ನಜೀಬ್ ಕೊಲೆಯಾಗಿದ್ದಾರೆಯೇ?

Update: 2017-10-22 19:03 GMT

ರೋಹಿತ್ ವೇಮುಲಾ ಹೈದರಾಬಾದ್ ವಿವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ, ಕೇಂದ್ರ ಸಚಿವರೊಬ್ಬರು ‘‘ರೋಹಿತ್ ವೇಮುಲಾರನ್ನು ಹೇಡಿ’’ ಎಂಬಂತೆ ಬಿಂಬಿಸಿ ಮಾತನಾಡಿದರು. ಆತ್ಮಹತ್ಯೆ ಪರಿಹಾರವಲ್ಲ ಎಂದು ಹೇಳಿ ವೇಮುಲಾ ಸಾವಿನ ಹೊಣೆಗಾರಿಕೆಯಿಂದ ಜಾರಿಕೊಂಡರು. ಸರಿ, ರೋಹಿತ್ ವೇಮುಲಾರದ್ದು ಆತ್ಮಹತ್ಯೆ ಎಂದೇ ಕರೆಯೋಣ. ಅವರ ಆತ್ಮಹತ್ಯೆಯಲ್ಲಿ ವಿಶ್ವವಿದ್ಯಾನಿಲಯದ ವ್ಯವಸ್ಥೆಯ ಯಾವ ಪಾಲೂ ಇಲ್ಲ ಎಂದು ಕೇಂದ್ರ ಸರಕಾರ ಹೇಳಿರುವುದನ್ನು ಒಪ್ಪಿಕೊಳ್ಳೋಣ. ಆದರೆ ಇದೇ ಸಂದರ್ಭದಲ್ಲಿ ಜೆಎನ್‌ಯು ವಿದ್ಯಾರ್ಥಿ ನಜೀಬ್ ಅಹ್ಮದ್ ನಾಪತ್ತೆಯಾಗಿ ಒಂದು ವರ್ಷ ಕಳೆದಿದೆ.

ಅವರ ತಾಯಿ ನಡು ಬೀದಿಯಲ್ಲಿ ನಿಂತು ‘‘ಪ್ರಧಾನಿ ನರೇಂದ್ರ ಮೋದಿಯವರೇ, ನನ್ನ ಮಗನ ಕುರಿತಂತೆ ಬಾಯಿ ತೆರೆದು ಮಾತನಾಡಿ..’’ ಎಂದು ಗೋಗರೆಯುತ್ತಿದ್ದಾರೆ. ಆದರೆ ಪ್ರಧಾನಿ ಮಾತ್ರ ತುಟಿ ಬಿಚ್ಚುತ್ತಿಲ್ಲ. ಒಂದು ವರ್ಷದ ಬಳಿಕವೂ ನಜೀಬ್‌ರ ನಾಪತ್ತೆ ಕುರಿತ ತನಿಖೆ ಒಂದು ಹೆಜ್ಜೆ ಮುಂದೆ ಹೋಗಿಲ್ಲ. ವಿಪರ್ಯಾಸವೆಂದರೆ ನಜೀಬ್‌ರ ನಾಪತ್ತೆ ಪ್ರಕರಣದ ತನಿಖೆಯ ಹಾದಿ ತಪ್ಪಿಸುವಲ್ಲಿ ಪೊಲೀಸರ ಪಾತ್ರವೇ ಬಹುದೊಡ್ಡದಿದೆ ಎಂಬ ಆರೋಪ ಕೇಳಿ ಬರುತ್ತಿವೆ.

ಜವಾಹರಲಾಲ್ ನೆಹರೂ ವಿಶ್ವ ವಿದ್ಯಾನಿಲಯದಲ್ಲಿ ಜೈವಿಕ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನಜೀಬ್ ಕಳೆದ ವರ್ಷ ಅಕ್ಟೋಬರ್ 15ರಂದು ತನ್ನ ಹಾಸ್ಟೆಲ್‌ನಿಂದ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗುವ ಹಿಂದಿನ ರಾತ್ರಿ, ಇವರಿಗೆ ಎಬಿವಿಪಿ ಕಾರ್ಯಕರ್ತರು ಥಳಿಸಿದ್ದರು. ಜೀವಬೆದರಿಕೆ ಒಡ್ಡಿದ್ದರು. ಬೆಳಗಿನ ಜಾವ ತನ್ನ ತಾಯಿಗೆ ದೂರವಾಣಿಯ ಮೂಲಕ ಇದನ್ನು ತಿಳಿಸಿದ್ದರು ಕೂಡ. ಅವರ ಕರೆಯಿಂದ ಆತಂಕಗೊಂಡ ತಾಯಿ, ಮರುದಿನವೇ ಬಸ್ ಹತ್ತಿ ದಿಲ್ಲಿಗೆ ಆಗಮಿಸಿ ವಿಚಾರಿಸುವ ಹೊತ್ತಿಗೆ ನಜೀಬ್ ನಾಪತ್ತೆಯಾಗಿದ್ದರು.

