ನಮ್ಮ ನಡುವಣ ಮಹಾ ಮೇಧಾವಿ ರಾಮಚಂದ್ರ ಗುಹಾ

Update: 2017-11-05 04:45 GMT

ದೇಶದ ಸಂವಿಧಾನ ಪ್ರಣೀತ ಪರಮೋಚ್ಚ ಮೌಲ್ಯಗಳಾದ ಪ್ರಜಾಸತ್ತೆ ಮತ್ತು ಜಾತ್ಯತೀತೆಯನ್ನು ತಮ್ಮ ಮಾತುಕೃತಿಗಳಲ್ಲಿ ಉದ್ದಕ್ಕೂ ಪ್ರತಿಪಾದಿಸುತ್ತಾ ಬಂದಿರುವ ಹಾಗೂ ಇದರಿಂದಾಗಿ ಬಲಪಂಥೀಯರ ನಿಂದನೆ, ಕಾನೂನು ಕ್ರಮಗಳ ಬೆದರಿಕೆಗಳಿಗೆ ಗುರಿಯಾಗಿರುವ ರಾಮಚಂದ್ರ ಗುಹಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಕರ್ನಾಟಕ ಸರಕಾರ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳಲ್ಲಿನ ತನ್ನ ನಂಬಿಕೆಯನ್ನು ಮತ್ತೊಮ್ಮೆ ದೃಢಪಡಿಸಿದಂತಾಗಿದೆ.ಇದು ಸ್ತುತ್ಯಾರ್ಹ.


ಸೆ.22, ಸಂಜೆ ಏಳರ ಸಮಯ. ಅದೊಂದು ಮದುವೆಯ ಆರತಕ್ಷತೆಯ ಸಮಾರಂಭ. ಸಹಜವಾಗಿಯೇ ವಾತಾವರಣ ಮುದಮೋದಗಳ ಕಿಲಕಿಲ ನಗು ಕೇಕೆಗಳಿಂದ ತುಂಬಿತುಳುಕುತ್ತಿದೆ. ಆಮೋದಪ್ರಮೋದಗಳ ಸಂಭ್ರಮವೇ ಸಂಭ್ರಮ. ನೂತನ ದಂಪತಿಗೆ ಶುಭ ಹಾರೈಸಲು ಬಂಧುಮಿತ್ರರು ಸಾಲುಗಟ್ಟಿ ನಿಂತಿದ್ದಾರೆ. ಆರತಕ್ಷತೆಯ ಆ ವಾತಾವರಣದಲ್ಲಿ ಹಠಾತ್ತನೆ ಕೋಲ್ಮಿಂಚೊಂದು ಕೋರೈಸಿ ಎಲ್ಲ ನಿಬ್ಬೆರೆಗಾದರು...

ತೆಳ್ಳಗೆ ಬೆಳ್ಳಗಿನ ಮಟ್ಟಸದ ವ್ಯಕ್ತಿ. ಗುಂಗುರು ಕೂದಲ ಹಸನ್ಮುಖಿ. ನೂತನ ದಂಪತಿಗೆ ಶುಭಕೋರಲು ಮಿಂಚಿನೋಪಾದಿ ಪ್ರವೇಶಿಸಿದವರು, ಉದ್ದನೆಯ ಸಾಲು ಕಂಡು, ‘‘ವೇರ್ ಡು ಐ ಸ್ಟಾಂಡ್ ಹಿಯರ್?’’ ಎಂದುಕೊಳ್ಳುತ್ತಿರುವಷ್ಟರಲ್ಲೇ, ‘‘ಸರ್, ನಿಮ್ಮಂದಲೇ ಶುಭಾಂಸೆ ಆರಂಭ. ನೀವೇ ಮೊದಲನೆಯವರು’’ ಎಂದು ಆತಿಥೇಯರು ಅವರನ್ನು ವೇದಿಕೆಗೆ ಕರೆದೊಯ್ದರು. ಮದುಮಗ ಅವರನ್ನು ಕಂಡದ್ದೇ ಎರಡು ಹೆಜ್ಜೆ ಮುಂದಕ್ಕೆ ಜಿಗಿದು, ನವ ವಧೂವನ್ನೂ ಮರೆತು, ಆ ಹಿರಿಯರನ್ನು ಅಪ್ಪಿಕೊಂಡು ‘‘ಸರ್ ಯು ಆರ್ ದಿ ಓನ್ಲೀ ಸೇನ್ ವಾಯ್ಸಿ ಅಟ್ ದಿಸ್ ಅವರ್....’’ ಎಂದೆಲ್ಲ ಬಡಬಡಿಸುವುದೇ?

