ಯಾವ ಸರ್ವಾಧಿಕಾರಿಯೂ ಅಮೆರಿಕದ ನಿರ್ಧಾರಗಳನ್ನು ಕೀಳಂದಾಜಿಸಲಾಗದು: ಟ್ರಂಪ್

Update: 2017-11-05 16:43 GMT

ಯೊಕೊಟ ವಾಯುನೆಲೆ, ನ.5: ಯಾವ ಸರ್ವಾಧಿಕಾರಿ ಇರಲಿ, ಅಥವಾ ಯಾವುದೇ ಆಡಳಿತವಿರಲಿ, ಅಮೆರಿಕದ ನಿರ್ಧಾರ, ಸಂಕಲ್ಪದ ಬಗ್ಗೆ ಕೀಳಂದಾಜಿಸುವಂತಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.

 ತಮ್ಮ ಮಹತ್ವದ ಏಶ್ಯಾ ಪ್ರವಾಸದ ಅಂಗವಾಗಿ ಜಪಾನ್‌ನ ಯೊಕೊಟ ವಾಯುನೆಲೆಯಲ್ಲಿ ಬಂದಿಳಿದ ಟ್ರಂಪ್, ಅಲ್ಲಿ ಸೈನಿಕರ ಹರ್ಷೋದ್ಗಾರದ ಮಧ್ಯೆ ಮಾತನಾಡಿ, ಯಾವ ಸರ್ವಾಧಿಕಾರಿಯೂ ಅಮೆರಿಕದ ನಿರ್ಧಾರಗಳನ್ನು ಕೀಳಾಗಿ ಅಂದಾಜಿಸಬಾರದು ಎಂದು ಎಚ್ಚರಿಕೆ ನೀಡಿದರು.

 ಜಪಾನ್ ದೇಶವು ಅಮೆರಿಕದ ಅತ್ಯಂತ ಮಹತ್ವದ ಮಿತ್ರರಾಷ್ಟ್ರ ಎಂದು ಬಣ್ಣಿಸಿದ ಟ್ರಂಪ್, ಒಂದು ವೇಳೆ ಉತ್ತರ ಕೊರಿಯದ ಜೊತೆ ಯುದ್ಧ ಸಂಭವಿಸಿದರೆ ಅಮೆರಿಕ ಖಂಡಿತಾ ಜಪಾನ್ ನೆರವಿಗೆ ಧಾವಿಸಲಿದೆ ಎಂದು ದೃಢಪಡಿಸಿದರು. ಎರಡೂ ರಾಷ್ಟ್ರಗಳ ನಡುವಿನ ಮಿತೃತ್ವಕ್ಕೆ ಹಲವಾರು ವರ್ಷಗಳ ಅದ್ಭುತ ಇತಿಹಾಸವಿದೆ ಎಂದು ಟ್ರಂಪ್ ಹೇಳಿದರು. ಉತ್ತರಕೊರಿಯಾವು ಒಂದು ಪ್ರಮುಖ ಸಮಸ್ಯೆಯಾಗಿದ್ದು ಈ ‘ಸಮಸ್ಯೆ’ಯನ್ನು ನಿವಾರಿಸಬೇಕಿದೆ ಎಂದು ಜಪಾನ್ ವಾಯುನೆಲೆಯಲ್ಲಿ ಇಳಿಯುವ ಮುನ್ನ ಟ್ರಂಪ್ ಹೇಳಿಕೆ ನೀಡಿದ್ದು, ಉತ್ತರಕೊರಿಯದಲ್ಲಿರುವ ತತ್ವಭ್ರಷ್ಟ ಆಡಳಿತವನ್ನು ಕಿತ್ತೊಗೆಯಲು ವಿಭಿನ್ನ ಉಪಕ್ರಮದ ಅಗತ್ಯವಿದೆ ಎಂದು ಹೇಳಿರುವುದು ಗಮನಾರ್ಹವಾಗಿದೆ.

