ಟಿಪ್ಪು ಜಯಂತಿ ಯಾಕೆ ಬೇಡ?

Update: 2017-10-24 04:14 GMT

ಟಿಪ್ಪು ಜಯಂತಿಗೂ ಮುಸ್ಲಿಮರಿಗೂ ಏನು ಸಂಬಂಧ? ಟಿಪ್ಪು ಮುಸ್ಲಿಮರ ಧಾರ್ಮಿಕ ಗುರುವೇ? ಟಿಪ್ಪು ಈ ನಾಡಿನ ಮುಸ್ಲಿಮರ ಸಂಕೇತ ಖಂಡಿತಾ ಅಲ್ಲ ಎನ್ನುವುದು ಸ್ವತಃ ಟಿಪ್ಪು ಜಯಂತಿಯನ್ನು ವಿರೋಧಿಸುವ ಸಂಘಪರಿವಾರಕ್ಕೂ ಗೊತ್ತಿದೆ. ಆದರೆ ಅವರಿಗೆ 'ಅಗತ್ಯ'ವಾಗಿ ಟಿಪ್ಪುವನ್ನು ಮುಸ್ಲಿಮರ ಪ್ರತಿನಿಧಿಯಾಗಿ ಬದಲಾಯಿಸಬೇಕಾಗಿದೆ. ಹಾಗೆ ನೋಡಿದರೆ ಕಟ್ಟರ್ ಮುಸ್ಲಿಮರು ಟಿಪ್ಪುವಿನ ನಂಬಿಕೆಗಳನ್ನೇ ಒಪ್ಪುವುದಿಲ್ಲ. ಯಾಕೆಂದರೆ, ಟಿಪ್ಪು ಬರೇ ಮುಸ್ಲಿಮ್ ತತ್ವಗಳ ಆಧಾರಗಳಲ್ಲಿ ತನ್ನ ಆಡಳಿತವನ್ನು ನಡೆಸಿರಲಿಲ್ಲ. ಆತನ ಧಾರ್ಮಿಕ ನಡವಳಿಕೆಗಳನ್ನು ಗಮನಿಸುವಾಗ, ಅವನು ಮುಸ್ಲಿಮರಿಗಿಂತ ಮುಸ್ಲಿಮೇತರರ ನಂಬಿಕೆಗಳಿಗೆ ಹೆಚ್ಚು ಹತ್ತಿರವಾಗಿದ್ದ.

ತನ್ನ ಪಟ್ಟದಾನೆಯ ಕಣ್ಣಿಗೆ ಹಾನಿಯಾಗಿದ್ದಾಗ ಆತ ನಂಜುಂಡನಿಗೆ ಹರಕೆ ಹೊರುತ್ತಾನೆ ಮತ್ತು ವಾಸಿಯಾದಾಗ ಆ ಹರಕೆಯನ್ನು ತೀರಿಸುತ್ತಾನೆ. ಹಲವು ದೇವಸ್ಥಾನಗಳಲ್ಲಿ ಟಿಪ್ಪುವಿನ ಹೆಸರಲ್ಲಿ ಈಗಲೂ ಅರ್ಚನೆ ನಡೆಯುತ್ತಿದೆ. ಮರಾಠರು ಶೃಂಗೇರಿಯ ಮಠದ ಮೇಲೆ ದಾಳಿ ನಡೆಸಿದಾಗ ಅದನ್ನು ಖಂಡಿಸಿದವನು, ಮಠಕ್ಕೆ ಆಶ್ರಯ ನೀಡಿದವನು ಟಿಪ್ಪು ಸುಲ್ತಾನ್. ಅಷ್ಟೇ ಏಕೆ, ಆತನ ದಿವಾನ ಪೂರ್ಣಯ್ಯ ಬ್ರಾಹ್ಮಣ. ತನ್ನ ಆಸುಪಾಸಿನಲ್ಲಿ ಮುಸ್ಲಿಮೇತರರಿಗೆ ಆತ ಆದ್ಯತೆಯನ್ನು ನೀಡಿದ್ದ. ಆದುದರಿಂದ 'ಮುಸ್ಲಿಮರನ್ನು ಸಂತೈಸುವುದಕ್ಕಾಗಿ' ಈ ನಾಡಿನಲ್ಲಿ ಸರಕಾರ ಟಿಪ್ಪು ಜಯಂತಿಯನ್ನು ಆಚರಿಸುವುದಕ್ಕೆ ಮುಂದಾಗಿದೆಯೆಂದಾದರೆ ಆ ಆಚರಣೆಯನ್ನು ನಿಲ್ಲಿಸುವುದೇ ವಾಸಿ.

