ಭಾರತದ ‘ಸ್ಮಾರ್ಟ್ ಬಾಂಬ್’ ಪರೀಕ್ಷಾ ಪ್ರಯೋಗ ಯಶಸ್ವಿ

Update: 2017-11-03 17:33 GMT

  ಹೊಸದಿಲ್ಲಿ, ನ. 3: ದೇಶೀಯವಾಗಿ ನಿರ್ಮಿಸಲಾಗಿರುವ ಲಘು ಭಾರದ ‘ಸ್ಮಾರ್ಟ್’ ಬಾಂಬ್‌ನ ಪರೀಕ್ಷಾ ಪ್ರಯೋಗವನ್ನು ಒಡಿಶಾದ ಚಾಂಡಿಪುರದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ ಎಂದು ಸರಕಾರ ತಿಳಿಸಿದ್ದು , ಇದರೊಂದಿಗೆ ಈ ರೀತಿಯ ಆಧುನಿಕ ಶಸ್ತ್ರಾಸ್ತ್ರ ನಿರ್ಮಾಣ ಕಾರ್ಯದಲ್ಲಿ ಮೈಲುಗಲ್ಲನ್ನು ಸಾಧಿಸಿದಂತಾಗಿದೆ ಎಂದಿದೆ.

 ‘ಸ್ಮಾರ್ಟ್ ಆ್ಯಂಟಿ ಏರ್‌ಫೀಲ್ಡ್ ವೆಪನ್(ಎಸ್‌ಎಎಡಬ್ಲು) ಎಂಬ ಹೆಸರಿನ ಈ ಬಾಂಬನ್ನು ಭಾರತೀಯ ವಾಯುಪಡೆಯ ಯುದ್ಧವಿಮಾನವು ಚಾಂಡಿಪುರದ ಪರೀಕ್ಷಾ ನೆಲೆಯ ಮೇಲೆ ಯಶಸ್ವಿಯಾಗಿ ಪ್ರಯೋಗಿಸಿದೆ. ಮೂರು ಪ್ರತ್ಯೇಕ ಪರೀಕ್ಷೆ ನಡೆಸಲಾಗಿದ್ದು ಮೂರೂ ಯಶಸ್ವಿಯಾಗಿದೆ . ವಿಮಾನದಿಂದ ಕೆಳಕ್ಕೆ ಎಸೆಯಲಾದ ಈ ಬಾಂಬನ್ನು ವಾಯುಯಾನ ವ್ಯವಸ್ಥೆಯ ಮೂಲಕ ನಿರ್ಧಿಷ್ಟ ಗುರಿಗೆ ತಲುಪಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಾರ್ಗದರ್ಶಕ ವ್ಯವಸ್ಥೆಯ ಮೂಲಕ ಬಾಂಬ್ ಎಸೆಯುವ ಪ್ರಕ್ರಿಯೆಯನ್ನು ‘ಸ್ಮಾರ್ಟ್ ಬಾಂಬ್’ ಹೊಂದಿರುತ್ತದೆ.

‘ರಿಸರ್ಚ್ ಸೆಂಟರ್ ಇಮಾರತ್(ಆರ್‌ಸಿಐ), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) , ಭಾರತೀಯ ವಾಯುಪಡೆಯ ಜಂಟಿ ಕಾರ್ಯಕ್ರಮದ ಅಂಗವಾಗಿ ‘ಸ್ಮಾರ್ಟ್ ಬಾಂಬ್’ ಅಭಿವೃದ್ಧಿಪಡಿಸಲಾಗಿದೆ.

 ಪರೀಕ್ಷಾ ಪ್ರಯೋಗ ಯಶಸ್ವಿಯಾದ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಡಿಆರ್‌ಡಿಒ ವಿಜ್ಞಾನಿಗಳಿಗೆ ಹಾಗೂ ಭಾರತೀಯ ವಾಯುಪಡೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಬಾಂಬನ್ನು ಶೀಘ್ರ ಸೇನಾಪಡೆಯ ಶಸ್ತ್ರ ವಿಭಾಗಕ್ಕೆ ಸೇರಿಸಲಾಗುವುದು ಎಂದು ಡಿಆರ್‌ಡಿಒ ಅಧ್ಯಕ್ಷ ಎಸ್.ಕ್ರಿಸ್ಟೋಫರ್ ತಿಳಿಸಿದ್ದಾರೆ. ಮಾರ್ಗದರ್ಶಕ ಬಾಂಬ್‌ಗಳನ್ನು ದೇಶೀಯವಾಗಿ ನಿರ್ಮಿಸುವ ನಿಟ್ಟಿನಲ್ಲಿ ಇದು ಒಂದು ಮಹತ್ವದ ಮೈಲುಗಲ್ಲಾಗಿದೆ ಎಂದು ಡಿಆರ್‌ಡಿಒದ ಕ್ಷಿಪಣಿ ಮತ್ತು ಯುದ್ಧತಂತ್ರಕುಶಲ ವಿಭಾಗದ ಮಹಾನಿರ್ದೇಶಕ ಜಿ.ಸತೀಶ್ ರೆಡ್ಡಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News