ಆಧಾರ್ ಈಗ ನಿಮ್ಮ ಜೀವನಾಡಿಯಾಗಿದೆ ಎನ್ನಲು 10 ಕಾರಣಗಳಿಲ್ಲಿವೆ

Update: 2017-10-22 11:57 GMT

ಇದು ಬಹಳ ಹಿಂದಿನ ಮಾತೇನಲ್ಲ.....ಆಧಾರ್ ಒಂದು ಐಚ್ಛಿಕ ಯೋಜನೆಯಾಗಿ ಕೊನೆಗೊಳ್ಳುತ್ತದೆ ಮತ್ತು ಮುಖ್ಯವಾಗಿ ಸರಕಾರದ ಸಬ್ಸಿಡಿಗಳು ಅಗತ್ಯವಾಗಿರುವ ಬಡವ ರಿಗಷ್ಟೇ ಅದು ಉಪಯೋಗಕ್ಕೆ ಬರುತ್ತದೆ ಎಂದು ಬಹಳಷ್ಟು ಜನರು ಗಟ್ಟಿಯಾಗಿ ನಂಬಿ ಕೊಂಡಿದ್ದರು. ಆದರೆ ಆಧಾರ್ ಇಂದು ಈ ನಂಬಿಕೆಯನ್ನು ಸುಳ್ಳು ಮಾಡಿದೆ. ಅತ್ಯಂತ ತ್ವರಿತವಾಗಿ ಬದುಕಿನ ಎಲ್ಲ ಕ್ಷೇತ್ರಗಳನ್ನೂ ಆವರಿಸಿಕೊಂಡಿರುವ ಅದು ಶೀಘ್ರವೇ ಅಮೆರಿಕದ ಪ್ರಜೆಗಳ ಸಾಮಾಜಿಕ ಭದ್ರತಾ ಸಂಖ್ಯೆಯಂತೆ ಭಾರತೀಯರಿಗೂ ಏಕೈಕ ಗುರುತಿನ ದಾಖಲೆಯಾಗಬಹುದು.

ಮತದಾರರ ಗುರುತಿನ ಚೀಟಿಯನ್ನು ಕೈಬಿಡಬೇಕು ಮತ್ತು ಚುನಾವಣೆಯಲ್ಲಿ ಮತದಾನಕ್ಕೆ ಏಕೈಕ ಗುರುತಿನ ದಾಖಲೆಯನ್ನಾಗಿ ಆಧಾರ್‌ನ್ನೇ ಪರಿಗಣಿಸಬೇಕು ಎಂದು ಮಾಜಿ ಚುನಾವಣಾ ಆಯುಕ್ತ ಟಿ.ಎಸ್.ಕೃಷ್ಣಮೂರ್ತಿ ಅವರೂ ಒಲವು ವ್ಯಕ್ತಪಡಿಸಿದ್ದಾರೆ.

ಹೆಚ್ಚಿನ ಸರಕಾರಿ ಸೇವೆಗಳನ್ನು ಪಡೆದುಕೊಳ್ಳಲು ಆಧಾರ್ ಕಡ್ಡಾಯವಾಗಿದ್ದರೆ ಈಗ ಖಾಸಗಿ ಕ್ಷೇತ್ರವೂ ಆಧಾರ್‌ನ್ನು ನೆಚ್ಚಿಕೊಳ್ಳಲು ಆರಂಭಿಸಿದೆ. ಆಧಾರ್ ಖಾಯಂ ಆಗಿ ಉಳಿಯಲಿದೆ ಮತ್ತು ನಮ್ಮ ಅತ್ಯಂತ ಮುಖ್ಯ ಗುರುತಿನ ದಾಖಲೆ ಆಗಲಿದೆ ಎನ್ನುವುದಕ್ಕೆ ಇದು ಖಚಿತ ಸಂಕೇತವಾಗಿದೆ. ಉದ್ಯೋಗದಾತರು ತಮ್ಮ ಸಂಭಾವ್ಯ ಉದ್ಯೋಗಿಗಳ ವಿವರಗಳನ್ನು ದೃಢೀಕರಿಸಿಕೊಳ್ಳಲು ಆಧಾರ್ ಕೇಳಲು ಆರಂಭಿಸಿದ್ದಾರೆ. ಇದರಿಂದಾಗಿ ಕನಿಷ್ಠ ಒಂದು ವಾರ ತಗಲುವ ಈ ದೃಢೀಕರಣ ಪ್ರಕ್ರಿಯೆ ಕೇವಲ 15 ನಿಮಿಷಗಳಲ್ಲಿ ಮುಗಿಯುತ್ತಿದೆ ಮತ್ತು ನೇಮಕ ವೆಚ್ಚಗಳೂ ಗಣನೀಯವಾಗಿ ತಗ್ಗುತ್ತಿವೆ.