ಟಿಪ್ಪು ಒಂದು ನಿರ್ದಿಷ್ಟ ಧರ್ಮದ ಅಸ್ಮಿತೆಯಾಗಿ ಯಾವತ್ತೂ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಂಡಿರಲಿಲ್ಲ ಮತ್ತು ಯಾವುದೇ ಧಾರ್ಮಿಕ ಸಂಘಟನೆಗಳು ಅಥವಾ ಮುಸ್ಲಿಮ್ ಸಂಘಟನೆಗಳು ಧರ್ಮದ ಹಿನ್ನೆಲೆಯಲ್ಲಿ ಟಿಪ್ಪುವನ್ನು ಮುಂದೆ ತಂದೂ ಇಲ್ಲ. ಮುಖ್ಯವಾಗಿ ಆತ ಅನುಸರಿಸುತ್ತಿದ್ದ ಕೆಲವು ನಂಬಿಕೆಗಳು, ಆಚರಣೆಗಳ ಕಾರಣಕ್ಕಾಗಿ ಆತನೊಂದಿಗೆ ಗುರುತಿಸಿಕೊಳ್ಳಲು ಇಷ್ಟಪಡದ ಮುಸ್ಲಿಮರ ಒಂದು ಸಣ್ಣ ಗುಂಪೂ ಇದೆ ಎನ್ನುವುದನ್ನು ಗಮನಿಸಬೇಕು. ಮೀರ್‌ಸಾದಿಕ್ ಮತ್ತು ಪೂರ್ಣಯ್ಯ ಜೊತೆ ಸೇರಿಯೇ ಟಿಪ್ಪುವನ್ನು ವಂಚಿಸಿದರು .


  ಇಂದು ಈ ನಾಡಿನಲ್ಲಿ ಕಿತ್ತೂರು ಚೆನ್ನಮ್ಮ ಜಯಂತಿ, ಬಸವ ಜಯಂತಿ, ವಾಲ್ಮೀಕಿ ಜಯಂತಿಯನ್ನು ಯಾವ ಹಿನ್ನೆಲೆಯಿಟ್ಟು ಸರಕಾರ ಆಚರಿಸುತ್ತಿದೆಯೋ ಅದೇ ಹಿನ್ನೆಲೆಯಲ್ಲಿ ಟಿಪ್ಪು ಜಯಂತಿಯನ್ನು ಆಚರಿಸುವುದಾದರೆ ಅದು ಸ್ವಾಗತಾರ್ಹ. ಟಿಪ್ಪು ಸುಲ್ತಾನ್ ಈ ನಾಡಿನ ಅಸ್ಮಿತೆಯಾಗಿದ್ದಾನೆ. ಆತ ಬ್ರಿಟಿಷರ ವಿರುದ್ಧ ಹೋರಾಡಿದ ಒಂದೇ ಕಾರಣಕ್ಕಾಗಿ ನಾವು ಆತನನ್ನು ಜನರ ತಲೆಯ ಮೇಲೆ ಕೂರಿಸಬೇಕಾಗಿಲ್ಲ. ಯಾಕೆಂದರೆ ಅಂದಿನ ಕಾಲಘಟ್ಟದಲ್ಲಿ ತಮ್ಮ ತಮ್ಮ ಅಧಿಕಾರವನ್ನು ಉಳಿಸುವುದಕ್ಕೆ ಬ್ರಿಟಿಷರ ವಿರುದ್ಧ ಹೋರಾಡುವುದು ಎಲ್ಲ ರಾಜರಿಗೂ ಅನಿವಾರ್ಯವಾಗಿತ್ತು. ರಾಜ ಪ್ರಭುತ್ವ ಬ್ರಿಟಿಷರ ವಿರುದ್ಧ ನಡೆಸಿದ ಹೋರಾಟವನ್ನು ನಾವು ಸ್ವಾತಂತ್ರ ಹೋರಾಟದ ದೃಷ್ಟಿಯಲ್ಲಿ ನೋಡುವುದು ಅಷ್ಟು ಸರಿಯಾದ ಕ್ರಮವಲ್ಲ. ಯಾಕೆಂದರೆ, ಅಂತಿಮವಾಗಿ ಅದು ಜನ ಸಾಮಾನ್ಯರ ಮೂಲಕ ಹೊರ ಹೊಮ್ಮಿದ ಹೋರಾಟವಲ್ಲ. ರಾಜರು ತಮ್ಮ ಅಸ್ತಿತ್ವಕ್ಕಾಗಿ ನಡೆಸಿದ ಹೋರಾಟ. ಬ್ರಿಟಿಷರನ್ನು ಹೊರದಬ್ಬಲು ಈ ದೇಶದ ಎಲ್ಲ ರಾಜರು ಒಂದಾಗಿ ಹೋರಾಡಿದ ಇತಿಹಾಸವೇ ಇಲ್ಲ. ಎಲ್ಲರೂ ತಮ್ಮ ತಮ್ಮ ಪಾದದ ಬುಡಕ್ಕೆ ಬಂದಾಗಷ್ಟೇ ಬ್ರಿಟಿಷರ ವಿರುದ್ಧ ನಿಂತರು. ಬ್ರಿಟಿಷರು 'ದತ್ತು ಮಕ್ಕಳಿಗೆ ಪಟ್ಟದಲ್ಲಿ ಹಕ್ಕಿಲ್ಲ' ಎಂಬ ನಿಯಮ ಜಾರಿಗೆ ತಂದ ಬಳಿಕವಷ್ಟೇ ಝಾನ್ಸಿರಾಣಿಗೆ ತನ್ನ ತಾಯ್ನಿಡು ನೆನಪಾಯಿತು.

