ಅರಿಷಿಣ ಬೆರೆತ ಹಾಲಿನ ಸೇವನೆಯ ಆರೋಗ್ಯ ಲಾಭಗಳು ಗೊತ್ತೇ?

Update: 2017-10-24 09:18 GMT

ಅರಿಷಿಣ ಹಾಲು ಆಯುರ್ವೇದ ವೈದ್ಯಪದ್ಧತಿಯಲ್ಲಿ ಪ್ರಮುಖವಾಗಿರುವ ಪರಿಹಾರ ವಾಗಿದೆ. ಅರಿಷಿಣ ಹಾಲನ್ನು ಕುಡಿಯುವಂತೆ ತಾಯಂದಿರು ತಮ್ಮ ಮಕ್ಕಳನ್ನು ಓಲೈಸುತ್ತಿದ್ದ ಕಾಲವೂ ಇತ್ತು. ಇಂದು ನಗರ ಪ್ರದೇಶಗಳಲ್ಲಿ ಇದು ಅಪರೂಪವಾಗಿದ್ದರೂ ಗ್ರಾಮೀಣ ಭಾರತದಲ್ಲಿ ಜೀವಂತವಾಗಿದೆ. ಅಷ್ಟಕ್ಕೂ ಅರಿಷಿಣ ಬೆರೆತ, ಅಷ್ಟೇನೂ ರುಚಿಯಿರದ ಹಾಲನ್ನು ತಮ್ಮ ಮಕ್ಕಳಿಗೆ ಕುಡಿಸಲು ತಾಯಂದಿರು ಅದೇಕೆ ಪಟ್ಟು ಹಿಡಿಯುತ್ತಿದ್ದರು ಎನ್ನುವುದು ನಿಮಗೆ ಗೊತ್ತೇ?

ಅರಿಷಿಣ ಆಯುರ್ವೇದದಲ್ಲಿ ಅತ್ಯಂತ ಶಕ್ತಿಶಾಲಿ ನೈಸರ್ಗಿಕ ಔಷಧಿಯಾಗಿದೆ. ನಂಜು ಮತ್ತು ಉರಿಯೂತ ನಿವಾರಕವಾಗಿರುವ ಅರಿಷಿಣ ಹಲವಾರು ಸೋಂಕುಗಳು ಮತ್ತು ಕಾಯಿಲೆಗಳ ವಿರುದ್ಧ ಬಳಸಲಾಗುವ ಔಷಧಿಗಳಲ್ಲಿ ಪ್ರಮುಖ ಘಟಕವಾಗಿದೆ. ಗಾಯಗಳಿಗೆ ಅರಿಷಿಣ ಲೇಪಿಸುವುದರಿಂದ ರಕ್ತಸ್ರಾವ ನಿಲ್ಲುತ್ತದೆ ಮತ್ತು ಅದು ಸೋಂಕಿನಿಂದ ರಕ್ಷಣೆಯನ್ನು ನೀಡುತ್ತದೆ. ಚರ್ಮಕೋಶಗಳು ತ್ವರಿತವಾಗಿ ಪುನರ್ ಅಭಿವೃದ್ಧಿಗೊಂಡು ಗಾಯವು ಬೇಗನೇ ಮಾಯುವಲ್ಲಿ ನೆರವಾಗುತ್ತದೆ. ಹಲವಾರು ಫೇಸ್ ವಾಷ್‌ಗಳು ಮತ್ತು ಕ್ರೀಮ್‌ಗಳಲ್ಲಿ ಬಳಕೆಯಾಗುವ ಅರಿಷಿಣವು ಚರ್ಮಕ್ಕೆ ಹೊಳಪನ್ನು ನೀಡುತ್ತದೆ.

ಕೊಲಾಜೆನ್ ಉತ್ಪತ್ತಿಯನ್ನು ಹೆಚ್ಚಿಸುವ ಮೂಲಕ ಸುಕ್ಕುಗಳ ವಿರುದ್ಧ ಹೋರಾಡುತ್ತದೆ ಮತ್ತು ಮೊಡವೆಗಳು ಕಾಣಿಸಿಕೊಳ್ಳುವುದನ್ನು ತಗ್ಗಿಸುತ್ತದೆ.
ಹಾಲು ಪರಿಪೂರ್ಣ ಆಹಾರವಾಗಿದ್ದು ಸಮೃದ್ಧ ಕ್ಯಾಲ್ಶಿಯಂ ಅನ್ನು ಒಳಗೊಂಡಿದೆ. ಅದು ಸುಲಭವಾಗಿ ಪಚನಗೊಳ್ಳುತ್ತದೆ. ಶರೀರದಲ್ಲಿ ಮೂಳೆಗಳನ್ನು ಗಟ್ಟಿಗೊಳಿಸುವ ಅದು ಮಿದುಳಿನ ಆರೋಗ್ಯಕ್ಕೂ ಉತ್ತಮವಾಗಿದೆ. ಹೀಗೆ ಹಾಲು ಮತ್ತು ಅರಿಷಿಣ ಬೆರೆತ ಅರಿಷಿಣ ಹಾಲು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ.

