ಕಚೇರಿಗಳಲ್ಲಿ ಕೆಲಸ ಮಾಡುವವರೇ ಎಚ್ಚರ: ನೀವು ಕುಳಿತುಕೊಳ್ಳುವ ಭಂಗಿಯ ಬಗ್ಗೆ ಗಮನವಿರಲಿ

Update: 2017-10-22 10:19 GMT

ಹೆಚ್ಚಿನವರಿಗೆ ಗೊತ್ತಿಲ್ಲದ ಇದೊಂದು ದೇಹಸ್ಥಿತಿ ಕಚೇರಿಗಳಲ್ಲಿ ಕೆಲಸ ಮಾಡುವವರನ್ನು ಸಂಕಷ್ಟಕ್ಕೆ ಸಿಲುಕಿಸಬಹುದು. ಇದೊಂದು ಗಂಭೀರ ಆರೋಗ್ಯಸ್ಥಿತಿಯಾಗಿದ್ದು ವೈದ್ಯಕೀಯ ವಾಗಿ ‘ಗ್ಲುಟಿಯಸ್ ಮೆಡಿಯಸ್ ಟೆಂಡಿನೋಪತಿ’ ಎಂದು ಕರೆಯಲ್ಪಡುತ್ತದೆ. ಇದು ನಮ್ಮ ಪೃಷ್ಠಗಳು ಅಥವಾ ನಿತಂಬಗಳು ಮರಗಟ್ಟುವ ಸ್ಥಿತಿಯಾಗಿದ್ದು, ಸುದೀರ್ಘ ಕಾಲ ಕುಳಿತುಕೊಂಡೇ ಕೆಲಸ ಮಾಡುವವರಿಗೆ ಅಪಾಯಕಾರಿಯಾಗಿದೆ.

ನಮ್ಮ ಶರೀರದಲ್ಲಿನ ಗ್ಲುಟಿಯಸ್ ಮಾಂಸಖಂಡಗಳು ತಮ್ಮ ಕೆಲಸವನ್ನು ಅಥವಾ ಭಾರವನ್ನು ಶರೀರದ ಇತರ ಭಾಗಗಳಿಗೂ ಹಂಚಬೇಕೆನ್ನುವುದನ್ನು ಮರೆತುಬಿಡುವುದು ಈ ಸ್ಥಿತಿಗೆ ಕಾರಣವಾಗುತ್ತದೆ. ಗ್ಲುಟಿಯಸ್ ಮೂರು ಮಾಂಸಖಂಡಗಳ ಸಮೂಹ ವಾಗಿದ್ದು, ಇದರಿಂದಲೇ ಪೃಷ್ಠವು ರೂಪುಗೊಂಡಿರುತ್ತದೆ. ಪ್ರತಿ ಎರಡು ಗಂಟೆಗೊಮ್ಮೆ ನಾವು ಖುರ್ಚಿಯಿಂದ ಎದ್ದು 5-15 ನಿಮಿಷಗಳ ಕಾಲ ಓಡಾಡದಿದ್ದರೆ ಕಾಲಕ್ರಮೇಣ ಸ್ನಾಯುವಿನ ದೃಢತೆ ಕುಗ್ಗುತ್ತದೆ ಮತ್ತು ಸೊಂಟ, ಮಂಡಿಗಳು ಹಾಗೂ ವಸ್ತಿಕುಹರದಲ್ಲಿ ನೋವು ಆರಂಭವಾಗುತ್ತದೆ.