ನಾನಾಸಾಹೇಬನ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ಟಿಪ್ಪು ಸುಲ್ತಾನನನ್ನು ಸೋಲಿಸಲು ಬ್ರಿಟಿಷರಿಗೆ ಸಹಕರಿಸಿದ ಬಾಜೀರಾಯನಿಗೆ, ಬಳಿಕ ತನ್ನ ವಿರುದ್ಧ ಬ್ರಿಟಿಷರು ಕೋವಿಯೆತ್ತಿದಾಗ ಸ್ವಾತಂತ್ರ ಹೋರಾಟ ಅನಿವಾರ್ಯವಾಯಿತು. ಎರಡನೇ ಬಾಜಿರಾಯ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದಾಗ, ಈ ದೇಶದ ದಲಿತರು ಬ್ರಿಟಿಷರ ಪರವಾಗಿ ನಿಂತರು ಎನ್ನುವುದೇ ರಾಜರುಗಳ ಸ್ವಾತಂತ್ರ ಹೋರಾಟದ ಮಿತಿಗಳನ್ನು ಹೇಳುತ್ತದೆ. ಬಾಜೀರಾಯ ಗೆದ್ದಿದ್ದರೆ ಆತ ಅರಸನಾಗಿ ಮುಂದುವರಿಯುತ್ತಿದ್ದನೇ ಹೊರತು, ದಲಿತರಿಗೆ, ಕೆಳಜಾತಿಯ ಜನರಿಗೆ ಆ ರಾಜ್ಯದಲ್ಲಿ ಸ್ವಾತಂತ್ರವೇನೂ ಸಿಗುತ್ತಿರಲಿಲ್ಲ. ಬಾಜೀರಾಯನ ಜಾತೀಯತೆಯ ವಿರುದ್ಧ ಆಕ್ರೋಶಗೊಂಡು ದಲಿತರು ಬ್ರಿಟಿಷರ ಜೊತೆಗೆ ಸೇರಿದರು. ಎಲ್ಲಕ್ಕಿಂತ ಮುಖ್ಯವಾಗಿ ಬ್ರಿಟಿಷರ ಸೇನೆಯಲ್ಲಿ ಬಹುಸಂಖ್ಯಾತ ಸೈನಿಕರು ಭಾರತೀಯರೇ ಆಗಿದ್ದರು.


