ನಿಮಗೆ 30 ವರ್ಷ ದಾಟಿದೆಯಾ...?

Update: 2017-10-30 10:16 GMT

 ನಮ್ಮ ವಯಸ್ಸು 30 ವರ್ಷ ದಾಟಿದರೂ ನಮಗೆ ಹಾಗೆನ್ನಿಸುವುದಿಲ್ಲ, ಅಥವಾ ನಮ್ಮ ರೂಪದಲ್ಲಿಯೂ ಅಂತಹ ಬದಲಾವಣೆಯಾಗಿರುವುದಿಲ್ಲ....ಆದರೆ ನಮ್ಮ ಶರೀರದಲ್ಲಿ ನಿಧಾನವಾಗಿ ಬದಲಾವಣೆಗಳು ಆಗುತ್ತಿರುತ್ತವೆ. ಇಂತಹ ಕೆಲ ಬದಲಾವಣೆಗಳು ವಯೋಸಹಜವಾಗಿರುತ್ತವೆ. ಇಂದಿನ ಆಧುನಿಕ ಜೀವನದಲ್ಲಿ ಹೆಚ್ಚಿನವರು ಒತ್ತಡ ಗಳಲ್ಲಿಯೇ ಬದುಕು ಸಾಗಿಸುತ್ತಿರುತ್ತೇವೆ. ಕೆಲಸಕಾರ್ಯಗಳ ಭಾರದಲ್ಲಿ ನಮ್ಮ ಸ್ವಂತ ಆರೋಗ್ಯವನ್ನೇ ಕಡೆಗಣಿಸಿರುತ್ತೇವೆ. ಹೀಗಾಗಿ ನಿಯಮಿತವಾಗಿ ವೈದ್ಯಕೀಯ ತಪಾಸಣೆ ಗಳನ್ನು ಮಾಡಿಸಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಇದರಿಂದಾಗಿ ಕೆಲವು ಸಾಮಾನ್ಯ ಕಾಯಿಲೆಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಸಕಾಲಿಕ ಚಿಕಿತ್ಸೆಯನ್ನು ಪಡೆದುಕೊಳ್ಳು ವುದು ಸಾಧ್ಯವಾಗುತ್ತದೆ.

ವ್ಯಕ್ತಿಯೋರ್ವ 30 ವರ್ಷಗಳನ್ನು ದಾಟಿದ ಬಳಿಕ ಅಗತ್ಯವಾಗಿ ಮಾಡಿಸಿಕೊಳ್ಳಬೇಕಾದ ಕೆಲವು ವೈದ್ಯಕೀಯ ತಪಾಸಣೆಗಳ ಮಾಹಿತಿ ಇಲ್ಲಿದೆ.

ರಕ್ತದಲ್ಲಿಯ ಕೊಬ್ಬಿನ ಪ್ರಮಾಣದ ಮೇಲೆ ಗಮನವಿರಲಿ

 ಇಂದು ಹೆಚ್ಚಿನವರ ಬದುಕು ನಿಂತ ನೀರಾಗಿದೆ. ಅವರ ದಿನಚರಿಯಲ್ಲಿ ಬದಲಾವಣೆ ಗಳೇ ಇರುವುದಿಲ್ಲ. ಜೊತೆಗೆ ಹೆಚ್ಚು ಕೊಬ್ಬಿರುವ ಆಹಾರ, ಅತಿಯಾದ ಮದ್ಯಪಾನ ಚಟದಿಂದಾಗಿ ಹೆಚ್ಚಿನವರು 20-30ರ ಪ್ರಾಯದಲ್ಲಿಯೇ ತಮ್ಮ ರಕ್ತದಲ್ಲಿ ಅಧಿಕ ಕೊಲೆಸ್ಟ್ರಾಲ್ ಹೊಂದಿರುತ್ತಾರೆ. ಕೊಲೆಸ್ಟ್ರಾಲ್ ಮಟ್ಟವು ನಿಯಂತ್ರಣದಲ್ಲಿದ್ದರೆ ಹೃದಯವೂ ಆರೋಗ್ಯಪೂರ್ಣವಾಗಿರುತ್ತದೆ. ಎಲ್‌ಡಿಎಲ್ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕೆಟ್ಟ ಕೊಲೆಸ್ಟ್ರಾಲ್ ಮತ್ತು ಎಚ್‌ಡಿಎಲ್‌ಗಳನ್ನು ಒಳ್ಳೆಯ ಕೊಲೆಸ್ಟ್ರಾಲ್ ಎಂದು ಪರಿಗಣಿಸಲಾಗಿದೆ. ವಿಶೇಷವಾಗಿ ಕುಟುಂಬದಲ್ಲಿ ಹೃದ್ರೋಗದ ಇತಿಹಾಸವಿದ್ದರೆ ಅಥವಾ ನೀವು ಧೂಮ್ರಪಾನಿಗಳಾಗಿದ್ದರೆ ವರ್ಷಕ್ಕೊಮ್ಮೆ ಈ ತಪಾಸಣೆ ಮಾಡಿಸಿಕೊಳ್ಳುವುದು ಮುಖ್ಯವಾಗಿದೆ.

