ಲಿಂಗಪ್ರತಿಷ್ಠೆ ನಾಯಕ ನರಕ

Update: 2017-11-04 11:02 GMT

ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕಡೆದಡೆ, ದೇವರೆತ್ತ ಹೋದರೊ?
ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರಾ.
                                          - ಅಲ್ಲಮಪ್ರಭುದೇವರು

ವ್ಯೋಮಮೂರುತಿ ಅಲ್ಲಮಪ್ರಭುದೇವರು ಶರಣಸಂಕುಲದಿಂದ ಕೂಡಿದ್ದ ಅನುಭವಮಂಟಪದ ಶೂನ್ಯಸಿಂಹಾಸನಾಧೀಶ್ವರರಾಗಿ ಅಮರರಾಗಿದ್ದಾರೆ. ಅವರು ಇಷ್ಟಲಿಂಗವನ್ನು ಅರಿವಿನ ರೂಪದಲ್ಲಿ ನೋಡಿದ್ದಾರೆ. ಮಾನವಜನಾಂಗದ ಮಧ್ಯೆ ಇರುವ ಅನಿಷ್ಟ ಭೇದಗಳನ್ನೆಲ್ಲ ಅಳಿಸಿಹಾಕುತ್ತ ಸಕಲಜೀವಿಗಳಿಗೆ ಒಳ್ಳೆಯದಾಗುವಂಥ ಇಷ್ಟಾರ್ಥವನ್ನು ಈಡೇರಿಸುವ ಇಷ್ಟಲಿಂಗವು ಪರಶಿವನ ಸಂಕೇತ. ಚೈತನ್ಯರೂಪಿ ದೇವರನ್ನೊಳಗೊಂಡ ವಿಶ್ವದ ಅರಿವಿನ ಕುರುಹು.

ಗುರು ಕಾರುಣ್ಯದ ಮೂಲಕ ಪಡೆದ ಇಷ್ಟಲಿಂಗವನ್ನು ಅಂಗದ ಮೇಲೆ ಧರಿಸುತ್ತ ಸದಾಚಾರಿಯಾಗಿರಬೇಕು ಎಂಬುದು ಶರಣರ ಆಶಯವಾಗಿದೆ. ಈ ಆಶಯದ ಹಿನ್ನೆಲೆಯಲ್ಲಿ ಅಲ್ಲಮಪ್ರಭುಗಳು ಇಂಥ ಅನೇಕ ವಚನಗಳನ್ನು ರಚಿಸಿದ್ದಾರೆ. ಇಷ್ಟಲಿಂಗವು ಜೀವಾತ್ಮ ಮತ್ತು ಪರಮಾತ್ಮನ ಮಧ್ಯೆ ಅದ್ವೈತವನ್ನು ಸಾಧಿಸುವಂಥದ್ದು. ಇಷ್ಟಲಿಂಗ ಪೂಜಕ ತನ್ನೊಳಗಿನ ದೇವರ ಜೊತೆ ಒಂದಾಗುವ ಕ್ರಮ ಶರಣರ ಏಕದೇವೋಪಾಸನೆಯಲ್ಲಿ ಅಡಗಿದೆ. ಹೀಗೆ ದೇಹವೆಂಬ ಗುಹೆಯಲ್ಲಿನ ಗುಹೇಶ್ವರನಾದ ಪರಮಾತ್ಮ ಮತ್ತು ಜೀವಾತ್ಮ ಒಂದಾದಾಗ ವ್ಯಕ್ತಿಯು ವ್ಯಷ್ಟಿಪ್ರಜ್ಞೆಯಿಂದ ಹೊರಬಂದು ಸಮಷ್ಟಿ ಪ್ರಜ್ಞೆಯೊಂದಿಗೆ ವಿಶ್ವಮಾನವನಾಗುತ್ತಾನೆ. ಪ್ರತಿಯೊಬ್ಬರೂ ಹೀಗೆ ವಿಶ್ವಮಾನವರಾಗಬೇಕೆಂಬುದೇ ಅಲ್ಲಮಪ್ರಭು ಮೊದಲು ಮಾಡಿ ಶರಣರೆಲ್ಲರ ಆಶಯವಾಗಿತ್ತು.

