×
Ad

ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್: ರವಿ ಕುಮಾರ್‌ಗೆ 8ನೆ ಸ್ಥಾನ

Update: 2017-10-25 23:43 IST

ಹೊಸದಿಲ್ಲಿ, ಅ.25: ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಫೈನಲ್ಸ್‌ನ 10 ಮೀ. ಏರ್ ರೈಫಲ್ ಫೈನಲ್‌ನಲ್ಲಿ ಭಾರತದ ಶೂಟರ್ ರವಿ ಕುಮಾರ್ 8ನೆ ಸ್ಥಾನ ಪಡೆದಿದ್ದಾರೆ.

ಬುಧವಾರ ಚೊಚ್ಚಲ ವಿಶ್ವಕಪ್ ಫೈನಲ್ಸ್ ಪಂದ್ಯವನ್ನಾಡಿರುವ ಕುಮಾರ್ 8 ಸ್ಪರ್ಧಾಳುಗಳಿದ್ದ 10 ಮೀ. ಏರ್‌ರೈಫಲ್ ಸ್ಪರ್ಧೆಯಲ್ಲಿ 123.4 ಅಂಕ ಗಳಿಸಿ 8ನೆ ಸ್ಥಾನ ಪಡೆದರು. ಸ್ಪರ್ಧೆಯ ಎರಡನೆ ದಿನದಲ್ಲಿ ಟೂರ್ನಿಯಿಂದ ಹೊರ ನಡೆದ ಮೊದಲ ಭಾರತೀಯ ಶೂಟರ್ ಎನಿಸಿಕೊಂಡಿದ್ದಾರೆ.

ಮೊದಲ ದಿನವಾದ ಸೋಮವಾರ ಜೀತು ರಾಯ್ ಹಾಗೂ ಹೀನಾ ಸಿಧು 10 ಮೀ. ಮಿಕ್ಸೆಡ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟಿದ್ದರು.

ಅರ್ಹತಾ ಸುತ್ತಿನಲ್ಲಿ 623.9 ಅಂಕ ಗಳಿಸುವ ಮೂಲಕ ಕುಮಾರ್ ಐದನೆ ಸ್ಥಾನ ಪಡೆದಿದ್ದರು. 2014ರ ಇಂಚೋನ್ ಏಷ್ಯನ್ ಗೇಮ್ಸ್‌ನಲ್ಲಿ ತಂಡ ವಿಭಾಗದಲ್ಲಿ ಕಂಚು ಜಯಿಸಿದ್ದ ಕುಮಾರ್ ಫೈನಲ್‌ನಲ್ಲಿ ಮೊದಲ ಸುತ್ತಿನಲ್ಲಿ 10.5 ಅಂಕ ಗಳಿಸಿ ಉತ್ತಮ ಆರಂಭ ಪಡೆದಿದ್ದರು. 2 ಹಾಗೂ 3ನೆ ಸುತ್ತಿನಲ್ಲಿ ಕ್ರಮವಾಗಿ 10.3, 10.2 ಅಂಕ ಗಳಿಸಿದ್ದ ಕುಮಾರ್ 9.2 ಅಂಕ ಗಳಿಸಿ ಕುಸಿತದ ಹಾದಿ ಹಿಡಿದರು. ಕುಸಿತದಿಂದ ಚೇತರಿಸಿಕೊಳ್ಳದೇ ಕೊನೆಯ ಸ್ಥಾನ ಪಡೆದರು.

20ರ ಹರೆಯದ ಹಂಗೇರಿಯದ ಇಸ್ಟಾವನ್ ಪೆನಿ 249.8 ಅಂಕ ಗಳಿಸಿ ಚಿನ್ನ ಜಯಿಸಿದರು. ಬೆಲಾರಸ್‌ನ ವಿಟಾಲಿ ಬುಬ್ನೊವಿಕ್(249.5) ಬೆಳ್ಳಿ ಗೆದ್ದುಕೊಂಡರು. ಪೀಟರ್ ಸಿದಿ(228.5) ಮೂರನೆ ಸ್ಥಾನ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News