ರಾಷ್ಟ್ರಪತಿಯ ಭಾಷಣದಲ್ಲಿ ಟಿಪ್ಪು: ಸಂಘಪರಿವಾರ ಬಾಯಲ್ಲಿ ಬಿಸಿ ತುಪ್ಪ

Update: 2017-10-26 18:39 GMT

ವಿಧಾನಸೌಧದ ವಜ್ರಮಹೋತ್ಸವ ಕೆಲ ದಿನಗಳಿಂದ ಋಣಾತ್ಮಕವಾಗಿ ಸುದ್ದಿಯಲ್ಲಿತ್ತು. ಈ ಉತ್ಸವಕ್ಕೆ ವ್ಯಯಿಸುವ ಹಣ ವಿವಾದಕ್ಕೆ ಕಾರಣವಾಗಿತ್ತು. ಬಿಜೆಪಿಯವರು ಇದರಲ್ಲಿ ಹುಳುಕು ಹುಡುಕಲು ಸಾಕಷ್ಟು ಯತ್ನಿಸಿದ್ದಾರೆ. ಹಣ ಹಂಚಿಕೆಯಲ್ಲಿ ಸಣ್ಣ ಪುಟ್ಟ ಲೋಪ ದೋಷಗಳಿದ್ದವಾದರೂ, ನಾಡು ನುಡಿಯ ಪ್ರತೀಕವಾಗಿರುವ ವಿಧಾನಸೌಧದ ವಜ್ರಮಹೋತ್ಸವಕ್ಕೆ 25 ಕೋಟಿ ರೂಪಾಯಿ ದೊಡ್ಡ ಹಣವೇನೂ ಅಲ್ಲ. ವಲ್ಲಭಭಾಯಿ ಪಟೇಲರ ಪ್ರತಿಮೆಗೆ, ಶಿವಾಜಿ ಸ್ಮಾರಕಗಳಿಗೆ ಕೇಂದ್ರ ಸರಕಾರ 50,000 ಕೋಟಿ ಹಣವನ್ನು ವ್ಯಯ ಮಾಡುವುದರ ಬಗ್ಗೆ ತಕರಾರಿಲ್ಲದ ಬಿಜೆಪಿ ನಾಯಕರು ನಮ್ಮ ನಾಡಿನ ವಿಧಾನಸೌಧದ ಸಂಭ್ರಮಕ್ಕೆ 25 ಕೋಟಿ ರೂ. ವ್ಯಯ ಮಾಡಿದುದನ್ನು ಪ್ರಶ್ನಿಸುವುದರ ಹಿಂದೆ ಯಾರೇ ಆದರೂ ರಾಜಕೀಯವನ್ನು ಗುರುತಿಸಬಹುದು. ಇದೇ ಸಂದರ್ಭದಲ್ಲಿ ಮಹೋತ್ಸವದ ಅಂಗವಾಗಿ ವಿಧಾನ ಸಭಾಂಗಣದಲ್ಲಿ ಉಭಯ ಸದನಗಳ ಜಂಟಿ ಅಧಿವೇಶವನ್ನು ಕರೆಯಲಾಯಿತು ಮಾತ್ರವಲ್ಲ, ಈ ಅಧಿವೇಶನವನ್ನು ಉದ್ದೇಶಿಸಿ, ರಾಮನಾಥ್ ಕೋವಿಂದ್ ಐತಿಹಾಸಿಕ ಭಾಷಣವನ್ನು ಮಾಡಿದರು.

