ದನಗಳ ಕಾರಣದಿಂದ ದೇಶ ಹೀನಾಯ ಸ್ಥಿತಿಗೆ ತಲುಪಲಿದೆ : ಮನೀಷ್ ತಿವಾರಿ

Update: 2017-10-27 18:11 GMT

  ಮೊಹಾಲಿ , ಅ.27: ಗೋರಕ್ಷಕರ ಕೃತ್ಯದ ಬಗ್ಗೆ ಪ್ರಧಾನಿ ಮೋದಿ ಧೋರಣೆಯನ್ನು ಕಟುವಾಗಿ ಟೀಕಿಸಿರುವ ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ಮುಖಂಡ ಮನೀಷ್ ತಿವಾರಿ, ದನಗಳ ಕಾರಣದಿಂದ ದೇಶದ ಪರಿಸ್ಥಿತಿ ಹೀನಾಯ ಸ್ಥಿತಿಗೆ ತಲುಪಲಿದೆ ಎಂದು ಹೇಳಿದ್ದಾರೆ.

 ಮೊಹಾಲಿಯ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್‌ನಲ್ಲಿ ನಡೆದ ‘ಯುವ ಚಿಂತಕರ ಸಮಾವೇಶ’ದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗೋ ರಕ್ಷಣೆ, ‘ಲವ್ ಜಿಹಾದ್, ಘರ್ ವಾಪ್ಸಿ’ ಮುಂತಾದವುಗಳು ಕೇವಲ ಹೇಳಿಕೆ ಮಾತ್ರ. ಇದೆಲ್ಲ ಬಹುಸಂಖ್ಯಾತ ಸಿದ್ಧಾಂತ ಸ್ಥಾಪಿಸಲು ಮುಂದಾಗಿರುವ ಆರೆಸ್ಸೆಸ್‌ನ ಸಾಮಾಜಿಕ ಕಾರ್ಯಸೂಚಿಯ ಪ್ರತಿಬಿಂಬವಾಗಿದೆ ಎಂದರು.

 ಸಾಮಾಜಿಕ ಅಸಾಮರಸ್ಯ ಮತ್ತು ಆರ್ಥಿಕ ಅಭಿವೃದ್ಧಿ ಜೊತೆಯಾಗಿ ಸಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಅರಿತಿಲ್ಲ. ಸಾಮಾಜಿಕ ಪ್ರಕ್ಷುಬ್ಧತೆಯ ಪರಿಸ್ಥಿತಿ ಇದ್ದರೆ ಆರ್ಥಿಕ ಬೆಳವಣಿಗೆಗೆ ತೊಂದರೆಯಾಗುತ್ತದೆ. ಕಳೆದ 41 ತಿಂಗಳಿನಲ್ಲಿ ದೇಶದ ಆರ್ಥಿಕ ಸ್ವರೂಪವನ್ನು ನಾಶಗೊಳಿಸುವ ಪೂರ್ವಯೋಜಿತ ಪ್ರಯತ್ನ ನಡೆಯುತ್ತಿರುವುದು ದುರದೃಷ್ಟಕರವಾಗಿದೆ ಎಂದು ಹೇಳಿದರು.

ಪ್ರಧಾನಿ ಮೋದಿ ದೇಶವನ್ನು ಆರ್ಥಿಕವಾಗಿ ನಾಲ್ಕು ದಶಕಗಳಷ್ಟು ಹಿಂದಕ್ಕೆ ಸಾಗಿಸಿದ್ದಾರೆ ಎಂದು ಟೀಕಿಸಿದ ತಿವಾರಿ, ನೋಟು ಅಮಾನ್ಯೀಕರಣ, ಜಿಎಸ್‌ಟಿ, ಸಾಮಾಜಿಕ ಅಸಾಮರಸ್ಯದ ಪರಿಸ್ಥಿತಿ ಇವೆಲ್ಲಾ ಇಂದಿನ ಪರಿಸ್ಥಿತಿಗೆ ನೇರ ಕಾರಣ ಎಂದರು.

  ಗುಜರಾತ್ ಚುನಾವಣೆಯ ಬಗ್ಗೆ ಪ್ರಸ್ತಾವಿಸಿದ ಅವರು, ಗಾಮೀಣ ಜನತೆ ಮೋದಿಯ ಕಾರ್ಯನೀತಿಯನ್ನು ವಿರೋಧಿಸುತ್ತಿರುವ ಕಾರಣ ಗುಜರಾತ್‌ನಲ್ಲಿ ಪ್ರಧಾನಿಗೆ ಭಾರೀ ಆಘಾತ ಕಾದಿದೆ ಎಂದರು.

ಮೋದಿ ಮಾಧ್ಯಮರಂಗವನ್ನು ವಿಭಜಿಸಿದ್ದಾರೆ. ಇದು ದೇಶದ ಸಂಸ್ಕೃತಿಯಲ್ಲ ಎಂದ ಅವರು, ವಿಚಾರವಾದಿಗಳ ಹಾಗೂ ಪತ್ರಕರ್ತರ ಹತ್ಯೆಯ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿವೆ. ದೇಶದಲ್ಲಿ ಪತ್ರಿಕಾ ಸ್ವಾತಂತ್ರವನ್ನು ಕಸಿದುಕೊಳ್ಳಲಾಗಿದೆ. ಪತ್ರಿಕೋದ್ಯಮ ವ್ಯಾಪಾರವಾಗಿಬಿಟ್ಟಿದೆ. ಕಾರ್ಯನಿರತ ಪತ್ರಕರ್ತರನ್ನು ಸಶಕ್ತಗೊಳಿಸಲು ದೇಶ ವಿಫಲವಾಗಿದೆ ಎಂದು ಟೀಕಿಸಿದರು.

 ರಾಜಸ್ತಾನ ಸರಕಾರದ ಕ್ರಿಮಿನಲ್ ಕಾಯ್ದೆ (ರಾಜಸ್ತಾನ ತಿದ್ದುಪಡಿ)ಯನ್ನು  ಟೀಕಿಸಿದ ತಿವಾರಿ, ಇದು ಬಿಜೆಪಿ ಸರಕಾರದಲ್ಲಿ ಅಡಕವಾಗಿರುವ ಅಸಹಿಷ್ಣುತೆ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News