ಸ್ಥಾವರ ಪ್ರತಿಷ್ಠೆಯಿಂದ ಇಂಥ ಮಹತ್ವದ್ದನ್ನು ಸಾಧಿಸಲಿಕ್ಕಾಗದು ಎಂಬುದು ಶರಣರೆಲ್ಲರ ದೃಢನಿಲುವು. ‘ಶಿವ’ ಎಂದರೆ ಮಂಗಳಕರವಾದುದು. ‘ಯೋಗ’ ಎಂದರೆ ಕೂಡುವುದು. ‘ಶಿವಯೋಗ’ ಎಂದರೆ ಮಂಗಳಕರವಾದುದರ ಜೊತೆಗೆ ಕೂಡುವುದು. ಜೀವಾತ್ಮನು ಮಂಗಳಕರವಾದ ಪರಮಾತ್ಮನ ಜೊತೆ ಸೇರುವುದೇ ಶಿವಯೋಗ. ಇಷ್ಟಲಿಂಗ ಪೂಜೆಯಿಂದ ಇಂಥ ಶಿವಯೋಗವನ್ನು ಸಾಧಿಸಲು ಸಾಧ್ಯ. ಆದರೆ ಸ್ಥಾವರದಿಂದ ಇದನ್ನು ಸಾಧಿಸಲಿಕ್ಕಾಗದು ಎಂಬುದನ್ನು ತಿಳಿಸುವುದಕ್ಕಾಗಿಯೇ ಅಲ್ಲಮಪ್ರಭುಗಳು ‘‘ಲಿಂಗಪ್ರತಿಷ್ಠೆಯ ಮಾಡಿದವಂಗೆ ನಾಯಕ ನರಕ ಗುಹೇಶ್ವರಾ.’’ ಎಂದು ತಿಳಿಸಿದ್ದಾರೆ. ಕಲ್ಲ ಮನೆಯಲ್ಲಿ ಕಲ್ಲ ಮೇಲೆ ಇನ್ನೊಂದು ಕೆತ್ತಿದ ಕಲ್ಲನ್ನಿಟ್ಟು ಅದಕ್ಕೆ ದೇವರೆಂದು ಕರೆಯುವುದಾದರೆ, ನಾವು ಸಂಧಿಸಬೇಕಾದ ದೇವರು ಎಲ್ಲಿ ಎಂದು ಪ್ರಭುಗಳು ಪ್ರಶ್ನಿಸುತ್ತಾರೆ. ‘‘ಸೃಷ್ಟಿಗೆ ಹುಟ್ಟಿದ ಕಲ್ಲು, ಕಲ್ಲುಕುಟಿಕನಿಂದ ಮೂರ್ತಿಯಾಗಿ, ಮಂತ್ರಕ್ಕೆ ಲಿಂಗವಾಯಿತಲ್ಲಾ. ಇವರಿಗೆ ಹುಟ್ಟಿದ ಕೂಸ ಲಿಂಗವೆಂದು ಕೈವಿಡಿವ ವ್ರತಗೇಡಿಗಳನೇನೆಂಬೆ ಗುಹೇಶ್ವರಾ!’’ ಎಂದು ಪ್ರಶ್ನಿಸುತ್ತಾರೆ. ‘‘ಗುಹೇಶ್ವರಾ ನೀನು ಕಲ್ಲಾದಡೆ ನಾನು ಏನಪ್ಪೆನು?’’ ಎಂದು ಕೇಳುತ್ತಾರೆ. ‘‘ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ, ಎನಗಿದು ಸೋಜಿಗ!’’ ಎಂದು ಹೇಳುವುದರ ಮೂಲಕ ದೇವರು ನಿರಾಕಾರನಾಗಿದ್ದಾನೆ. ಇಷ್ಟಲಿಂಗ ಆತನ ಸಂಕೇತ ಮಾತ್ರ ಎಂದು ಸೂಚಿಸುತ್ತಾರೆ.

ಲಿಂಗಪ್ರತಿಷ್ಠೆಯು ದೇಗುಲ ಸಂಸ್ಕೃತಿಯನ್ನು ಸ್ಥಿರಗೊಳಿಸುತ್ತದೆ. ದೇಗುಲ ಸಂಸ್ಕೃತಿ ಇಡೀ ಸಮಾಜದ ಕೇಂದ್ರಬಿಂದುವಾಗಿತ್ತು. ಆದರೆ ಅರಿವು ಇಡೀ ಸಮಾಜದ ಕೇಂದ್ರಬಿಂದುವಾಗಿರಬೇಕೆಂಬುದು ಶರಣರ ಆಶಯವಾಗಿತ್ತು. ಕಲ್ಲಿನಿಂದ ನಿರ್ಮಿಸಿದ ದೇವರನ್ನು ಕಲ್ಲ ಮೇಲೆ ಇಟ್ಟು ಅದರ ಸುತ್ತ ಕಲ್ಗುಡಿ ಕಟ್ಟಿ ಪೂಜಿಸುವುದರಿಂದ ನಮ್ಮಿಳಗಿನ ದೇವರ ಜೊತೆ ನಾವು ಒಂದಾಗುವುದು ಸಾಧ್ಯವಾಗುವುದಾದರೂ ಹೇಗೆ ಎಂಬುದು ಅಲ್ಲಮ ಪ್ರಭುಗಳ ಪ್ರಶ್ನೆಯಾಗಿದೆ.

