ಬಿಜೆಪಿಗರ ಕಣ್ಣು ಕೆಂಪಾಗಿಸಿದ ‘ಮೆರ್ಸಲ್’ ಡೈಲಾಗ್ ಗಳಲ್ಲಿ ಸತ್ಯಾಂಶವಿಲ್ಲವೇ?

Update: 2017-10-23 16:15 GMT

ತಮಿಳು ನಟ ವಿಜಯ್ ನಟನೆಯ ‘ಮೆರ್ಸಲ್’ ಚಿತ್ರ ಇತ್ತೀಚೆಗೆ ತೆರೆಕಂಡಿದ್ದು, ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮಾಸ್ ಹಾಗು ಕ್ಲಾಸ್ ಪ್ರೇಕ್ಷಕರನ್ನು ರಂಜಿಸಿರುವ ಈ ಚಿತ್ರ ವಿಜಯ್ ಕೆರಿಯರ್ ನಲ್ಲೇ ಅತೀ ದೊಡ್ಡ ಹಿಟ್ ಚಿತ್ರ ಎನ್ನಲಾಗುತ್ತಿದೆ. ಆದರೆ ಈ ಚಿತ್ರ ಹೌಸ್ ಫುಲ್ ಆದದ್ದಕ್ಕಿಂತ ಹೆಚ್ಚು ಸುದ್ದಿಯಾದದ್ದು ಬಿಜೆಪಿಗರಿಂದ. ಇದಕ್ಕೆ ಕಾರಣ ಈ ಚಿತ್ರದಲ್ಲಿದ್ದ ಕೆಲ ಸಂಭಾಷಣೆಗಳು. ಜಿಎಸ್ ಟಿ ಹಾಗು ಡಿಜಿಟಲ್ ಇಂಡಿಯಾದ ಬಗ್ಗೆ ಈ ಚಿತ್ರದಲ್ಲಿದ್ದ ಕೆಲ ಡೈಲಾಗ್ ಗಳು ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಸಂಭಾಷಣೆಗಳ ಮೂಲಕ ಸುಳ್ಳನ್ನು ಹರಡಿ ಜನತೆಯ ದಿಕ್ಕು ತಪ್ಪಿಸಲಾಗಿದೆ ಎನ್ನುವುದು ಬಿಜೆಪಿಗರ ಆರೋಪ.

ಈ ಚಿತ್ರದಲ್ಲಿ ಸುಳ್ಳನ್ನು ಹೇಳಲಾಗಿದೆಯೇ, ಡೈಲಾಗ್ ಗಳಲ್ಲಿರುವ ಕೆಲ ಹೇಳಿಕೆಗಳಲ್ಲಿ ಸತ್ಯಾಂಶವಿಲ್ಲವೇ ಎನ್ನುವ ಬಗೆಗಿನ ಫ್ಯಾಕ್ಟ್ ಚೆಕ್ ಇಲ್ಲಿದೆ.

“ನಮ್ಮ ಸರಕಾರ 28 ಶೇ. ಜಿಎಸ್ ಟಿ ಪಡೆಯುತ್ತಿದೆ” ಎನ್ನುವ ಸಂಭಾಷಣೆಯ ಸತ್ಯಾಂಶ ನೋಡುವುದಾದರೆ ಹೌದು, ಕೆಲವೊಂದು ಉತ್ಪನ್ನಗಳ ಮೇಲೆ ಸರಕಾರ 28 ಶೇ. ಜಿಎಸ್ ಟಿ ವಿಧಿಸಿರುವುದು ಸತ್ಯ.

ಜೊತೆಗೆ ಈ ಸಂಭಾಷಣೆಯಲ್ಲಿ ನಮ್ಮ ದೇಶದಲ್ಲಿ ಉಚಿತ ವೈದ್ಯಕೀಯ ಸೇವೆಯನ್ನು ಯಾಕೆ ನೀಡಲಾಗುತ್ತಿಲ್ಲ ಎಂದೂ ಪ್ರಶ್ನಿಸಲಾಗಿದೆ.

