ಕಾಮನ್‌ವೆಲ್ತ್ ಶೂಟಿಂಗ್ ಟೂರ್ನಿ:ಕನ್ನಡಿಗ ಪ್ರಕಾಶ್ ನಂಜಪ್ಪಗೆ ಚಿನ್ನ

Update: 2017-11-03 18:18 GMT

ಗೋಲ್ಡ್‌ಕೋಸ್ಟ್(ಆಸ್ಟ್ರೇಲಿಯ), ನ.3: ಕಾಮನ್‌ವೆಲ್ತ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ಮುಂದುವರಿಸಿದೆ. ಶುಕ್ರವಾರ ನಡೆದ ಪುರುಷರ 50 ಮೀ. ಪಿಸ್ತೂಲ್ ಇವೆಂಟ್‌ನಲ್ಲಿ ಎಲ್ಲ ಮೂರು ಪದಕಗಳನ್ನು ಜಯಿಸಿದ ಭಾರತೀಯರು ಟೂರ್ನಿಯಲ್ಲಿ ಎರಡನೆ ಬಾರಿ ಕ್ಲೀನ್‌ಸ್ವೀಪ್ ಸಾಧಿಸಿದ್ದಾರೆ.

ಕನ್ನಡಿಗ ಪ್ರಕಾಶ್ ನಂಜಪ್ಪ 222.4 ಅಂಕ ಗಳಿಸುವ ಮೂಲಕ ಚಿನ್ನದ ಪದಕಕ್ಕೆ ಗುರಿ ಇಟ್ಟರು. ಸಹ ಆಟಗಾರರಾದ ಅಮನ್‌ಪ್ರೀತ್ ಸಿಂಗ್ ಹಾಗೂ ಜಿತು ರಾಯ್ ಕ್ರಮವಾಗಿ ಬೆಳ್ಳಿ ಹಾಗೂ ಕಂಚು ಜಯಿಸಿದರು.

ಬೆಂಗಳೂರಿನ 41ರ ಹರೆಯದ ಶೂಟರ್ ಪ್ರಕಾಶ್ ಅಂತಾರಾಷ್ಟ್ರೀಯ ಟೂರ್ನಿಯಲ್ಲಿ ಮೊದಲ ಬಾರಿ ಚಿನ್ನದ ಪದಕ ಜಯಿಸಿದರು. ಪ್ರಕಾಶ್ 2013ರಲ್ಲಿ ಚಾಂಗ್ವಾನ್‌ನಲ್ಲಿ ನಡೆದಿದ್ದ ಐಎಸ್‌ಎಸ್‌ಎಫ್ ವಿಶ್ವಕಪ್ ಹಾಗೂ 2014ರ ಇಂಚೋನ್ ಏಷ್ಯನ್ ಗೇಮ್ಸ್‌ನಲ್ಲಿ ಕಂಚು ಜಯಿಸಿದ್ದರು. 2014ರ ಗ್ಲಾಸ್ಗೊ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯದ ಡೇನಿಯಲ್ ರೆಪಾಚೊಲಿ ವಿರುದ್ಧ ಸೋತಿದ್ದ ಪ್ರಕಾಶ್ ಬೆಳ್ಳಿಗೆ ತೃಪ್ತಿಪಟ್ಟಿದ್ದರು.

ಬುಧವಾರ ನಡೆದಿದ್ದ ಪುರುಷರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತ ಕ್ಲೀನ್‌ಸ್ವೀಪ್ ಸಾಧಿಸಿದ್ದು ಶಾಝಾರ್ ರಿಝ್ವಿ ಚಿನ್ನದ ಪದಕ ಜಯಿಸಿದರೆ, ಓಂಕಾರ್ ಸಿಂಗ್ ಹಾಗೂ ಜಿತು ರಾಯ್ ಕಂಚು ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News