕಡಿಮೆಯಾಗುತ್ತದೆ ಮತ್ತು ಗಂಭೀರ ಪ್ರಕರಣಗಳಲ್ಲಿ ಹೃದಯ ವೈಫಲ್ಯವೂ ಸಂಭವಿಸಬಹುದು. ಅದು ಹೃದಯದಲ್ಲಿ ರಕ್ತದ ಮರುಸೋರಿಕೆಗೂ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಉಸಿರಾಟದಲ್ಲಿ ಏರುಪೇರು, ದಣಿವು, ತಲೆ ತಿರುಗುವಿಕೆ, ಎದೆನೋವು ಇತ್ಯಾದಿಗಳೂ ಕಾಣಿಸಿಕೊಳ್ಳಬಹುದು.

  ಬ್ರಿಟನ್ನಿನ ಸುಮಾರು 5.5 ಮಿಲಿಯನ್ ಜನರನ್ನು 10 ವರ್ಷಗಳ ಕಾಲ ಅಧ್ಯಯನ ಕ್ಕೊಳಪಡಿಸಲಾಗಿತ್ತು. ಮೈಟ್ರಾಲ್ ಕವಾಟದ ಸಮಸ್ಯೆಗೆ ಮೊದಲು ಭಾವಿಸಿದ್ದಂತೆ ವಯಸ್ಸಾಗುವುದು ಕಾರಣವಲ್ಲ, ಅಧಿಕ ರಕ್ತದೊತ್ತಡ ಈ ಸಮಸ್ಯೆಯನ್ನುಂಟು ಮಾಡುತ್ತದೆ ಎನ್ನುವುದು ಕಂಡು ಬಂದಿದೆ. ಈ ಹ್ರದ್ರೋಗವನ್ನು ತಡೆಯಬಹುದಾಗಿದೆ ಎಂದು ಹೇಳಿದೆ. ಅಧ್ಯಯನ ವರದಿಯು ಪಿಎಲ್‌ಒಎಸ್ ಜರ್ನಲ್‌ನಲ್ಲಿ ಇತ್ತೀಚಿಗೆ ಪ್ರಕಟ ಗೊಂಡಿದೆ.

ಅಧಿಕ ರಕ್ತದೊತ್ತಡವನ್ನು ತಡೆಯಲು ಕೆಲವು ಅತ್ಯುತ್ತಮ ಮಾರ್ಗಗಳು ಇಲ್ಲಿವೆ.

  ಆರೋಗ್ಯಪೂರ್ಣ ಆಹಾರ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಲು ನಾವು ಸೇವಿಸುವ ಆಹಾರದ ಬಗ್ಗೆ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯವಾಗಿದೆ. ಇಡಿಯ ಕಾಳುಗಳು, ಹಣ್ಣುಗಳು, ತರಕಾರಿಗಳು, ಕಡಿಮೆ ಕೊಬ್ಬಿರುವ ಡೇರಿ ಉತ್ಪನ್ನಗಳನ್ನು ನಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತದೊತ್ತಡವನ್ನು ತಡೆಯಬಹುದು. ಪೊಟ್ಯಾಷಿಯಂಂ ಅನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದೊತ್ತಡದ ಮೇಲೆ ಸೋಡಿಯಂ ಪರಿಣಾಮವನ್ನು ತಗ್ಗಿಸಲು ನೆರವಾಗುತ್ತದೆ ಮತ್ತು ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ.

  ದೇಹತೂಕ ಕಾಯ್ದುಕೊಳ್ಳುವಿಕೆ

 ಬೊಜ್ಜುದೇಹವನ್ನು ಹೊಂದಿದವರಲ್ಲಿ ಅಧಿಕ ರಕ್ತದೊತ್ತಡವು ಸಾಮಾನ್ಯವಾಗಿದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ತಡೆಯಲು ಆರೋಗ್ಯಕರವಾದ ದೇಹತೂಕವನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಅಲ್ಲದೆ ಬೊಜ್ಜುದೇಹವು ನಿದ್ರಾ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಹೀಗಾಗಿ ಸರಿಯಾದ ನಿದ್ರೆ ಸಿಗದಿದ್ದರೆ ಅದು ರಕ್ತಸಂಚಾರದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ರಕ್ತದೊತ್ತಡ ಹೆಚ್ಚಲು ಕಾರಣವಾಗುತ್ತದೆ.

  ಸೋಡಿಯಂ ಸೇವನೆಯನ್ನು ಕಡಿಮೆ ಮಾಡಿ

ಅತಿಯಾದ ಉಪ್ಪಿನ ಸೇವನೆಯಿಂದಾಗಿ ನೀರು ಶರೀರದಲ್ಲಿಯೇ ಉಳಿಯುತ್ತದೆ. ಹೀಗೆ ಶರೀರದಲ್ಲಿ ಸಂಗ್ರಹವಾಗುವ ಹೆಚ್ಚುವರಿ ನೀರು ರಕ್ತದೊತ್ತಡದ ಮಟ್ಟವನ್ನು ಹೆಚ್ಚಿಸುತ್ತದೆ. ನೀವು ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದರೆ ಮತ್ತು ಅದಕ್ಕಾಗಿ ಔಷಧಿಗಳನ್ನು ಸೇವಿಸುತ್ತಿದ್ದರೆ ಅತಿಯಾದ ಉಪ್ಪಿನ ಸೇವನೆ ಔಷಧಿಗಳ ಪರಿಣಾಮವನ್ನು ತಗ್ಗಿಸುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ತಡೆಯಲು ಸೋಡಿಯಂ ಸೇವನೆಯ ಪ್ರಮಾಣದ ಬಗ್ಗೆ ಎಚ್ಚರಿಕೆಯಿಂದ ಇರುವುದು ಒಳ್ಳೆಯದು.

  ಮದ್ಯಪಾನಕ್ಕೆ ಮಿತಿಯಿರಲಿ

ಮದ್ಯ ಸೇವನೆಯು ರಕ್ತದೊತ್ತಡದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಲ್ಲದು. ಅತಿಯಾದ ಮದ್ಯಸೇವನೆ ನಮ್ಮನ್ನು ಅಧಿಕ ರಕ್ತದೊತ್ತಡದ ಅಪಾಯಕ್ಕೆ ತಳ್ಳುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ತಡೆಯಲು ಮದ್ಯಪಾನವು ಮಿತಿಯಲ್ಲಿರುವುದು ಅತ್ಯಗತ್ಯವಾಗಿದೆ.

  ನಿಯಮಿತ ವ್ಯಾಯಾಮ

 ನಿಯಮಿತ ವ್ಯಾಯಾಮವೆಂದರೆ ನೀವು ದಿನವೂ ಜಿಮ್‌ಗೆ ಹೋಗಿ ಕಠಿಣ ಕಸರತ್ತು ಗಳನ್ನು ಮಾಡಬೇಕು ಎಂದರ್ಥವಲ್ಲ. ಪ್ರತಿದಿನ ನಿಯಮಿತವಾಗಿ ಅರ್ಧ ಗಂಟೆ ಲಘು ವ್ಯಾಯಾಮಗಳನ್ನು ಮಾಡಿದರೂ ಅಧಿಕ ರಕ್ತದೊತ್ತಡವನ್ನು ತಡೆಯಬಹುದು. ಸರಳ ವಾಕಿಂಗ್, ಜಾಗಿಂಗ್ ಅಥವಾ ಸೈಕಲ್ ಸವಾರಿ ಕೂಡ ರಕ್ತದೊತ್ತಡವನ್ನು ನಿಯಂತ್ರಣ ದಲ್ಲಿರಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News