ಸಚಿವ, ಶಾಸಕ, ಸಂಸದರು ಕಚೇರಿಗೆ ಬಂದಾಗ ಎದ್ದು ನಿಲ್ಲಬೇಕು : ಅಧಿಕಾರಿಗಳಿಗೆ ಆದಿತ್ಯನಾಥ್ ಸರಕಾರದ ಆದೇಶ

Update: 2017-10-21 09:44 GMT

ಲಕ್ನೋ,ಅ.21 :  ಉತ್ತರ ಪ್ರದೇಶದ ಆದಿತ್ಯನಾಥ್ ಸರಕಾರವು  ರಾಜ್ಯದ ಎಲ್ಲಾ ಸರಕಾರಿ ಅಧಿಕಾರಿಗಳಿಗೆ ಹೊರಡಿಸಿದ ಹೊಸ ಆದೇಶದಂತೆ ಅವರ ಕಚೇರಿಗೆ ಸಚಿವರು, ಸಂಸದರು ಹಾಗೂ ಶಾಸಕರು ಭೇಟಿ ನೀಡಿದಾಗಲೆಲ್ಲಾ ಎದ್ದು ನಿಂತು ಗೌರವ ತೋರಿಸಬೇಕು.

ಅಂತೆಯೇ ಜನಪ್ರತಿನಿಧಿಗಳು ಸರಕಾರಿ ಕಚೇರಿಯಿಂದ ಹೊರಡುವಾಗಲೂ ಅಧಿಕಾರಿಗಳು ಎದ್ದು ನಿಂತು ಗೌರವ ತೋರಬೇಕೆಂದು ರಾಜ್ಯದ ಮುಖ್ಯ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ಎಲ್ಲಾ ಸರಕಾರಿ ಕಚೇರಿಗಳಿಗೆ ಕಳುಹಿಸಿದ ಸುತ್ತೋಲೆಯಲ್ಲಿ ಹೇಳಲಾಗಿದೆ. ಈ ಆದೇಶ ಪಾಲಿಸದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿದೆ. ಸರಕಾರಿ ಹಣದಿಂದ ಆಯೋಜಿಸಲಾದ  ಸಮಾಂಭಗಳಲ್ಲಿ ಅಧಿಕಾರಿಗಳು ಅತಿಥಿಗಳಾಗಿ ಭಾಗವಹಿಸುವಂತಿಲ್ಲವೆಂದೂ ಸುತ್ತೋಲೆ ತಿಳಿಸಿದೆ.

ತಾವು ಸರಕಾರಿ ಕಚೇರಿಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಧಿಕಾರಿಗಳು ಸೌಜನ್ಯಯುತವಾಗಿ ವರ್ತಿಸುತ್ತಿಲ್ಲ ಎಂದು ಕೆಲವು ಶಾಸಕರು ಇತ್ತೀಚಿಗಿನ ದಿನಗಳಲ್ಲಿ ದೂರುತ್ತಿದ್ದರೆನ್ನಲಾಗಿದೆ. ಈ ವಿಚಾರ ವಿಧಾನಸಭೆಯಲ್ಲೂ ಚರ್ಚೆಗೊಂಡಿತ್ತು. ತಮ್ಮ ದೂರನ್ನು ಸ್ವೀಕರಿಸಲು ಗಝೀಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ನಿರಾಕರಿಸಿದ ನಂತರ ರಾಜ್ಯ ಸಚಿವ ಓಂ ಪ್ರಕಾಶ್ ರಾಜಭರ್ ಅವರು ರಾಜೀನಾಮೆ ನೀಡುವುದಾಗಿ ಬೆದರಿಸಿದ ಘಟನೆಯೂ ಇತ್ತೀಚೆಗೆ ನಡೆದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News