ಈ ಮಾರಣಾಂತಿಕ ರೋಗದ ಲಕ್ಷಣಗಳು ಮತ್ತು ಕೈಗೊಳ್ಳಬೇಕಾದ ತುರ್ತು ಕ್ರಮಗಳ ಬಗ್ಗೆ ಗೊತ್ತೇ?

Update: 2017-10-28 09:31 GMT

ಪ್ರತಿ ವರ್ಷ ಅ.29ನ್ನು ವಿಶ್ವ ಪಾರ್ಶ್ವವಾಯು ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವದ ಒಟ್ಟು ಪಾರ್ಶ್ವವಾಯು ಪ್ರಕರಣಗಳಲ್ಲಿ ಶೇ.20ರಷ್ಟು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ವರದಿಯಾಗುತ್ತವೆ. 50 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯ ಪ್ರತಿ ಐವರಲ್ಲಿ ಓರ್ವ ಮಹಿಳೆಗೆ ಇದ್ದರೆ, ಪ್ರತಿ ಆರು ಪುರುಷರಲ್ಲಿ ಒಬ್ಬರಿಗೆ ಈ ಅಪಾಯವಿದೆ.

ಒಂದು ರೀತಿಯಲ್ಲಿ ಈ ಪಾರ್ಶ್ವವಾಯು ಎನ್ನುವುದು ಮಿದುಳಿನ ಹೃದಯಾಘಾತ ವಿದ್ದಂತೆ. ಮಿದುಳಿಗೆ ಸಾಕಷ್ಟು ರಕ್ತ ಮತ್ತು ಆಮ್ಲಜನಕ ಪೂರೈಕೆಯಾಗದಿದ್ದಾಗ ಪಾರ್ಶ್ವವಾಯು ಸಂಭವಿಸುತ್ತದೆ ಮತ್ತು ಜೀವಮಾನವಿಡೀ ನಮ್ಮನ್ನು ವಿಕಲರನ್ನಾಗಿಸುತ್ತದೆ.

ಪಾರ್ಶ್ವವಾಯುವಿನ ವಿಷಯದಲ್ಲಿ ಸಮಯವು ಮಿದುಳಿದ್ದಂತೆ ಮತ್ತು ಆಘಾತ ಸಂಭವಿಸಿದಾಗ ಎಷ್ಟು ಬೇಗ ವೈದ್ಯಕೀಯ ನೆರವು ದೊರೆಯುತ್ತದೆಯೋ ಅಷ್ಟು ಒಳ್ಳೆಯದು ಎನ್ನುತ್ತಾರೆ ತಜ್ಞವೈದ್ಯರು.

 ಅಧಿಕ ರಕ್ತದೊತ್ತಡ, ಮಧುಮೇಹ, ರಕ್ತದಲ್ಲಿ ಅಧಿಕ ಕೊಲೆಸ್ಟ್ರಾಲ್ ಹೊಂದಿರುವವರು ಮತ್ತು ಗರ್ಭ ನಿರೋಧಕ ಮಾತ್ರೆಗಳನ್ನು ಸೇವಿಸುವವರಿಗೆ ಪಾರ್ಶ್ವವಾಯುವಿಗೆ ತುತ್ತಾಗುವ ಹೆಚ್ಚಿನ ಅಪಾಯವಿದೆ.

ಸಸ್ಯಾಹಾರಿಗಳು ಪಾರ್ಶ್ವವಾಯುವಿಗೆ ಗುರಿಯಾಗುವ ಸಾಧ್ಯತೆಗಳು ಹೆಚ್ಚು. ಏಕೆಂದರೆ ಅವರಲ್ಲಿಯ ವಿಟಾಮಿನ್ ಬಿ12ರ ಕೊರತೆಯು ಹೊಮೊಸಿಸ್ಟಿನ್ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಇದು ಅಪಧಮನಿಗಳನ್ನು ಹೆಚ್ಚು ಬಿರುಸಾಗಿಸುತ್ತದೆ. ಇದು ಮಿುದುಳಿಗೆ ರಕ್ತಪೂರೈಕೆಯಲ್ಲಿ ಕೊರತೆಗೆ ಕಾರಣವಾಗುತ್ತದೆ.