“ಔಷಧಗಳ ಮೇಲೆ 12 ಶೇ. ಜಿಎಸ್ ಟಿಯನ್ನು ನಮ್ಮ ಸರಕಾರ ವಿಧಿಸಿದೆ” ಎನ್ನುವ ಡೈಲಾಗ್ ಕೂಡ ಚಿತ್ರದಲ್ಲಿದ್ದು, ಇದು ಅಕ್ಷರಶಃ ಸತ್ಯ. ಏಕೆಂದರೆ ಔಷಧಗಳಿಗೆ 5ರಿಂದ 12 ಶೇ.ವರೆಗೆ ಜಿಎಸ್ ಟಿ ಇದೆ. ಚಿತ್ರದಲ್ಲಿ 12 ಶೇ. ಜಿಎಸ್ ಟಿ ಬಗ್ಗೆ ಹೇಳಲಾಗಿದೆ.

“ಸಿಂಗಾಪುರ ದೇಶ ಜನರಿಂದ 7 ಶೇ. ಜಿಎಸ್ ಟಿ ಪಡೆಯುತ್ತಿದ್ದು, ಜನರಿಗೆ ಉಚಿತ ವೈದ್ಯಕೀಯ ಸೇವೆ ನೀಡುತ್ತಿದೆ” ಎನ್ನುವ ಡೈಲಾಗ್ ಚಿತ್ರದಲ್ಲಿದೆ. ವಾಸ್ತವದಲ್ಲಿ ಸಿಂಗಾಪುರದ ಜನತೆಗೆ ‘ಮೆಡಿಸೇವ್’  ಯೋಜನೆಯೊಂದಿದೆ. ಇದನ್ನು ಆದಾಯ ತೆರಿಗೆಯ ಮೂಲಕ ಸಂಗ್ರಹಿಸಲಾಗುತ್ತದೆ. ಆದ್ದರಿಂದ ಉಚಿತ ವೈದ್ಯಕೀಯ ಸೇವೆ ಎನ್ನುವುದು ಸತ್ಯಕ್ಕೆ ದೂರವಾಗಿದೆ.

ಚಿತ್ರದಲ್ಲಿರುವ "ಮದ್ಯದ ಮೇಲೆ ಸರಕಾರ ಜಿಎಸ್ ಟಿ ವಿಧಿಸಿಲ್ಲ” ಎನ್ನುವುದೂ ಕೂಡ ಸತ್ಯವಾಗಿದೆ. ವಿವಿಧ ವಸ್ತುಗಳ ಮೇಲೆ ಜಿಎಸ್ ಟಿ ಹಾಕಲಾಗಿದ್ದರೂ ಮದ್ಯ ಮಾತ್ರ ಜಿಎಸ್ ಟಿ ಮುಕ್ತವಾಗಿದೆ.

“ಸರಕಾರಿ ಆಸ್ಪತ್ರೆಯೊಂದರಲ್ಲಿ ಆಕ್ಸಿಜನ್ ಸಿಲಿಂಡರ್ ಇಲ್ಲ. ಕಾರಣ ಏನೆಂದು ಕೇಳಿದರೆ 2 ವರ್ಷಗಳಿಂದ ಆಕ್ಸಿಜನ್ ಪೂರೈಕೆದಾರರಿಗೆ ಬಾಕಿ ಪಾವತಿಸಿಲ್ಲ”  ಎನ್ನುವುದು ಚಿತ್ರದಲ್ಲಿರುವ ಮತ್ತೊಂದು ಡೈಲಾಗ್.  ಈ ಡೈಲಾಗ್ ಸತ್ಯವೇ ಸುಳ್ಳೇ ಎನ್ನುವ ವಿಚಾರ ಎಲ್ಲರಿಗೂ ತಿಳಿದಿದೆ. ಗೋರಖ್ ಪುರದ ಬಿಆರ್ ಡಿ ಮೆಡಿಕಲ್ ಕಾಲೇಜಿನಲ್ಲಿ ನಡೆದ ದುರಂತದ ಬಗ್ಗೆ ಚಿತ್ರದಲ್ಲಿ ಪರೋಕ್ಷವಾಗಿ ಬೆಳಕು ಚೆಲ್ಲಲಾಗಿದೆ.