ವಿವಿ ಅಧಿಕಾರಿಗಳ ಪ್ರಕಾರ, ಅ. 15ರ ಬೆಳಗ್ಗೆ ಆಟೋ ರಿಕ್ಷಾವೊಂದರಲ್ಲಿ ನಜೀಬ್ ವಿವಿ ಕ್ಯಾಂಪಸ್‌ನಿಂದ ಹೊರಟು ಹೋಗಿದ್ದರಂತೆ. ಇದೇ ಸಂದರ್ಭದಲ್ಲಿ ನಜೀಬ್‌ರ ನಾಪತ್ತೆಯ ಕುರಿತಂತೆ ಪ್ರಕರಣ ದಾಖಲಿಸಬೇಕಾಗಿದ್ದ ಪೊಲೀಸರು, ಬದಲಿಗೆ ಹಿಂದಿನ ರಾತ್ರಿ ನಡೆದ ದಾಂಧಲೆಯಲ್ಲಿ ನಜೀಬ್‌ರನ್ನು ಅಪರಾಧಿ ಎಂದು ಬಿಂಬಿಸಲು ಯತ್ನಿಸಿದರು. ಒಂದೆಡೆ ವಿಚಾರಣೆಯ ನಾಟಕವಾಡುತ್ತಲೇ, ಪೊಲೀಸರು ತನಿಖೆಯ ದಾರಿಯನ್ನು ತಪ್ಪಿಸುತ್ತಿದ್ದರು. ಮೂಲತಃ ನಜೀಬ್ ನಾಪತ್ತೆಯಾಗಿದ್ದಾರೆ ಎನ್ನುವುದನ್ನು ಪೊಲೀಸರೇ ಪೂರ್ಣವಾಗಿ ಒಪ್ಪಿಕೊಂಡಿಲ್ಲ. ಇನ್ನು ತನಿಖೆ ನಡೆಸುವುದಾದರೂ ಎಲ್ಲಿ ಬಂತು? ವಿಚಾರಣೆ ಆರಂಭವಾಗಿ ಒಂದು ತಿಂಗಳಾಗುವಾಗ, ದಿಲ್ಲಿಯ ಜಾಮ್ನಿಯಾ ವಿವಿ ಸಮೀಪ ಆಟೊರಿಕ್ಷಾವೊಂದರಿಂದ ನಜೀಬ್ ಕೆಳಗಿಳಿಯುವುದನ್ನು ಕಂಡವರಿದ್ದಾರೆ ಎಂದು ಪೊಲೀಸರೇ ಸುದ್ದಿ ಹರಡಿದರು. ಬಳಿಕ ತನಿಖೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು. ಪೊಲೀಸರು ಹಾಗೆ ಹೇಳಿದ್ದು ನವೆಂಬರ್‌ನಲ್ಲಿ. ಅನಂತರ ಪ್ರಕರಣ ಸ್ಥಳೀಯ ಪೊಲೀಸರಿಂದ ದಿಲ್ಲಿ ಪೊಲೀಸ್ ಅಪರಾಧ ವಿಭಾಗಕ್ಕೆ ಮತ್ತು ಅಂತಿಮವಾಗಿ ಸಿಬಿಐಗೆ ಹೋದರೂ ಮೊಕದ್ದಮೆಯಲ್ಲಿ ಯಾವುದೇ ಮುನ್ನಡೆ, ಬೆಳವಣಿಗೆಯಾಗಿಲ್ಲ.