 ರಕ್ತದಲ್ಲಿ ಸಕ್ಕರೆಯ ಮಟ್ಟ ಗೊತ್ತಿರಲಿ

 ಕಳೆದ ಕೆಲವು ವರ್ಷಗಳಲ್ಲಿ ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದ್ದು, ‘ಮಧುಮೇಹದ ರಾಜಧಾನಿ’ ಎಂಬ ಕುಖ್ಯಾತಿ ಅಂಟಿಕೊಂಡಿದೆ. ಹಿಂದೆಲ್ಲ ಈ ಕಾಯಿಲೆ ಮಧ್ಯವಯಸ್ಕರಲ್ಲಿ ಮತ್ತು ವೃದ್ಧರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಯುವಜನ ರಲ್ಲಿಯೂ ಈ ಕಾಯಿಲೆ ಸಾಮಾನ್ಯವಾಗುತ್ತಿದೆ. ಹೀಗಾಗಿ ಪ್ರತಿ ವರ್ಷ ರಕ್ತದಲ್ಲಿಯ ಸಕ್ಕರೆಯ ಮಟ್ಟವನ್ನು ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಿದೆ. ಮಧುಮೇಹ ಆರಂಭದಲ್ಲಿಯೇ ಪತ್ತೆಯಾದರೆ ಇದರೊಂದಿಗೆೆ ಗುರುತಿಸಿಕೊಂಡಿರುವ ಹೃದಯ, ಮೂತ್ರಪಿಂಡ ಕಾಯಿಲೆಗಳಂತಹ ಸಂಭಾವ ಸಮಸ್ಯೆಗಳ ತೀವ್ರತೆಯನ್ನು ಪರಿಣಾಮ ಕಾರಿಯಾಗಿ ತಗ್ಗಿಸಬಹುದು.

ಥೈರಾಯ್ಡ್ ಮರೆಯಬೇಡಿ

ಥೈರಾಯ್ಡ್  ಹಾರ್ಮೋನ್ ಅಸಮತೋಲನವು ಭಾರತದಲ್ಲಿ ಸಾಮಾನ್ಯ ಸಮಸ್ಯೆ ಯಾಗಿದೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರಲ್ಲಿ ಇದು ಹೆಚ್ಚು ಸಾಮಾನ್ಯವಾಗಿದೆ. ವಿಶೇಷವಾಗಿ, ಕುಟುಂಬದಲ್ಲಿ ಥೈರಾಯ್ಡ್  ರೋಗದ ಇತಿಹಾಸವಿದ್ದರೆ ಪ್ರತಿವರ್ಷ ಥೈರಾಯ್ಡೆ ಪರೀಕ್ಷೆಗೊಳಗಾಗುವುದು ಒಳ್ಳೆಯದು.