     ಆದುದರಿಂದ ಬ್ರಿಟಿಷರ ವಿರುದ್ಧ ಟಿಪ್ಪು ನಡೆಸಿದ ಸ್ವಾತಂತ್ರ ಹೋರಾಟವನ್ನು ಬದಿಗಿಟ್ಟು ನಾವು ಟಿಪ್ಪುವಿನ ಜನಪರ ವ್ಯಕ್ತಿತ್ವವನ್ನು ಗುರುತಿಸಬೇಕು. ಒಬ್ಬ ಸರ್ವಾಧಿಕಾರಿ ರಾಜನಾಗಿಯೂ ಈ ನಾಡಿಗೆ ಆತ ಕೊಟ್ಟ ಆಧುನಿಕ ಒಳನೋಟಕ್ಕಾಗಿ ಆತನ ಕುರಿತಂತೆ ವಿಸ್ಮಯ ಪಡಬೇಕು. ಟಿಪ್ಪು ಮತಾಂಧನಾಗಿದ್ದರೆ ಶ್ರೀರಂಗಪಟ್ಟಣದಲ್ಲಿ ದೇಗುಲಗಳೇ ಇರುತ್ತಿರಲಿಲ್ಲ. ಪೂರ್ಣಯ್ಯ ಆತನ ಮಂತ್ರಿಯೂ ಆಗುತ್ತಿರಲಿಲ್ಲ. ಆದುದರಿಂದ ಟಿಪ್ಪು ಮತಾಂಧ ಎನ್ನುವುದು ಸಂಘಪರಿವಾರದ ಒಂದು ಹತಾಶೆಯ ಚರ್ಚೆ. ಅದಕ್ಕೆ ಬಲವಾದ ಸಾಕ್ಷಗಳೇ ಅವರ ಬಳಿ ಇಲ್ಲ. ನಮ್ಮ ನಾಡಿನಲ್ಲಿ ರೈತರು, ಕೆಳ ಜಾತಿಯ ಜನರು ಭೂ ಹಕ್ಕುಗಳನ್ನು ಪಡೆಯಲು ಕಾರಣನಾಗಿದ್ದು ಟಿಪ್ಪು ಸುಲ್ತಾನ್. ದಲಿತರಿಗೆ ಟಿಪ್ಪುಸುಲ್ತಾನ್ ಹಂಚಿದ ಭೂಮಿಯ ದಾಖಲೆಗಳು ಇಂದಿಗೂ ಈ ಅಂಶವನ್ನು ಹೇಳುತ್ತಿವೆ. ಮೇಲ್ಜಾತಿಯ ಜನರಿಗೆ ಟಿಪ್ಪು ಸುಲ್ತಾನನ ಮೇಲಿರುವ ಅಸಹನೆಗೆ ಇದು ಮುಖ್ಯ ಕಾರಣವಾಗಿದೆ. ಮಲಬಾರ್‌ನಲ್ಲಿ ದಲಿತ ಮಹಿಳೆಯರು ರವಿಕೆ ಹಾಕುವಂತಿರಲಿಲ್ಲ. ರವಿಕೆ ಹಾಕಿದರೆ ಅದಕ್ಕೆ ತೆರಿಗೆ ಕಟ್ಟಬೇಕಾಗಿತ್ತು. ಅಂತಹ ಅಮಾನವೀಯ ತೆರಿಗೆಯನ್ನು ಇಲ್ಲವಾಗಿಸಿದ್ದು, ಕೆಳಜಾತಿಯ ಹೆಣ್ಣು ಮಕ್ಕಳ ಮಾನ, ಪ್ರಾಣಕ್ಕೆ ಘನತೆಯನ್ನು ತಂದುಕೊಟ್ಟಿದ್ದು ಟಿಪ್ಪುಸುಲ್ತಾನ್. ಈ ಕಾರಣಕ್ಕಾಗಿ ಮೇಲ್ವರ್ಗದ ಜನರು ಟಿಪ್ಪುವಿನ ಕುರಿತಂತೆ ಅಸಹನೆಯನ್ನು ಹೊಂದುವುದು ಸಹಜವೇ ಆಗಿದೆ. ಮೈಸೂರು ಪ್ರಾಂತದ ಪಾಳೇಗಾರರನ್ನು ಮಟ್ಟ ಹಾಕಿ, ರೈತರ ಬದುಕನ್ನು ಸುಗಮ ಮಾಡಿದ್ದು ಈತನೇ ಆಗಿದ್ದಾನೆ.

