ಕ್ಷಿಪಣಿ ತಯಾರಿಕೆ ಮುಂದುವರಿಯಲಿದೆ: ಇರಾನ್ ಅಧ್ಯಕ್ಷ ರೂಹಾನಿ ಘೋಷಣೆ
ದುಬೈ,ಅ.29: ತನ್ನ ಆತ್ಮರಕ್ಷಣೆಗಾಗಿ ಇರಾನ್ ಕ್ಷಿಪಣಿಗಳ ತಯಾರಿಕೆಯನ್ನು ಮಂದುವರಿಸಲಿದೆ ಹಾಗೂ ಇದರಿಂದ ಅಂತಾರಾಷ್ಟ್ರೀಯ ಒಪ್ಪಂದಗಳ ಉಲ್ಲಂಘನೆಯಾಗುವುದೆಂದು ತಾನು ಭಾವಿಸುವುದಿಲ್ಲವೆಂದು ಇರಾನ್ ಅಧ್ಯಕ್ಷ ಹಸ್ಸನ್ ರೂಹಾನಿ ಹೇಳಿದ್ದಾರೆ. ರವಿವಾರ ಸರಕಾರಿ ಟಿವಿ ವಾಹಿನಿಯೊಂದರಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡುತ್ತಾ ಈ ವಿಷಯ ತಿಳಿಸಿದ ಅವರು,‘‘ನಮಗೆ ಅಗತ್ಯವಿರುವ ಯಾವುದೇ ಶಸ್ತ್ರಾಸ್ತ್ರಗಳನ್ನು ನಾವು ಉತ್ಪಾದಿಸುತ್ತೇವೆ ಹಾಗೂ ಅವುಗಳನ್ನು ದಾಸ್ತಾನು ಮಾಡುತ್ತೇವೆ ಮತ್ತು ನಮ್ಮನ್ನು ರಕ್ಷಿಸಿಕೊಳ್ಳಲು ಅವುಗಳನ್ನು ಯಾವುದೇ ಸಮಯದಲ್ಲಿಯೂ ಬಳಸಿಕೊಳ್ಳುತ್ತೇವೆ’’ ಎಂದು ರೂಹಾನಿ ತಿಳಿಸಿದ್ದಾರೆ.
ಇರಾನ್‌ನ ಕ್ಷಿಪಣಿ ನಿರ್ಮಾಣ ಯೋಜನೆಯನ್ನು ವಿರೋಧಿಸಿ ಅಮೆರಿಕವು ಈಗಾಗಲೇ ಆ ದೇಶದ ವಿರುದ್ಧ ಏಕಪಕ್ಷೀಯವಾಗಿ ನಿರ್ಬಂಧಗಳನ್ನು ವಿಧಿಸಿದೆ. ಇರಾನ್‌ನ ಕ್ಷಿಪಣಿ ಪರೀಕ್ಷೆಯು ವಿಶ್ವಸಂಸ್ಥೆಯ ನಿರ್ಣಯದ ಉಲ್ಲಂಘನೆಯೆಂದು ಅದು ಆರೋಪಿಸಿತ್ತು. ಅಣ್ವಸ್ತ್ರ ವಾಹಕ ಸಾಮರ್ಥ್ಯದ ಕ್ಷಿಪಣಿಗಳ ಉತ್ಪಾದನೆಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲಿ ತೊಡಗಕೂಡದೆಂದು ವಿಶ್ವಸಂಸ್ಥೆ ನಿರ್ಣಯವು ಇರಾನ್‌ಗೆ ತಾಕೀತು ಮಾಡಿತ್ತು.
ಆದರೆ ಇರಾನ್ ತಾನು ಅಣ್ವಸ್ತ್ರಗಳ ಉತ್ಪಾದನೆಯಲ್ಲಿ ತೊಡಗಿಲ್ಲವೆಂದು ಸ್ಪಷ್ಟಪಡಿಸಿದೆ ಹಾಗೂ ಅಣ್ವಸ್ತ್ರ ವಾಹಕ ಕ್ಷಿಪಣಿಗಳನ್ನು ನಿರ್ಮಿಸುವ ಯೋಜನೆಯನ್ನು ತಾನು ಹಮ್ಮಿಕೊಂಡಿಲ್ಲವೆಂದು ಹೇಳಿದೆ.
ಇರಾನ್‌ನ ಅಣ್ವಸ್ತ್ರ ಕಾರ್ಯಕ್ರಮಕ್ಕೆ ಸಂಬಂಧಿಸಿ 2015ರಲ್ಲಿ ಏರ್ಪಟ್ಟ ಒಪ್ಪಂದಕ್ಕೆ ಅನುಗುಣವಾಗಿ ಟೆಹರಾನ್ ನಡೆದುಕೊಂಡಿದೆಯೆಂದು ಅಂತಾರಾಷ್ಟ್ರೀಯ ತಪಾಸಣಾ ಕಾರರು ಒಪ್ಪಿಕೊಂಡರೂ, ಆ ಬಗ್ಗೆ ಅಧಿಕೃತವಾಗಿ ಪ್ರಮಾಣಪತ್ರ ನೀಡಲು ಈ ತಿಂಗಳ ಆರಂಭದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದನ್ನು ಇರಾನ್ ಬಲವಾಗಿ ಟೀಕಿಸಿದೆ.