ಮಾನವನ ಶರೀರವು ಒಂದು ಸಂಕೀರ್ಣ ವ್ಯವಸ್ಥೆಯಾಗಿದ್ದು, ಯಾವುದೇ ಒಂದು ಭಾಗವು ವಿಫಲಗೊಂಡರೆ ಇಡೀ ಶರೀರವು ಆ ವೈಫಲ್ಯವನ್ನು ಅನುಭವಿಸುತ್ತದೆ. ಗ್ಲುಟಿಯಸ್ ಮಾಂಸಖಂಡಗಳು ನಮ್ಮ ಚಲನವಲನದ ವೇಳೆ ಕುಷನ್‌ಗಳ ರೂಪದಲ್ಲಿ ಕಾರ್ಯ ನಿರ್ವಹಿಸುತ್ತವೆ. ಅವು ದುರ್ಬಲಗೊಂಡರೆ ಶರೀರದ ಭಾರವು ಅಸಮಾನವಾಗಿ ಹಂಚಲ್ಪಡುತ್ತದೆ ಮತ್ತು ಇದು ಗಂಭೀರ ಹಾನಿಗೆ ಕಾರಣವಾಗುತ್ತದೆ.

ನಿಮ್ಮಲ್ಲಿ ಈ ರೋಗದ ಲಕ್ಷಣಗಳಿವೆಯೇ ಎನ್ನುವುದನ್ನು ಪತ್ತೆಹಚ್ಚಲು ಸರಳವಾದ ಕ್ರಮವೊಂದಿದೆ. ಎದ್ದು ನಿಂತು ಎಡಗಾಲನ್ನು ಮೇಲಕ್ಕತ್ತಿದಾಗ ಆ ಭಾಗದ ಪೃಷ್ಠ್ಠವು ಜೋಲು ಬಿದ್ದಂತೆ ಕಂಡರೆ ನಿಮ್ಮ ಗ್ಲುಟಿಯಸ್ ಮಾಂಸಖಂಡಗಳು ದುರ್ಬಲಗೊಂಡಿವೆ ಎಂದು ಅರ್ಥ.

ಈ ಸ್ಥಿತಿಯು ಪೃಷ್ಠ್ಠಗಳಲ್ಲಿ ನೋವು ಮತ್ತು ಉರಿಯೂತಕ್ಕೆ ಅತ್ಯಂತ ಸಾಮಾನ್ಯ ಕಾರಣವಾಗಿದೆ.

‘ಗ್ಲುಟಿಯಸ್ ಮೆಡಿಯಸ್ ಟೆಂಡಿನೋಪತಿ’ ನಿಮ್ಮನ್ನು ಕಾಡುತ್ತಿದೆ ಎನ್ನುವುದಕ್ಕೆ ಕೆಲವು ಲಕ್ಷಣಗಳು ಹೀಗಿವೆ.

ಪೃಷ್ಠ್ಠದ ಹೊರಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ ಮತ್ತು ಓಟ,ಮೆಟ್ಟಿಲುಗಳನ್ನು ಹತ್ತುವುದು ಅಥವಾ ಕಾರಿನೊಳಗೆ ಹತ್ತಿಳಿಯುವಂತಹ ಚಟುವಟಕೆಗಳ ವೇಳೆ ಈ ನೋವು ತೀವ್ರವಾಗಿರುತ್ತದೆ. ಕ್ರಮೇಣ ಈ ನೋವು ಹೆಚ್ಚುತ್ತಲೇ ಹೋಗುತ್ತದೆ ಮತ್ತು ರಾತ್ರಿಗಳಲ್ಲಿ ಬಹುವಾಗಿ ಕಾಡುತ್ತದೆ. ಪೃಷ್ಠದ ಮೇಲೆ ಮಗ್ಗುಲಾಗಿ ಮಲಗಿದಾಗ ನೋವು ಕಾಣಿಸಿಕೊಳ್ಳುತ್ತದೆ. ಈ ನೋವು ತೊಡೆಯ ಹೊರಭಾಗಕ್ಕೂ ಹರಡುತ್ತದೆ.