ವಿಶೇಷವೆಂದರೆ, ಇದಾದ ಬಳಿಕ ಪತ್ರಿಕೆಗಳಲ್ಲಿ ನಜೀಬ್ ಐಸಿಸ್ ಸೇರಿದ್ದಾರೆ ಎಂಬ ವದಂತಿಗಳನ್ನು ಹರಡಲಾಯಿತು. ಅನಂತರ ಪೊಲೀಸರೇ ಇದನ್ನು ನಿರಾಕರಿಸಿದರು. ಮೊದಲಾಗಿ ಅಹ್ಮದ್‌ನ ನಾಪತ್ತೆ ಪ್ರಕರಣವನ್ನು ಕೈಗೆತ್ತಿಕೊಂಡ ದಿಲ್ಲಿ ಪೊಲೀಸರು, ತಮಗೆ ಕೆಲವು ವಿವರಗಳನ್ನು ನೀಡಬಲ್ಲ ನಜೀಬ್‌ರ ಪರಿಚಯಸ್ಥರನ್ನು ಪತ್ತೆ ಹಚ್ಚುವುದೇ ಒಂದು ಸವಾಲಾಗಿತ್ತು ಎಂದು ಹೇಳಿದರು. ಅಹ್ಮದ್ ನಾಪತ್ತೆಯಾದ ಬಳಿಕ ಅವರ ಸಂಬಂಧಿಕರು ಮತ್ತು ಪೊಲೀಸರು ಇಬ್ಬರಿಗೂ ಅವರ ಸುಳಿವಿನ ಬಗ್ಗೆ ನೂರಾರು ಫೋನ್‌ಕಾಲ್‌ಗಳು ಬಂದಿದ್ದವು. ಆ ಕರೆಗಳನ್ನಾಧರಿಸಿ ಪೊಲೀಸರು ಹಲವು ರಾಜ್ಯಗಳಲ್ಲಿ ಹುಡುಕಾಟ ನಡೆಸಿದರಾದರೂ ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ.

ಇಷ್ಟೆಲ್ಲ ಆಧುನಿಕ ತನಿಖಾ ವ್ಯವಸ್ಥೆಗಳಿದ್ದೂ ಒಬ್ಬ ವಿದ್ಯಾರ್ಥಿಯನ್ನು ಪತ್ತೆ ಹಚ್ಚಲು ಪೊಲೀಸರಿಗೆ ಯಾಕೆ ಸಾಧ್ಯವಾಗಲಿಲ್ಲ? ಫೋನ್‌ಕಾಲ್‌ಗಳನ್ನಾಧರಿಸಿ ತನಿಖೆ ನಡೆಸಿದರೂ ನಜೀಬ್ ಸಿಗಲಿಲ್ಲ ಎಂದ ಮೇಲೆ, ಫೋನ್‌ಕಾಲ್‌ಗಳೇ ನಕಲಿಯಾಗಿದ್ದವು ಎಂದು ಅರ್ಥವಲ್ಲವೇ? ಹಾಗಾದರೆ, ನಜೀಬ್ ಜೀವಂತ ಇದ್ದಾರೆ ಎನ್ನುವುದನ್ನು ಹರಡುವುದಕ್ಕಾಗಿ ಇಂತಹ ನಕಲಿ ಕಾಲ್‌ಗಳು ಪೊಲೀಸರಿಗೆ ಬಂದವೇ? ಎಂಬ ಪ್ರಶ್ನೆಗಳು ನಮ್ಮ ಮುಂದೆ ಉತ್ತರವಿಲ್ಲದೆ ಬಿದ್ದುಕೊಂಡಿವೆ. ಅತೀ ಮುಖ್ಯ ವಿಷಯವೆಂದರೆ, ಹೇಗೆ ರೋಹಿತ್ ವೇಮುಲಾ ಆತ್ಮಹತ್ಯೆಯಲ್ಲಿ ಎಬಿವಿಪಿ ಮುಖಂಡರ ಪಾತ್ರಗಳು ಕೇಳಿ ಬಂತೋ, ನಜೀಬ್ ನಾಪತ್ತೆಯಲ್ಲೂ ಎಬಿವಿಪಿ ಕಾರ್ಯಕರ್ತರ ಹೆಸರುಗಳು ಕೇಳಿ ಬಂದಿವೆ.

