ಮೊಟ್ಟೆಯ ಬಿಳಿಭಾಗ ಅಥವಾ ಹಳದಿ ಭಾಗ: ಯಾವುದು ಆರೋಗ್ಯಕರ ?

Update: 2017-10-31 10:22 GMT

 ಸಮೃದ್ಧ ಪ್ರೋಟಿನ್‌ಗಳನ್ನು ಒಳಗೊಂಡಿರುವ ಮೊಟ್ಟೆಗಳ ಸೇವನೆ ದಿನದ ಯಾವುದೇ ಸಮಯದಲ್ಲಿಯೂ ಅಗತ್ಯ ಪೋಷಕಾಂಶಗಳನ್ನು ಪಡೆಯಲು ತಕ್ಷಣದ ಮತ್ತು ಸುಲಭದ ಮಾರ್ಗವಾಗಿದೆ. ಆದರೆ ಮೊಟ್ಟೆ ವಿವಾದಾತ್ಮಕ ಆಹಾರಗಳಲ್ಲೊಂದಾಗಿದೆ. ಅದು ಶರೀರಕ್ಕೆ ಆರೋಗ್ಯಕರವೇ ಅಥವಾ ಹಾನಿಕರವೇ ಎನ್ನುವ ಬಗ್ಗೆ ಸಹಮತಕ್ಕೆ ಬರಲು ಆಹಾರ ತಜ್ಞರಿಗೆ ಸಾಧ್ಯವಾಗಿಲ್ಲ. ಮೊಟ್ಟೆಯು ಇತರ ವಿಟಾಮಿನ್‌ಗಳು ಮತ್ತು ಖನಿಜಗಳ ಜೊತೆಗೆ ಹೇರಳ ಪ್ರೋಟಿನ್‌ಗಳನ್ನು ಹೊಂದಿದೆ. ಆದರೆ ಅದರಲ್ಲಿ ಕೊಲೆಸ್ಟ್ರಾಲ್ ಮತ್ತು ಕೊಬ್ಬು ಕೂಡ ಗಣನೀಯ ಪ್ರಮಾಣದಲ್ಲಿವೆ. ಇದು ಮೊಟ್ಟೆ ಆರೋಗ್ಯಕರವೇ ಅಥವಾ ಹಾನಿಕರವೇ ಎಂಬ ಶಂಕೆಗೆ ಕಾರಣವಾಗಿದೆ. ಆದರೆ ನಿಜಕ್ಕೂ ಹೆಚ್ಚು ಆರೋಗ್ಯಕರ ವಾಗಿರುವುದು ಯಾವುದು..... ಮೊಟ್ಟೆಯ ಬಿಳಿಯ ಭಾಗವೋ ಅಥವಾ ಹಳದಿ ಭಾಗವೋ?

ಮೊಟ್ಟೆಯ ಬಿಳಿಯ ಭಾಗವು ಕಡಿಮೆ ಕ್ಯಾಲೊರಿಗಳನ್ನು ಮತ್ತು ಸಮೃದ್ಧ ಪ್ರೊಟೀನ್ ಗಳನ್ನು ಒಳಗೊಂಡಿರುತ್ತದೆ. ಇದರಲ್ಲಿ ಹುಡುಕಿದರೂ ಕೊಲೆಸ್ಟ್ರಾಲ್ ಮತ್ತು ಕೊಬ್ಬು ಸಿಗುವುದಿಲ್ಲ. ಎಲ್ಲ ಕೊಲೆಸ್ಟ್ರಾಲ್ ಮೊಟ್ಟೆಯ ಹಳದಿ ಭಾಗದಲ್ಲಿ ಮಾತ್ರವಿರುತ್ತದೆ. ಹೀಗಾಗಿ ಬಿಳಿಯ ಭಾಗವನ್ನಷ್ಟೇ ತಿನ್ನುವುದರಿಂದ ಕೊಲೆಸ್ಟ್ರಾಲ್ ಇಲ್ಲದೆ ಶರೀರಕ್ಕೆ ಅಗತ್ಯವಿರುವ ಎಲ್ಲ ಪ್ರೋಟಿನ್‌ಗಳು ದೊರೆಯುತ್ತವೆ. ಕೊಲೆಸ್ಟ್ರಾಲ್ ರಹಿತ ಆಹಾರ ಸೇವಿಸುವಂತೆ ವೈದ್ಯರು ಸೂಚಿಸಿರುವವರಿಗೆ ಇಡೀ ಮೊಟ್ಟೆಯ ಬದಲು ಬಿಳಿಯ ಭಾಗವನ್ನಷ್ಟೇ ಸೇವಿಸುವುದು ಉತ್ತಮ ಆಯ್ಕೆಯಾಗಿದೆ.