ವಿಟಾಮಿನ್ ಪ್ರಮಾಣ

ನಮ್ಮ ಶರೀರದ ಬೆಳವಣಿಗೆಯನ್ನು ಕಾಯ್ದುಕೊಳ್ಳಲು ವಿಟಾಮಿನ್‌ಗಳು ಮತ್ತು ಖನಿಜಗಳು ಮುಖ್ಯ ಪೋಷಕಾಂಶಗಳಾಗಿವೆ. ವಿಟಾಮಿನ್ ಡಿ ಮೂಳೆಗಳ ಬೆಳವಣಿಗೆಗೆ ಪೂರಕವಾಗಿದ್ದರೆ, ವಿಟಾಮಿನ್ ಬಿ12 ಕೆಂಪು ರಕ್ತಕಣಗಳು ಮತ್ತು ನರಕೋಶಗಳು ಪರಿಪೂರ್ಣವಾಗಿ ರೂಪುಗೊಳ್ಳುವಲ್ಲಿ ನೆರವಾಗುತ್ತದೆ. ನಮ್ಮ ಶರೀರಕ್ಕೆ ವಿಟಾಮಿನ್ ಡಿ ಮುಖ್ಯವಾಗಿ ಸೂರ್ಯನ ಬಿಸಿಲಿನಿಂದ ದೊರೆಯುತ್ತದೆ. ಹೀಗಾಗಿ ಕಚೇರಿಗಳಲ್ಲಿ ಸುದೀರ್ಘ ಸಮಯದವರೆಗೆ ಕೆಲಸ ಮಾಡುವವರು ವಿಟಾಮಿನ್ ಡಿ ಕೊರತೆಯ ಅಪಾಯವನ್ನು ಎದುರಿಸುತ್ತಿರುತ್ತಾರೆ. ಸೂಕ್ತ ತಪಾಸಣೆಗಳ ಮೂಲಕ ಶರೀರದಲ್ಲಿ ವಿಟಾಮಿನ್ ಪ್ರಮಾಣಗಳ ಮೇಲೆ ಸದಾ ನಿಗಾ ಇರಿಸುವುದು ಮುಖ್ಯ.

ರಕ್ತದೊತ್ತಡ

ಸದಾ ಒತ್ತಡದಿಂದ ಕೂಡಿದ ಮತ್ತು ಆರೋಗ್ಯಕರವಲ್ಲದ ಜೀವನ ಶೈಲಿಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಒಮ್ಮೆ ಅಧಿಕ ರಕ್ತದೊತ್ತಡ ಅಮರಿಕೊಂಡರೆ ಅದು ಜೀವನವಿಡೀ ನಮ್ಮೆಂದಿಗೇ ಇರುತ್ತದೆ ಮತ್ತು ಮಧುಮೇಹ, ಹೃದ್ರೋಗದಂತಹ ಗಂಭೀರ ಕಾಯಿಲೆಗಳಿಗೆ ಹೆಬ್ಬಾಗಿಲನ್ನು ತೆರೆಯುತ್ತದೆ. ರಕ್ತದೊತ್ತಡ 120/80ರ ಮಿತಿಯಲ್ಲಿರಬೇಕು. ಇದರಲ್ಲಿ ಯಾವುದೇ ಏರುಪೇರು ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹೀಗಾಗಿ ರಕ್ತದೊತ್ತಡವನ್ನು ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕು.

ಮಹಿಳೆಯರಿಗೆ ಹೆಚ್ಚುವರಿ ತಪಾಸಣೆಗಳು

ಸ್ತನ ಪರೀಕ್ಷೆ

ತ್ವರಿತವಾಗಿ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ತಜ್ಞವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳಬಹುದು ಅಥವಾ ಏನಾದರೂ ಗಂಟುಗಳು ಕಂಡು ಬರುತ್ತಿವೆಯೇ ಎಂದು ಮನೆಯಲ್ಲಿಯೇ ಸ್ವಯಂ ತಪಾಸಣೆ ಮಾಡಿಕೊಳ್ಳಬಹುದು.

ಪ್ಯಾಪ್ ಸ್ಮಿಯರ್ ಮತ್ತು ಎಚ್‌ಪಿವಿ ಪರೀಕ್ಷೆ

ಗರ್ಭಕಂಠದ ಕ್ಯಾನ್ಸರ್ ಮತ್ತು ಸೋಂಕುಗಳಿಗಾಗಿ ಪ್ರತಿ ಎರಡು ವರ್ಷಗಳಿಗೊಮ್ಮೆ ಪ್ಯಾಪ್ ಸ್ಮಿಯರ್ ಪರೀಕ್ಷೆ ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ ಇವೆರಡೂ ಪರೀಕ್ಷೆಗಳನ್ನು ಒಟ್ಟಿಗೆ ಮಾಡಿಸಿಕೊಳ್ಳುವುದರಿಂದ ಹೆಚ್ಚಿನ ಅಪಾಯದಿಂದ ಪಾರಾಗಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News