ಅರಿಷಿಣ ಹಾಲನ್ನು ತಯಾರಿಸುವ ವಿಧಾನ


ಒಂದು ಕಪ್ ಉಗುರು ಬೆಚ್ಚಗಿನ ಹಾಲಿಗೆ ಅರ್ಧ ಚಮಚ ಅರಿಷಿಣ ಹುಡಿ ಮತ್ತು ಜಜ್ಜಿದ 2-3 ಮೆಣಸಿನ ಕಾಳುಗಳನ್ನು ಹಾಕಿ ಚೆನ್ನಾಗಿ ಬೆರೆಸಿ. ಇದಕ್ಕೆ ಅರ್ಧ ಕಪ್ ಬೆಚ್ಚನೆಯ ನೀರನ್ನು ಸೇರಿಸಿ. ಇದನ್ನು ಕುಡಿಯುವಾಗ ಉಗುರು ಬೆಚ್ಚಗೆ ಇರಬೇಕು ಎನ್ನುವುದನ್ನು ಮರೆಯಬೇಡಿ. ಪ್ರತಿ ದಿನ ರಾತ್ರಿ ಮಲಗುವ ಮುನ್ನ ಈ ಹಾಲನ್ನು ಸೇವಿಸಬೇಕು.

ಆರೋಗ್ಯಲಾಭಗಳು

►ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ


ಅರಿಷಿಣದಲ್ಲಿರುವ ಲಿಪೋಪಾಲಿಸಾಚ್ಚರೈಡ್ ನಮ್ಮ ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಹಾಲಿನೊಂದಿಗೆ ಬೆರೆತಾಗ ಅದು ಪ್ರಬಲ ವೈರಸ್ ನಿರೋಧಕ ಮತ್ತು ಬ್ಯಾಕ್ಟೀರಿಯಾ ನಿರೋಧಕವಾಗಿ ಕೆಲಸ ಮಾಡುತ್ತದೆ. ಅರಿಷಿಣದಲ್ಲಿರುವ ಕರ್ಕುಮಿನ್ ಸೂಕ್ಷ್ಮಜೀವಿ ಗಳಿಂದುಂಟಾಗುವ ಕಾಯಿಲೆ ‘ಮೈಕ್ರೋಫೇಜ್’ ನಮ್ಮ ಶರೀರದಲ್ಲಿ ಹರಡುವುದನ್ನು ತಡೆಯುತ್ತದೆ.

►ಶೀತ ಮತ್ತು ಕೆಮ್ಮು


ಅರಿಷಿಣ ಹಾಲು ನಂಜು ನಿರೋಧಕ ಮತ್ತು ಸಂಕೋಚಕವಾಗಿ ಕೆಲಸ ಮಾಡುತ್ತದೆ ಮತ್ತು ಶೀತ ಹಾಗೂ ಕೆಮ್ಮನ್ನು ಮೂಲದಿಂದಲೇ ಗುಣಪಡಿಸುತ್ತದೆ, ಜೊತೆಗೆ ಆಗಾಗ್ಗೆ ಮರುಕಳಿಸುವ ಸೋಂಕನ್ನೂ ತಡೆಯುತ್ತದೆ. ಈ ಪೇಯವು ನಮ್ಮ ಶ್ವಾಸನಾಳವನ್ನು ಶ್ಲೇಷ್ಮಗಳಿಂದ ಮುಕ್ತಗೊಳಿಸುತ್ತದೆ ಮತ್ತು ಗಂಟಲಿನ ಕಿರಿಕಿರಿಯನ್ನು ನಿವಾರಿಸುವ ಮೂಲಕ ಕೆಮ್ಮನ್ನು ನಿವಾರಿಸುತ್ತದೆ ಹಾಗೂ ಕಟ್ಟಿದ ಮೂಗು ತೆರೆಯುವಂತೆ ಮಾಡುತ್ತದೆ.

►ಯಕೃತ್ತಿಗೂ ಒಳ್ಳೆಯದು.