ಬಿಜೆಪಿ ಮತ್ತು ಆರೆಸ್ಸೆಸ್ ಹಿನ್ನೆಲೆಯಿಂದ ಬಂದಿರುವ ರಾಮನಾಥ ಕೋವಿಂದ್ ಅವರಿಂದ ನಾಡು ವಿಶೇಷವಾದುದೇನೂ ನಿರೀಕ್ಷಿಸಿರಲಿಲ್ಲ. ಆದರೂ ಆಯ್ಕೆಯಾದ ಬಳಿಕ ಕರ್ನಾಟಕದ ಐತಿಹಾಸಿಕ ಸಮಾರಂಭವೊಂದರಲ್ಲಿ ಮೊದಲ ಬಾರಿ ಮಾತನಾಡುತ್ತಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಕೋವಿಂದ್, ತಾನು ಆರೆಸ್ಸೆಸ್ ಅಥವಾ ಬಿಜೆಪಿಯ ಪ್ರತಿನಿಧಿಯಲ್ಲ, ಈ ದೇಶದ ಘನವೆತ್ತ ರಾಷ್ಟ್ರಪತಿಯಾಗಿ ಮಾತನಾಡುತ್ತಿದ್ದೇನೆ ಎನ್ನುವುದನ್ನು ದೇಶಕ್ಕೆ ಮನವರಿಕೆ ಮಾಡಿ ಕರ್ನಾಟಕದಿಂದ ತೆರಳಿದರು. ಅವರ ಮಾತುಗಳು, ವಜ್ರಮಹೋತ್ಸವದ ಹಿರಿಮೆಯನ್ನು ಖಂಡಿತವಾಗಿಯೂ ಹೆಚ್ಚಿಸಿದೆ.

ಮುಖ್ಯವಾಗಿ ಅವರು ರಾಜ್ಯದ ಸಂಘಪರಿವಾರ ಮತ್ತು ಬಿಜೆಪಿಗೆ ನಮ್ಮ ನಾಡಿನ ಇತಿಹಾಸದ ಕೆಲವು ಸತ್ಯಗಳನ್ನು ಮನವರಿಕೆ ಮಾಡಿ ಹೋಗಿದ್ದಾರೆ. ಈ ಬಿಸಿ ತುಪ್ಪವನ್ನು ನುಂಗಲೂ ಆಗದೆ, ಉಗುಳಲೂ ಆಗದೆ ಬಿಜೆಪಿ ನಾಯಕರು ಒದ್ದಾಡುತ್ತಿದ್ದಾರೆ. ಅಧಿವೇಶನದಲ್ಲಿ ಟಿಪ್ಪು ಸುಲ್ತಾನನ ಕುರಿತಂತೆ ರಾಷ್ಟ್ರಪತಿ ಕೋವಿಂದ್ ಆಡಿದ ಮಾತುಗಳು ಸದ್ಯದ ಸಂದರ್ಭಕ್ಕೆ ತೀರಾ ಅಗತ್ಯವಿತ್ತು. ಕೋವಿಂದ್ ಕನ್ನಡಿಗರಲ್ಲ. ಜೊತೆಗೆ ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ. ಆದರೆ ಇತಿಹಾಸವೆನ್ನುವುದು ಬಿಜೆಪಿಗೊಂದು, ಆರೆಸ್ಸೆಸ್‌ಗೊಂದು, ಕಾಂಗ್ರೆಸ್‌ಗೊಂದು ಆಗಿರುವುದಿಲ್ಲ. ಸತ್ಯವನ್ನು ಕೆಲವರು ಸುಳ್ಳುಗಳ ಮೂಲಕ ವಿರೂಪಗೊಳಿಸಲು ಯತ್ನಿಸಿದರೂ ಅದು ಮತ್ತೆ ತನ್ನ ಸ್ವಂತಿಕೆಯನ್ನು ಪಡೆದುಕೊಂಡೇ ತೀರುತ್ತದೆ. ದಲಿತ ಸಮುದಾಯದಿಂದ ಬಂದಿರುವ ರಾಮನಾಥ್ ಕೋವಿಂದ್ ಟಿಪ್ಪುವನ್ನು ನೆನೆಯುವುದರಲ್ಲಿ ಬಹಳಷ್ಟು ಅರ್ಥಗಳಿವೆ. ಟಿಪ್ಪು ತನ್ನ ಆಡಳಿತ ಕಾಲದಲ್ಲಿ ದಲಿತರಿಗೆ ಭೂಹಕ್ಕನ್ನು ನೀಡಿದ. ಜಮೀನ್ದಾರರು, ಜಾಗಿರ್ದಾರರನ್ನು ಮಟ್ಟ ಹಾಕಿ ರೈತರಿಗೆ ಒಡೆತನವನ್ನು ಕೊಟ್ಟ. ಅಷ್ಟೇ ಅಲ್ಲ ಮದ್ಯಪಾನ ನಿಷೇಧ ಮಾಡಿದ. ದಲಿತ ಮಹಿಳೆಯರಿಗೆ ರವಿಕೆ ಹಾಕುವ ಹಕ್ಕು ಇಲ್ಲದ ನಾಡಿನಲ್ಲಿ, ದಲಿತ ಮಹಿಳೆಯರ ಮಾನಕ್ಕೆ ಘನತೆಯನ್ನು ನೀಡಿದ. ಬಹುಶಃ ದಲಿತರ ಪಾಲಿಗೆ ಈ ನಾಡಿನಲ್ಲಿ ಸಣ್ಣದಾಗಿಯಾದರೂ ಸ್ವಾತಂತ್ರ ತೆರೆದುಕೊಂಡದ್ದು ಟಿಪ್ಪುವಿನ ಆಡಳಿತದಲ್ಲಿ ಎನ್ನುವುದನ್ನು ಮರೆಯುವುದು ಹೇಗೆ ಸಾಧ್ಯ? ಹೀಗಿರುವಾಗ, ಅಖಂಡ ಕರ್ನಾಟಕವನ್ನು ಬಣ್ಣಿಸುವಾಗ ಕೋವಿಂದರ ಮಾತು, ಟಿಪ್ಪುವಿನ ಬಣ್ಣನೆಯಿಲ್ಲದೆ ಹೇಗೆ ಪೂರ್ತಿಯಾದೀತು?

ಬ್ರಿಟಿಷರ ವಿರುದ್ಧ ಹೋರಾಡಿ ವೀರ ಮರಣವನ್ನಪ್ಪಿದ ಟಿಪ್ಪುವನ್ನು ಅವರು ಹೊಗಳಿದ್ದಷ್ಟೇ ಅಲ್ಲ, ಆತನ ರಾಕೆಟ್ ತಂತ್ರಜ್ಞಾನವನ್ನು, ದೂರದರ್ಶಿ ಆಡಳಿತವನ್ನು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ. ರಾಷ್ಟ್ರಪತಿಯ ಈ ಹೊಗಳಿಕೆ, ರಾಜ್ಯದ ಜನರಿಗೆ ಸಂತಸ ತಂದಿದೆಯಾದರೂ, ಬಿಜೆಪಿ ಮತ್ತು ಸಂಘಪರಿವಾರದ ಮಂದಿ ಗಂಟಲಲ್ಲಿ ‘ಮೀನಿನ ಮುಳ್ಳು’ ಸಿಕ್ಕಿದಂತೆ ಒದ್ದಾಡುತ್ತಿದ್ದಾರೆ. ತಮ್ಮ ಭಾಷಣದಲ್ಲಿ ಟಿಪ್ಪುವನ್ನು ಪ್ರಸ್ತಾಪಿಸುವ ಮೂಲಕ ನಾಡಿಗೆ ಅವರು ಮತ್ತೊಂದು ಉಪಕಾರವನ್ನು ಮಾಡಿದ್ದಾರೆ. ಈ ಹಿಂದೆ ಬಿಜೆಪಿ ಮತ್ತು ಸಂಘಪರಿವಾರ ಟಿಪ್ಪುಜಯಂತಿಯನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ದಂಗೆ ನಡೆಸಲು ಯತ್ನಿಸಿತ್ತು. ಕೊಡಗಿನಲ್ಲಿ ಅವರ ಆಟಕ್ಕೆ ಅಮಾಯಕ ಕುಟ್ಟಪ್ಪ ಬಲಿಯಾಗಬೇಕಾಯಿತು. ಇನ್ನೋರ್ವನನ್ನು