ಟ್ರಂಪ್ ವಿರುದ್ಧ ಹಕ್ಕುಚ್ಯುತಿ ಆಗ್ರಹಿಸಿ ಉದ್ಯಮಿ ಸ್ಟೆಯರ್ ಅಭಿಯಾನ

Update: 2017-10-22 17:25 GMT

ನ್ಯೂಯಾರ್ಕ್,ಅ.22: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕೆಂದು ಕಾಂಗ್ರೆಸ್ ಸದಸ್ಯರನ್ನು ಆಗ್ರಹಿಸಿ, ಅಮೆರಿಕದ ಬಿಲಿಯಾಧೀಶ, ಉದ್ಯಮಿ ಟಾಮ್ ಸ್ಟೆಯರ್ ಬೃಹತ್ ಆನ್‌ಲೈನ್ ಹಾಗೂ ಟಿವಿ ಜಾಹೀರಾತು ಅಭಿಯಾನವನ್ನು ಆರಂಭಿಸಿದ್ದಾರೆ.

 ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋ ಒಂದರಲ್ಲಿ ಸ್ಟೆಯರ್ ಅವರು, ಅಮೆರಿಕ ಅಧ್ಯಕ್ಷರ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಕಾರಣವಾದ ಅಂಶಗಳನ್ನು ಪಟ್ಟಿ ಮಾಡಿದ್ದಾರೆ. ದೇಶವನ್ನು ಅಣ್ವಸ್ತ್ರ ಸಮರದ ದವಡೆಗೆ ದೂಡಿರುವುದು, ಫೆಡರಲ್ ತನಿಖಾ ಸಂಸ್ಥೆಯು ನ್ಯಾಯಯುತವಾಗಿ ಕಾರ್ಯನಿರ್ವಹಿಸಲು ಅಡ್ಡಿಪಡಿಸಿರುವುದು, ವಿದೇಶಿ ಸರಕಾರಗಳಿಂದ ಹಣ ಪಡೆದಿರುವುದು ಹಾಗೂ ಸತ್ಯಾಂಶಗಳನ್ನು ವರದಿ ಮಾಡಿದ ಸುದ್ದಿಸಂಸ್ಥೆಗಳಿಗೆ ಬೀಗಜಡಿಯುವ ಬೆದರಿಕೆಯೊಡ್ಡಿರುವುದು ಈ ಎಲ್ಲಾ ಕಾರಣಗಳಿಗಾಗಿ ಟ್ರಂಪ್ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕೆಂದು ಸ್ಟೆಯರ್ ಆಗ್ರಹಿಸಿದ್ದಾರೆ.

 ಸ್ಟೆಯರ್ ಅವರು ಜಾಹೀರಾತಿನಲ್ಲಿ ಕಾಂಗ್ರೆಸ್ ಸದಸ್ಯರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಅಮೆರಿಕನ್ ಕಾಂಗ್ರೆಸ್‌ನ ಸದಸ್ಯರು ಹಾಗೂ ಅವರ (ಟ್ರಂಪ್) ಆಡಳಿತದ ಮಂದಿಗೂ, ಮಾನಸಿಕವಾಗಿ ಅಸ್ಥಿರನಾಗಿರುವ ಈ ಅಧ್ಯಕ್ಷ ಅಪಾಯಕಾರಿ ಹಾಗೂ ಅಣ್ವಸ್ತ್ರಗಳಿಂದ ಸಜ್ಜಿತನಾಗಿದ್ದಾನೆಂದು ಅರಿವಿದೆ. ಅದರೂ ಅವರು ಏನೂ ಮಾಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಸ್ಟೆಯರ್ ಅವರು ಟ್ರಂಪ್ ವಿರುದ್ಧ ಹಕ್ಕುಚ್ಯುತಿ ಮಂಡಿಸುವಂತೆ ಅಮೆರಿಕ ಕಾಂಗ್ರೆಸಿಗರನ್ನು ಆಗ್ರಹಿಸಲು , ವೆಬ್‌ಸೈಟ್ ಮೂಲಕ ಸಹಿಸಂಗ್ರಹ ಅಭಿಯಾನವನ್ನು ಕೂಡಾ ಆರಂಭಿಸಿದ್ದಾರೆ. 60 ವರ್ಷ ವಯಸ್ಸಿನ ಸ್ಟೆಯರ್ ಡೆಮಾಕ್ರಾಟಿಕ್ ಪಕ್ಷದ ಸಕ್ರಿಯ ಕಾರ್ಯಕರ್ತ ಹಾಗೂ ನಿಧಿಸಂಗ್ರಾಹಕರಲ್ಲೊಬ್ಬರಾಗಿದ್ದಾರೆ. 2012ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಬರಾಕ್ ಒಬಾಮ ಅವರ ಚುನಾವಣಾ ಪ್ರಚಾರದ ಪ್ರಮುಖ ನಿಧಿ ಸಂಗ್ರಾಹಕರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News