ಭಾರತೀಯ ಸಮಾಜವು ಸ್ವಯಂ ಪರಿಪೂರ್ಣ ಗ್ರಾಮಸಮಾಜ ವ್ಯವಸ್ಥೆಯಿಂದ ರೂಪುಗೊಂಡಿದೆ. ವರ್ಣ, ಜಾತಿ, ಉಪ ಜಾತಿಗಳಿಂದ ಮತ್ತು ಅಸ್ಪಶ್ಯತೆಯಿಂದಾಗಿ ಈ ಸಾಮಾಜಿಕ ವ್ಯವಸ್ಥೆಯಲ್ಲಿ ಅಸಮಾನತೆಯ ವಿಷ ತುಂಬಿಕೊಂಡಿದೆ. ದೇಗುಲ ಸಂಸ್ಕೃತಿ ಈ ಅಸಮಾನತೆಯ ವಿಷವನ್ನು ಇತಿಹಾಸದುದ್ದಕ್ಕೂ ಪೋಷಿಸಿಕೊಂಡು ಬಂದಿದೆ. ವೈದಿಕಮಯ ದೇಗುಲ ವ್ಯವಸ್ಥೆಯಲ್ಲಿ ಎಲ್ಲ ಜನಾಂಗದವರೂ ಇರುತ್ತಾರೆ. ಆದರೆ ಅವರಿಗೆ ಅವರದೇ ಆದ ಜವಾಬ್ದಾರಿಗಳಿರುತ್ತವೆ. ಪಂಚಮರು ಬಿಟ್ಟಿಸೇವೆ ಮಾಡುವುದು ಅನಿವಾರ್ಯ. ಆದರೆ ಅವರಿಗೆ ದೇಗುಲದಲ್ಲಿ ಪ್ರವೇಶವಿಲ್ಲ. ಇತರ ಕೆಳಜಾತಿಗಳವರು ದೇವಸ್ಥಾನಕ್ಕೆ ಸಂಬಂಧಿಸಿದ ಶ್ರಮದ ಕೆಲಸಗಳಲ್ಲಿ ಫಲಾಪೇಕ್ಷೆ ಇಲ್ಲದೆ ತೊಡಗುತ್ತಾರೆ. ಕುಲೀನರು ಜಾತ್ರೆ ಮತ್ತು ಉತ್ಸವಗಳ ಮೇಲ್ವಿಚಾರಣೆ ಮಾಡುತ್ತಾರೆ. ಅರ್ಚಕರಿಗೆ ಪೂಜೆ ಮಾಡುವುದೇ ದುಡಿಮೆ. ಹೀಗೆ ಸ್ವಯಂ ಪರಿಪೂರ್ಣ ಗ್ರಾಮ ಸಮಾಜದ ಆಯಾ ಪದ್ಧತಿಗೆ ಪೂರಕವಾಗಿಯೇ ಗುಡಿ ವ್ಯವಸ್ಥೆಯು ಶ್ರೇಣೀಕೃತ ಸಮಾಜದ ವಿವಿಧ ಸ್ಥರಗಳ ಜಾತಿ ವರ್ಗಗಳ ಪ್ರತ್ಯೇಕತೆಯನ್ನು ರಕ್ಷಿಸಿಕೊಂಡಿರುತ್ತದೆ. ಯಥಾಸ್ಥಿತಿಯನ್ನು ಸಂರಕ್ಷಿಸುವುದೇ ಈ ವ್ಯವಸ್ಥೆಯ ಉದ್ದೇಶವಾಗಿದೆ. ಆದರೆ ಶೋಷಣೆಗೆ ಒಳಗಾಗುವ ಜನಸಮುದಾಯಗಳ ಅರಿವಿಗೆ ಬರದ ಹಾಗೆ ಈ ಶೋಷಣಾ ವ್ಯವಸ್ಥೆಯ ಸೂಕ್ಷ್ಮತೆಯನ್ನು ಮೇಲ್ಜಾತಿ ಮತ್ತು ಮೇಲ್ವರ್ಗದ ಜನರು ಕಾಯ್ದುಕೊಂಡು ಬಂದಿರುತ್ತಾರೆ.

