ಜಿನ್ನಾ ಪುತ್ರಿ ದೀನಾ ವಾಡಿಯಾ ಇನ್ನಿಲ್ಲ

Update: 2017-11-03 04:04 GMT

ಮುಂಬೈ, ನ. 3: ಪಾಕಿಸ್ತಾನದ ಜನಕ  ಮುಹಮ್ಮದ್ ಅಲಿ ಜಿನ್ನಾ ಅವರ ಪುತ್ರಿ, ನಿರ್ಭೀತಿಗೆ ಹೆಸರಾಗಿದ್ದ ದೀನಾ ವಾಡಿಯಾ (98) ನ್ಯೂಯಾರ್ಕ್‌ನಲ್ಲಿ ನಿಧನರಾದರು.

ಇವರು ಬಾಂಬೆಡೈಯಿಂಗ್‌ನ ಅಧ್ಯಕ್ಷ ನುಸ್ಲಿವಾಡಿಯಾ ಅವರ ತಾಯಿ. ಅಲ್ಪಕಾಲದಿಂದ ಅಸ್ವಸ್ಥರಾಗಿದ್ದ ವಾಡಿಯಾ, ಜಿನ್ನಾ ಅವರ ಏಕೈಕ ಪುತ್ರಿ.

1930ರ ದಶಕದಲ್ಲಿ ನೆವಿಲ್ಲಾ ವಾಡಿಯಾ ಎಂಬ ಪಾರ್ಸಿ ಕುಟುಂಬದ ಯುವಕನ್ನು ವರಿಸಲು ಈಕೆ ಮುಂದಾದಾಗ, ಜಿನ್ನಾ, "ಭಾರತದಲ್ಲಿ ಸಾವಿರಾರು ಮುಸ್ಲಿಮರಿದ್ದಾರೆ. ಅವರಲ್ಲಿ ಯಾರನ್ನಾದರೂ ಆಯ್ಕೆ ಮಾಡಿಕೋ. ಏಕೆ ಪಾರ್ಸಿಯನ್ನು ವಿವಾಹವಾಗುತ್ತಿ" ಎಂದು ಕೋಪದಿಂದ ಪ್ರಶ್ನಿಸಿದ್ದರು. ಆಗ ತಂದೆಗೇ ತಿರುಗೇಟು ನೀಡಿದ ದೀನಾ, "ಭಾರತದಲ್ಲಿ ಲಕ್ಷಾಂತರ ಮುಸ್ಲಿಂ ಮಹಿಳೆಯರಿದ್ದರು. ನೀವೇಕೆ ಅವರನ್ನು ವಿವಾಹವಾಗಲಿಲ್ಲ" ಎಂದು ಪ್ರಶ್ನಿಸಿದ್ದರು.

ಜಿನ್ನಾ ರತ್ತನ್‌ಬಾಯಿ ಎಂಬ ಪಾರ್ಸಿ ಯುವತಿಯನ್ನು ವಿವಾಹವಾಗಿದ್ದರು. ದೀನಾರ ತಾಯಿ 1929ರಲ್ಲೇ ನಿಧನರಾಗಿದ್ದರು. ಜಿನ್ನಾ ಭಾರತೀಯ ಮುಸ್ಲಿಮರನ್ನು ಸಂಘಟಿಸಿ, ಇಡೀ ಸಮುದಾಯದ ಮುಖಂಡರಾಗಿ ರೂಪುಗೊಳ್ಳುತ್ತಿದ್ದ ಈ ಅವಧಿಯಲ್ಲಿ ಮಗಳ ನಡೆ ಜಿನ್ನಾರಿಗೆ ಬಿಸಿ ತುಪ್ಪವಾಗಿತ್ತು. ಜಿನ್ನಾ ನಿಧನದ ಬಳಿಕ ದೀನಾ ಮುಂಬೈನ ಮಲಬಾರ್ ಹಿಲ್ಸ್‌ನಲ್ಲಿದ್ದ ಜಿನ್ನಾ ನಿವಾಸದ ಹಕ್ಕು ಪ್ರತಿಪಾದಿಸಿದ್ದರು.

ಲಂಡನ್‌ನಲ್ಲಿ ಜನಿಸಿದ ದೀನಾ, ತಮ್ಮ ಜೀವನದ ಬಹುತೇಕ ಭಾಗವನ್ನು ಮುಂಬೈನಲ್ಲಿ ಕಳೆದವರು. ಆದರೆ ಕೆಲ ದಶಕಗಳಿಂದ ಅಮೆರಿಕದಲ್ಲಿ ವಾಸವಿದ್ದರು. ತಾಯಿ ಜತೆ ನಿಕಟ ಬಾಂಧವ್ಯ ಹೊಂದಿದ್ದ ಉದ್ಯಮಿ ಮಗ ನುಸ್ಲಿವಾಡಿಯಾ ಮುಂಬೈ ಹಾಗೂ ನ್ಯೂಯಾರ್ಕ್ ನಡುವೆ ಓಡಾಡಿಕೊಂಡು ತಾಯಿಯ ಜತೆ ಬಹಳಷ್ಟು ಸಮಯ ಕಳೆಯುತ್ತಿದ್ದರು.

