×
Ad

ಅಮೆರಿಕದಲ್ಲಿ ಭಾರತೀಯ ಮೂಲದ ಮಗು ನಾಪತ್ತೆ ಪ್ರಕರಣ: ದತ್ತು ತಂದೆಯ ಬಂಧನ

Update: 2017-10-24 22:44 IST

ಹ್ಯೂಸ್ಟನ್, ಅ. 24: ನಾಪತ್ತೆಯಾಗಿರುವ 3 ವರ್ಷ ಪ್ರಾಯದ ಭಾರತೀಯ ಮೂಲದ ಮಗುವಿನ ದತ್ತು ತಂದೆಯನ್ನು ಮಂಗಳವಾರ ಬಂಧಿಸಿರುವ ಪೊಲೀಸರು, ಮಗುವಿಗೆ ಹಿಂಸೆ ನೀಡಿರುವ ಆರೋಪವನ್ನು ಹೊರಿಸಿದ್ದಾರೆ.

ಡಲ್ಲಾಸ್ ಉಪನಗರದಲ್ಲಿರುವ ಅವರ ಮನೆಯ ಸಮೀಪದಲ್ಲಿರುವ ಚರಂಡಿಯೊಂದರಲ್ಲಿ ಸಣ್ಣ ಮಗುವೊಂದರ ಶವ ಪತ್ತೆಯಾದ ಒಂದು ದಿನದ ಬಳಿಕ ಪೊಲೀಸರು ಈ ಕ್ರಮ ತೆಗೆದುಕೊಂಡಿದ್ದಾರೆ.

ತನ್ನ ದತ್ತು ಪುತ್ರಿ ಶೆರಿನ್ ನಾಪತ್ತೆಗೆ ಸಂಬಂಧಿಸಿ ಭಾರತೀಯ ಅಮೆರಿಕನ್ ವೆಸ್ಲಿ ಮ್ಯಾತ್ಯೂಸ್ (37) ತನ್ನ ಹೇಳಿಕೆಯನ್ನು ಬದಲಾಯಿಸಿದ ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಹಾಲು ಕುಡಿಯದಿರುವುದಕ್ಕೆ ಶಿಕ್ಷೆಯಾಗಿ ಅಕ್ಟೋಬರ್ 7ರಂದು ಬೆಳಗ್ಗೆ 3 ಗಂಟೆಗೆ ತಾನು ಶೆರಿನ್‌ಳನ್ನು ಮನೆಯ ಹೊರಗಡೆ ಕಳುಹಿಸಿದೆ ಎಂಬುದಾಗಿ ವೆಸ್ಲಿ ಮೊದಲು ಹೇಳಿಕೆ ನೀಡಿದ್ದನು.

‘‘ಆತ ತನ್ನ ವಕೀಲರೊಂದಿಗೆ ರಿಚರ್ಡ್‌ಸನ್ ಪೊಲೀಸ್ ಠಾಣೆಗೆ ಸ್ವಯಂಪ್ರೇರಿತವಾಗಿ ಬಂದು ತನಿಖಾಧಿಕಾರಿಗಳಲ್ಲಿ ಮಾತನಾಡಲಿಕ್ಕಿದೆ ಎಂದು ಹೇಳಿದನು. ಬಾಲಕಿ ನಾಪತ್ತೆ ಘಟನೆಗೆ ಸಂಬಂಧಿಸಿ ಹಿಂದೆ ನೀಡಿದ ಹೇಳಿಕೆಗಿಂತ ಭಿನ್ನವಾದ ಹೇಳಿಕೆಯನ್ನು ಆತ ನೀಡಿದನು’’ ಎಂದು ಪೊಲೀಸ್ ವಕ್ತಾರರೊಬ್ಬರು ತಿಳಿಸಿದರು.

ಕೇರಳದವನೆನ್ನಲಾದ ಮ್ಯಾತ್ಯೂಸ್ ಮತ್ತು ಆತನ ಹೆಂಡತಿ ಸಿನಿ ಎರಡು ವರ್ಷಗಳ ಹಿಂದೆ ಶೆರಿನ್‌ಳನ್ನು ಬಿಹಾರ ಅನಾಥಾಶ್ರಮವೊಂದರಿಂದ ದತ್ತು ತೆಗೆದುಕೊಂಡಿದ್ದರು.

ಚರಂಡಿಯಲ್ಲಿ ಪತ್ತೆಯಾದ ಮಗುವಿನ ಗುರುತನ್ನು ಪೊಲೀಸರು ಇನ್ನೂ ಬಿಡುಗಡೆಗೊಳಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News