ನಿಮ್ಮ ನೆರೆಕರೆಯ ಗ್ರಾಹಕ ಸ್ನೇಹಿ ಬ್ಯಾಂಕ್ ಶಾಖೆಗಳು ಅಸ್ತಿತ್ವ ಕಳೆದುಕೊಳ್ಳಬಹುದು

Update: 2017-10-28 11:10 GMT

ಗ್ರಾಹಕರು ಬ್ಯಾಂಕ್ ಶಾಖೆಗಳಿಗೆ ತೆರಳಿ ಕೆಲಸ ಮಾಡಿಕೊಳ್ಳುವ ದಿನಚರಿ ಶೀಘ್ರವೇ ಇತಿಹಾಸದ ಪುಟಗಳನ್ನು ಸೇರಬಹುದು. ಹಾಗೆಯೇ ಬ್ಯಾಂಕಿನಲ್ಲಿಯ ಉದ್ದನೆಯ ಸರದಿ ಸಾಲುಗಳು, ವೋಚರ್‌ಗಳು, ಪಿನ್‌ಗಳು, ರಬ್ಬರ್ ಸ್ಟಾಂಪ್ ಇವೆಲ್ಲ ಮುಂದೆ ಕಾಣಿಸದಿರ ಬಹುದು. ಬ್ಯಾಂಕುಗಳು ಸಾಂಪ್ರದಾಯಿಕತೆಯಿಂದ ಹೊರಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಯಂತ್ರಗಳೊಂದಿಗೆ ವ್ಯವಹಾರ ಸುಲಭ ಮತ್ತು ತ್ವರಿತ ಎನ್ನುವುದನ್ನು ಗ್ರಾಹಕರು ಮನಗಾಣುತ್ತಿದ್ದು, ಇದಕ್ಕೆ ಅನುಗುಣವಾಗಿ ಬ್ಯಾಂಕುಗಳು ಡಿಜಿಟಲ್ ಶಾಖೆಗಳ ಸ್ಥಾಪನೆಯನ್ನು ಹೆಚ್ಚಿಸುತ್ತಿವೆ.

ಭಾರತದ ಅತಿದೊಡ್ಡ ಬ್ಯಾಂಕ್ ಆಗಿರುವ ಎಸ್‌ಬಿಐ ಡಿಜಿಟಲ್ ಶಾಖೆಗಳನ್ನು ಸ್ಥಾಪಿಸುವ ಪ್ರಯತ್ನದಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ಪೈಕಿ ಮುಂಚೂಣಿಯಲ್ಲಿದೆ.

 ಎಸ್‌ಬಿಐ ಹಾಲಿ 250ಕ್ಕೂ ಅಧಿಕ ಡಿಜಿಟಲ್ ಶಾಖೆಗಳನ್ನು ಹೊಂದಿದ್ದು, ತಕ್ಷಣ ಖಾತೆ ಆರಂಭ, ಪರ್ಸನಲೈಸ್ಡ್ ಡೆಬಿಟ್ ಕಾರ್ಡ್‌ಗಳ ಮುದ್ರಣ ಮತ್ತು ವಿತರಣೆಯ ಸೌಲಭ್ಯಗಳೊಂದಿಗೆ ಹೂಡಿಕೆಯ ಕುರಿತು ವೀಡಿಯೊ ಕಾನ್‌ಫರೆನ್ಸಿಂಗ್ ಮೂಲಕ ಸಲಹೆಗಳನ್ನು ನೀಡುತ್ತಿದೆ. ಸರಕಾರಿ ಸ್ವಾಮ್ಯದ ಬ್ಯಾಂಕ್ ಆಫ್ ಬರೋಡಾ ಕೂಡ ಇದೇ ನಿಟ್ಟಿನಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ.