ಹೈದರಾಬಾದ್ ವಿವಿಯಲ್ಲಿ ಎಬಿವಿಪಿ ಮತ್ತು ರೋಹಿತ್ ವೇಮುಲಾ ಸಂಘರ್ಷದಲ್ಲಿ ಕೇಂದ್ರ ಸರಕಾರದ ಸಚಿವರು ಎಬಿವಿಪಿ ಮುಖಂಡರ ಪರವಾಗಿ ನಿಂತು, ರೋಹಿತ್ ವೇಮುಲಾರಿಗೆ ಮಾನಸಿಕ ಚಿತ್ರಹಿಂಸೆ ನೀಡಿರುವುದೇ ಆತನನ್ನು ಆತ್ಮಹತ್ಯೆಗೆ ದೂಡಿತು ಎನ್ನುವುದನ್ನು ನಾವೆಲ್ಲ ಮಾಧ್ಯಮಗಳಲ್ಲಿ ಓದಿದ್ದೇವೆ. ನಜೀಬ್‌ರ ವಿಷಯದಲ್ಲೂ ಎಬಿವಿಪಿ ಹೆಸರು ಕೇಳಿ ಬರುತ್ತಿರುವುದರಿಂದಲೇ ತನಿಖೆಯನ್ನು ನಾವು ಅನುಮಾನದಿಂದ ನೋಡಬೇಕಾಗಿದೆ. ನಜೀಬ್ ನಾಪತ್ತೆಯಾಗುವ ಹಿಂದಿನ ರಾತ್ರಿ ಎಬಿವಿಪಿ ಕಾರ್ಯಕರ್ತರಿಂದ ಹಲ್ಲೆಗೊಳಗಾಗಿದ್ದಾರೆೆ ಎಂದ ಮೇಲೆ, ಪೊಲೀಸರ ಮೊದಲ ಅನುಮಾನ ಅವರ ಕಡೆಗೇ ಹೊರಳಬೇಕು. ನಜೀಬ್‌ರ ಪರಿಚಯಸ್ಥರನ್ನು ಹುಡುಕುವುದೇ ಕಷ್ಟವಾಯಿತು ಎನ್ನುವ ಪೊಲೀಸರು, ನಜೀಬ್‌ರ ಮೇಲೆ ಹಿಂದಿನ ರಾತ್ರಿ ಹಲ್ಲೆ ನಡೆಸಿದ ಎಬಿವಿಪಿ ಕಾರ್ಯಕರ್ತರ ಮೇಲೆ ಯಾಕೆ ಮೊಕದ್ದಮೆ ದಾಖಲಿಸಲಿಲ್ಲ? ಕನಿಷ್ಠ ಹಲ್ಲೆ ನಡೆಸಿದ ಆರೋಪದಲ್ಲಾದರೂ ಅವರನ್ನು ಬಂಧಿಸಿ ಗಂಭೀರವಾಗಿ ವಿಚಾರಣೆ ನಡೆಸಬೇಕಾಗಿತ್ತಲ್ಲವೇ? ಆದರೆ ಆ ಪ್ರಕರಣದಲ್ಲಿ ಪೊಲೀಸರು ನಜೀಬ್‌ರನ್ನೇ ಆರೋಪಿಯನ್ನಾಗಿ ಮಾಡಿರುವುದರ ಹಿಂದೆ, ಸರಕಾರದ ಒತ್ತಡಗಳು ಇಲ್ಲ ಎನ್ನುವುದಕ್ಕೆ ಸಾಧ್ಯವೇ?