ಪಾರ್ಶ್ವವಾಯುವಿನ ಲಕ್ಷಣಗಳು

ಮುಖ, ತೋಳು ಅಥವಾ ಕಾಲುಗಳು ಮರಗಟ್ಟುವುದು ಅಥವಾ ಅವು ನಿಶ್ಶಕ್ತ ಗೊಳ್ಳುವುದು ಈ ರೋಗದ ಪ್ರಮುಖ ಲಕ್ಷಣಗಳಾಗಿವೆ. ಕೆಲವೊಮ್ಮೆ ಮುಖ ಜೋಲು ಬೀಳುವುದು, ಅಸ್ಪಷ್ಟ ಮಾತು ಅಥವಾ ಕೈ ಅಥವಾ ಕಾಲು ಚಲನೆಯನ್ನು ಕಳೆದುಕೊಳ್ಳುವುದು ಇದೆ. ಸಾಮಾನ್ಯವಾಗಿ ದೇಹದ ಒಂದು ಭಾಗವು ನಿಶ್ಚೇಟಿತಗೊಳ್ಳುತ್ತದೆ. ದೃಷ್ಟಿ ಮಂದವಾಗುತ್ತದೆ ಅಥವಾ ಒಂದು ಇಲ್ಲವೇ ಎರಡೂ ಕಣ್ಣುಗಳು ದೃಷ್ಟಿಯನ್ನು ಕಳೆದುಕೊಳ್ಳಬಹುದು. ನಡೆಯುವಾಗ ವಾಲುವಿಕೆ, ಶರೀರವು ಸಮತೋಲನ ಕಳೆದುಕೊಳ್ಳುವುದು, ತಲೆತಿರುಗುತ್ತಿದೆ ಎಂದು ಅನ್ನಿಸುವುದು ಇವೆಲ್ಲ ಈ ರೋಗವನ್ನು ಸೂಚಿಸುತ್ತವೆ. ದಿಢೀರ್‌ನೆ ತೀವ್ರ ತಲೆನೋವು ಕಾಣಿಸಿಕೊಳ್ಳಬಹುದು.

ಮಹಿಳೆಯರಲ್ಲಿ ಪಾರ್ಶವಾಯುವಿನ ವಿಶಿಷ್ಟ ಲಕ್ಷಣಗಳು ಕಂಡು ಬರಬಹುದು. ಬಿಕ್ಕಳಿಕೆ, ವಾಕರಿಕೆ, ಶರೀರವಿಡೀ ನಿಶ್ಶಕ್ತಿ, ಎದೆನೋವು, ಉಸಿರಾಟದ ತೊಂದರೆ ಮತ್ತು ಹೃದಯಬಡಿತದಲ್ಲಿ ಏರುಪೇರು ಇವೆಲ್ಲವೂ ದಿಢೀರ್‌ನೆ ಕಾಣಿಸಿಕೊಳ್ಳಬಹುದು.

ಪಾರ್ಶವಾಯು ಮಿದುಳಿಗೆ ತೀವ್ರ ಹಾನಿಯನ್ನುಂಟು ಮಾಡಬಹುದು ಮತ್ತು ಮಾರಣಾಂತಿಕವೂ ಆಗಬಹುದು. ಪಾರ್ಶವಾಯುವಿನಿಂದ ಉಂಟಾಗುವ ಶರೀರ ವೈಕಲ್ಯವು ಮಿದುಳಿಗೆ ಎಷ್ಟು ಹಾನಿಯಾಗಿದೆ ಮತ್ತು ಮಿದುಳಿನ ಯಾವ ಭಾಗದಲ್ಲಿ ಹಾನಿಯಾಗಿದೆ ಎನ್ನುವುದನ್ನು ಅವಲಂಬಿಸಿರುತ್ತದೆ. ಪಾರ್ಶವಾಯು ಉಂಟಾದಾಗ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಲಭಿಸಿದರೆ ಮಿದುಳಿಗೆ ಯಾವುದೇ ಹಾನಿಯಾಗದಿರಬಹುದು ಅಥವಾ ಅಲ್ಪ ಪ್ರಮಾಣದಲ್ಲಿ ಹಾನಿಯಾಗಬಹುದು. ಅಲ್ಲದೇ ದೀರ್ಘಾವಧಿಯ ವೈಕಲ್ಯದಿಂದಲೂ ಪಾರಾಗಬಹುದು.

