ಟೀಮ್ ಇಂಡಿಯಾಕ್ಕೆ ವಿಜಯ್ ವಾಪಸ್

Update: 2017-10-23 18:42 GMT

ಹೊಸದಿಲ್ಲಿ, ಅ.23: ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಗೆ ಭಾರತ ತಂಡವನ್ನು ಸೋಮವಾರ ಪ್ರಕಟಿಸಲಾಗಿದ್ದು, ಮುರಳಿ ವಿಜಯ್ ತಂಡಕ್ಕೆ ವಾಪಸಾಗಿದ್ದಾರೆ.

ಎರಡು ತಿಂಗಳ ಹಿಂದೆ ಶ್ರೀಲಂಕಾದಲ್ಲಿ ನಡೆದ ಟೆಸ್ಟ್ ಸರಣಿಯ ವೇಳೆ ಮುರಳಿಗೆ ಮಣಿಕಟ್ಟು ನೋವು ಕಾಣಿಸಿಕೊಂಡಿದ್ದು, ಅವರು ಲಂಕಾ ಪ್ರವಾಸವನ್ನು ಮೊಟಕುಗೊಳಿಸಿ ಸ್ವದೇಶಕ್ಕೆ ವಾಪಸಾಗಿದ್ದರು.

ಭಾರತದ ಟೆಸ್ಟ್ ತಂಡದಲ್ಲಿ ಕೇವಲ ಒಂದು ಬದಲಾವಣೆ ಮಾಡಲಾಗಿದ್ದು, ತಮಿಳುನಾಡಿನ ಇನ್ನೋರ್ವ ಆಟಗಾರ ಅಭಿನವ್ ಮುಕುಂದ್ ಬದಲಿಗೆ ಮುರಳಿಗೆ ಮಣೆ ಹಾಕ ಲಾಗಿದೆ.

ಸ್ಪಿನ್ ವಿಭಾಗದಲ್ಲಿ ಆರ್.ಅಶ್ವಿನ್, ರವೀಂದ್ರ ಜಡೇಜ ಹಾಗೂ ಕುಲ್‌ದೀಪ್ ಯಾದವ್ ಅವರಿದ್ದಾರೆ. ವೇಗದ ವಿಭಾಗದಲ್ಲಿ ಉಮೇಶ್ ಯಾದವ್, ಮುಹಮ್ಮದ್ ಶಮಿ, ಭುವನೇಶ್ವರ ಕುಮಾರ್ ಹಾಗೂ ಇಶಾಂತ್ ಶರ್ಮ ಅವರಿದ್ದಾರೆ. ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐದನೆ ಆಯ್ಕೆಯಾಗಿದ್ದಾರೆ. ವೃದ್ಧಿಮಾನ್ ಸಹಾ ಮೊದಲ ಆಯ್ಕೆಯ ವಿಕೆಟ್‌ಕೀಪರ್-ಬ್ಯಾಟ್ಸ್ ಮನ್ ಆಗಿದ್ದು, ಅಜಿಂಕ್ಯ ರಹಾನೆ ಟೆಸ್ಟ್ ಸರಣಿಯಲ್ಲಿ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ.

ವಿಜಯ್ ಮಾರ್ಚ್‌ನಲ್ಲಿ ಕೊನೆಯ ಬಾರಿ ಟೆಸ್ಟ್ ಪಂದ್ಯವನ್ನಾಡಿದ್ದು, ಶ್ರೀಲಂಕಾದಲ್ಲಿ ನಡೆದಿದ್ದ ಎಲ್ಲ ಮೂರು ಟೆಸ್ಟ್ ಪಂದ್ಯಗಳಿಂದ ವಂಚಿತರಾಗಿದ್ದರು.

ಮುರಳಿ ಗಾಯದಿಂದ ಚೇತರಿಸಿಕೊಂಡ ಬಳಿಕ ರಣಜಿ ಟ್ರೋಫಿ ಪಂದ್ಯದಲ್ಲಿ ತಮಿಳುನಾಡು ಪರ ಕೇವಲ ಒಂದು ಪಂದ್ಯ, ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಗ್ರೀನ್ ಪರ ಒಂದು ಪಂದ್ಯ ಹಾಗೂ ತಮಿಳುನಾಡು ಪ್ರೀಮಿಯರ್ ಲೀಗ್‌ನಲ್ಲಿ ನಾಲ್ಕು ಪಂದ್ಯಗಳನ್ನು ಆಡಿದ್ದರು. ದುಲೀಪ್ ಟ್ರೋಫಿ ಪಂದ್ಯದಲ್ಲಿ 2 ಇನಿಂಗ್ಸ್‌ನಲ್ಲಿ ಕೇವಲ 17 ರನ್ ಗಳಿಸಿದ್ದ ವಿಜಯ್ 5 ವಿಕೆಟ್‌ಗಳನ್ನು ಕಬಳಿಸಿದ್ದರು.