ಮದುಮಗನಿಗೆಂತದು ಎಂದು ಹುಬ್ಬೇರಿಸ ಬೇಡಿ. ರಾಷ್ಟ್ರದ ಸಂದರ್ಭದಲ್ಲಿ ಅತಿಮುಖ್ಯರಾದ ಅತಿಥಿಯ ದರ್ಶನವಾದದ್ದೇ ಮದುಮಗನ ದೇಶದ ಕಾಳಜಿ ಜಾಗೃತಗೊಂಡಿತ್ತು. ಅತಿಥಿ: ಭಾರತದ ಪ್ರಜಾಸತ್ತೆಯ ಸರ್ವಶ್ರೇಷ್ಠ ಚರಿತ್ರೆಕಾರ ಎಂದು ಲಂಡನ್ನಿನ ‘ಟೈಂ’ ಪತ್ರಿಕೆಯೆ ಪ್ರಶಂಸೆಗೆ ಪಾತ್ರರಾಗಿರುವ ರಾಮಚಂದ್ರ ಗುಹಾ.
 ರಾಮಚಂದ್ರ ಗುಹಾ ಇಂದು ದೇಶದೊಳಗೆ ಹಾಗೂ ಹೊರಗೆ ವಿದ್ಯಾರ್ಥಿಗಳು, ವಿದ್ವಜ್ಜನರು ಹಾಗೂ ರಾಜಕೀಯ ವಲಯಗಳಲ್ಕಿ ಗಂಭೀರ ಚರ್ಚೆಯ ಕೇಂದ್ರ ಬಿಂದುವಾಗಿರುವ ಸತ್ಯನಿಷ್ಠ ಇತಿಹಾಸಕಾರರು. ಸಂಶೋಧನೆ, ಅಧ್ಯಯನ, ಕ್ಷೇತ್ರಾವಲೋಕನಗಳ ಮೂಲಕ ಪೂರ್ವಗ್ರಹಗಳಿಂದ ಮುಕ್ತರಾಗಿ ವಸ್ತುನಿಷ್ಠ ಮಾರ್ಗದಲ್ಲಿ ಸತ್ಯಕ್ಕೆ ಅಪಚಾರವಾಗದಂತೆ ಚರಿತ್ರೆಯನ್ನು ಕಟ್ಟುವ ಅವರ ಪರಿ ಜಗತ್ತಿನ ವಿದ್ವತ್‌ವಲಯಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.

