“ಅವರು ಬಹುಶಃ ನನಗೆ ತಪ್ಪಾಗಿ ಗುಂಡಿಕ್ಕಿರಬಹುದು”: ಕಲ್ಲು ಹೃದಯವನ್ನೂ ಕರಗಿಸುವ ರೊಹಿಂಗ್ಯಾ ಬಾಲಕನ ಮುಗ್ದ ಮಾತುಗಳು

Update: 2017-11-01 10:54 GMT

ಢಾಕಾ, ನ. 1: ಮ್ಯಾನ್ಮಾರ್‌ನಲ್ಲಿ ಪೊಲೀಸರ ಮತ್ತು ಸೇನೆಯ ದೌರ್ಜನ್ಯವನ್ನು ಎದುರಿಸಲಾಗದೆ ಜನಾಂಗೀಯ ಅಲ್ಪಸಂಖ್ಯಾತ ರೊಹಿಂಗ್ಯಾಗಳು ಸ್ವದೇಶವನ್ನು ತೊರೆಯುತ್ತಿದ್ದಾರೆ. ಇವರಲ್ಲಿ ಮಕ್ಕಳೂ ಇದ್ದಾರೆ. ವಿಶ್ವಸಂಸ್ಥೆಯ ಅಂಗಸಂಸ್ಥೆ ಯುನಿಸೆಫ್ ಇಂತಹ ರೊಹಿಂಗ್ಯಾ ನಿರಾಶ್ರಿತ ಮಕ್ಕಳ ಹೃದಯ ವಿದ್ರಾವಕ ಅನುಭವಗಳನ್ನು ವಿಶ್ವದ ಮುಂದಿರಿಸುತ್ತಿದೆ. ಇದು ಪುಟ್ಟ ಆಲಂ ಮುಹಮ್ಮದ್ ಯೂನುಸ್‌ನ ಕಥೆ.

ಬಾಂಗ್ಲಾದೇಶದ ಕಾಕ್ಸ್ ಬಝಾರ್‌ನ ನಿರಾಶ್ರಿತರ ಶಿಬಿರವೊಂದರಲ್ಲಿ ತೀವ್ರವಾಗಿ ಗಾಯಗೊಂಡಿರುವ ತನ್ನ ಎಡಗಾಲಿಗೆ ವೈದ್ಯರಿಂದ ಚಿಕಿತ್ಸೆ ಪಡೆಯಲು ಕಾದು ಕುಳಿತಿರುವ ಆಲಂ ಕೈಕಾಲುಗಳನ್ನೂ ಆಡಿಸುತ್ತಿಲ್ಲ. ‘ಗುಂಡು ನನ್ನ ಕಾಲಿಗೆ ಬಡಿದಿತ್ತು’ ಇದು ಆಲಂ ತನ್ನನ್ನು ವಿಚಾರಿಸಿದವರಿಗೆ ನೀಡಿದ ಉತ್ತರ. ಹೀಗೆ ಹೇಳುವಾಗ ಆತನ ದೊಡ್ಡ ದೊಡ್ಡ ಕಂದುಬಣ್ಣದ ಕಣ್ಣುಗಳು ಇನ್ನಷ್ಟು ದೊಡ್ಡದಾಗಿದ್ದವು. ಆದರೆ ಆಲಂ ಧೈರ್ಯ ಕಳೆದು ಕೊಂಡಿರಲಿಲ್ಲ. ತೀವ್ರ ನೋಯುತ್ತಿದ್ದರೂ ಆತ ಅದನ್ನು ತೋರ್ಪಡಿಸಿಕೊಳ್ಳುತ್ತಿರಲಿಲ್ಲ.

‘ಬಹುಶಃ ಅವರು ತಪ್ಪಾಗಿ ನನಗೆ ಗುಂಡು ಹೊಡೆದಿದ್ದಾರೆ ಎಂದು ನಾನು ಭಾವಿಸಿದ್ದೇನೆ. ಅವರು ದೊಡ್ಡವರಿಗೆ ಗುಂಡು ಹೊಡೆಯಲು ಉದ್ದೇಶಿಸಿದ್ದರು’ಎಂದು ಈ ಅಮಾಯಕ ಬಾಲಕ ಹೇಳಿದಾಗ ಅಲ್ಲಿದ್ದವರು ಕಂಬನಿ ಮಿಡಿಯುತ್ತಿದ್ದರು.