 ಏಶ್ಯಾ ರಾಷ್ಟ್ರಗಳಲ್ಲಿ ತಮ್ಮ ಉಪಸ್ಥಿತಿಯ ಸಂದರ್ಭದಲ್ಲೇ ಉತ್ತರಕೊರಿಯ ಮತ್ತೆ ಕ್ಷಿಪಣಿ ಪರೀಕ್ಷೆ ನಡೆಸುವ ಸಾಧ್ಯತೆಯ ಬಗ್ಗೆ ಉತ್ತರಿಸಿದ ಟ್ರಂಪ್, ಈ ಬಗ್ಗೆ ಅತೀಶೀಘ್ರ ತಿಳಿದುಬರಲಿದೆ ಎಂದರು. ತಮ್ಮ ಸುದೀರ್ಘ ಏಶ್ಯಾ ಪ್ರವಾಸದಲ್ಲಿ ಡೊನಾಲ್ಡ್ ಟ್ರಂಪ್ ಐದು ರಾಷ್ಟ್ರಗಳಿಗೆ ಭೇಟಿ ನೀಡಲಿದ್ದಾರೆ. ಭೇಟಿ ನೀಡಲಿರುವ ಪ್ರತಿಯೊಂದು ದೇಶದ ನಾಯಕರಲ್ಲೂ ಉತ್ತರಕೊರಿಯದ ಪರಮಾಣು ಕಾರ್ಯಕ್ರಮ ಹಾಗೂ ಅದರಿಂದ ಎದುರಾಗಿರುವ ಅಪಾಯದ ಕುರಿತು ಚರ್ಚೆ ನಡೆಸುವ ನಿರೀಕ್ಷೆಯಿದೆ. ಅಲ್ಲದೆ ಉತ್ತರಕೊರಿಯದ ಜತೆಗಿನ ವ್ಯಾಪಾರ ಸಂಬಂಧ ಕಡಿಕೊಂಡು, ದೇಶದಲ್ಲಿರುವ ಉತ್ತರಕೊರಿಯ ನಾಗರಿಕರನ್ನು ಮರಳಿ ಕಳಿಸುವಂತೆ ಆಗ್ರಹಿಸುವ ನಿರೀಕ್ಷೆಯಿದೆ.

ದುಸ್ಸಾಹಸದ ಹೇಳಿಕೆ ಬೇಡ: ಉ.ಕೊರಿಯ ಎಚ್ಚರಿಕೆ

 ಈ ಮಧ್ಯೆ, ಟ್ರಂಪ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಉತ್ತರ ಕೊರಿಯ, ದುಸ್ಸಾಹಸದ ಹೇಳಿಕೆ ನೀಡದಿರುವಂತೆ ಎಚ್ಚರಿಕೆ ನೀಡಿದೆ.

 ಟ್ರಂಪ್ ಯಾವುದೇ ಕಾರಣವಿಲ್ಲದೆ ಉತ್ತರಕೊರಿಯದ ಜತೆ ಸಂಘರ್ಷದ ವಾತಾವರಣ ವರ್ಧಿಸಲು ಪ್ರಯತ್ನಿಸುತ್ತಿದ್ದಾರೆ. ವಿವೇಚನೆರಹಿತ , ಮೂರ್ಖ ಹೇಳಿಕೆಗಳಿಂದ ಉತ್ತರಕೊರಿಯಾವನ್ನು ಪ್ರಚೋದಿಸುತ್ತಿದ್ದಾರೆ. ಉತ್ತರಕೊರಿಯದ ದೃಢಸಂಕಲ್ಪ ಹಾಗೂ ಯಾವುದಕ್ಕೂ ಹಿಂಜರಿಯದೆ ಪ್ರತಿಕ್ರಿಯಿಸುವ ಧೈರ್ಯವನ್ನು ಸರಿಯಾಗಿ ಅಂದಾಜಿಸದೆ ದುಡುಕು ನಿರ್ಧಾರ ಕೈಗೊಂಡರೆ , ಸರ್ವಶಕ್ತಿಯನ್ನೂ ಪ್ರಯೋಗಿಸಿ ಅಮೆರಿಕಕ್ಕೆ ಮರೆಯಲಾಗದ ಪಾಠ ಕಲಿಸಲಾಗುವುದು ಎಂದು ಉತ್ತರ ಕೊರಿಯ ಎಚ್ಚರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News