×
Ad

ಬ್ರಿಟನ್ ರಕ್ಷಣಾ ಕಾರ್ಯದರ್ಶಿ ರಾಜೀನಾಮೆ

Update: 2017-11-02 22:26 IST

ಲಂಡನ್, ನ. 2: ಲೈಂಗಿಕ ದುರ್ವರ್ತನೆ ಆರೋಪ ಎದುರಿಸುತ್ತಿರುವ ಬ್ರಿಟನ್ ರಕ್ಷಣಾ ಕಾರ್ಯದರ್ಶಿ ಮೈಕಲ್ ಫಾಲನ್ ಬುಧವಾರ ರಾಜೀನಾಮೆ ನೀಡಿದ್ದಾರೆ.

 ವೆಸ್ಟ್‌ಮಿನ್‌ಸ್ಟರ್‌ನ ಅರಮನೆಗಳಲ್ಲಿ ಸಂಸದರು ಮತ್ತು ಇತರ ಉದ್ಯೋಗಿಗಳಿಗಾಗಿ ಕೆಲಸ ಮಾಡುತ್ತಿರುವ ಹಲವಾರು ಕಲಿಕಾರ್ಥಿಗಳು ಲೈಂಗಿಕ ದುರ್ವರ್ತನೆ ಆರೋಪಗಳ ಸರಮಾಲೆಯನ್ನೇ ಹೊರಿಸಿರುವುದನ್ನು ಸ್ಮರಿಸಬಹುದಾಗಿದೆ.

ಹದಿನೈದು ವರ್ಷಗಳ ಹಿಂದೆ ನಡೆದ ಘಟನೆಗಾಗಿ ಫಾಲನ್ ಈ ವಾರದ ಆರಂಭದಲ್ಲಿ ಕ್ಷಮೆ ಕೋರಿದ್ದರು. ಅಂದು ಅವರು ಪತ್ರಕರ್ತೆ ಜೂಲಿಯಾ ಹಾರ್ಟ್‌ಲಿ ಜೊತೆ ಅನುಚಿತವಾಗಿ ವರ್ತಿಸಿದ್ದರು.

ತನ್ನ ವರ್ತನೆಯು ಬ್ರಿಟಿಶ್ ಸೇನೆಯಿಂದ ನಿರೀಕ್ಷಿಸುವ ದರ್ಜೆಯ ಮಟ್ಟಕ್ಕೆ ಏರಲಾರದು ಎಂಬುದನ್ನು ಬುಧವಾರ ಒಪ್ಪಿಕೊಂಡ ಅವರು, ರಾಜೀನಾಮೆ ನೀಡಿದರು.

‘‘15-10 ವರ್ಷಗಳ ಹಿಂದೆ ಯಾವುದು ಸ್ವೀಕಾರಾರ್ಹವಾಗಿರಬಹುದಾಗಿತ್ತೋ ಅದು ಇಂದು ಖಂಡಿತವಾಗಿಯೂ ಸ್ವೀಕಾರಾರ್ಹವಲ್ಲ’’ ಎಂದು ಅವರು ಬಿಬಿಸಿಗೆ ಹೇಳಿದರು.