ನಿಜವಾದ ತನಿಖೆ ನಡೆದಿದ್ದರೆ ಇಷ್ಟರಲ್ಲಿ ಜೆಎನ್‌ಯುವಿನ ಎಬಿವಿಪಿ ಪದಾಧಿಕಾರಿಗಳು ಜೈಲಿನೊಳಗಿರಬೇಕಾಗಿತ್ತು. ಹಾಗಾದಲ್ಲಿ ಅದು ಕೇಂದ್ರ ಸರಕಾರಕ್ಕೆ ಮುಜುಗರ ತರುತ್ತದೆ. ಹೇಗೆ ಹೈದರಾಬಾದ್ ವಿವಿಯಲ್ಲಿ ಎಬಿವಿಪಿ ಕಾರ್ಯಕರ್ತರನ್ನು ರಕ್ಷಿಸಲು ಕೇಂದ್ರ ಸರಕಾರ ಹವಣಿಸಿತೋ, ಹಾಗೆಯೇ ಜೆಎನ್‌ಯುನಲ್ಲೂ ಎಬಿವಿಪಿ ಕಾರ್ಯಕರ್ತರನ್ನು ರಕ್ಷಿಸಲು ಕೇಂದ್ರ ಸರಕಾರ ಯತ್ನಿಸುತ್ತಿದೆ. ಈ ಕಾರಣದಿಂದಲೇ ತನಿಖೆ ಮುಂದೆ ಹೋಗುತ್ತಿಲ್ಲ. ಬದಲಿಗೆ ನಜೀಬ್ ಕಾಣಿಸಿಕೊಂಡ ವದಂತಿಗಳಷ್ಟೇ ಇಂದು ನಮ್ಮ ನಡುವೆ ಜೀವಂತವಿದೆ. ನರೇಂದ್ರಮೋದಿ ಈವರೆಗೆ ವಿದ್ಯಾರ್ಥಿಯ ನಾಪತ್ತೆಯ ಕುರಿತಂತೆ ತುಟಿ ತೆರೆಯದೇ ಇರುವುದು ಈ ಕಾರಣಕ್ಕೇ ಅನುಮಾನಾಸ್ಪದವಾಗುತ್ತದೆ.

ವೇಮುಲಾರನ್ನು ಇಡೀ ವ್ಯವಸ್ಥೆ ಕೊಂದು ಹಾಕಿ ಬಳಿಕ, ಅದನ್ನು ಆತ್ಮಹತ್ಯೆ ಎಂದು ಕರೆಯಿತು. ಇದೀಗ ನಜೀಬ್‌ರನ್ನು ಕೂಡ ಕೊಂದು ಹಾಕಿ, ಅದನ್ನು ನಾಪತ್ತೆ ಎಂದು ಮುಗಿಸಿ ಬಿಡುವ ಹುನ್ನಾರವನ್ನು ಮಾಡುತ್ತಿದೆ. ನಜೀಬ್‌ರ ತಾಯಿ ಹತಾಶೆ ವ್ಯಕ್ತಪಡಿಸುತ್ತಿರುವುದು ಈ ಕಾರಣಕ್ಕಾಗಿಯೇ ಆಗಿದೆ. ಯಾವುದೇ ವ್ಯಕ್ತಿ, ಇಷ್ಟು ಸಮಯ ತನ್ನ ಕುಟುಂಬವನ್ನು ದೂರಮಾಡಿ ತಲೆಮರೆಸಿಕೊಳ್ಳುವುದಕ್ಕೆ ಸಾಧ್ಯವಿಲ್ಲ. ಹಾಗೆ ತಲೆಮರೆಸಿಕೊಳ್ಳಬೇಕಾದ ಅನಿವಾರ್ಯತೆ ನಜೀಬ್‌ಗೆ ಏನಿದೆ? ಎನ್ನುವುದಾದರೂ ತನಿಖೆಯಾಗಬೇಕು.

ಜಗತ್ತಿನ ಯಾವ ಮೂಲೆಯಲ್ಲಿದ್ದರೂ ಪತ್ತೆ ಹಚ್ಚುವುದಕ್ಕೆ ಪೊಲೀಸರಲ್ಲಿ ವಿಧಾನಗಳಿರುವಾಗ, ನಜೀಬ್ ಎನ್ನುವ ಒಬ್ಬ ವಿದ್ಯಾರ್ಥಿಯನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ ಎನ್ನುವುದು ನಮ್ಮ ತನಿಖಾ ಸಂಸ್ಥೆಯ ದೌರ್ಬಲ್ಯವನ್ನು ಎತ್ತಿ ಹೇಳುತ್ತದೆ. ಅಥವಾ ನಜೀಬ್ ಕೊಲೆಯಾಗಿದ್ದಾರೆ ಮತ್ತು ಪೊಲೀಸರಿಗೆ ಕೊಲೆಗಾರರ ಕುರಿತಂತೆ ಮಾಹಿತಿ ಇರುವುದೇ ತನಿಖೆ ಮುಂದೆ ಹೋಗದೇ ಇರುವುದಕ್ಕೆ ಕಾರಣವೇ? ಇದೀಗ ಅನಿವಾರ್ಯವಾಗಿ ಇಂತಹದೊಂದು ಪ್ರಶ್ನೆಯನ್ನು ಎಲ್ಲರೂ ತಮಗೆ ತಾವೇ ಕೇಳಿಕೊಳ್ಳುವಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News