ಸಂಘ ಪರಿವಾರದ ಇಟಲಿ ಕನೆಕ್ಷನ್!

Update: 2017-11-06 05:44 GMT

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಇಟಲಿ ಮೂಲದ ಬಗ್ಗೆ ಸಂಘ ಪರಿವಾರ ಆಗಾಗ ಆಕ್ಷೇಪ ಎತ್ತುತ್ತಲೇ ಇದೆ. ಸೋನಿಯಾ ಗಾಂಧಿಯವರು ಪ್ರಧಾನಿಯಾದರೆ, ತಾನು ತಲೆ ಬೋಳಿಸಿಕೊಳ್ಳುವುದಾಗಿ ಬಿಜೆಪಿ ನಾಯಕಿ ಸುಶ್ಮಾ ಸ್ವರಾಜ್ ಹಿಂದೊಮ್ಮೆ ಹೇಳಿದ್ದರು. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಎಂದು ಹೆಸರಿಟ್ಟುಕೊಂಡ ಸಂಘಟನೆಯ ಮೂಲವನ್ನು ಹುಡುಕಿ ಹೊರಟರೆ, ಅದು ಇಟಲಿಯತ್ತ ನಮ್ಮನ್ನು ಕರೆದೊಯ್ಯುತ್ತದೆ. ರಾಷ್ಟ್ರಭಕ್ತಿ ಮತ್ತು ಜಾತಿ ಭಕ್ತಿ ನಡುವಿನ ಗೆರೆ ತೆಳುವಾಗುತ್ತಿರುವ ಇಂದಿನ ದಿನಗಳಲ್ಲಿ ಅಮಾಯಕ ಯುವಕರು ರಾತ್ರಿ ಕಂಡ ಬಾವಿಗೆ ಹಗಲಲ್ಲಿ ಹೋಗಿ ಬೀಳುತ್ತಿದ್ದಾರೆ. ಬಸವಣ್ಣ, ನಾರಾಯಣಗುರುಗಳ ನಾಡಿನಲ್ಲೂ ಕಾಲು ಜಾರಿ ಪ್ರಪಾತಕ್ಕೆ ಬೀಳುವವರ ಸಂಖ್ಯೆ ಹೆಚ್ಚಾಗಿದೆ. ಅಂತಲೇ ಆರೆಸ್ಸೆಸ್ ಮೂಲದ ಬಗ್ಗೆ ಯುವಕರಿಗೆ ತಿಳಿವಳಿಕೆ ನೀಡಬೇಕಿದೆ.

ಆರೆಸ್ಸೆಸ್ ಇತಿಹಾಸ ಗೊತ್ತಿಲ್ಲದೇ ಅದರ ಮಿಲಿಟರಿ ಶಕ್ತಿಗೆ ಮಾರು ಹೋಗುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಸಂಘದ ಜಾತಕವನ್ನು ಬಿಚ್ಚಿಡುವ ಪುಸ್ತಕವೊಂದು ಎರಡು ವರ್ಷಗಳ ಹಿಂದೆ ಕನ್ನಡದಲ್ಲಿ ಬಂದಿದೆ. ಆದರೆ ಅನೇಕರು ಇದನ್ನು ಓದಿಲ್ಲ. ಸಂಘ ಪರಿವಾರದ ಇಟಾಲಿಯನ್ ಕನಕ್ಷನ್ ಎಂಬ ಹೆಸರಿನ ಈ ಪುಸ್ತಕವನ್ನು ಬರೆದವರು ಖ್ಯಾತ ನ್ಯಾಯವಾದಿ ಎ.ಜಿ.ನೂರಾನಿ ಇದನ್ನು ಮಂಡ್ಯ ಜಿಲ್ಲೆಯ ಮದ್ದೂರಿನ ಕಮ್ಯುನಿಸ್ಟ್ ಗೆಳೆಯ ಟಿ.ಯಶವಂತ ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.

ಬಹಳ ಜನಕ್ಕೆ ಗೊತ್ತಿಲ್ಲದ ಸಂಗತಿಯೆಂದರೆ, ಆರೆಸ್ಸೆಸ್ ಸಂಘಟನೆಗೆ ಸ್ಫೂರ್ತಿಯಾಗಿದ್ದು ಇಟಲಿಯ ಫ್ಯಾಶಿಸ್ಟ್ ಸರ್ವಾಧಿಕಾರಿ ಬೆನಿತೊ ಮುಸಲೋನಿ. ಭಾರತದಲ್ಲಿ ರಾಷ್ಟ್ರೀಯ ಚಳವಳಿ ಧರ್ಮ, ಭಾಷೆ ಮತ್ತು ಪ್ರದೇಶದ ಗಡಿಯನ್ನು ದಾಟಿ ವ್ಯಾಪಿಸುತ್ತಿದ್ದಾಗ, ಅದರಿಂದ ಮಾರು ದೂರದಲ್ಲಿ ನಿಂತಿದ್ದ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾಗಳಿಗೆ ಯಹೂದಿಗಳಿಂದ ಜರ್ಮನಿಯನ್ನು ಶುದ್ಧಗೊಳಿಸಲು ಹೊರಟಿದ್ದ ಅಡಾಲ್ಫ್ ಹಿಟ್ಲರ್ ಮತ್ತು ಇಟಲಿಯ ಮುಸಲೋನಿ ಸ್ಫೂರ್ತಿಯ ಸೆಲೆಯಾಗಿದ್ದರು. ಅಂದರೆ, ಸಂಘ ಪರಿವಾರ ಹೇಳುತ್ತಿರುವ ರಾಷ್ಟ್ರವಾದ ಸ್ವದೇಶಿ ರಾಷ್ಟ್ರವಾದವಲ್ಲ. ಅದು ವಿದೇಶದಿಂದ ಆಮದು ಮಾಡಿಕೊಂಡ ಫ್ಯಾಶಿಸ್ಟ್ ರಾಷ್ಟ್ರವಾದ.