ಪಾಸ್‌ಬುಕ್ ಅಪ್‌ಡೇಟಿಂಗ್, ನಗದು ಜಮಾ, ಕೆವೈಸಿ ದಾಖಲೆಗಳ ಪರಿಶೀಲನೆ, ಗ್ರಾಹಕರ ಖಾತೆಗಳಲ್ಲಿ ವೇತನ ಜಮಾದಂತಹ ಸಾಂಪ್ರದಾಯಿಕ ಕಾರ್ಯಗಳು ಡಿಜಿಟಲ್ ಆಗುತ್ತಿದ್ದು, ಈ ಕಾರ್ಯಗಳನ್ನೇ ನಿರ್ವಹಿಸುತ್ತಿದ್ದ ಬ್ಯಾಂಕ್ ಸಿಬ್ಬಂದಿಗಳ ಅಗತ್ಯವೇ ಬೀಳುತ್ತಿಲ್ಲ. ಖಾಸಗಿ ಕ್ಷೇತ್ರಗಳ ಬ್ಯಾಂಕುಗಳ ಬಳಿಕ ಈಗ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳೂ ಕಾರ್ಯಾಚರಣೆಗಳನ್ನು ಕೇಂದ್ರೀಕೃತಗೊಳಿಸಲು ಮತ್ತು ಪೈಪೋಟಿಯಲ್ಲಿ ಹಿಂದೆ ಬೀಳದಿರಲು ರೊಬೊಟಿಕ್ಸ್‌ನ್ನು ಒಂದು ಕೈ ನೋಡುತ್ತಿವೆ ಮತ್ತು ಇದು ಮಾನವ ಸಿಬ್ಬಂದಿಗಳ ಅಗತ್ಯವನ್ನು ಕಡಿಮೆ ಮಾಡುತ್ತಿದೆ.

ಕೆಲವು ತಿಂಗಳುಗಳ ಹಿಂದೆ ಎಚ್‌ಡಿಎಫ್‌ಸಿ ಬ್ಯಾಂಕ್ ಇಲೆಕ್ಟ್ರಾನಿಕ್ ವರ್ಚುವಲ್ ಅಸಿಸ್ಟಂಟ್(ಇವಿಎ)ನ್ನು ಸ್ಥಾಪಿಸಿದ ಬೆನ್ನಲ್ಲೇ ಎಸ್‌ಬಿಐ ಕೂಡ ಗ್ರಾಹಕರ ವಿಚಾರಣೆಗಳಿಗೆ ಉತ್ತರಿಸಲು ಮತ್ತು ಅವರಿಗೆ ಬ್ಯಾಂಕಿನ ಉತ್ಪನ್ನಗಳು ಹಾಗು ಸೇವೆಗಳ ಬಗ್ಗೆ ವಿವರಿಸಲು ಚಾಟ್‌ಬಾಟ್ ಸ್ಥಾಪನೆಯನ್ನು ಪ್ರಾಯೋಗಿಕವಾಗಿ ಪರಿಶೀಲಿಸುತ್ತಿದೆ. ಎಸ್‌ಬಿಐ ಇಂಟೆಲಿಜೆಂಟ್ ಅಸಿಸ್ಟಂಟ್(ಎಸ್‌ಐಎ) ಎಂದು ಹೆಸರಿಸಲಾಗಿರುವ ಈ ವ್ಯವಸ್ಥೆ ನಿಜವಾದ ಬ್ಯಾಂಕಿಂಗ್ ವಹಿವಾಟುಗಳನ್ನೂ ನಿರ್ವಹಿಸಬಹುದು.