ದೇಶದೊಳಗೂ ಅವರಿಗೆ ಚರಿತ್ರೆಕಾರರಾಗಿ ಅವರನ್ನು ಇಷ್ಟಪಡುವ ಹಾಗೂ ಇಷ್ಟಪಡದೆ ದ್ವೇಷಪೂರಿತ ಟಪಾಲು ಕಳುಹಿಸುವ ಎರಡು ವರ್ಗದ ಓದುಗರು ಇದ್ದಾರೆ. ಇಷ್ಟಪಡುವವರೆಲ್ಲರೂ ಎಡಪಂಥೀಯರು, ಇಷ್ಟಪಡದವರು ಬಲಪಂಥೀಯರು ಎಂದೇನಲ್ಲ. ರಾಜಕೀಯ ಸಿದ್ಧಾಂತಗಳನ್ನು ಹೊರಗಿಟ್ಟು ಅವರ ಬರಹಗಳನ್ನು ವಿಮರ್ಶಾತ್ಮಕವಾಗಿ ಓದುವವರೂ ಇದ್ದಾರೆ. ಅಂಧಾಭಿಮಾನದ ಪೂರ್ವಗ್ರಹಗಳಿಂದ ಓದಿ ವ್ಯಗ್ರಗೊಳ್ಳುವವರೂ ಇದ್ದಾರೆ. ದ್ವೇಷಪೂರಿತ ಟಪಾಲು ಕಳುಹಿಸುವವರು ಯಾರು ಎಂದು ಪತ್ಯೇಕವಾಗಿ ಹೇಳಬೇಕಾಗಿಲ್ಲ. ಎಂದೇ ಮೊನ್ನೆ ಕರ್ನಾಟಕ ಸರಕಾರ ರಾಮಚಂದ್ರ ಗುಹಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಿದಾಗ ಅನೇಕ ಮಂದಿ ಹುಬ್ಬೇರಿಸಿದ್ದುಂಟು. ಅಚ್ಚರಿಪಟ್ಟವರು, ಹಲ್ಲು ಕಡಿದವರೂ ಉಂಟು. ಈ ಬಗೆಯ ಪ್ರತಿಕ್ರಿಯೆ ಸತ್ವಶಾಲಿ ಬರಹಗಾರನೊಬ್ಬನಿಗೆ ಮಾತ್ರ ಬರಲು ಸಾಧ್ಯ. ಕಟುಟೀಕೆ ಮತ್ತು ಅತಿಶಯವಾದ ಪ್ರಶಂಸೆಗಳು ಸತ್ವ ಇದ್ದಲ್ಲಿ ಮಾತ್ರ ಸಾಧ್ಯ. ಗುಹಾ ಇಂಥ ಚಾರಿತ್ರಿಕ ಸತ್ವವುಳ್ಳ ಬರಹಗಾರರು.

ರಾಮಚಂದ್ರ ಗುಹಾ ಇತಿಹಾಸಕಾರರಾಗಿ ಪ್ರಪಂಚದ ಕಣ್ಣಿಗೆ ಬಿದ್ದದ್ದು ‘ಬಾಪೂ ನಂತರದ ಭಾರತ’ ಪ್ರಕಟವಾದಾಗ (ಇಂಡಿಯಾ ಆಫ್ಟರ್ ಗಾಧಿ). ಅದಕ್ಕೂ ಮೊದಲು ಅವರು ಒಬ್ಬ ಬುದ್ಧಿವಂತ ವಿದ್ಯಾರ್ಥಿಯಾಗಿ ವಿದ್ವತ್‌ವಲಯಗಳ ಗಮನ ಸೆಳೆದಿರಲಿಕ್ಕುಂಟು. ಅರಣ್ಯ ಸಂಶೋಧನಾ ಇಲಾಖೆಯ ಅಧಿಕಾರಿ-ಹೈಸ್ಕೂಲ್ ಉಪಾಧ್ಯಾಯಿನಿಯರ ಮಗನಾಗಿ ಜನಿಸಿದ (29-4-1958) ಗುಹಾ ಉತ್ತರಾ ಖಂಡದಲ್ಲಿ ಬಾಲ್ಯ ಕಳೆದ ಡೂನ್ ಸ್ಕೂಲ್ ವಿದ್ಯಾರ್ಥಿ. (ಆಗಲೇ ಬರವಣಿಗೆಯ ಪ್ರತಿಭೆ ದಾಂಗುಡಿ ಇಟ್ಟಿರ ಬೇಕು. ‘ದಿ ಡೀನ್ ಸ್ಕೂಲ್ ವೀಕಿ’್ಲಯ ವಿದ್ಯಾರ್ಥಿ ಸಂಪಾದಕ).