ಕೋರೆಗಾಂವ್ ವೀರ ಸಮರದ ನಂತರ ದಲಿತ ಯೋಧರ ಹೊಡೆತಕ್ಕೆ ಸಿಕ್ಕಿ ಪುಣೆಯ ಪೇಶ್ವೆ ಸಾಮ್ರಾಜ್ಯ ಕುಸಿದು ಬಿತ್ತು. ಆಗ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಪುರೋಹಿತಶಾಹಿ ಶಕ್ತಿಗಳು ಹಿಂದುತ್ವದ ಹೊಸ ವೇಷ ಹಾಕಿದರು. ತಮ್ಮ ಹಿಂದುತ್ವಕ್ಕೆ ಪೂರಕವಾದ ಸಿದ್ಧಾಂತವನ್ನು ಜರ್ಮನಿ ಮತ್ತು ಇಟಲಿಗಳಿಂದ ದೇಶಕ್ಕೆ ಆಮದು ಮಾಡಿಕೊಂಡು ತಂದರು. 1925ರಲ್ಲಿ ನಾಗಪುರದಲ್ಲಿ ಆರೆಸ್ಸೆಸ್ ಸ್ಥಾಪನೆಯಾಯಿತು.

ಕನ್ಹಯ್ಯಕುಮಾರ್ ಮತ್ತು ಉಮರ್ ಖಾಲಿದ್‌ರ ರಾಷ್ಟ್ರಭಕ್ತಿಯನ್ನು ಪ್ರಶ್ನಿಸುವ ಸಂಘ ಪರಿವಾರದ ಮೂಲವನ್ನು ಹುಡುಕುತ್ತ ಹೊರಟರೆ, ಅನೇಕ ಸಂಗತಿಗಳು ಬಯಲಿಗೆ ಬರುತ್ತವೆ. ನೂರಾನಿಯವರು ಈ ಪುಸ್ತಕದಲ್ಲಿ ಆರೆಸ್ಸೆಸ್‌ನ ಇಟಲಿ ಸಂಬಂಧದ ಬಗ್ಗೆ ಹಲವಾರು ಸಾಕ್ಷ್ಯಾಧಾರ ಒದಗಿಸಿದ್ದಾರೆ. ಅವರು ಹಾಕಿದ ಸವಾಲುಗಳಿಗೆ ಸಂಘ ಪರಿವಾರದಿಂದ ಈವರೆಗೆ ಯಾವುದೇ ಉತ್ತರ ಬಂದಿಲ್ಲ.

ನೂರಾನಿಯವರು ಸಾಕ್ಷ್ಯಾಧಾರವಿಲ್ಲದೇ ಆರೋಪ ಮಾಡುವವರಲ್ಲ. ಇಟಲಿ ವಿದ್ವಾಂಸರಾದ ಮಾರ್ಝಿಯಾ ಕಾಸೊಲರಿ ಅವರು ತಮ್ಮ ದೇಶದ ಪತ್ರಗಾರವನ್ನು ತಡಕಾಡಿ, ಹಳೆಯ ದಾಖಲೆಗಳನ್ನು ಸಂಗ್ರಹಿಸಿ ಬರೆದ ಪುಸ್ತಕದಲ್ಲಿ ಆರೆಸ್ಸೆಸ್ ಮತ್ತು ಇಟಲಿಯ ಫ್ಯಾಶಿಸಂನ ರಹಸ್ಯ ಕೊಂಡಿಗಳನ್ನು ಬಯಲು ಮಾಡಿದ್ದಾರೆ. ಈ ಸಂಶೋಧನಾ ಬರಹದಲ್ಲಿ ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾದೊಳಗಿನ ಕರುಳಬಳ್ಳಿ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ. ಇದನ್ನು ಆಧರಿಸಿ ನೂರಾನಿ ಅನೇಕ ವಿವರಗಳನ್ನು ಒದಗಿಸಿದ್ದಾರೆ.