 ಖಾಸಗಿ ಕ್ಷೇತ್ರವೂ ಆಧಾರ್ ಬಳಸಿಕೊಳ್ಳುತ್ತಿರುವುದರಿಂದ ಆಧಾರ್ ತನ್ನ ಹೆಸರಿಗೆ ತಕ್ಕ ಹಾಗೆ ಶೀಘ್ರವೇ ಪ್ರತಿಯೊಬ್ಬರ ವ್ಯವಹಾರ ಮತ್ತು ಕಚೇರಿ ವಹಿವಾಟುಗಳಿಗೆ ಆಧಾರವಾಗಲಿದೆ. ಅಲ್ಲದೆ ಇತರ ಕಡ್ಡಾಯ ಆಧಾರ್ ಬಳಕೆಯ ಜೊತೆಗೆ ಶೇರು ಮತ್ತು ಮ್ಯೂಚ್ಯುವಲ್ ಫಂಡ್ ಖರೀದಿಗಳಿಗೂ ಸರಕಾರವು ಶೀಘ್ರವೇ ಅದನ್ನು ಕಡ್ಡಾಯಗೊಳಿ ಸಬಹುದು.

ನಿಮ್ಮ ಆಧಾರ್ ಸಂಖ್ಯೆಯ ಉಲ್ಲೇಖವನ್ನು ಕಡ್ಡಾಯಗೊಳಿಸಲಾಗಿರುವ ಹತ್ತು ಪ್ರಮುಖ ವ್ಯವಹಾರಗಳಿಲ್ಲಿವೆ.

► ಬ್ಯಾಂಕ್ ಖಾತೆ

 ಹೊಸದಾಗಿ ಬ್ಯಾಂಕ್ ಖಾತೆಯನ್ನು ತೆರೆಯಲು ಆಧಾರ್ ಕಡ್ಡಾಯವಾಗಿದೆ. ಅಲ್ಲದೆ ಎಲ್ಲ ಹಾಲಿ ಗ್ರಾಹಕರು 2017,ಡಿ.31ರೊಳಗೆ ತಮ್ಮ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಲೇಬೇಕಾಗಿದೆ. ಇಲ್ಲದಿದ್ದರೆ ಖಾತೆಯೇ ನಿಷ್ಕ್ರಿಯ ಗೊಳ್ಳಲಿದೆ. 50,000 ರೂ. ಮತ್ತು ಅದಕ್ಕೂ ಹೆಚ್ಚಿನ ಯಾವುದೇ ಹಣಕಾಸು ವಹಿವಾಟಿಗೂ ಆಧಾರ್ ಅನ್ನು ಕಡ್ಡಾಯಗೊಳಿಸಲಾಗಿದೆ.

► ಆದಾಯ ತೆರಿಗೆ ರಿಟರ್ನ್ ಆದಾಯ ತೆರಿಗೆ ರಿಟರ್ನ್ ಸಲ್ಲಿಕೆಗೆ ಆಧಾರ್ ಉಲ್ಲೇಖವನ್ನು ಕಡ್ಡಾಯಗೊಳಿ ಸಲಾಗಿದೆ.

► ಪಾನ್ ಕಾರ್ಡ್

ನೀವು ಹೊಸದಾಗಿ ಪಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಲು ಆಧಾರ್ ಕಡ್ಡಾಯವಾಗಿದೆ. ಹಾಲಿ ಪಾನ್ ಕಾರ್ಡ್ ಹೊಂದಿರುವವರು ಅದರೊಂದಿಗೆ ತಮ್ಮ ಆಧಾರ್‌ನ್ನು ಜೋಡಣೆ ಮಾಡಬೇಕಾಗಿದೆ.