2008ರಲ್ಲಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ನುಸ್ಲಿ, "ಪ್ರತಿ ದಿನ ನಾನು ಎಲ್ಲೇ ಇದ್ದರೂ ಒಮ್ಮೆಯಾದರೂ ತಾಯಿ ಜತೆ ಮಾತನಾಡು ತ್ತೇನೆ. ವಿಶ್ವದಲ್ಲಿ ನಮ್ಮಷ್ಟು ಆತ್ಮೀಯವಾಗಿರುವ ತಾಯಿ- ಮಗ ಇರಲಾರರು" ಎಂದು ಬಣ್ಣಿಸಿದ್ದರು.

ನುಸ್ಲಿ ಹೊರತಾಗಿ ದೀನಾ, ಪುತ್ರಿ ಡಯಾನಾ, ಮೊಮ್ಮಕ್ಕಳಾದ ನೆಸ್ ಹಾಗೂ ಜೆಹ್, ಮರಿಮೊಮ್ಮಕ್ಕಳಾದ ಜೆಹ್ ರನ್ನು ಅಗಲಿದ್ದಾರೆ. ದೀನಾ ಅವರ ಅಂತ್ಯಸಂಸ್ಕಾರ ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

1919ರ ಆಗಸ್ಟ್ 15ರಂದು ಮಧ್ಯರಾತ್ರಿ ದೀನಾ ಹುಟ್ಟಿದ್ದರು. ಇದಾದ 28 ವರ್ಷಗಳ ಬಳಿಕ ಅದೇ ದಿನದಂದು ಜಿನ್ನಾ ಅವರ ಎರಡನೇ ಕೂಸು "ಪಾಕಿಸ್ತಾನ" ಹುಟ್ಟಿದೆ ಎಂದು ಇತಿಹಾಸಗಾರ ಸ್ಟಾನ್ಲಿ ವೋಪ್ರೆಟ್ "ಜಿನ್ನಾ ಆಫ್ ಪಾಕಿಸ್ತಾನ" ಕೃತಿಯಲ್ಲಿ ಬರೆದಿದ್ದರು.

ಜಿನ್ನಾ ಹಾಗೂ ರತ್ತನ್‌ಬಾಯಿ ವೈವಾಹಿಕ ಸಂಬಂಧದಲ್ಲಿ ಬಿರುಕು ಉಂಟಾದ ಹಿನ್ನೆಲೆಯಲ್ಲಿ ಮಗುವಾಗಿದ್ದಾಗ ದೀನಾ ತಂದೆ- ತಾಯಿ ಪ್ರೀತಿಯಿಂದ ಸಾಕಷ್ಟು ವಂಚಿತರಾಗಿದ್ದರು. ಎಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಿದ್ದರೆಂದರೆ ಹಲವು ವರ್ಷಗಳವರೆಗೆ ಮಗುವಿಗೆ ಹೆಸರನ್ನೂ ಇಟ್ಟಿರಲಿಲ್ಲ. ಕ್ರಮೇಣ ತಾಯಿಯ ತಾಯಿಯ ಹೆಸರನ್ನು ಇಟ್ಟುಕೊಂಡಿದ್ದರು ಎಂದು ಶೀಲಾ ರೆಡ್ಡಿ ತಮ್ಮ "ಮಿಸ್ಟರ್ ಆ್ಯಂಡ್ ಮಿಸೆಸ್ ಜಿನ್ನಾ: ದ ಮ್ಯಾರೇಜ್ ದ್ಯಾಟ್ ಶೂಕ್ ಇಂಡಿಯಾ" ಕೃತಿಯಲ್ಲಿ ಬಣ್ಣಸಿದ್ದರು.

1938ರ ನವೆಂಬರ್ 16ರಂದು ಅವರು ಸರ್ ನೆಸ್ ಹಾಗೂ ಲೇಡಿ ವಾಡಿಯಾ ಪುತ್ರ ನವಿಲ್ಲೆಯವರನ್ನು ವಿವಾಹವಾಗಿದ್ದರು. ತಂದೆ ವಿವಾಹದಲ್ಲಿ ಭಾಗಿಯಾಗಿರಲಿಲ್ಲ. ದೀನಾ ಹಾಗೂ ನೆವಿಲ್ಲೆಗೆ ಇಬ್ಬರು ಮಕ್ಕಳು. ಕೆಲ ವರ್ಷಗಳ ಬಳಿಕ ಈ ದಂಪತಿ ಪ್ರತ್ಯೇಕವಾದರು. ತಂದೆಯ ಜತೆಗಿನ ಸಂಬಂಧವನ್ನು ಸರಿಪಡಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News