ಜಮೀನ್ದಾರಿ ಮತ್ತು ಜಾಗಿರ್ದಾರಿ ಪದ್ಧತಿಯನ್ನು ಕೊನೆಗೊಳಿಸಿ, ಉಳುವವನೇ ಹೊಲದ ಒಡೆಯ ಎಂಬ ಕಲ್ಪನೆಯನ್ನು ಜಾರಿಗೆ ತಂದ ಎಂಬುದನ್ನು ಇತಿಹಾಸ ತಜ್ಞ ಕಬೀರ್ ಕೌಸರ್ ದಾಖಲಿಸಿದ್ದಾರೆ. ಇಂದು ಚಿಕ್ಕ ಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸೇರಿದಂತೆ ನಾಡಿನ ಮೂಲೆ ಮೂಲೆಯಲ್ಲಿ ರೇಷ್ಮೆ ಕೃಷಿಯ ಮೂಲಕ ಜನರು ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಅಂತಹ ರೇಷ್ಮೆ ಕೃಷಿಯನ್ನು ನಾಡಿಗೆ ಪರಿಚಯಿಸಿದ್ದು ಟಿಪ್ಪು ಸುಲ್ತಾನ್. ನಾಡು ಅದಕ್ಕಾಗಿ ಟಿಪ್ಪುವನ್ನು ಸ್ಮರಿಸಬೇಕಾಗಿದೆ. ಕನ್ನಂಬಾಡಿ ಅಣೆಕಟ್ಟಿನ ಕಲ್ಪನೆ ಹುಟ್ಟಿದ್ದು ಟಿಪ್ಪುವಿನ ಕಾಲದಲ್ಲಿ. ಅದರ ಆರಂಭ ಟಿಪ್ಪು ಆಡಳಿತ ಕಾಲದಲ್ಲೇ ನಡೆಯಿತು. ಅಣೆಕಟ್ಟು ಕಾಮಗಾರಿ ಸಂದರ್ಭದಲ್ಲಿ ಅಣೆಕಟ್ಟಿನ ಫಲಕದ ಅವಶೇಷ ಸಿಕ್ಕಿತು. ಇಂದಿಗೂ ಆ ಫಲಕ ಅಣೆಕಟ್ಟಿನ ಸಮೀಪ ಜೋಪಾನವಾಗಿದೆ. ಕೃಷಿಗೆ ಅತೀ ಹೆಚ್ಚು ಆದ್ಯತೆಯನ್ನು ಟಿಪ್ಪು ನೀಡಿದ್ದ. ದಕ್ಷಿಣ ಕರ್ನಾಟಕದಲ್ಲಿ ನಾವಿಂದು ಹಳ್ಳಿಹಳ್ಳಿಗಳಲ್ಲಿ ಕಾಣುವ ಹತ್ತಾರು ಕೆರೆಗಳು ಟಿಪ್ಪುವಿನ ಕಾಲದಲ್ಲೇ ಆಗಿರುವಂತಹದು. ಮೈಸೂರು ರಾಜ್ಯದ ಒಟ್ಟು ಉಳುವ ಭೂಮಿಯಲ್ಲಿ ಶೇ. 35ರಷ್ಟು ಭೂಮಿ ನೀರಾವರಿ ಸೌಲಭ್ಯವನ್ನು ಪಡೆದಿತ್ತು.

ತಂತ್ರಜ್ಞಾನಕ್ಕೂ ಆತ ನೀಡಿದ ಆದ್ಯತೆಯನ್ನು ಕಂಡು ಬ್ರಿಟಿಷರೇ ವಿಸ್ಮಯ ಪಟ್ಟಿದ್ದರು. ರಾಕೆಟ್ ಕಲ್ಪನೆ ಈತನ ಕಾಲದಲ್ಲೇ ಹುಟ್ಟಿಕೊಂಡಿತು ಎನ್ನುವುದು ಈತ ಎಷ್ಟು ಆಧುನಿಕನಾಗಿದ್ದ ಎನ್ನುವುದನ್ನು ಹೇಳುತ್ತದೆ. ಟಿಪ್ಪು ಸುಲ್ತಾನ್ ಜನಪರ ರಾಜನಾಗಿದ್ದ ಎನ್ನುವ ಕಾರಣಕ್ಕಾಗಿ, ಬ್ರಿಟಿಷರ ಜೊತೆಗಿನ ಸೋಲನ್ನು ಜನರ ಸೋಲಾಗಿ ನಾವು ಭಾವಿಸಬೇಕು. ಉಳಿದೆಲ್ಲ ಅರಸರು ಬ್ರಿಟಿಷರ ವಿರುದ್ಧ ಹೋರಾಡಿದ್ದಕ್ಕೂ ಟಿಪ್ಪು ಹೋರಾಡಿರುವುದಕ್ಕೂ ಇರುವ ವ್ಯತ್ಯಾಸ ಇಲ್ಲಿದೆ. ಆದುದರಿಂದಲೇ, ಬ್ರಿಟಿಷರ ವಿರುದ್ಧ ಟಿಪ್ಪುವಿನ ಸೋಲು ಎನ್ನುವುದು ಸಮಗ್ರ ಇಂಡಿಯಾದ ಸೋಲು ಎಂದು ಇತಿಹಾಸ ತಜ್ಞರು ಅರ್ಥೈಸುತ್ತಾರೆ. ಟಿಪ್ಪು ಜಯಂತಿ ಆಚರಿಸುವುದಾದರೆ, ಆತ ಕನ್ನಡ ನಾಡಿನ ನಾಯಕ ಎನ್ನುವ ನೆಲೆಯಲ್ಲಿ ಆಚರಣೆಯಾಗಲಿ. ಟಿಪ್ಪು ಸಾರಿದ ಸೌಹಾರ್ದ, ಸಮಾನತೆ, ಆಧುನಿಕತೆ ಈ ನಾಡಿನ ಅಭಿವೃದ್ಧಿಗೆ ಸ್ಫೂರ್ತಿಯಾಗಲಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News