ಯಕೃತ್ತು ನಮ್ಮ ಶರೀರದಲ್ಲಿನ ನಂಜು ನಿವಾರಕ ಯಂತ್ರವಾಗಿದೆ. ಈ ನಿಟ್ಟಿನಲ್ಲಿ ಅದು ಹಗಲೂರಾತ್ರಿ ನಿರಂತರವಾಗಿ ಕೆಲಸ ಮಾಡುತ್ತಲೇ ಇರುತ್ತದೆ. ಅರಿಷಿಣ ಈ ಕಾರ್ಯಕ್ಕೆ ಪುಷ್ಟಿಯನ್ನು ನೀಡುತ್ತದೆ. ಅದು ಯಕೃತ್ತಿನ ಅಂಗಾಂಶಗಳಿಗೆ ಆಗಿರುವ ಹಾನಿಯನ್ನು ಸರಿಪಡಿಸುವಲ್ಲಿಯೂ ನೆರವಾಗುತ್ತದೆ. ಅದರಲ್ಲಿರುವ ಕರ್ಕುಮಿನ್ ನಮ್ಮ ಶರೀರದಲ್ಲಿಯ ಕ್ಯಾನ್ಸರ್‌ಕಾರಕಗಳನ್ನು ನಿವಾರಿಸುವ ಕಿಣ್ವಗಳ ಸ್ರವಿಸುವಿಕೆಗೆ ನೆರವಾಗುತ್ತದೆ. ಮಧುಮೇಹವು ಯಕೃತ್ತಿನ ಅಂಗಾಂಶಗಳಿಗೆ ಹಾನಿಯನ್ನುಂಟು ಮಾಡುವುದರಿಂದ ಮಧುಮೇಹಿಗಳ ಪಾಲಿಗೆ ಈ ಅರಿಷಿಣ ಹಾಲು ವರದಾನವಾಗಿದೆ.

►ಜೀರ್ಣಕಾರ್ಯ ಹೆಚ್ಚುತ್ತದೆ.

ಅರಿಷಿಣವು ನಾವು ಸೇವಿಸುವ ಆಹಾರವನ್ನು ಜೀರ್ಣಗೊಳಿಸಲು ನೆರವಾಗುವ ಪಿತ್ತರಸದ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಅದು ಆಮ್ಲೀಯತೆ ಮತ್ತು ಹೊಟ್ಟೆಯುಬ್ಬರವನ್ನು ಕಡಿಮೆ ಮಾಡುತ್ತದೆ. ಆಹಾರವು ಸಣ್ಣಕರುಳಿನಲ್ಲಿ ಸುಗಮವಾಗಿ ಸಾಗುವಂತೆ ಮಾಡಿ ಮಲಬದ್ಧತೆಯ ಸಾಧ್ಯತೆಯನ್ನು ತಗ್ಗಿಸುತ್ತದೆ.

►ರಕ್ತವನ್ನು ಶುದ್ಧಗೊಳಿಸುತ್ತದೆ


ಅರಿಷಿಣ ಹಾಲು ದುಗ್ಧನಾಳದ ಕಾರ್ಯ ನಿರ್ವಹಣೆ ಸಾಮರ್ಥ್ಯವನ್ನು ಉತ್ತಮಗೊಳಿ ಸುವ ಮೂಲಕ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ರಕ್ತವನ್ನು ಶುದ್ಧಗೊಳಿಸಿ ರಕ್ತದಲ್ಲಿ ಆಮ್ಲಜನಕ ಹೀರುವಿಕೆಯನ್ನು ಹೆಚ್ಚಿಸುತ್ತದೆ.

►ಸಂದುನೋವನ್ನು ತಗ್ಗಿಸುತ್ತದೆ


ಅರಿಷಿಣ ಹಾಲಿನಲ್ಲಿಯ ಪ್ರಬಲ ಉರಿಯೂತ ನಿವಾರಕ ಗುಣವು ಸಂದುಗಳಲ್ಲಿಯ ನೋವನ್ನು ಕಡಿಮೆ ಮಾಡುತ್ತದೆ. ಅದು ಮೂಳೆಗಳು ಮತ್ತು ಕೀಲುಗಳನ್ನು ಬಲಗೊಳಿ ಸುತ್ತದೆ. ಕೀಲುಗಳ ಚಲನವಲನಕ್ಕೆ ಅನುಕೂಲಿಸುವ ಸ್ರಾವಗಳ ಪ್ರಮಾಣವನ್ನು ಕಾಯ್ದು ಕೊಳ್ಳಲೂ ಅದು ನೆರವಾಗುತ್ತದೆ.

►ನಿದ್ರಾಹೀನತೆಗೂ ಉತ್ತಮ ಮದ್ದು


ಅರಿಷಿಣದೊಂದಿಗೆ ಹಾಲನ್ನು ಸೇವಿಸುವುದರಿಂದ ಮಿದುಳು ನಿರಾಳಗೊಳ್ಳುತ್ತದೆ ಮತ್ತು ಚೆನ್ನಾಗಿ ನಿದ್ರಿಸಲು ನೆರವಾಗುತ್ತದೆ.

►ಮುಟ್ಟಿನ ದಿನಗಳ ನೋವನ್ನು ಕಡಿಮೆಗೊಳಿಸುತ್ತದೆ.
ಮುಟ್ಟಿನ ದಿನಗಳಲ್ಲಿ ಹೊಟ್ಟೆನೋವು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಅದಕ್ಕಾಗಿ ನೋವು ನಿವಾರಕಗಳನ್ನು ನುಂಗುವ ಬದಲು ಅರಿಷಿಣ ಹಾಲಿನ ಸೇವನೆ ಉತ್ತಮ ಪರಿಹಾರವನ್ನು ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News