‘‘ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸದರ ವಿರುದ್ಧ ಹಲವಾರು ದೂರುಗಳು ಬರುತ್ತಿವೆ. ನನ್ನ ಹಿಂದಿನ ವರ್ತನೆಯ ಬಗ್ಗೆಯೂ ದೂರುಗಳು ಬಂದಿವೆ. ಆ ಪೈಕಿ ಹೆಚ್ಚಿನವು ಸುಳ್ಳು, ಆದರೆ ಹಿಂದಿನ ನನ್ನ ವರ್ತನೆಗಳು ಸಶಸ್ತ್ರ ಪಡೆಗಳಿಗೆ ಅಗತ್ಯವಾದ ಉನ್ನತ ಮಾನದಂಡದ ಮಟ್ಟಕ್ಕೆ ಏರುವುದಿಲ್ಲ ಎಂದು ನಾನು ಒಪ್ಪುತ್ತೇನೆ. ಸಶಸ್ತ್ರ ಪಡೆಗಳನ್ನು ಪ್ರತಿನಿಧಿಸಿರುವುದಕ್ಕೆ ನಾನು ಗೌರವಿಸಲ್ಪಟ್ಟಿದ್ದೇನೆ. ನನ್ನ ಹುದ್ದೆಯ ಬಗ್ಗೆ ನಾನು ಯೋಚಿಸಿದ್ದೇನೆ. ಈಗ ನಾನು ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ’’ ಎಂದು ಪ್ರಧಾನಿ ತೆರೇಸಾ ಮೇಗೆ ಬರೆದ ರಾಜೀನಾಮೆ ಪತ್ರದಲ್ಲಿ ಫಾಲನ್ ಹೇಳಿದ್ದಾರೆ.

ರಾಜೀನಾಮೆ ಸ್ವೀಕರಿಸಿದ ಮೇ

ಬ್ರಿಟನ್ ಪ್ರಧಾನಿ ತೆರೇಸಾ ಮೇ ರಕ್ಷಣಾ ಕಾರ್ಯದರ್ಶಿ ಫಾಲನ್‌ರ ರಾಜೀನಾಮೆ ಪತ್ರವನ್ನು ಸ್ವೀಕರಿಸಿದ್ದಾರೆ.

‘‘ನಿಮ್ಮ ಹುದ್ದೆಯನ್ನು ಗಂಭೀರವಾಗಿ ಪರಿಗಣಿಸಿರುವುದಕ್ಕಾಗಿ ನಾನು ನಿಮ್ಮನ್ನು ಮೆಚ್ಚುತ್ತೇನೆ. ಸೈನಿಕರು, ಮಹಿಳೆಯರು ಮತ್ತು ಇತರರಿಗಾಗಿ ನೀವು ಹಾಕಿಕೊಟ್ಟಿರುವ ಮೇಲ್ಪಂಕ್ತಿಗಾಗಿಯೂ ನಿಮ್ಮನ್ನು ಪ್ರಶಂಸಿಸುತ್ತೇನೆ’’ ಎಂಬುದಾಗಿ ತೆರೇಸಾ ಮೇ ರಾಜೀನಾಮೆಗೆ ಪ್ರತ್ರಿಕ್ರಿಯಿಸಿದ್ದಾರೆ.

ನೂತನ ರಕ್ಷಣಾ ಕಾರ್ಯದರ್ಶಿಯಾಗಿ ಗ್ಯಾವಿನ್ ವಿಲಿಯಮ್‌ಸನ್

ಬ್ರಿಟನ್‌ನ ಆಡಳಿತಾರೂಢ ಕನ್ಸರ್ವೇಟಿವ್ ಪಾರ್ಟಿಯ ಉದಯೋನ್ಮುಖ ನಾಯಕ 41 ವರ್ಷದ ಗ್ಯಾವಿನ್ ವಿಲಿಯಮ್‌ಸನ್‌ರನ್ನು ನೂತನ ರಕ್ಷಣಾ ಕಾರ್ಯದರ್ಶಿಯಾಗಿ ಬ್ರಿಟನ್ ಪ್ರಧಾನಿ ತೆರೇಸಾ ಮೇ ಗುರುವಾರ ನೇಮಿಸಿದ್ದಾರೆ.

‘‘ರಕ್ಷಣಾ ಕಾರ್ಯದರ್ಶಿಯಾಗಿ ಗ್ಯಾವಿನ್ ವಿಲಿಯಮ್‌ಸನ್‌ರ ನೇಮಕವನ್ನು ರಾಣಿ ಸಂತೋಷದಿಂದ ಅಂಗೀಕರಿಸಿದ್ದಾರೆ’’ ಎಂದು ತೆರೇಸಾರ ವಕ್ತಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News