ತಪ್ಪಿದ ಗುರಿ: ಬಾಲಕಿಯ ಕುತ್ತಿಗೆಗೆ ಚುಚ್ಚಿದ ಬಾಣ!

Update: 2017-10-30 15:29 GMT

ಕೋಲ್ಕತಾ, ಅ.30: ಬೋಲ್ಪುರದ ಭಾರತದ ಕ್ರೀಡಾ ಪ್ರಾಧಿಕಾರದಲ್ಲಿ(ಸಾಯ್) ಸೋಮವಾರ ಬೆಳಗ್ಗೆ ಬಿಲ್ಲುಗಾರಿಕೆಯ ಅಭ್ಯಾಸ ನಡೆಸುತ್ತಿದ್ದಾಗ ಬಾಣವೊಂದು 14ರ ಬಾಲಕಿಯ ಬಲಭಾಗದ ಕುತ್ತಿಗೆಗೆ ಚುಚ್ಚಿದ ಘಟನೆ ನಡೆದಿದೆ. 

ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದೊಂದು ಆಕಸ್ಮಿಕ ಘಟನೆ ಎಂದು ಹೇಳಿರುವ ಸಾಯ್ ಸ್ಥಳೀಯ ನಿರ್ದೇಶಕ ಎಂಎಸ್ ಗೊಂಡಿ,‘‘ಬಿಲ್ಲುಗಾರಿಕೆಯ ಅಭ್ಯಾಸ ನಡೆಸುತ್ತಿದ್ದ ವೇಳೆ ಸಹ ಆಟಗಾರ್ತಿ ಜಿವೆಲ್ ಶೇಖ್ ತಪ್ಪುದಾರಿಯಲ್ಲಿ ಹೊಡೆದ ಬಾಣ ಫಝಿಲಾ ಖಾತುನ್ ಎಂಬ ಬಾಲಕಿಯ ಕೊರಳನ್ನು ಸವರಿಕೊಂಡು ಹೋಗಿದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುವ ಬಾಲಕಿ ಪ್ರಸ್ತುತ ಅಪಾಯದಿಂದ ಪಾರಾಗಿದ್ದಾಳೆೆ’’ ಎಂದು ಹೇಳಿದ್ದಾರೆ.

‘‘ಶೂಟಿಂಗ್‌ನಲ್ಲಿ ಕಠಿಣ ಶಿಷ್ಟಾಚಾರವಿದೆ. ಆರ್ಚರಿಗಳು ಬಿಟ್ಟ ಬಾಣಗಳನ್ನು ಸಂಗ್ರಹಿಸುವ ವೇಳೆ ಪ್ರಾಕ್ಟೀಸ್ ನಡೆಸುವಂತಿಲ್ಲ. ಆರ್ಚರಿಗಳು ಬಾಣಗಳನ್ನು ಸಂಗ್ರಹಿಸಿದ ಬಳಿಕವಷ್ಟೇ ಮುಂದಿನ ಸುತ್ತಿನ ಶೂಟಿಂಗ್ ಆರಂಭವಾಗುತ್ತದೆ. ಈ ಘಟನೆ ಹೇಗೆ ನಡೆಯಿತ್ತೆಂದು ಗೊತ್ತಿಲ್ಲ. ಎಲ್ಲ ಕೋಚ್‌ಗಳು ಇದಕ್ಕೆ ಹೊಣೆಯಾಗುತ್ತಾರೆ. ನಮ್ಮಿಂದ ಏನಾದರೂ ತಪ್ಪಾಗಿದೆಯೇ ಎಂದು ಸಮಗ್ರ ತನಿಖೆ ನಡೆಸಲಾಗುವುದು. ಇಂತಹ ಘಟನೆ ಮತ್ತೆ ನಡೆಯುವುದಿಲ್ಲ ಎಂದು ಭರವಸೆ ನೀಡುವೆ’’ ಎಂದು ಗೊಂಡಿ ಹೇಳಿದ್ದಾರೆ.

ಪ್ರತಿಭಾವಂತ ರಿಕರ್ವ್ ಆರ್ಚರಿಯಾಗಿದ್ದ ಫಝಿಲಾ , ಸಾಯ್ ಕೇಂದ್ರದಲ್ಲಿ ತರಬೇತಿ ನಡೆಸುತ್ತಿರುವ 25 ಆರ್ಚರಿಗಳ ಪೈಕಿ ಓರ್ವರಾಗಿದ್ದಾಳೆ. ಮುಂದಿನ ತಿಂಗಳು ನಡೆಯಲಿರುವ ಅಂತರ್-ಸಾಯ್ ಟೂರ್ನಮೆಂಟ್‌ಗೆ ಸಜ್ಜಾಗಲು ತರಬೇತಿ ನಡೆಸುತ್ತಿದ್ದಳು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News