×
Ad

ಜಿನ್ನಾ ಹೌಸ್‌ಗಾಗಿ ಮುಂಬೈ ಹೈಕೋರ್ಟ್ ಮೆಟ್ಟಿಲನ್ನೇರಿದ್ದ ದೀನಾ ವಾಡಿಯಾ

Update: 2017-11-03 17:59 IST

ಮುಂಬೈ,ನ.3: ಗುರುವಾರ ನ್ಯೂಯಾರ್ಕ್‌ನಲ್ಲಿ ನಿಧನರಾದ, ಪಾಕಿಸ್ತಾನದ ಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರ ಪುತ್ರಿ ದೀನಾ ವಾಡಿಯಾ(98) ಅವರು ಇಲ್ಲಿಯ ಮಲಬಾರ್ ಹಿಲ್‌ನಲ್ಲಿರುವ ಜಿನ್ನಾ ಅವರ ವೈಭವೋಪೇತ ಬಂಗಲೆಯ ಒಡೆತನಕ್ಕಾಗಿ ಭಾರತ ಸರಕಾರದೊಡನೆ ಸುದೀರ್ಘ ಕಾನೂನು ಸಮರವನ್ನು ನಡೆಸಿದ್ದರು. ಈ ಪ್ರಕರಣವಿನ್ನೂ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆಗಾಗಿ ಬಾಕಿಯುಳಿದಿದೆ.

ಮೂಲತಃ ಸೌಥ್ ಕೋರ್ಟ್ ಎಂದು ಕರೆಯಲ್ಪಡುತ್ತಿದ್ದ ಅರಮನೆಸದೃಶ ‘ಜಿನ್ನಾ ಹೌಸ್’ ವಿಭಜನೆಗೆ ಮುನ್ನ ಮುಸ್ಲಿಂ ಲೀಗ್‌ನ ಹಲವಾರು ಸಭೆಗಳು ಹಾಗೂ ಮಹಾತ್ಮಾ ಗಾಂಧಿ, ಜವಾಹರಲಾಲ್ ನೆಹರು ಮತ್ತು ಜಿನ್ನಾ ಅವರ ನಡುವಿನ ನಿರ್ಣಾಯಕ ಮಾತುಕತೆಗಳಿಗೆ ಸಾಕ್ಷಿಯಾಗಿತ್ತು.

1919,ಆಗಸ್ಟ್‌ನಲ್ಲಿ ಲಂಡನ್‌ನಲ್ಲಿ ಜಿನ್ನಾ ಅವರ ಪಾರ್ಸಿ ಪತ್ನಿ ರತನ್‌ಬಾಯಿ ಪೆಟಿಟ್ ಅವರಿಗೆ ಜನಿಸಿದ್ದ ದೀನಾ ಯುರೋಪಿಯನ್ ವಾಸ್ತುಶೈಲಿಯನ್ನು ಹೊಂದಿದ್ದ ತನ್ನ ತಂದೆಯ ಬಂಗಲೆಯನ್ನು ಸೌಥ್ ಕೋರ್ಟ್ ಎಂದು ಕರೆಯಬೇಕೆಂದು ಒತ್ತಾಯಿಸಿದ್ದರು.

2007ರಲ್ಲಿ ಪಾಕಿಸ್ತಾನದ ಆಗಿನ ಅಧ್ಯಕ್ಷ ಪರ್ವೇಝ್ ಮುಷಾರಫ್ ಅವರು ಜಿನ್ನಾ ಹೌಸ್‌ನ್ನು ವಶಕ್ಕೆ ಪಡೆದುಕೊಂಡು ಅದನ್ನು ತನ್ನ ರಾಷ್ಟ್ರದ ದೂತಾವಾಸವನ್ನಾಗಿ ಪರಿವರ್ತಿಸಲು ಬಯಸಿದ್ದರು.

ಅದೇ ವರ್ಷದ ಆಗಸ್ಟ್‌ನಲ್ಲಿ ಆಗ 88 ವರ್ಷ ಪ್ರಾಯವಾಗಿದ್ದ ದೀನಾ ತಾನು ಜಿನ್ನಾ ಅವರ ಏಕೈಕ ವಾರಸುದಾರಳಾಗಿರುವುದರಿಂದ ಬಂಗಲೆಯ ಒಡೆತನವನ್ನು ತನಗೆ ಹಸ್ತಾಂತರಿಸುವಂತೆ ಕೋರಿ ಮುಂಬೈ ಉಚ್ಚ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.

ಹಲವಾರು ವರ್ಷಗಳ ಕಾಲ ಮುಂಬೈನಲ್ಲಿ ವಾಸವಾಗಿದ್ದ ದೀನಾ ಕಳೆದ ಕೆಲವು ದಶಕಗಳಿಂದ ಅಮೆರಿಕದಲ್ಲಿ ನೆಲೆಸಿದ್ದರು. ತನ್ನ ಬದುಕಿನ ಉಳಿದ ದಿನಗಳನ್ನು ತಾನು ಬಾಲ್ಯವನ್ನು ಕಳೆದಿದ್ದ ಜಿನ್ನಾ ಹೌಸ್‌ನಲ್ಲಿ ಕಳೆಯುವ ಬಯಕೆಯನ್ನು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯಲ್ಲಿ ವ್ಯಕ್ತಪಡಿಸಿದ್ದರು.

ತನ್ನ ತಂದೆಯು ಯಾವುದೇ ಉಯಿಲು ಬರೆಯದೆ ನಿಧನರಾಗಿದ್ದರಿಂದ ಜಿನ್ನಾ ಹೌಸ್‌ನ್ನು ‘ಸ್ಥಳಾಂತರಗೊಂಡವರ ಆಸ್ತಿ’ ಎಂದು ವರ್ಗೀಕರಿಸುವಂತಿಲ್ಲ ಎಂದೂ ದೀನಾ ಅರ್ಜಿಯಲ್ಲಿ ತಿಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News