ದಿಲ್ಲಿಯ ಸೈಂಟ್ ಸ್ಟೀಫನ್ ಕಾಲೇಜಿನಿಂದ 1977ರಲ್ಲಿ ಅರ್ಥ ಶಾಸ್ತ್ರದಲ್ಲಿ ಪದವಿ. ದಿಲ್ಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ. ಉನ್ನತ ವ್ಯಾಸಂಗಕ್ಕಾಗಿ ಫೆಲೋಶಿಪ್ ಯೋಜನೆಯಡಿ ಕಲ್ಕತ್ತೆಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸೇರಿದರು. ಡಾಕ್ಟರೇಟ್ ಪದವಿಗೆ ಸರಿಸಮನಾದ ಈ ಫೆಲೊಶಿಪ್ ಅಧ್ಯಯನದ ವಿಷಯ, ಉತ್ತರಾಖಂಡದ ಅರಣ್ಯಗಳ ಸಾಮಾಜಿಕ ಇತಿಹಾಸ. ಚಿಪ್ಕೊ ಚಳವಳಿ ಅಧ್ಯಯನದ ಕೇಂದ್ರ ಬಿಂದು. (ಚಿಪ್ಕೊ ಚಳವಳಿ ಕುರಿತ ಈ ಫೆಲೋಶಿಪ್ ಪ್ರಬಂಧ ಮುಂದೆ ‘ಅಶಾಂತ ಅರಣ್ಯಗಳು’ ಗ್ರಂಥ ರೂಪದಲ್ಲಿ ಪ್ರಕಟವಾಯಿತು).

 ಉನ್ನತ ಶಿಕ್ಷಣದ ನಂತರ ರಾಮಚಂದ್ರ ಗುಹಾ ಅವರ ಆಯ್ಕೆ ಅಧ್ಯಾಪನ ವೃತ್ತಿ. ಓಸ್ಲೊ, ಸ್ಟ್ಯಾನ್‌ಫರ್ಡ್, ಯೇಲ್ ಮೊದಲಾದ ವಿದೇಶಿ ವಿಶ್ವವಿದ್ಯಾನಿಲಯಗಳಲ್ಲಿ ಬೋಧಕ ವೃತ್ತಿ ಕೈಗೊಂಡರು. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಲ್ಲಿ ಇಂಡೋ-ಅಮೆರಿಕನ್ ಕಮ್ಯುನಿಟಿ ಚೇರ್ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದವರು. ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೆಜ್ಮೆಂಟ್‌ನಲ್ಲೂ ಪ್ರಾಧ್ಯಾಪಕರಾಗಿ ಸೇವೇಸಲ್ಲಿಸಿದವರು. ಹೀಗೆ ದೇಶದೇಶಗಳ ಭೌಗೋಳಿಕ ಎಲ್ಲೆಗಳನ್ನು ಮೀರಿ ಹಾರಾಡುತ್ತಾ ಬೋಧನೆಯ ಜೊತೆಗೆ ಅಧ್ಯಯನ, ಸಂಶೋಧನೆಗಳಲ್ಲೂ ವ್ರತನಿಷ್ಠರಾಗಿ ತೊಡಗಿಸಿಕೊಂಡವರು. ಹಲವು ದೇಶಗಳಲ್ಲಿ ಅಧ್ಯಯನ ನಡೆಸಿ, ಹತ್ತು ವರ್ಷಗಳಲ್ಲಿ ಮೂರು ಖಂಡಗಳಲ್ಲಿ ಪ್ರೊಫೆಸರಾಗಿ ಅಧ್ಯಾಪನ ನಡೆಸಿ ಆಖೈರಾಗಿ ಬೆಂಗಳೂರನ್ನು ಹಾಲಿ ತವರುಮನೆಯಾಗಿಸಿಕೊಂಡಿರುವ ರಾಮಚಂದ್ರ ಗುಹಾ ಈಗ ಪೂರ್ಣಾವಧಿ ಲೇಖಕರು. ಪ್ರಸಿದ್ಧ ಅಂಕಣಕಾರರು.

‘ಸ್ಯಾವೇಜಿಂಗ್ ದಿ ಸಿವಿಲೈಸ್ಡ್’, ‘ಎನ್ವಿರಾನ್ಮೆಂಟಲಿಸಂ’, ‘ಅನ್ ಆಂತ್ರಪಾಲಜಿಸ್ಟ್ ಅಮಾಂಗ್ ಮಾರ್ಕಿಸ್ಟ್ಸ್’, ‘ಎ ಕಾರ್ನರ್ ಆಫ್ ಎ ಫಾರಿನ್ ಫೀಲ್ಡ್’, ‘ದಿ ಅನ್ಕ್ವಯಟ್ ವುಡ್ಸ್’ ‘ದಿ ಪಿಕಾಡರ್ ಬುಕ್ ಆಫ್ ಕ್ರಿಕೆಟ್’, ‘ಇಂಡಿಯಾ ಆಫ್ಟರ್ ಗಾಂಧಿ’, ‘ಗಾಂಧಿ ಬಿಫೋರ್ ಇಂಡಿಯಾ’, ‘ಮೇಕರ್ಸ್ ಆಫ್ ಮಾರ್ಡನ್ ಇಂಡಿಯಾ’, ‘ಪೇಟ್ರಿಯಟ್ಸ್ ಆ್ಯಂಡ್ ಪಾರ್ಟಿಸಾನ್ಸ್’, ‘ಡೆಮೋಕ್ರಾಟ್ಸ್ ಅಂಡ್ ಡಿಸ್ಸೆಂಟರ್ಸ್’ ಗುಹಾ ಅವರ ಪ್ರಮುಖ ಕೃತಿಗಳು.