ಸಂಘಪರಿವಾರದ ಮಂದಿ ಗುಂಡಿಕ್ಕಿ ಕೊಂದರು. ಟಿಪ್ಪು ಜಯಂತಿಯಂದು ಗಲಭೆ ನಡೆಸುವುದಕ್ಕಾಗಿಯೇ ಬಂಟ್ವಾಳದಲ್ಲಿ ಹರೀಶ್ ಪೂಜಾರಿಯನ್ನು ಸಂಘ ಪರಿವಾರದ ಕಾರ್ಯಕರ್ತರೇ ರಾತ್ರೋರಾತ್ರಿ ಚೂರಿಯಿಂದ ಇರಿದು ಕೊಂದು ಹಾಕಿದರು. ಇದೀಗ ಚುನಾವಣೆ ಹತ್ತಿರದಲ್ಲಿದೆ. ಬಿಜೆಪಿಯ ನಾಯಕರ ಬಳಿ, ಸಿದ್ದರಾಮಯ್ಯ ವಿರುದ್ಧ ಬಳಸುವುದಕ್ಕೆ ಸರಿಯಾದ ಅಸ್ತ್ರಗಳಿಲ್ಲ ಎನ್ನುವುದನ್ನು ‘ಧರ್ಮಸ್ಥಳದ ಮೀನು ತಿಂದ ಆರೋಪ’ ಈಗಾಗಲೇ ಬಟಾ ಬಯಲುಗೊಳಿಸಿದೆ. ಈ ಕಾರಣದಿಂದಲೇ, ಭಾವನಾತ್ಮಕವಾಗಿ ಜನರನ್ನು ವಿಭಜಿಸಿ ಚುನಾವಣೆ ಎದುರಿಸುವುದು ಬಿಜೆಪಿಗೆ ಅನಿವಾರ್ಯ ಎನ್ನುವಂತಹ ಸ್ಥಿತಿ ಇದೆ.

ಇತ್ತೀಚೆಗೆ ರಾಜ್ಯಕ್ಕೆ ಅಮಿತ್ ಶಾ ಬಂದು ಹೋದ ಬಳಿಕ ಕರಾವಳಿಯೂ ಸೇರಿದಂತೆ ಅಲ್ಲಲ್ಲಿ ಕೋಮು ತಿಕ್ಕಾಟ ನಡೆಯುತ್ತಿರುವುದು ಆಕಸ್ಮಿಕ ಅಲ್ಲ. ಇಂತಹ ಸಂದರ್ಭದಲ್ಲಿ ಸರಕಾರ ಆಚರಿಸುವ ‘ಟಿಪ್ಪು ಜಯಂತಿ’ಯನ್ನು ಮುಂದಿಟ್ಟು ರಾಜ್ಯಾದ್ಯಂತ ಗಲಭೆ ನಡೆಸುವುದಕ್ಕೆ ಬಿಜೆಪಿ, ಸಂಘಪರಿವಾರ ಸಿದ್ಧತೆ ನಡೆಸುತ್ತಿತ್ತು. ಟಿಪ್ಪುವನ್ನು ಧರ್ಮಾಂಧ, ದೇಶದ್ರೋಹಿ ಎಂದು ನಿಂದಿಸಿ ಹೇಳಿಕೆ ನೀಡುವುದು ಇತ್ತೀಚೆಗೆ ತೀವ್ರಗೊಂಡಿತ್ತು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತು ಕೆಲವು ಬಿಜೆಪಿ ನಾಯಕರು ‘ಟಿಪ್ಪು ಸುಲ್ತಾನ್ ಜಯಂತಿಯ ಆಹ್ವಾನ ಪತ್ರಿಕೆಯಲ್ಲಿ ನಮ್ಮ ಹೆಸರು ದಾಖಲಿಸಬೇಡಿ’ ಎಂದೂ ಈಗಾಗಲೇ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಅಂದರೆ, ಟಿಪ್ಪು ಜಯಂತಿಯ ದಿನ ಸಂಘಪರಿವಾರ ಅನಾಹುತ ನಡೆಸುವ ಎಲ್ಲ ಉದ್ದೇಶಗಳನ್ನು ಹೊಂದಿದೆ ಎನ್ನುವುದನ್ನು ಇವೆಲ್ಲ ತಿಳಿಸುತ್ತವೆ.

