ಯಾಕೆ ಭಕ್ತಗಣ ಮಾತಾಡುತ್ತಿಲ್ಲ?

Update: 2017-10-29 18:46 GMT

ಮಾನ್ಯರೆ,

ಒಂದು ರೇಷ್ಮೆ ಬಟ್ಟೆಯನ್ನು ತಯಾರಿಸುವುದೆಂದರೆ ಸಾವಿರಾರು ರೇಷ್ಮೆ ಹುಳಗಳ ಹತ್ಯೆ ನಡೆಸುವುದೆಂದೇ ಅರ್ಥ. ಸಾಮಾನ್ಯವಾಗಿ ರೇಷ್ಮೆ ಹುಳವು ಮಲ್ ಬರಿ ಗಿಡದ ಎಲೆಯಲ್ಲಿ ಮೊಟ್ಟೆಯನ್ನಿಡುತ್ತದೆ. ಬಳಿಕ ಮೊಟ್ಟೆ ಒಡೆದು ಮರಿಗಳಾಗುವುದು ಮತ್ತು ಹೀಗೆ ಬೆಳೆದ ಹುಳವು ತನ್ನ ಸುತ್ತ ಪೊರೆಯನ್ನು (ಕುಕೂನ್) ಕಟ್ಟಿಕೊಳ್ಳುವುದೂ ನಡೆಯುತ್ತದೆ. ಬಳಿಕ ಪ್ಯೂಪ್ ಹಂತಕ್ಕೆ ತಲುಪುತ್ತದೆ. ಅಂದರೆ ತನ್ನ ಪೊರೆಯಿಂದ ಕಳಚಿ ಹೊರಬಂದು ಮಲ್ ಬರಿ ಗಿಡದಲ್ಲಿ ಮೊಟ್ಟೆಯನ್ನಿಡುವ ಹಂತ. ಆದರೆ ರೇಷ್ಮೆ ಬಟ್ಟೆ ತಯಾರಿಸಬೇಕೆಂದರೆ ಕುಕೂನ್ (ಹುಳವು ಪೊರೆಯೊಳಗೆ ಇರುವ ಸ್ಥಿತಿ) ಹಂತದಲ್ಲೇ ಹುಳವನ್ನು ಬಿಸಿನೀರಿಗೆ ಹಾಕಿ ಕುದಿಸಿ ಕೊಲ್ಲಬೇಕಾಗುತ್ತದೆ.

ಅಚ್ಚರಿ ಏನೆಂದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೊಟ್ಟೆಯೊಳಗಿದ್ದ ಮೀನನ್ನು ಎತ್ತಿಕೊಂಡು ಶುದ್ಧ - ಅಶುದ್ಧತೆಯ ಚರ್ಚೆ ನಡೆಸಿದ್ದ ಅವೇ ಟಿವಿ ಚಾನೆಲ್‌ಗಳು ಧರ್ಮಸ್ಥಳದಲ್ಲಿ ಇವತ್ತು ಪ್ರಧಾನಿ ನರೇಂದ್ರ ಮೋದಿಯವರು ರೇಷ್ಮೆ ಶಾಲು ಹಾಕಿಕೊಂಡಿರುವುದನ್ನು ಅಭಿಮಾನದಿಂದ ಬಣ್ಣಿಸುತ್ತಿವೆ. ಕನಿಷ್ಠ, ಸಾವಿರಾರು ರೇಷ್ಮೆಹುಳಗಳನ್ನು ಕೊಂದು ತಯಾರಿಸುವ ರೇಷ್ಮೆಬಟ್ಟೆ ಹಿಂಸೆಯ ಸಂಕೇತವಲ್ಲವೇ, ಪ್ರಧಾನಿಯವರಿಗೆ ಈ ಶಾಲು ಭೂಷಣವೇ... ಎಂಬ ಸಣ್ಣ ಪ್ರಶ್ನೆಯನ್ನೂ ಅವು ಎತ್ತುತ್ತಿಲ್ಲ. ಇದಕ್ಕೆ ಏನೆನ್ನಬೇಕು? ಮೀನಾದರೋ ಆಹಾರ. ರೇಷ್ಮೆಅದೂ ಅಲ್ಲವಲ್ಲ. ಹಿಂಸೆಯ ಸಂಕೇತಕವಾದ ರೇಷ್ಮೆಶಾಲನ್ನು ನರೇಂದ್ರ ಮೋದಿಯವರು ಹಾಕಿಕೊಂಡದ್ದು ಶ್ರೀ ಮಂಜುನಾಥನಿಗೆ ತೋರಿದ ಗೌರವವೋ ಅವಮಾನವೋ? ಯಾಕೆ ಭಕ್ತಗಣ ಮಾತಾಡುತ್ತಿಲ್ಲ?

Writer - - ಏ.ಕೆ. ಕುಕ್ಕಿಲ, ಮಂಗಳೂರು

contributor

Editor - - ಏ.ಕೆ. ಕುಕ್ಕಿಲ, ಮಂಗಳೂರು

contributor

Similar News