ತಮ್ಮ ಹೆಚ್ಚಿನ ಕೆಲಸಗಳನ್ನು ಕುಳಿತುಕೊಂಡೇ ಮಾಡುವವರು ಈ ಸಮಸ್ಯೆಯಿಂದ ಪಾರಾಗಲು ಕೆಲವು ನಿಯಮಗಳನ್ನು ಪಾಲಿಸಬೇಕು. ಆಗಾಗ್ಗೆ ಖುರ್ಚಿ ಬಿಟ್ಟು ಎದ್ದು ಕಾಲುಗಳಿಗೆ ಕೊಂಚ ವ್ಯಾಯಾಮ ನೀಡಿ ಅಥವಾ ಸ್ವಲ್ಪ ಹೊತ್ತು ನಿಂತುಕೊಂಡಿದ್ದರೂ ಸಾಕು. ಪ್ರತಿ ಎರಡು ಗಂಟೆಗೊಮ್ಮೆ ಮೆಟ್ಟಿಲುಗಳನ್ನು ಹತ್ತಿಳಿಯಿರಿ. ಚಕ್ಕಳ ಬಕ್ಕಳ ಹಾಕಿ ಕುಳಿತುಕೊಳ್ಳುವ ಅಥವಾ ಕಾಲುಗಳನ್ನು ಹಿಂದಕ್ಕೆ ಮುಂದಕ್ಕೆ ಚಾಚುವ ವ್ಯಾಯಾಮವನ್ನು ಮಾಡುತ್ತಿರಿ. ಇದು ಗ್ಲುಟಿಯಸ್ ಮಾಂಸಖಂಡಗಳನ್ನು ಕ್ರಿಯಾಶೀಲಗೊಳಿಸುತ್ತದೆ. ಕುಳಿತಲ್ಲಿಯೇ ಆಗಾಗ್ಗೆ ಕಾಲುಗಳನ್ನು ಮೇಲೆ ಕೆಳಗೆ ಆಡಿಸುತ್ತಿದ್ದರೂ ಒಳ್ಳೆಯದೇ.

‘ಗ್ಲುಟಿಯಸ್ ಮೆಡಿಯಸ್ ಟೆಂಡಿನೋಪತಿ’ ಯಿಂದ ಬಿಡುಗಡೆ ಹೊಂದಲು ಕೆಲವು ಸರಳ ಉಪಾಯಗಳಿವೆ. ಬಿರುಸಿನ ಚಟುವಟಿಕೆಗಳಿಂದ ವಿಶ್ರಾಂತಿ ಪಡೆಯುವುದು, ನೋವು ಕಾಣಿಸಿಕೊಂಡ ಜಾಗದಲ್ಲಿ ಮಂಜುಗಡ್ಡೆಯನ್ನಿರಿಸುವುದು, ವೈದ್ಯರು ಶಿಫಾರಸು ಮಾಡಿರುವ ಉರಿಯೂತ ನಿರೋಧಕ ಔಷಧಿಗಳ ನಿಯಮಿತ ಸೇವನೆ ಇತ್ಯಾದಿಗಳಿಂದ ಈ ನೋವಿನಿಂದ ಪಾರಾಗಬಹುದು. ಮಾಂಸಖಂಡಗಳ ಅಸಮತೋಲನವನ್ನು ಸರಿಪಡಿ ಸಲು ಫಿಜಿಯೋಥೆರಪಿಯ ನೆರವನ್ನು ಪಡೆಯಬಹುದು.

ಸ್ಟಿರಾಯ್ಡಿ ಚುಚ್ಚುಮದ್ದಿನ ಬಳಿಕ ಸಾಕಷ್ಟು ವಿಶ್ರಾಂತಿ ಪಡೆದರೆ ನೋವು ಕಡಿಮೆ ಯಾಗುತ್ತದೆ. ಆದರೆ ಇದಕ್ಕೆ ವೈದ್ಯರ ಸಲಹೆ ಅತ್ಯಗತ್ಯ. ಗ್ಲುಟಿಯಸ್ ಮಾಂಸಖಂಡಗಳಿಗೆ ಅದಾಗಲೇ ತೀವ್ರ ಹಾನಿಯುಂಟಾಗಿದ್ದರೆ ಶಸ್ತ್ರಚಿಕಿತ್ಸೆ ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News