ಆದರೆ ಒಂದು ಕಾಲದ ಬಿಜೆಪಿ ಮುಖಂಡ, ಆರೆಸ್ಸೆಸ್ ನಾಯಕರಾಗಿದ್ದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತಮ್ಮ ಭಾಷಣದಲ್ಲಿ ಟಿಪ್ಪು ಏನು ಎನ್ನುವುದನ್ನು ಈ ಎಲ್ಲ ನಾಯಕರಿಗೆ ಮನವರಿಕೆ ಮಾಡಿಕೊಟ್ಟು ಅವರ ಕೈಯಲ್ಲಿದ್ದ ಟಿಪ್ಪುವಿನ ಖಡ್ಗವನ್ನು ಕಿತ್ತುಕೊಂಡಿದ್ದಾರೆ. ರಾಷ್ಟ್ರಪತಿಯವರ ಹೇಳಿಕೆಗೆ ಪ್ರತಿಕ್ರಿಯಿಸುವ ಭರದಲ್ಲಿ ಬಿಜೆಪಿ ಮುಖಂಡರು ತಮ್ಮ ಅಜ್ಞಾನವನ್ನು ಇನ್ನಷ್ಟು ಬಹಿರಂಗಪಡಿಸಿದ್ದಾರೆ. ‘‘ರಾಷ್ಟ್ರಪತಿಯವರು ರಾಜ್ಯ ಸರಕಾರ ಬರೆದುಕೊಟ್ಟ ಭಾಷಣವನ್ನು ಓದಿದ್ದಾರೆ’’ ಎಂದು ಹೇಳಿ ಮುಖ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ರಾಷ್ಟ್ರಪತಿಯವರಿಗೆ ರಾಜ್ಯ ಸರಕಾರ ಭಾಷಣ ಬರೆದುಕೊಡುವುದು ಸಾಧ್ಯವೇ ಇಲ್ಲ ಮತ್ತು ಅದನ್ನು ಅವರು ಓದುವಂತಿಲ್ಲ ಎನ್ನುವುದೂ ಈಶ್ವರಪ್ಪಂತಹ ಮುಖಂಡರಿಗೆ ತಿಳಿಯದೇ ಇರುವುದು ವಿಪರ್ಯಾಸ.

ರಾಷ್ಟ್ರಪತಿಯವರಿಗೆ ಭಾಷಣವನ್ನು ಬರೆದುಕೊಡಲು ಅವರದೇ ಆದ ಪತ್ರಿಕಾ ಕಾರ್ಯದರ್ಶಿಗಳು ಇರುತ್ತಾರೆ. ಅವರು ಬೀದಿಯಲ್ಲಿ ಹೋಗುವ ದಾಸಯ್ಯರಲ್ಲ್ಲ. ಐಎಎಸ್‌ನಂತಹ ಅತ್ಯುನ್ನತ ಸ್ಥಾನದಲ್ಲಿರುವವರನ್ನೇ ಆಯ್ಕೆ ಮಾಡಲಾಗುತ್ತದೆ. ರಾಷ್ಟ್ರಪತಿಯವರ ಪತ್ರಿಕಾ ಕಾರ್ಯದರ್ಶಿ ಹಿರಿಯ ಪತ್ರಕರ್ತ, ಅಂಕಣಕಾರ ಬಿಜೆಪಿ ಬೆಂಬಲಿಗ ಅಶೋಕ್ ಮಲಿಕ್ ಅವರು. ಆದುದರಿಂದ ಬಿಜೆಪಿಯ ಮಾನಉಳಿಸಿಕೊಳ್ಳುವ ಈ ಪ್ರಯತ್ನವೂ ವಿಫಲವಾಗಿದೆ. ಒಟ್ಟಿನಲ್ಲಿ ಸಂಘಪರಿವಾರ ರೂಪಿಸಿದ್ದ ಒಂದು ದೊಡ್ಡ ಸಂಚನ್ನು ರಾಷ್ಟ್ರಪತಿಯವರು ವಿಫಲಗೊಳಿಸಿ ಹೋಗಿದ್ದಾರೆ ಎನ್ನುವುದಂತೂ ಸತ್ಯ. ವಿಧಾನ ಸೌಧದ ವಜ್ರಮಹೋತ್ಸವಕ್ಕೆ ತನ್ಮೂಲಕ ಅವರು ಇಂತಹದೊಂದು ಸೌಹಾರ್ದದ ಕೊಡುಗೆ ಕೊಟ್ಟು ಹೋದುದಕ್ಕೆ ಅವರನ್ನು ನಾಡು ಅಭಿನಂದಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News