​ಗಡಿ ನಿಯಂತ್ರಣ ರೇಖೆ ದಾಟಿದ್ದ ಯೋಧನನ್ನು ತಪ್ಪಿತಸ್ಥನೆಂದು ಘೋಷಿಸಿದ ಸೇನಾ ನ್ಯಾಯಾಲಯ

Update: 2017-10-26 06:45 GMT

ಹೊಸದಿಲ್ಲಿ,ಅ.26 :  ಕಳೆದ ವರ್ಷ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭ ಗಡಿ ದಾಟಿ ಪಾಕಿಸ್ತಾನಕ್ಕೆ  ಹೋಗಿದ್ದ ಹಾಗೂ ನಂತರ ಜನವರಿಯಲ್ಲಿ ಪಾಕಿಸ್ತಾನವು ಭಾರತಕ್ಕೆ ಹಸ್ತಾಂತರಿಸಿದ್ದ ಭಾರತೀಯ ಯೋಧನನ್ನು ಸೇನಾ ನ್ಯಾಯಾಲಯವು ತಪ್ಪಿತಸ್ಥನೆಂದು ಘೋಷಿಸಿದ್ದು ಆತನಿಗೆ ಸುಮಾರು ಮೂರು ತಿಂಗಳು ಜೈಲು ಶಿಕ್ಷೆ ವಿಧಿಸುವಂತೆ ಶಿಫಾರಸು ಮಾಡಿದೆ.

ತಪ್ಪಿತಸ್ಥ ಸೈನಿಕ ಚಂದು ಬಾಬುಲಾಲ್ ಚವಾಣ್ ಗೆ ವಿಧಿಸಲಾದ ಶಿಕ್ಷೆಯ ಪ್ರಮಾಣವನ್ನು ಸಂಬಂಧಿತ ಪ್ರಾಧಿಕಾರ ಇನ್ನಷ್ಟೇ ಅನುಮೋದಿಸಬೇಕಿದೆ.

ಬಾಬುಲಾಲ್ ಚವಾಣ್ ನನ್ನು ಜನರಲ್ ಕೋರ್ಟ್ ಮಾರ್ಷಲ್ ವಿಚಾರಣೆಗೊಳಪಡಿಸಿದ್ದು ಆತ ಇದೀಗ ತನಗೆ ವಿಧಿಸಲ್ಪಟ್ಟ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಬಹುದಾಗಿದೆ.

37 ರಾಷ್ಟ್ರೀಯ ರೈಫಲ್ಸ್ ನಲ್ಲಿ ಸೇವೆಯಲ್ಲಿರುವ ಚವಾಣ್ ಕಳೆದ ವರ್ಷ ತಿಳಿಯದೆಯೇ ಕಾಶ್ಮೀರದಲ್ಲಿ ದೇಶದ ಗಡಿಯನ್ನು ದಾಟಿದ್ದ. ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ ಭಾರತೀಯ ಪಡೆಗಳು ಗಡಿ ನಿಯಂತ್ರಣ ರೇಖೆಯಾಚೆಗಿದ್ದ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿದ ನಂತರ ಈ ಘಟನೆ ನಡೆದಿತ್ತು.

ಚವಾಣ್ ಮಹಾರಾಷ್ಟ್ರದ ಧುಳೆ ಜಿಲ್ಲೆಯ ಬೋರ್ವಿಹಾರ್ ಗ್ರಾಮದವನಾಗಿದ್ದಾನೆ. ಆತನನ್ನು ಅಕ್ರಮ ಗಡಿ ಪ್ರವೇಶಕ್ಕೆ ಪಾಕಿಸ್ತಾನ ಬಂಧಿಸಿದೆ ಎಂದು ತಿಳಿದ ನಂತರ ಆತನ ಅಜ್ಜಿ ಆಘಾತದಿಂದ ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News