ಶ್ರೀಲಂಕಾ ಕ್ರಿಕೆಟ್ ಪ್ರವಾಸದಿಂದ ವಾಪಸಾದ ಬಳಿಕ ಭಾರತ ಟೆಸ್ಟ್ ತಂಡದ ಹೆಚ್ಚಿನ ಆಟಗಾರರು ಹೆಚ್ಚಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಚೇತೇಶ್ವರ ಪೂಜಾರ ಇಂಗ್ಲೆಂಡ್ ಕೌಂಟಿ ತಂಡದಲ್ಲಿ ಆಡಿದ್ದು 12 ಇನಿಂಗ್ಸ್‌ಗಳಲ್ಲಿ 333 ರನ್ ಗಳಿಸಲಷ್ಟೇ ಶಕ್ತರಾಗಿದ್ದರು. ರಣಜಿ ಟ್ರೋಫಿಯಲ್ಲಿ ಸೌರಾಷ್ಟ್ರದ ಪರ 35 ಹಾಗೂ 13 ರನ್ ಗಳಿಸಿದ್ದರು. ಸಹಾ ತನ್ನ ರಾಜ್ಯ ಬಂಗಾಳದ ಪರ 2 ರಣಜಿ ಪಂದ್ಯಗಳಲ್ಲಿ 55,15 ಹಾಗೂ 27 ರನ್ ಗಳಿಸಿದ್ದರು.

ಸ್ಪಿನ್ನರ್ ಅಶ್ವಿನ್ ಆಗಸ್ಟ್‌ನ ಬಳಿಕ ಒಂದು ಪ್ರಥಮ ದರ್ಜೆ ಕ್ರಿಕೆಟ್ ಆಡಿದ್ದಾರೆ. ಇಂಗ್ಲೆಂಡ್ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡಿರುವ ಅಶ್ವಿನ್ 4 ಪಂದ್ಯಗಳಲ್ಲಿ 20 ವಿಕೆಟ್ ಹಾಗೂ 214 ರನ್ ಗಳಿಸಿದ್ದಾರೆ.

ಭಾರತ -ಶ್ರೀಲಂಕಾ ನಡುವಿನ 3 ಪಂದ್ಯಗಳ ಟೆಸ್ಟ್ ಸರಣಿಯು ನ.16 ರಂದು ಕೋಲ್ಕತಾದ ಈಡನ್‌ಗಾರ್ಡನ್ಸ್‌ನಲ್ಲಿ ಆರಂಭವಾಗಲಿದೆ. ನ.24 ರಿಂದ ನಾಗ್ಪುರದಲ್ಲಿ 2ನೆ ಟೆಸ್ಟ್ ಹಾಗೂ ಡಿ.2 ರಂದು ದಿಲ್ಲಿಯಲ್ಲಿ ಮೂರನೆ ಟೆಸ್ಟ್ ಪಂದ್ಯ ಆರಂಭವಾಗಲಿದೆ. 37 ದಿನಗಳ ಕಾಲ ಭಾರತ ಪ್ರವಾಸಕೈಗೊಳ್ಳಲಿರುವ ಶ್ರೀಲಂಕಾ ಟೆಸ್ಟ್ ಸರಣಿಯನ್ನಲ್ಲದೆ ಮೂರು ಏಕದಿನ ಹಾಗೂ ಮೂರು ಟ್ವೆಂಟಿ-20 ಸರಣಿಯನ್ನು ಆಡಲಿದೆ.

ಭಾರತ ಟೆಸ್ಟ್ ತಂಡ: ವಿರಾಟ್ ಕೊಹ್ಲಿ(ನಾಯಕ), ಕುಲ್‌ದೀಪ್ ಯಾದವ್, ಆರ್.ಅಶ್ವಿನ್, ರವೀಂದ್ರ ಜಡೇಜ, ಭುವನೇಶ್ವರ ಕುಮಾರ, ಮುಹಮ್ಮದ್ ಶಮಿ, ಚೇತೇಶ್ವರ ಪೂಜಾರ, ಅಜಿಂಕ್ಯ ರಹಾನೆ, ಕೆ.ಎಲ್. ರಾಹುಲ್, ವೃದ್ಧಿಮಾನ್ ಸಹಾ(ವಿಕೆಟ್‌ಕೀಪರ್), ಇಶಾಂತ್ ಶರ್ಮ, ಶಿಖರ್ ಧವನ್, ಉಮೇಶ್ ಯಾದವ್, ಮುರಳಿ ವಿಜಯ್ ಹಾಗೂ ಹಾರ್ದಿಕ್ ಪಾಂಡ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News