‘ಇಂಡಿಯಾ ಆಫ್ಟರ್ ಗಾಂಧಿ’ ಮತ್ತು ‘ಗಾಂಧಿ ಬಿಫೋರ್ ಇಂಡಿಯಾ’ ರಾಮಚಂದ್ರ ಗುಹಾ ಅವರು ತಮ್ಮ ವೃತ್ತಿ ಜೀವನದುದ್ದಕ್ಕೂ ನಡೆಸಿದ ವ್ಯಾಪಕ ಸಂಶೋಧನೆ ಮತು ಅಧ್ಯಯನದ ಫಲಗಳು. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವದ ಇತಿಹಾಸಕಾರ ಎಂದು ಅಂತಾರಾಷ್ಟ್ರೀಯ ವಿಮರ್ಶಕರ ಮುಕ್ತ ಪ್ರಶಂಸೆಗೆ ಪಾತ್ರರಾಗಿರುವ ಗುಹಾ ಅವರ ‘ಇಂಡಿಯಾ ಆಫ್ಟರ್ ಗಾಂಧಿ’ (ಕನ್ನಡದಲ್ಲಿ:ಬಾಪೂ ನಂತರದ ಭಾರತ) ಮೈ ಜುಮ್ಮೆನಿಸುವ ಒಂದು ಭಾರತಕಥಾ. ಓದುಗರನ್ನು ಗತಕಾಲದಲ್ಲಿ ಮುಳುಗಿಸಿ ವರ್ತಮಾನದಲ್ಲಿ ತೇಲಿಸುವ ಈ ಕಥಾನಕದಲ್ಲಿ ಸ್ವಾತಂತ್ರ್ಯೋತ್ತರ ಭಾರತದ ಅರವತ್ತೈದು ವರ್ಷಗಳ ಇತಿಹಾಸದ ಜ್ವಲಂತ ಚಿತ್ರವಿದೆ. ಕನ್ನಡಕ್ಕೆ ಅನುವಾದಗೊಂಡು ಎರಡು ಸಂಪುಟಗಳಲ್ಲಿ ಪ್ರಕಟವಾಗಿರುವ ಈ ಬೃಹದ್ಗ್ರಂಥ ಕೇವಲ ಚರಿತ್ರೆಯಲ್ಲ. ಇದೊಂದು ಭಾರತವೆಂಬ ಬಹುಭಾಷೆಯ, ಬಹುಸಂಸ್ಕೃತಿಯ, ಬಹುಮುಖೀ ಸಮಾಜದ ವಿರಾಡ್ರೂಪ.