► ನೌಕರರ ಭವಿಷ್ಯನಿಧಿ ಖಾತೆ

 ನೌಕರರ ಭವಿಷ್ಯನಿಧಿ ಸಂಸ್ಥೆ(ಇಪಿಎಫ್‌ಒ)ಯ ಸದಸ್ಯರು ಕಡ್ಡಾಯವಾಗಿ ತಮ್ಮ ಭವಿಷ್ಯನಿಧಿ ಖಾತೆಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕು

► ಮೊಬೈಲ್ ಪೋನ್ ಸಂಖ್ಯೆ

 ಹೊಸ ಮೊಬೈಲ್ ಫೋನ್ ಸಂಪರ್ಕ ಪಡೆಯುವವರು ತಮ್ಮ ಆಧಾರ್ ಸಂಖ್ಯೆಯನ್ನು ಒದಗಿಸುವುದು ಕಡ್ಡಾಯವಾಗಿದೆ. ಹಾಲಿ ಮೊಬೈಲ್ ಸಂಖ್ಯೆಗಳೊಂದಿಗೂ ಆಧಾರ್ ಅನ್ನು ಜೋಡಿಸಬೇಕಿದೆ.

► ವಿದ್ಯಾರ್ಥಿ ವೇತನಗಳು

ಕೇಂದ್ರ ಸರಕಾರದ ವಿದ್ಯಾರ್ಥಿ ವೇತನಗಳು ಮತ್ತು ಇತರ ಹಣಕಾಸು ನೆರವು ಯೋಜನೆಗಳಿಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ತಮ್ಮ ಆಧಾರ್ ಸಂಖ್ಯೆಯನ್ನು ನೀಡುವುದು ಅಗತ್ಯವಾಗಿದೆ.

► ಪಾಸ್‌ಪೋರ್ಟ್ ಪಾಸ್‌ಪೋರ್ಟ್‌ಗಾಗಿ ಅರ್ಜಿಯೊಂದಿಗೆ ಕಡ್ಡಾಯವಾಗಿ ಸಲ್ಲಿಸಬೇಕಾದ ದಾಖಲೆಗಳ ಪಟ್ಟಿಯಲ್ಲಿ ಆಧಾರ್ ಸೇರಿದೆ. ಆಧಾರ್ ಇಲ್ಲದೆ ನೀವು ಪಾಸ್‌ಪೋರ್ಟ್ ಪಡೆಯಲು ಸಾಧ್ಯವಿಲ್ಲ.

► ರೈಲು ಟಿಕೆಟ್‌ಗಳ ಮೇಲೆ ರಿಯಾಯಿತಿ

ದುರುಪಯೋಗ ಮತ್ತು ಸೋರಿಕೆಯನ್ನು ತಡೆಯಲು ರೈಲು ಟಿಕೆಟ್ ದರಗಳಲ್ಲಿ ರಿಯಾಯಿತಿಯನ್ನು ಪಡೆದುಕೊಳ್ಳಲು ಆಧಾರ್ ಸಂಖ್ಯೆಯನ್ನು ರೈಲ್ವೆ ಇಲಾಖೆಯು ಕಡ್ಡಾಯಗೊಳಿಸಿದೆ.

► ಮಧ್ಯಾಹ್ನದ ಊಟ

ಸರಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಶಾಲೆಯಲ್ಲಿ ಉಚಿತ ಮಧ್ಯಾಹ್ನದ ಊಟದ ಸೌಲಭ್ಯ ಪಡೆಯಬೇಕಾದರೆ ಆಧಾರ್ ಸಂಖ್ಯೆ ಕಡ್ಡಾಯವಾಗಿದೆ.

► ಪಡಿತರ ಸಾಮಗ್ರಿ

ಸಾರ್ವಜನಿಕ ವಿತರಣೆ ವ್ಯವಸ್ಥೆಗೂ ಆಧಾರ್‌ಗೂ ತಳುಕು ಹಾಕಲಾಗಿದೆ. ಫಲಾನು ಭವಿಗಳು ಸಾರ್ವಜನಿಕ ವಿತರಣೆ ವ್ಯವಸ್ಥೆಯ ಮೂಲಕ ಸಬ್ಸಿಡಿ ದರಗಳಲ್ಲಿ ಪಡಿತರ ಸಾಮಗ್ರಿಗಳನ್ನು ಪಡೆಯಲು ತಮ್ಮ ರೇಷನ್ ಕಾರ್ಡ್‌ಗಳನ್ನು ಆಧಾರ್‌ನೊಂದಿಗೆ ಜೋಡಣೆಗೊಳಿಸಬೇಕು. ಹೆಚ್ಚುಕಡಿಮೆ ಕೇಂದ್ರ ಸರಕಾರದ ಎಲ್ಲ ಸಮಾಜ ಕಲ್ಯಾಣ ಯೋಜನೆಗಳಿಗೆ ಆಧಾರ್‌ನ್ನು ಕಡ್ಡಾಯಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News