ಸಾಮಾನ್ಯ ಮೊಟ್ಟೆಯ ಬಿಳಿಯ ಭಾಗದಲ್ಲಿ 4 ಗ್ರಾಂ ಪ್ರೋಟಿನ್ ಇರುತ್ತದೆ. ಇಂತಹ ಕೊಬ್ಬುರಹಿತ ಪ್ರೋಟಿನ್ ಸೇವನೆಯು ಹೃದ್ರೋಗದ ಅಪಾಯವನ್ನು ತಗ್ಗಿಸುತ್ತದೆ.

 ಹಳದಿ ಭಾಗದಲ್ಲಿ 5 ಗ್ರಾಂ ಕೊಬ್ಬು ಇರುತ್ತದೆ. ದೊಡ್ಡ ಮೊಟ್ಟೆಯ ಬಿಳಿಯ ಭಾಗದಲ್ಲಿ 7 ಗ್ರಾಂ ಪ್ರೋಟಿನ್,1.3 ಮೈಕ್ರೋಗ್ರಾಂ(ಎಂಸಿಜಿ) ಫೊಲೇಟ್, 6.6 ಎಂಸಿಜಿ ಸೆಲಿನಿಯಂ, 2.3 ಮಿ.ಗ್ರಾಂ ಕ್ಯಾಲ್ಶಿಯಂ ಮತ್ತು 4.9 ಮಿ.ಗ್ರಾಂ ರಂಜಕ ಹಾಗೂ ಸಣ್ಣ ಪ್ರಮಾಣದಲ್ಲಿ ರಿಬೋಫ್ಲಾವಿನ್ ಇರುತ್ತದೆ. ಹೀಗಾಗಿ ಕಡಿಮೆ ಕ್ಯಾಲೊರಿಗಳು ಮತ್ತು ಹೆಚ್ಚು ಪ್ರೋಟಿನ್ ಒಳಗೊಂಡಿರುವ ಮೊಟ್ಟೆಯ ಬಿಳಿಯ ಭಾಗವು ದೇಹದಾರ್ಢ್ಯ ಪಟುಗಳ ಆದ್ಯತೆಯ ಆಯ್ಕೆಯಾಗಿದೆ.

  ಬಿಳಿಯ ಭಾಗದ ಸೇವನೆಯು ರಕ್ತದೊತ್ತಡವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ಅದರಲ್ಲಿಯ ಕಬ್ಬಿಣದ ಅಂಶವು ತಲೆಗೂದಲು ಉದುರುವುದನ್ನು ಕಡಿಮೆಗೊಳಿಸುತ್ತದೆ. ಅಧಿಕ ಪ್ರಮಾಣದಲ್ಲಿರುವ ವಿಟಾಮಿನ್ ಚರ್ಮದಲ್ಲಿನ ಎಣ್ಣೆಯ ಅಂಶವನ್ನು ನಿಯಂತ್ರಿಸುವ ಜೊತೆಗೆ ಮುಖದಲ್ಲಿಯ ಬ್ಲಾಕ್‌ಹೆಡ್‌ಗಳನ್ನು ತೊಲಗಿಸಲು ಮತ್ತು ಸುಕ್ಕುಗಳನ್ನು ಕಡಿಮೆಗೊಳಿಸಲು ನೆರವಾಗುತ್ತದೆ.