‘ಗಾಂಧಿ ಬಿಫೋರ್ ಇಂಡಿಯಾ’ (ಕನ್ನಡದಲ್ಲಿ: ಗಾಂಧಿ ಮಹಾತ್ಮ ರಾದುದು)ಒಬ್ಬ ವಕೀಲನಾಗಿ ಉದರಂಭರಣಕ್ಕಾಗಿ 1893ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಹೆಜ್ಜೆ ಇರಿಸಿದ ಮೋಹನದಾಸ್ ಕರಮಚಂದ್ ಗಾಂಧಿಯ ಸ್ವಾತಂತ್ರ್ಯ ಹೋರಾಟ ಪೂರ್ವ ಭಾರತದ ಜೀವನವನ್ನು ಚಿತ್ರಿಸುವ ಒಂದು ಚಾರಿತ್ರಿಕ ಕೃತಿ. ಮೋಹನದಾಸ್ ದಕ್ಷಿಣ ಆಫ್ರಿಕಾದಲ್ಲಿ ಕಳೆದ ದಿನಗಳು ಅವರ ಬದುಕಿನ ಗುರಿಗಮ್ಯತೆಗಳನ್ನು ರೂಪಿಸಿದ ಪರ್ವಕಾಲ. 1893ರಿಂದ ಹಿಡಿದು ಭಾರತಕ್ಕೆ ಹಿಂದಿರುಗುವವರೆಗಿನ ಅವಧಿಯ ಈ ದಿನಗಳು, ಟಾಲ್ಸ್ಟಾಯ್ ಅವರ ಜೀವನದರ್ಶನದೊಂದಿಗೆ ಸೆಣಸಾಟ, ಯೆಹೂದಿ ತೀವ್ರಗಾಮಿಗಳೊಂದಿಗೆ ಒಡನಾಟ, ಕ್ರಿಶ್ಚಿಯನ್ನರು ಮತ್ತು ಮುಸ್ಲಿಮರೊಡನೆ ಸಂಘರ್ಷ-ಸ್ನೇಹಸಂವಾದಗಳು, ಗಂಡನಾಗಿ-ತಂದೆಯಾಗಿ ವೈಯಕ್ತಿಕ ಬದುಕಿನ ಏಳುಬೀಳುಗಳು-ಈ ಎಲ್ಲ ಕ್ರಿಯೆಪ್ರಕ್ರಿಯೆಗಳ ಅಗ್ನದಿವ್ಯಗಳನ್ನು ಎದುರಿಸಿ ಗಟ್ಟಿಯಾಗುತ್ತಾ ಮಹಾತ್ಮನಾಗುವ ಮೋಹನದಾಸನ ಮೈನವಿರೇಳಿಸುವ ಚಿತ್ರಣ ‘ಗಾಂಧಿ ಬಿಫೋರ್ ಇಂಡಿಯಾ’.

ಗುಹಾ ಅವರ ಚಾರಿತ್ರಿಕ ಸಂಕಥನದ ವೈಶಿಷ್ಟ್ಯವಿರುವುದು ಅವರು ಒಂದು ಕಾಲಘಟ್ಟದ ವ್ಯಕ್ತಿತ್ವಗಳನ್ನು, ಘಟನೆಗಳನ್ನು, ಬೆಳವಣಿಗೆ- ವಿದ್ಯಮಾನಗಳನ್ನು ಸಮೀಕರಿಸುವ, ಅಕ್ಕಪಕ್ಕ ಇಟ್ಟುನೋಡುವ, ತತ್ವಸಿದ್ಧಾಂತಗಳಿಗೆ ಬದ್ಧರಾದ ವ್ಯಕ್ತಿಗಳ ವ್ಯಕ್ತಿತ್ವದಲ್ಲಿ ಇಣಕುಹಾಕಿ ಅವರ ವ್ಯಕ್ತಿ ವಿಶಿಷ್ಟತೆಯನ್ನು ಶೋಧಿಸುತ್ತಲೇ ಆ ಕಾಲದ ಚಾರಿತ್ರಕ ಘಟನೆಗಳ ಬೆಳವಣಿಗೆಗಳನ್ನು ಅಧ್ಯಯನಮಾಡುತ್ತಾ ಒಂದು ಕಾಲದ ಮನೋಧರ್ಮ ಮತ್ತು ಘಟನಾವಳಿ ಗಳ ಸಮ್ಯಕ್ ದರ್ಶನ ಮಾಡಿಸುತ್ತಾರೆ. ಇದಕ್ಕೆ ನಿದರ್ಶನವಾಗಿ ಅವರ ‘ನವ ಭಾರತದ ನಿರ್ಮಾಪಕರು’(ಮೇಕರ್ಸ್‌ ಆಫ್ ಮಾಡರ್ನ್ ಇಂಡಿಯಾ) ಮತ್ತು ‘ದೇಶ ಪ್ರೇಮಿಗಳು ಮತ್ತು ಪಕ್ಷಪಾತಕರು’ (ಪೇಟ್ರಿಯಟ್ಸ್ ಆ್ಯಂಡ್ ಪಾರ್ಟಿಸಾನ್ಸ್) ಕೃತಿಗಳನ್ನು ಗಮನಿಸಬಹುದು.

