1995ರಲ್ಲಿ ಕೊಲೆಯಾಗಿದ್ದ ಭಗಿನಿ ರಾಣಿ ‘ಮುಕ್ತಿವಂತೆ’ ಎಂದು ವ್ಯಾಟಿಕನ್ ಘೋಷಣೆ
ಇಂದೋರ(ಮ.ಪ್ರ),ನ.4: 1995ರಲ್ಲಿ ಮಧ್ಯಪ್ರದೇಶದಲ್ಲಿ ಸುಪಾರಿ ಹಂತಕನ ಚೂರಿ ಇರಿತಕ್ಕೆ ಬಲಿಯಾಗಿದ್ದ ಕೇರಳ ಸಂಜಾತೆ ಭಗಿನಿ ರಾಣಿ ಮರಿಯಾ ವಟ್ಟಾಲಿ ಅವರನ್ನು ’ಮುಕ್ತಿವಂತೆ’ ಎಂದು ವ್ಯಾಟಿಕನ್ ಶನಿವಾರ ಘೋಷಿಸಿತು. ‘ಮುಕ್ತಿವಂತೆ’ ಪಟ್ಟವು ಸಂತ ಪದವಿಗೇರುವ ಮೊದಲ ಸೋಪಾನವಾಗಿದೆ. ಆದರೆ ಸಂತ ಪದವಿಗೇರಲು ಒಂದು ಪವಾಡವನ್ನು ತೋರಿಸುವುದು ಅಗತ್ಯವಾಗಿದೆ.
ಇಂದೋರ್‌ನ ಸಂತ ಪಾಲ್ ಹೈಯರ್ ಸೆಕೆಂಡರಿ ಶಾಲೆಯ ಮೈದಾನದಲ್ಲಿ ಭಾರೀ ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದ ಧರ್ಮಗುರುಗಳು ಮತ್ತು ಕ್ರೈಸ್ತ ಸಮುದಾಯದ ಸದಸ್ಯರ ಉಪಸ್ಥಿತಿಯಲ್ಲಿ ವ್ಯಾಟಿಕನ್‌ನ ಕಾರ್ಡಿನಲ್ ಎಂಜೆಲೊ ಅಮಾಟೊ ಅವರು ಭಗಿನಿ ರಾಣಿ ಅವರನ್ನು ’ಮುಕ್ತಿವಂತೆ’ ಎಂದು ಘೋಷಿಸಿದ ಪೋಪ್ ಅವರ ಲ್ಯಾಟಿನ್ ಭಾಷೆಯಲ್ಲಿದ್ದ ಪತ್ರವನ್ನು ಓದಿದರು. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಲ್ಲಿದ್ದ ಈ ಪತ್ರದ ಆವೃತ್ತಿಗಳನ್ನೂ ಓದಲಾಯಿತು.
ಭಗಿನಿ ರಾಣಿ ಅವರ ಹಂತಕ ಸಮುಂದರ್ ಸಿಂಗ್ ಸಮಾರಂಭದಲ್ಲಿ ಉಪಸ್ಥಿತನಿದ್ದ.
ತನ್ನ ಕುಟುಂಬದ ಇತರ ಸದಸ್ಯರೊಡನೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಭಗಿನಿ ರಾಣಿಯವರ ಸೋದರಿ ಸೆಲ್ಮಿ ಅವರು, ಮುಕ್ತಿವಂತೆ ಪದವಿ ಘೋಷಣೆಯಿಂದ ತಮಗೆಲ್ಲ ತುಂಬ ಸಂತಸವಾಗಿದೆ ಎಂದು ಹೇಳಿದರು.
ಭಾರತದಲ್ಲಿನ ಎಲ್ಲ ನಾಲ್ವರು ಕಾರ್ಡಿನಲ್‌ಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.
1995ರಲ್ಲಿ ಆಗ 41ರ ಹರೆಯದಲ್ಲಿದ್ದ ಭಗಿನಿ ರಾಣಿ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಸಮುಂದರ್ ಸಿಂಗ್ ಅವರನ್ನು ಚೂರಿಯಿಂದ ಸುಮಾರು 50 ಬಾರಿ ಇರಿದು ಹತ್ಯೆಗೈಯ್ದಿದ್ದ. ಭೂರಹಿತರ ಉದ್ಧಾರಕ್ಕಾಗಿ ರಾಣಿ ಮಾಡುತ್ತಿದ್ದ ಕಾರ್ಯಗಳಿಂದ ಕ್ರುದ್ಧರಾಗಿದ್ದ ಕೆಲವು ಭೂಮಾಲಿಕರು ಅವರ ಹತ್ಯೆಗಾಗಿ ಸಮುಂದರ್ ಸಿಂಗ್‌ಗೆ ಸುಪಾರಿ ನೀಡಿದ್ದರು.
ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಸಿಂಗ್‌ನನ್ನು ಬಳಿಕ ಉತ್ತಮ ನಡತೆಗಾಗಿ ಬಿಡುಗಡೆಗೊಳಿಸಲಾಗಿತ್ತು .ಭಗಿನಿ ರಾಣಿಯವರ ಕುಟುಂಬವೂ ಆತನನ್ನು ಕ್ಷಮಿಸಿತ್ತು.
2006ರಲ್ಲಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಸಂಪೂರ್ಣವಾಗಿ ಬದಲಾಗಿರುವ ಸಿಂಗ್ ಸಮಾಜಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ. ಭಗಿನಿ ರಾಣಿ ಕುಟುಂಬದವರೂ ಆತನನ್ನು ತಮ್ಮ ಕುಟುಂಬ ಸದಸ್ಯನೆಂದು ಪರಿಗಣಿಸಿದ್ದು, ಸಿಂಗ್ ನಾಲ್ಕು ಬಾರಿ ಅಲ್ಲಿಗೆ ಭೇಟಿ ನೀಡಿದ್ದಾನೆ. ಇಂದಿಗೂ ಆತ ರಾಣಿಯವರ ಸಮಾಧಿಗೆ ತೆರಳಿ ಪ್ರಾರ್ಥನೆಗಳನ್ನು ಸಲ್ಲಿಸುತ್ತಾನೆ.
1954,ಜ.29ರಂದು ಕೇರಳದ ಪುಳುವಝಿಯಲ್ಲಿ ಪೈಲಿ-ಎಲಿಶಾ ದಂಪತಿಯ ಪುತ್ರಿಯಾಗಿ ಜನಿಸಿದ್ದ ರಾಣಿ 1974ರಲ್ಲಿ ಧಾರ್ಮಿಕ ಸೇವೆಗೆ ತನ್ನನ್ನು ಅರ್ಪಿಸಿಕೊಂಡಿದ್ದರು. ಬಿಜ್ನೋರ್‌ನಲ್ಲಿ ಮೊದಲು ಕಾರ್ಯವನ್ನು ನಿರ್ವಹಿಸಿದ್ದ ಅವರು ಬಳಿಕ ಸತ್ನಾಕ್ಕೆ ಹಾಗೂ ನಂತರ 1992ರಲ್ಲಿ ಉದಯನಗರಕ್ಕೆ ವರ್ಗಾವಣೆಗೊಂಡಿದ್ದರು.