ಮೊಟ್ಟೆಯ ಹಳದಿ ಭಾಗದಲ್ಲಿ ವಿಟಾಮಿನ್‌ಗಳು ಮತ್ತು ಖನಿಜಗಳು ಹೇರಳವಾ ಗಿವೆ. ಬಿಳಿಯ ಭಾಗಕ್ಕೆ ಹೋಲಿಸಿದರೆ ಹಳದಿಯಲ್ಲಿ ಪ್ರೋಟಿನ್ ಕಡಿಮೆಯಾಗಿದ್ದರೂ ಅದು ಇತರ ಹಲವಾರು ಪೋಷಕಾಂಶ ಲಾಭಗಳನ್ನು ನೀಡುತ್ತದೆ. ಅದರಲ್ಲಿ ಬಿಳಿಯ ಭಾಗಕ್ಕಿಂತ ಹೆಚ್ಚು ವಿಟಾಮಿನ್‌ಗಳು, ಖನಿಜಗಳು ಮತ್ತು ಕೊಬ್ಬು ಇರುತ್ತವೆ. ವಿಟಾಮಿನ್ ಬಿ6, ಬಿ12, ಎ, ಡಿ, ಇ ಮತ್ತು ಕೆ ಹೇರಳವಾಗಿದ್ದರೆ ಬಿಳಿಯ ಭಾಗದಲ್ಲಿ ವಿಟಾಮಿನ್ ಎ, ಡಿ, ಇ ಮತ್ತು ಕೆ ಇರುವುದಿಲ್ಲ.
 ಹಳದಿ ಭಾಗವು ಆರೋಗ್ಯಕ್ಕೆ ಅಗತ್ಯವಾದ ಒಮೆಗಾ 3 ಫ್ಯಾಟ್, ಫೊಲೇಟ್, ಕೋಲಿನ್, ಸೆಲಿನಿಯಂ, ಕಬ್ಬಿಣ ಮತ್ತು ಸತುವು ಒಳಗೊಂಡಿರುತ್ತದೆ. 

ಕೋಲಿನ್ ಮಿದುಳಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಸ್ನಾಯು ನಿಯಂತ್ರಣ ಮತ್ತು ಜ್ಞಾಪಕ ಶಕ್ತಿ ಹೆಚ್ಚಿಸಲೂ ಅದು ಪೂರಕವಾಗಿದೆ. 

ಜೀವಕೋಶಗಳ ವಪೆಗಳ ಅರೋಗ್ಯಕ್ಕೂ ಮುಖ್ಯವಾಗಿರುವ ಅದು ಉರಿಯೂತ ನಿವಾರಕ ಗುಣವನ್ನೂ ಹೊಂದಿದೆ. ಕೋಲಿನ್ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಅಪಾಯವನ್ನು ತಗ್ಗಿಸುತ್ತದೆ ಎಂದೂ ಹೇಳಲಾ ಗಿದೆ. ಒಂದು ಮೊಟ್ಟೆಯ ಹಳದಿ ಭಾಗದಲ್ಲಿ ಸುಮಾರು 215 ಮಿ.ಗ್ರಾಂ ಕೋಲಿನ್ ಇರುತ್ತದೆ.

ಹಳದಿ ಭಾಗದಲ್ಲಿರುವ ವಿಟಾಮಿನ್ ಎ ಕಣ್ಣುಗಳು ಮತ್ತು ಕಣ್ಣಿನ ದೃಷ್ಟಿಯ ಒಟ್ಟಾರೆ ಆರೋಗ್ಯವನ್ನು ಹೆಚ್ಚಿಸುತ್ತದೆ.

ಅಂತಿಮವಾಗಿ ಹೇಳುವುದಾದರೆ ಮೊಟ್ಟೆಯು ಆರೋಗ್ಯಕರ ಆಹಾರವಾಗಿದೆ. ದಿನಕ್ಕೊಂದು ಮೊಟ್ಟೆಯ ಸೇವನೆಯು ಅಧಿಕ ಕೊಲೆಸ್ಟ್ರಾಲ್ ಆಥವಾ ಹೃದ್ರೋಗದ ಅಪಾಯವನ್ನು ಹೆಚ್ಚಿಸುವುದಿಲ್ಲ. ಮೊಟ್ಟೆಯ ಬಿಳಿಯ ಭಾಗ ಅಥವಾ ನೀವು ನಿಮ್ಮ ಒಟ್ಟಾರೆ ಕ್ಯಾಲರಿ ಸೇವನೆಯ ಮೇಲೆ ನಿಯಂತ್ರಣ ಹೊಂದಿರುವವರೆಗೂ ಇಡೀ ಮೊಟ್ಟೆಯ ಸೇವನೆ ಆರೋಗ್ಯಕರ ಆಯ್ಕೆಯಾಗುತ್ತದೆ. ಆದರೆ ನೀವು ಕಡಿಮೆ ಕ್ಯಾಲರಿಗಳನ್ನು ಇಷ್ಟ ಪಡುವುದಾದರೆ ಮೊಟ್ಟೆಯ ಬಿಳಿಯ ಭಾಗದ ಸೇವನೆ ಒಳ್ಳೆಯದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News