×
Ad

ಪಾಕ್‌ನಲ್ಲಿ ಅಫ್ಘಾನ್‌ನ ಉಪಗವರ್ನರ್ ಅಪಹರಣ

Update: 2017-10-29 22:24 IST

ಇಸ್ಲಾಮಾಬಾದ್,ಅ.29: ಅಫ್ಘಾನಿಸ್ತಾನದ ವಾಯುವ್ಯ ಪ್ರಾಂತ ಕುನಾರ್‌ನ ಉಪ ಗವರ್ನರ್‌ನನ್ನು ಶಂಕಿತ ಉಗ್ರರು ಪಾಕಿಸ್ತಾನದ ಪೇಶಾವರ್ ನಗರದಲ್ಲಿ ಅಪಹರಿಸಿದ್ದಾರೆಂದು ಪೊಲೀಸರು ರವಿವಾರ ತಿಳಿಸಿದ್ದಾರೆ. ತನ್ನ ಸಹೋದರನೊಂದಿಗೆ ಪೇಶಾವರಕ್ಕೆ ಆಗಮಿಸಿದ್ದ ಉಪಗವರ್ನರ್ ಮುಹಮ್ಮದ್ ನಬಿ ಅಹ್ಮದಿ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕಾರೊಂದರಲ್ಲಿ ಬಂದ ಅಪರಿಚಿತರು ಅವರನ್ನು ಅಡ್ಡಗಟ್ಟಿ, ಅಪಹರಿಸಿದ್ದಾರೆಂದು ಪಾಕ್ ಪೊಲೀಸರು ತಿಳಿಸಿದ್ದಾರೆ.

  ಅಹ್ಮದಿ ಅವರ ಸಹೋದರ ಇಡೀ ಘಟನೆಯ ವಿವರಗಳನ್ನು ಪಾಕ್ ಪೊಲೀಸರಿಗೆ ವಿವರಿಸಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಮಧ್ಯೆ ಅಫ್ಘಾನ್‌ನ ಕುನಾರ್ ಪ್ರಾಂತದ ಗವರ್ನರ್ ಅವರ ವಕ್ತಾರ ಅಬ್ದುಲ್ ಘನಿ ಮೂಸಾಮೆಮ್ ಅವರು, ಪೇಶಾವರ್‌ನಲ್ಲಿ ಉಪಗವರ್ನರ್ ಅಹ್ಮದಿ ನಾಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆಗಾಗಿ ಅವರು ಪಾಕಿಸ್ತಾನದ ಪೇಶಾವರ್ ನಗರಕ್ಕೆ ತೆರಳಿದ್ದಾಗಿ ತಿಳಿಸಿದ್ದಾರೆ.

 ಅಹ್ಮದಿ ಅವರ ಭೇಟಿಯ ಬಗ್ಗೆ ಅಫ್ಘಾನ್ ಸರಕಾರ ತಮಗೆ ಯಾವುದೇ ಮಾಹಿತಿ ನೀಡಿಲ್ಲವೆಂದು ಪಾಕ್ ಪೊಲೀಸ್ ಮೂಲಗಳು ತಿಳಿಸಿವೆ. ಒಂದು ವೇಳೆ ಅವರ ಆಗಮನದ ಮಾಹಿತಿಯಿದ್ದಲ್ಲಿ ಅವರಿಗೆ ಭದ್ರತೆಯನ್ನು ಒದಗಿಸಲಾಗುತ್ತಿತ್ತು ಎಂದು ಅವು ತಿಳಿಸಿವೆ. ಅಹ್ಮದಿ ಅವರ ಅಪಹರಣಕ್ಕೆ ವೈಯಕ್ತಿಕ ವಿವಾದ ಕಾರಣವಾಗಿರಬಹುದೇ ಎಂಬುದನ್ನು ತಿಳಿಯಲು ಪೇಶಾವರ ಪೊಲೀಸರು ಯತ್ನಿಸುತ್ತಿದ್ದಾರೆ. ಅಫ್ಘಾನ್‌ನ ತಾಲಿಬಾನ್ ಕೂಡಾ ಅಹ್ಮದಿ ಅವರ ಅಪಹರಣದ ಹಿಂದೆ ತನ್ನ ಕೈವಾಡವಿಲ್ಲವೆಂದು ಸ್ಪಷ್ಟಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News