‘ನವ ಭಾರತದ ನಿರ್ಮಾಪಕರು’ ಸ್ವಾತಂತ್ರ್ಯ ಹೋರಾಟ, ಭಾರತ ಗಣ ರಾಜ್ಯ ರಚನೆ ಮತ್ತು ವಿಕಾಸಗಳಿಗೆ ಅನನ್ಯ ಕೊಡುಗೆ ನೀಡಿರುವ ಮಹನೀಯರ ಪ್ರಬುದ್ಧ ಮನಸ್ಸುಗಳ ವಿಚಾರ-ಚಂತನೆಗಳನ್ನೂ ರಚನಾತ್ಮಕ ಕಾರ್ಯಗಳನ್ನು ಅನಾವರಣಗೊಳಿಸುತ್ತಲೇ ಸ್ವಾತಂತ್ರ್ಯದ ಬೇರೆಬೇರೆ ಆಯಾಮಗಳಾದ ಶಿಕ್ಷಣ, ಕೃಷಿ, ಸ್ತ್ರೀ ಸಮಾನತೆ ಮೊದಲಾದ ಸಮಾಜ ಸುಧಾರಣಾ ಕಾಳಜಿಗಳನ್ನೂ ಕಾರ್ಯಕ್ರಮಗಳನ್ನೂ ದಾಖಲಿಸುವ ಕ್ರಮ ವರ್ತಮಾನಕ್ಕೂ ಸಲ್ಲುವ ರೀತಿಯದು. ಮುಸ್ಲಿಂ ಆಧುನಿಕತಾವಾದಿ ಸಯ್ಯದ್ ಅಹಮದ್ ಖಾನ್, ಜ್ಯೋತಿ ರಾವ್ ಫುಲೆ, ಸ್ತ್ರೀ ವಾದಿ ತಾರಾಬಾಯಿ ಶಿಂಧೆ, ತೀವ್ರ ಸುಧಾರಣಾವಾದಿ ಇ.ವಿ.ರಾಮಸ್ವಾಮಿ ನಾಯ್ಕರ್, ಹಿಂದೂ ಪಾರಮ್ಯವಾದಿ ಎಂ.ಎಸ್.ಗೋಲ್ವಳ್ಕರ್ ಹಾಗೂ ಸ್ವಾತಂತ್ರ್ಯೋತ್ತರ ಪೀಳಿಗೆಯ ಹಮೀದ್ ದಳವಾಯ್ ಮೊದಲಾದವರ ಸಾಮುದಾಯಿಕ ಕಳಕಳಿ ಪ್ರಧಾನವಾದ ಸುಧಾರಣಾಮ ನೋಭಾವದ ವಿಚಾರಗಳು ಮತ್ತು ಪ್ರಭಾವಶಾಲಿ ವ್ಯಕ್ತಿತ್ವ-ವರ್ಚಸ್ಸುಗಳು ನಮ್ಮನ್ನು ಬೆರಗುಗೊಳಿಸುತ್ತವೆ ಮತ್ತು ಪ್ರೇರೇಪಿಸುತ್ತವೆ.

