ಗೋರಖ್‌ಪುರದ ಬಿಆರ್‌ಡಿ ಆಸ್ಪತ್ರೆಯಲ್ಲಿ ಮತ್ತೆ ಮರಣ ಮೃದಂಗ
Update: 2017-11-05 23:28 IST
ಗೋರಖ್‌ಪುರ,ನ.5: ಮೂರು ತಿಂಗಳ ಹಿಂದೆ ಕೇವಲ ಐದು ದಿನಗಳಲ್ಲಿ 70ಕ್ಕೂ ಅಧಿಕ ಮಕ್ಕಳ ಸಾವಿನೊಂದಿಗೆ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಇಲ್ಲಿಯ ಸರಕಾರಿ ಬಿಆರ್‌ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮತ್ತೆ ಮರಣ ಮೃದಂಗ ಬಾರಿಸುತ್ತಿದೆ. ಕಳೆದ 48 ಗಂಟೆಗಳಲ್ಲಿ 30 ಮಕ್ಕಳು ಸಾವನ್ನಪ್ಪಿದ್ದು, ಈ ಪೈಕಿ ಆರು ಮಕ್ಕಳು ಮಿದುಳುಜ್ವರಕ್ಕೆ ಬಲಿಯಾಗಿದ್ದಾರೆ.
ಹಿಂದಿನ ಸಲದಂತೆ ಈ ಬಾರಿ ಮಕ್ಕಳ ಸಾವಿಗೆ ಆಮ್ಲಜನಕದ ಕೊರತೆ ಕಾರಣವಲ್ಲ ಎಂದು ರವಿವಾರ ಇಲ್ಲಿ ಸುದ್ದಿಗಾರರಿಗೆ ಸ್ಪಷ್ಟಪಡಿಸಿದ ಆಸ್ಪತ್ರೆಯ ಸಮುದಾಯ ಔಷಧಿ ವಿಭಾಗದ ಮುಖ್ಯಸ್ಥ ಡಾ.ಡಿ.ಕೆ.ಶ್ರೀವಾಸ್ತವ ಅವರು, ಮೃತ 30 ಮಕ್ಕಳ ಪೈಕಿ 15 ಮಕ್ಕಳಿಗೆ ಇನ್ನೂ ಒಂದು ತಿಂಗಳು ತುಂಬಿರಲಿಲ್ಲ. ಅಷ್ಟು ಸಣ್ಣ ಶಿಶುಗಳಿಗೆ ತಕ್ಷಣವೇ ಚಿಕಿತ್ಸೆ ದೊರೆಯದಿದ್ದರೆ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ. ಆರು ಮಕ್ಕಳು ಮಿದುಳು ಜ್ವರಕ್ಕೆ ತುತ್ತಾಗಿದ್ದರೆ, ಉಳಿದ ಮಕ್ಕಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ ಎಂದು ತಿಳಿಸಿದರು.