ರಾಷ್ಟ್ರಗೀತೆ ವಿವಾದ: ಮತ್ತೆ ಕೆದಕಿದ ಅನುಪಮ್ ಖೇರ್

Update: 2017-10-30 14:25 GMT

ಪುಣೆ, ಅ. 30: ಜನ ಹೊಟೇಲ್‌ನಲ್ಲಿ ಕಾಯುತ್ತಾರೆ, ಚಿತ್ರಮಂದಿರದ ಮುಂದೆ ಟಿಕೆಟ್‌ಗಾಗಿ ಸರದಿ ಸಾಲಿನಲ್ಲಿ ಕಾಯುತ್ತಾರೆ, ಆದರೆ ಸಿನಿಮಾ ಹಾಲ್‌ಗಳಲ್ಲಿ ರಾಷ್ಟ್ರಗೀತೆಗೆ 52 ಸೆಕೆಂಡ್ ಏಕೆ ನಿಲ್ಲಬಾರದು ಎಂದು ಪ್ರಶ್ನಿಸುವ ಮೂಲಕ ಹಿರಿಯ ನಟ ಅನುಪಮ್ ಖೇರ್ ಮತ್ತೆ ರಾಷ್ಟ್ರಗೀತೆ ವಿವಾದ ಬಗೆಗಿನ ಚರ್ಚೆಗೆ ನಾಂದಿ ಹಾಡಿದ್ದಾರೆ.

ಪುಣೆಯಲ್ಲಿ ಬಿಜೆಪಿ ಮುಖಂಡ ಪ್ರಮೋದ್ ಮಹಾಜನ್ ಸ್ಮಾರಕ ಪ್ರಶಸ್ತಿ ಸ್ವೀಕರಿಸುವ ಸಲುವಾಗಿ ಖೇರ್ ಆಗಮಿಸಿದ್ದರು. ಖೇರ್ ಜತೆಗೆ ತ್ರಿವಳಿ ತಲಾಕ್ ದಾವೆ ಹೂಡಿದ ಸಾಯಿರಾ ಬಾನು ಅವರಿಗೂ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡುವುದನ್ನು ವಿರೋಧಿಸುವವರ ವಿರುದ್ಧ ತಮ್ಮ ಭಾಷಣದುದ್ದಕ್ಕೂ ಖೇರ್ ವಾಗ್ದಾಳಿ ಮಾಡಿದರು. "ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ಕಡ್ಡಾಯ ಮಾಡಬಾರದು ಎನ್ನುವುದು ಕೆಲವರ ಪ್ರತಿಪಾದನೆ. ಆದರೆ ವಾಸ್ತವವಾಗಿ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ಆ ವ್ಯಕ್ತಿಯ ಸಂಸ್ಕಾರವನ್ನು ತೋರಿಸುತ್ತದೆ" ಎಂದು ವಿಶ್ಲೇಷಿಸಿದರು.

"ನಮ್ಮ ತಂದೆ ಅಥವಾ ಶಿಕ್ಷಕರ ಮುಂದೆ ಎದ್ದು ನಿಲ್ಲುವ ಮೂಲಕ ನಾವು ಗೌರವಿಸುತ್ತೇವೆ. ಅಂತೆಯೇ ರಾಷ್ಟ್ರಗೀತೆಗೆ ಎದ್ದು ನಿಲ್ಲುವುದು ನಮ್ಮ ದೇಶಕ್ಕೆ ತೋರುವ ಗೌರವ" ಎಂದು ಹೇಳಿದರು.

ಪ್ರಶಸ್ತಿ ವಾಪಸಿ ಆಂದೋಲನ ವಿರುದ್ಧವೂ ಹರಿಹಾಯ್ದ ಅವರು, "ವೈಫಲ್ಯಗಳನ್ನು ಹೇಗೆ ಎದುರಿಸಬೇಕು ಎಂದು ನಾನು 15ನೆ ವಯಸ್ಸಿನವನಾಗಿದ್ದಾಗಲೇ ತಂದೆ ಹೇಳಿಕೊಟ್ಟಿದ್ದಾರೆ. ಈ ಪ್ರಶಸ್ತಿ ವಾಪಸಿ ಜನರು ನನ್ನನ್ನು ಭಯಪಡಿಸಲಾರರು" ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News