ಮುಹಮ್ಮದ್ ಚಿಕಿತ್ಸೆಗಾಗಿ ಕಾದು ಕುಳಿತಿದ್ದ ಆರೋಗ್ಯ ಕೇಂದ್ರಕ್ಕೆ ಎಲ್ಲ ನೆರವನ್ನೂ ಒದಗಿಸುತ್ತಿರುವ ಯುನಿಸೆಫ್ ಹೇಳುವಂತೆ ಕಳೆದ ಆಗಸ್ಟ್‌ನಿಂದ ಮುಹಮ್ಮದ್‌ನಂತಹ 3.20 ಲಕ್ಷಕ್ಕೂ ಅಧಿಕ ಮಕ್ಕಳು ಹುಟ್ಟೂರನ್ನು ತೊರೆದು ಬಾಂಗ್ಲಾದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ.

ಕಳೆದ ಆಗಸ್ಟ್‌ನಲ್ಲಿ ಮ್ಯಾನ್ಮಾರ್ ಸೇನೆಯು ರಾಖಿನೆ ರಾಜ್ಯದಲ್ಲಿ ರೊಹಿಂಗ್ಯಾಗಳ ವಿರುದ್ಧ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಅದೇ ವೇಳೆ ವಿಶ್ವಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿ ಬಾಂಗ್ಲಾದೇಶವನ್ನು ರೊಹಿಂಗ್ಯಾಗಳಿಂದ ಮುಕ್ತಗೊಳಿಸಲು ನಿರ್ದಯ, ನಿರಂತರ ಅಭಿಯಾನವೊಂದಕ್ಕೆ ಕರೆ ನೀಡಿದ್ದರು.

 ಹಿಂಸಾಚಾರಕ್ಕೆ ತುತ್ತಾಗಿ ಜೀವವುಳಿಸಿಕೊಳ್ಳಲು ಮ್ಯಾನ್ಮಾರ್‌ನಿಂದ ಪರಾರಿಯಾಗಿರುವ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಅನುಭವಗಳು ಕೇಳಿದವರ ಬೆನ್ನುಹುರಿಯಲ್ಲಿ ಚಳಿ ಹುಟ್ಟಿಸುತ್ತಿವೆ ಎಂದು ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ಭದ್ರತಾ ಮಂಡಳಿಯ ಸಭೆಯಲ್ಲಿ ಹೇಳಿದ್ದರು.

‘‘ಅವರು(ಮ್ಯಾನ್ಮಾರ್ ಸೇನೆ)ನಮ್ಮ ಗ್ರಾಮಕ್ಕೆ ನುಗ್ಗಿದ್ದರು ಮತ್ತು ಪ್ರತಿಯೊಬ್ಬರತ್ತ ಗುಂಡು ಹಾರಿಸಲು ಆರಂಭಿಸಿದ್ದರು’’ ಎಂದು ಮುಹಮ್ಮದ್ ನೆನಪಿಸಿಕೊಂಡಿದ್ದಾನೆ.

ಈ ಕರಾಳ ದೌರ್ಜನ್ಯಗಳಿಗೆ ಹೊಣೆ ಯಾರು?

ಬಾಂಗ್ಲಾದೇಶದ ಗ್ರಾಮೀಣ ಬ್ಯಾಂಕಿನ ಸ್ಥಾಪಕ ಹಾಗೂ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ಹೇಳುವಂತೆ, ಈ ಹಿಂಸಾಚಾರದ ಸಂಪೂರ್ಣ ಹೊಣೆಗಾರಿಕೆ ಮ್ಯಾನ್ಮಾರ್‌ನ ಸಂಸದೆ ಹಾಗೂ ನೊಬೆಲ್ ಪ್ರಶಸ್ತಿ ಪುರಸ್ಕೃತೆ ಆಂಗ್ ಸಾನ್ ಸೂ ಕಿ ಅವರದ್ದಾಗಿದೆ. ‘‘ಸೂ ಕಿ ಮ್ಯಾನಾರ್‌ನ ನಾಯಕಿಯಾಗಿರುವುದರಿಂದ ರೊಹಿಂಗ್ಯಾಗಳ ಮೇಲಿನ ದೌರ್ಜನ್ಯದ ಶೇ.100 ಹೊಣೆಗಾರಿಕೆಯನ್ನು ನಾನು ಅವರ ಮೇಲೆಯೇ ಹೊರಿಸುತ್ತೇನೆ’’ ಎಂದು ಯೂನುಸ್ ಅಲ್-ಜಝೀರಾ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News