ಪಾರ್ಶ್ವವಾಯು ಸಂಭವಿಸಿದ ಮೊದಲ ನಾಲ್ಕೂವರೆ ಗಂಟೆಗಳಲ್ಲಿ ಚಿಕಿತ್ಸೆಯನ್ನು ಆರಂಭಿಸಿದರೆ ಮತ್ತು ಥ್ರೊಂಬೊಲಿಟಿಕ್ ಏಜೆಂಟ್‌ಗಳ ಬಳಕೆಯಿಂದ ರೋಗವನ್ನು ನಿಯಂತ್ರಿಸಬಹುದಾಗಿದೆ ಮತ್ತು ಅದರ ತೀವ್ರ ಪರಿಣಾಮಗಳಿಂದ ರೋಗಿಯನ್ನು ಪಾರು ಮಾಡಬಹುದಾಗಿದೆ. ಇದೇ ಕಾರಣದಿಂದ ವೈದ್ಯರು ಪಾರ್ಶ್ವವಾಯುವಿನ ವಿಷಯದಲ್ಲಿ ಸಮಯವೇ ಮಿದುಳು ಎಂದು ಹೇಳುತ್ತಾರೆ.

ಪಾರ್ಶ್ವವಾಯುವನ್ನು ತಡೆಯುವುದು ಹೇಗೆ?

ಅಧಿಕ ರಕ್ತದೊತ್ತಡವು ಪಾರ್ಶ್ವವಾಯುವಿಗೆ ಪ್ರಮುಖ ಕಾರಣವಾಗಿದೆ. ಜೀವನಶೈಲಿ ಯಲ್ಲಿ ಬದಲಾವಣೆ ಮತ್ತು ಸೂಕ್ತ ಔಷಧಿಗಳ ಸೇವನೆಯಿಂದ ರಕ್ತದೊತ್ತಡವನ್ನು ನಿಯಂತ್ರಿಸಬಹುದಾಗಿದೆ.

ಮಧುಮೇಹವು ಪಾರ್ಶ್ವವಾಯುವಿಗೆ ಇನ್ನೊಂದು ಪ್ರಮುಖ ಕಾರಣವಾಗಿದೆ. ಹೀಗಾಗಿ ಮಧುಮೇಹಿಗಳು ತಮ್ಮ ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗದಮತೆ ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಅಂತಹವರು ಬೊಜ್ಜುದೇಹಿಗಳಾಗಿದ್ದರೆ ಅಥವಾ ಕುಟುಂಬದಲ್ಲಿ ಇತರ ಸದಸ್ಯರಿಗೆ ಮಧುಮೇಹವಿದ್ದರೆ ಇದು ಅತ್ಯಗತ್ಯವಾಗಿದೆ.

ಕುಟುಂಬದಲ್ಲಿ ಪಾರ್ಶ್ವವಾಯುವಿನ ಅಥವಾ ಅಧಿಕ ರಕ್ತದೊತ್ತಡ ಮತ್ತು ಅಧಿಕ ಕೊಲೆಸ್ಟ್ರಾಲ್‌ನ ಇತಿಹಾಸವಿದ್ದರೆ ಧೂಮ್ರಪಾನವನ್ನು ಬಿಟ್ಟುಬಿಡುವುದು ಈ ರೋಗಕ್ಕೆ ಗುರಿಯಾಗುವ ಅಪಾಯವನ್ನು ತಗ್ಗಿಸುತ್ತದೆ.

 ಬೊಜ್ಜುದೇಹ ಹೊಂದಿದ್ದರೆ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಹೊಟ್ಟೆಬಾಕರಾಗದೆ ಆರೋಗ್ಯಪೂರ್ಣ ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಿ ದ್ದರೆ ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುತ್ತಿದ್ದರೆ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯದಿಂದ ಪಾರಾಗಬಹುದು.

ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್(ಎಲ್‌ಡಿಎಲ್) ಕೆಟ್ಟ ಕೊಲೆಸ್ಟ್ರಾಲ್ ಆಗಿದ್ದು, ಅದು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಸೂಚಿಸುತ್ತದೆ.

ಹೃದಯಬಡಿತದಲ್ಲಿ ಏರುಪೇರು ಮತ್ತು ಹೃದಯದ ಇತರ ಸ್ಥಿತಿಗಳಿಗೂ ಶೇ.9ರಷ್ಟು ಪಾರ್ಶ್ವವಾಯು ಪ್ರಕರಣಗಳಿಗೂ ಸಂಬಂಧವಿದೆ. ಇಂತಹ ಲಕ್ಷಣಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News