 ಕೇವಲ 15 ವರ್ಷಗಳ ಹಿಂದಿನವರೆಗೂ ಬ್ಯಾಂಕ್ ವ್ಯವಹಾರಗಳಿಗೆ ಏಕೈಕ ಮಾರ್ಗ ವಾಗಿದ್ದ ಶಾಖೆಗಳು ಈಗ ನಗರ ಪ್ರದೇಶದಲ್ಲಿ ಕೆಲವೇ ನೆಟಿಜನ್‌ಗಳ ಆಯ್ಕೆಯಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಸಮೀಕ್ಷೆಗೆ ಒಳಪಟ್ಟವರಲ್ಲಿ ಶೇ.40ರಷ್ಟು ಜನರು ಮಾಮೂಲು ವಹಿವಾಟುಗಳಿಗೆ ಶಾಖೆಗೆ ಹೋಗುವುದಕ್ಕಿಂತ ಬ್ಯಾಂಕ್ ವೆಬ್‌ಸೈಟ್‌ಗಳನ್ನೇ ಇಷ್ಟಪಟ್ಟಿದ್ದರೆ, ಕೇವಲ ಶೇ.10ರಷ್ಟು ಜನರು ಬ್ಯಾಂಕ್ ಶಾಖೆಗಳ ಬಗ್ಗೆ ಒಲವು ವ್ಯಕ್ತಪಡಿ ಸಿದ್ದಾರೆ. ಶೇ.20ರಷ್ಟು ಜನರು ಮೊಬೈಲ್ ಆ್ಯಪ್‌ಗಳಿಗೆ ಆದ್ಯತೆ ನೀಡಿದ್ದರೆ, ಶೇ.17ರಷ್ಟು ಜನರು ಎಸ್‌ಎಂಎಸ್ ಮತ್ತು ಶೇ.10ರಷ್ಟು ಜನರು ಎಟಿಎಂಗಳ ಮೂಲಕ ಬ್ಯಾಂಕ್ ವ್ಯವಹಾರಗಳನ್ನು ನಡೆಸಲು ಒಲವು ಹೊಂದಿದ್ದಾರೆ. ಶೇ.60ರಷ್ಟು ಜನರು ಡಿಜಿಟಲ್ ಬ್ಯಾಂಕಿಂಗ್‌ಗೆ ಆದ್ಯತೆ ನೀಡಿದ್ದು, ಕೇವಲ ಐದು ವರ್ಷಗಳ ಹಿಂದೆ ಭವಿಷ್ಯದಲ್ಲಿ ಇಂತಹ ಸ್ಥಿತಿ ಸೃಷ್ಟಿಯಾಗಬಹುದು ಎಂದು ಯಾರೂ ಊಹಿಸಿರಲಿಲ್ಲ. ಮಹಾನಗರಗಳನ್ನು ಬಿಡಿ, ಸಣ್ಣಪುಟ್ಟ ನಗರಗಳಲ್ಲಿಯೂ ಇಂದು ಡಿಜಿಟಲ್ ಬ್ಯಾಂಕಿಂಗ್ ಆಳವಾಗಿ ಬೇರು ಬಿಡುತ್ತಿದೆ.

 ಗ್ರಾಹಕರನ್ನು ತಲುಪಲು ಬ್ರಾಂಚ್ ನೆಟ್‌ವರ್ಕ್ ಏಕೈಕ ಮಾರ್ಗವಾಗಿ ಉಳಿದಿಲ್ಲ ಎನ್ನುವುದನ್ನು ಬ್ಯಾಂಕುಗಳು ಅರಿತುಕೊಳ್ಳುತ್ತಿವೆ. ಇಂಟರ್ನೆಟ್, ಮೊಬೈಲ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ವ್ಯಾಲೆಟ್‌ಗಳಂತಹ ಹೊಸಯುಗದ ವಿಧಾನಗಳು ಬ್ಯಾಂಕುಗಳಿಗೆ ಹೊಸ ಮಾರ್ಗಗಳನ್ನು ತೋರಿಸುತ್ತಿವೆ. ಬ್ಯಾಂಕ್ ಸೌಲಭ್ಯಗಳಿಂದ ವಂಚಿತರಾಗಿ ರುವವರನ್ನು ಬ್ಯಾಂಕಿಂಗ್ ಕ್ಷೇತ್ರಕ್ಕೆ ತರಲು ಮತ್ತು ಡಿಜಿಟಲ್ ವಹಿವಾಟುಗಳಿಗೆ ಆದ್ಯತೆ ದೊರೆಯಲು ಸರಕಾರವು ನೀಡುತ್ತಿರುವ ಒತ್ತು ಇಂದು ಸಾಂಪ್ರದಾಯಿಕ ಬ್ಯಾಂಕಿಂಗ್‌ನ ಸಂಪೂರ್ಣ ಆಯಾಮವನ್ನೇ ಬದಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News