"ಮತ್ತೊಂದು ಸರಕಾರಿ ಆಸ್ಪತ್ರೆಯಲ್ಲಿ ನಡೆದ ಪವರ್ ಕಟ್ ನಿಂದಾಗಿ ನಾಲ್ವರು ಮೃತಪಟ್ಟಿದ್ದಾರೆ" ಎಂದು ವಿಜಯ್ ಹೇಳುವ ಡೈಲಾಗ್ ಕೂಡ ಸತ್ಯವಾಗಿದೆ.  2017ರ ಮಾರ್ಚ್ ನಲ್ಲಿ ಪುದುಚೇರಿಯ ಇಂದಿರಾ ಗಾಂಧಿ ಮೆಡಿಕಲ್ ಕಾಲೇಜು ಹಾಗು ರಿಸರ್ಚ್ ಇನ್ ಸ್ಟಿಟ್ಯೂಟ್ ನಲ್ಲಿ ಈ ದುರಂತ ಸಂಭವಿಸಿತ್ತು. 15 ನಿಮಿಷಗಳ ಪವರ್ ಕಟ್ ನಿಂದಾಗಿ ಮೂವರು ಡಯಾಲಿಸಿಸ್ ರೋಗಿಗಳು ಸಾವನ್ನಪ್ಪಿದ್ದರು. 

"ಆಸ್ಪತ್ರೆಯಲ್ಲಿ ಇಲಿಗಳ ಕಡಿತಕ್ಕೊಳಗಾಗಿ ಮಗುವೊಂದು ಮೃತಪಟ್ಟಿತ್ತು" ಎಂದು ಚಿತ್ರದ ಕ್ಲೈಮಾಕ್ಸ್ ನಲ್ಲಿ ವಿಜಯ್ ಹೇಳುತ್ತಾರೆ. ಈ ವಿಚಾರವೂ ಸತ್ಯವಾಗಿದೆ. 2015ರ ಆಗಸ್ಟ್ 27ರಂದು ಆಂಧ್ರ ಪ್ರದೇಶದ ಗುಂಟೂರಿನ ಆಸ್ಪತ್ರೆಯೊಂದರಲ್ಲಿ ಇಲಿಗಳಿಂದ ಕಡಿತಕ್ಕೊಳಗಾಗಿ  ಮಗುವೊಂದು ಮೃತಪಟ್ಟಿತ್ತು.  

“ನನ್ನ ಜೇಬಿನಲ್ಲಿ ಹಣ ಇಲ್ಲ. ಏಕೆಂದರೆ ನಮ್ಮದು ಡಿಜಿಟಲ್ ಇಂಡಿಯಾ. ನಮ್ಮ ಹಣ ಪಡೆಯಲು ನಾವು ಕ್ಯೂನಲ್ಲಿ ನಿಲ್ಲಬೇಕು” ಎಂದು ಕಾಮಿಡಿಯನ್ ವಡಿವೇಲು ಒಂದು ದೃಶ್ಯದಲ್ಲಿ ಹೇಳುತ್ತಾರೆ. ಇದರ ಸತ್ಯಾಸತ್ಯತೆ ಬಗ್ಗೆ ದೇಶದ ಎಲ್ಲಾ ನಾಗರಿಕರಿಗೂ ತಿಳಿದಿದೆ. ನೋಟು ಅಮಾನ್ಯೀಕರಣದ ಸಂದರ್ಭ ದೇಶದ ಜನತೆ ಎದುರಿಸಿದ ಸಮಸ್ಯೆಗಳ ಬಗ್ಗೆಯೇ ಈ ಡೈಲಾಗ್ ತಿಳಿಸಿದೆ.

ಚಿತ್ರದಲ್ಲಿ ವಾಸ್ತವಕ್ಕೆ ಹತ್ತಿರವಾಗಿರುವ ಡೈಲಾಗ್ ಗಳೇ ಬಿಜೆಪಿಗರ ಕಣ್ಣು ಕೆಂಪಾಗಿಸಿದೆ. ಈ ಡೈಲಾಗ್ ಗಳಿಗೆ ಕತ್ತರಿ ಹಾಕಬೇಕು ಎಂದು ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News