ದೇಗುಲಗಳಿಗೆ ಸಂಬಂಧಿಸಿದ ಜಾತ್ರೆಗಳಲ್ಲಿ ಕಲೆ, ಸಂಸ್ಕೃತಿ, ಕ್ರೀಡೆ, ಸಾಹಸಕ್ರೀಡೆ, ಮನರಂಜನೆ ಇರುತ್ತವೆ. ರೈತರನ್ನು ಒಳಗೊಂಡಂತೆ ವಿವಿಧ ಕಾಯಕಜೀವಿಗಳಿಗೆ ಬೇಕಾದ ವಸ್ತುಗಳ ಮಾರಾಟ ಮತ್ತು ಅವರ ಉತ್ಪನ್ನಗಳ ಮಾರಾಟ, ದನಗಳ ವ್ಯವಹಾರವಿರುತ್ತದೆ. ಶೃಂಗಾರ ಸಾಧನಗಳು, ಆಲಂಕಾರಿಕ ವಸ್ತುಗಳು ಹೀಗೆ ಇಡೀ ಸಮಾಜದ ಜನರ ಬೇಡಿಕೆಗಳನ್ನು ಈಡೇರಿಸುವ ಕ್ಷಣಗಳಾಗಿ ಈ ಜಾತ್ರೆಗಳು ಮುಂದುವರಿಯುವ ಮೂಲಕ ದೇಗುಲ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಲೇ ಬಂದವು. ಲೌಕಿಕದ ಆಶಯಗಳನ್ನು ಈಡೇರಿಸುವ ದೇಗುಲಗಳು ಭಾವನಾತ್ಮಕವಾಗಿಯೂ ಜನಸಮುದಾಯಕ್ಕೆ ನೆಮ್ಮದಿಯನ್ನು ಕೊಡುವ ತಾಣಗಳಾದವು.

ಅರಿವು ಪ್ರಧಾನವಾದ ಬದುಕನ್ನು ಬದುಕಿದ ಅಲ್ಲಮ ಮುಂತಾದ ಶರಣರ ಅಂತರ್ದೃಷ್ಟಿಗೆ ಈ ಶೋಷಣೆ ಮತ್ತು ದೇವರಿಂದ ಮಾನವರನ್ನು ದೂರ ಒಯ್ಯುವ ಮಾರ್ಗಗಳು ಗೋಚರಿಸಿದವು. ಇಂಥ ಹೀನಸ್ಥಿತಿಯಿಂದ ಜನಸಮುದಾಯವನ್ನು ಮೇಲಕ್ಕೆತ್ತಿ ಸಾಮಾಜಿಕ ಸಮಾನತೆಯೊಂದಿಗೆ ನಿಜವಾದ ದೇವಮಾರ್ಗದಲ್ಲಿ ಒಯ್ಯಬೇಕೆಂಬುದೇ ಅವರ ಆಶಯವಾಗಿತ್ತು.

ಶರಣರು ಅನುಭವ ಮಂಟಪದ ಮೂಲಕ ಮಂದಿರಕ್ಕೆ ಪರ್ಯಾಯವಾದ ವ್ಯವಸ್ಥೆಯನ್ನು ಜಾರಿಗೊಳಿಸಿದರು. ಅಲ್ಲಿ ಎಲ್ಲ ಕಾಯಕಜೀವಿಗಳು ಸಮಾನವಾದ ಸ್ಥಾನ ಪಡೆದರು. ಆರ್ಥಿಕ ಮತ್ತು ಪಾರಮಾರ್ಥಿಕ ವಿಚಾರಗಳೆಲ್ಲ ಅಲ್ಲಿ ಚರ್ಚೆಗೆ ಬಂದವು. ಸಮಾನತೆಯ ದೇವರ ‘ದರ್ಶನ’ವನ್ನು ಅವರೆಲ್ಲ ಪಡೆದರು. ತಮ್ಮ ದೈನಂದಿನ ಕಾಯಕದ ಅನುಭವದ ಮೂಲಕವೇ ಅನುಭಾವಿಗಳಾದರು! ಮಾನವ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಇಂಥ ಪ್ರಯೋಗವೊಂದು ನಡೆಯಿತು. ದೇವಸ್ಥಾನಗಳಿಲ್ಲದ ಶರಣಸಮಾಜದ ಉದಯವಾಯಿತು. ಶರಣರಲ್ಲಿ ಎಲ್ಲ ತೆರನಾದ ಕಾಯಕದವರು ಮತ್ತು ಕಲಾವಿದರು ಇದ್ದರು. ಶರಣ ಸಂಕುಲದಲ್ಲಿ ನಿತ್ಯವೂ ಉತ್ಸವದ ವಾತಾವರಣವಿತ್ತು.

***

Writer - ರಂಜಾನ್ ದರ್ಗಾ

contributor

Editor - ರಂಜಾನ್ ದರ್ಗಾ

contributor

Similar News