‘ದೇಶಪ್ರೇಮಿಗಳು ಮತ್ತು ಪಕ್ಷಪಾತಕರು’ ಪ್ರಬಂಧಗಳಲ್ಲಿ ರಾಜಕೀಯ, ಶಿಕ್ಷಣ ಮೊದಲಾದ ಕ್ಷೇತ್ರಗಳಲ್ಲಿ ಸಮಕಾಲೀನ ಮನಸ್ಸುಗಳು ತೊಡಗಿಕೊಂಡಿರುವ ಪರಿಗಳನ್ನು, ಆ ಮನಸ್ಸುಗಳ ಚಿಂತನೆಗಳ ಪ್ರೌಢಿಮೆ, ಏರಿಳಿತಗಳನ್ನು ವರ್ಣರಂಜಿತವಾಗಿ ನಿರೂಪಿಸಲಾಗಿದೆ. ನವಿರಾದ ವಿಡಂಬನೆಯಲ್ಲಿ, ಕಟು ಟೀಕೆಗಳಲ್ಲಿ, ವಸ್ತು ವಿಶ್ಲೇಷಣೆಯಲ್ಲಿ ದೇಶದ ಇವತ್ತಿನ ಸ್ಥಿತಿಗತಿಗಳನ್ನು ಚಿತ್ರಿಸುವ ಈ ಕೃತಿಯನ್ನು ಓದುವುದೆಂದರೆ ನವರಸ ಭಾರತ ಯಾತ್ರೆ ಇದ್ದಂತೆ. ಈಗಷ್ಟೇ ಮಾರುಕಟ್ಟೆಗೆ ಬಂದಿರುವ ಇತ್ತೀಚಿನ ಕೃತಿ ‘ಪ್ರಜಾಪ್ರಭುತ್ವ ವಾದಿಗಳು ಮತ್ತು ಭಿನ್ನಮತೀಯರು’ (ಡೆಮೊಕ್ರಾಟ್ಸ್ ಆ್ಯಂಡ್ ಡಿಸ್ಸೆಂಟರ್ಸ್). ರಾಮಚಂದ್ರ ಗುಹಾ ಅವರ ಬಹುತೇಕ ಈ ಎಲ್ಲ ಕೃತಿಗಳ ಕನ್ನಡ ಅನು ವಾದ ಲಭ್ಯವಿರುವುದು ಅಧ್ಯಯನಾಸಕ್ತರಿಗೆ ಉಪಯುಕ್ತವೆನಿಸಬಹುದು.

 ನಮ್ಮ ನಡುವಣ ಮೇಧಾವಿ ರಾಮಚಂದ್ರ ಗುಹಾ ಅವರನ್ನು ಹಲವು ಪ್ರಶಸ್ತಿಗಳು ಅರಸಿ ಬಂದಿರುವುದುಂಟು. ಪದ್ಮವಿಭೂಷಣ, ಯು.ಕೆ.ಕ್ರಿಕೆಟ್ ಸೊಸೈಟಿಯ ಸಾಹಿತ್ಯ ಪ್ರಶಸ್ತಿ, ಪರಿಸರ ಇತಿಹಾಸಕ್ಕಾಗಿ ಅಮೆರಿಕನ್ ಸೊಸೈಟಿ ನೀಡುವ ಲಿಯೊಪೋಲ್ಡ್-ಹೈಡಿ ಪ್ರಶಸ್ತಿ ಮುಖ್ಯವಾದುವು. ಈಗ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಅವರದಾಗಿದೆ. ದೇಶದ ಸಂವಿಧಾನ ಪ್ರಣೀತ ಪರಮೋಚ್ಚ ಮೌಲ್ಯಗಳಾದ ಪ್ರಜಾಸತ್ತೆ ಮತ್ತು ಜಾತ್ಯತೀತೆಯನ್ನು ತಮ್ಮ ಮಾತುಕೃತಿಗಳಲ್ಲಿ ಉದ್ದಕ್ಕೂ ಪ್ರತಿಪಾದಿಸುತ್ತಾ ಬಂದಿರುವ ಹಾಗೂ ಇದರಿಂದಾಗಿ ಬಲಪಂಥೀಯರ ನಿಂದನೆ, ಕಾನೂನು ಕ್ರಮಗಳ ಬೆದರಿಕೆಗಳಿಗೆ ಗುರಿಯಾಗಿರುವ ರಾಮಚಂದ್ರ ಗುಹಾ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಕರ್ನಾಟಕ ಸರಕಾರ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ಮೌಲ್ಯಗಳಲ್ಲಿನ ತನ್ನ ನಂಬಿಕೆಯನ್ನು ಮತ್ತೊಮ್ಮೆ ದೃಢಪಡಿಸಿದಂತಾಗಿದೆ.ಇದು ಸ್ತುತ್ಯಾರ್ಹ.

Writer - ಜಿ.ಎನ್.ರಂಗನಾಥ್ ರಾವ್

contributor

Editor - ಜಿ.ಎನ್.ರಂಗನಾಥ್ ರಾವ್

contributor

Similar News