ಹಿಂದೂ ಮಹಾಸಭಾ ಮುಖಂಡ ಬಾಲಕೃಷ್ಣ ಶಿವರಾಮ ಮುಂಜೆಯವರು ಆರೆಸ್ಸೆಸ್ ಮತ್ತು ಮುಸಲೋನಿ ನಡುವಿನ ಕೊಂಡಿಯಾಗಿದ್ದರು. 1931ರ ಮಾರ್ಚ್ 19ರಂದು ಇಟಲಿ ರಾಜಧಾನಿ ರೋಮ್‌ನಲ್ಲಿ ಮುಸಲೋನಿಯನ್ನು ಭೇಟಿ ಮಾಡಿದ ಮುಂಜೆಯವರು ಭಾರತದಲ್ಲಿ ಫ್ಯಾಶಿಸ್ಟ್‌ಮಾದರಿಯ ಸಂಘಟನೆ ಕಟ್ಟುವ ಬಗ್ಗೆ ಅವರೊಂದಿಗೆ ಚರ್ಚಿಸಿದರು. ಇಂಥ ಸಂಘಟನೆಗೆ ಎಲ್ಲಾ ಸಹಾಯ ನೀಡುವುದಾಗಿ ಮುಸಲೋನಿ ಭರವಸೆ ನೀಡಿದರು. ಈ ಮುಂಜೆಯವರಿಗೆ ಇಟಲಿಗೆ ಹೋಗಲು ಆರೆಸ್ಸೆಸ್ ಸ್ಥಾಪಕ ಹೆಡಗೆವಾರ ಸಹಾಯ ಮಾಡಿದ್ದರು.

ಹಿಟ್ಲರ್ ಮತ್ತು ಮುಸಲೋನಿಗಳನ್ನು ಪಂಡಿತ್ ಜವಾಹರಲಾಲ್ ನೆಹರೂ ಕಟುವಾಗಿ ಟೀಕಿಸುತ್ತಿದ್ದರು. ಆರೆಸ್ಸೆಸ್‌ನ ಇಟಲಿ ಸಂಬಂಧವನ್ನು ನೆಹರೂ ಅಂದೇ ಗುರುತಿಸಿದ್ದರು. ಅಂತಲೇ ನೆಹರೂ ಅವರನ್ನು ಕಂಡರೆ ಇವರಿಗೆ ಹಿಂದೆಯೂ ಆಗುತ್ತಿರಲಿಲ್ಲ, ಈಗಲೂ ಆಗುವುದಿಲ್ಲ. ಹಿಂದೂ ಮಹಾಸಭಾ ಸಂಸ್ಥಾಪಕ ವಿನಾಯಕ ದಾಮೋದರ ಸಾವರ್ಕರ್ ಅವರು, ಹಿಟ್ಲರ್ ಯಹೂದಿಗಳನ್ನು ನಡೆಸಿಕೊಂಡಂತೆ ನಾವು ಮುಸ್ಲಿಮರನ್ನು ನಡೆಸಿಕೊಳ್ಳಬೇಕು ಎಂದು ನೆಹರೂ ಅವರಿಗೆ ಉಪದೇಶ ನೀಡಿದ್ದರು. ಆರೆಸ್ಸೆಸ್‌ನ ಎರಡನೇ ಸರಸಂಘ ಚಾಲಕ ಮಾಧವ ಸದಾಶಿವ ರಾವ್ ಗೋಳ್ವಲ್ಕರ್ ಕೂಡ ತಮ್ಮ ‘ಬಂಚ್ ಆಫ್ ಥಾಟ್ಸ್’ ಪುಸ್ತಕದಲ್ಲಿ ಯಹೂದಿಗೆ ಚಿತ್ರಹಿಂಸೆ ನೀಡಿದ ಹಿಟ್ಲರ್‌ನನ್ನು ಶ್ಲಾಘಿಸಿದ್ದಾರೆ. ಭಾರತದಲ್ಲಿ ಮುಸ್ಲಿಮರು ಎರಡನೇ ದರ್ಜೆ ನಾಗರಿಕರಾಗಿ ಇರಬೇಕೆಂದು ಇದೇ ಪುಸ್ತಕದಲ್ಲಿ ಹೇಳಿದ್ದಾರೆ. ಆರೆಸ್ಸೆಸ್ ಸ್ಥಾಪನೆಗೆ ಹೆಡಗೆವಾರ್ ಪರಿಶ್ರಮ ಮಾತ್ರವಲ್ಲ, ಅದು ಇಟಲಿಯ ಫ್ಯಾಶಿಸ್ಟ್ ಅಚ್ಚಿನಲ್ಲಿ ರೂಪುಗೊಳ್ಳಲು ಮುಂಜೆಯವರ ಕೊಡುಗೆ ಸಾಕಷ್ಟು ಇದೆಯೆಂದು ನೂರಾನಿ ಬಯಲುಗೊಳಿಸಿದ್ದಾರೆ.

ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹಿಂದೂಗಳ ಮಿಲ್ಟ್ರೀಕರಣ ಅಗತ್ಯವೆಂದು ಸಾವರ್ಕರ್ ಹೇಳುತ್ತಿದ್ದರು. ಆರೆಸ್ಸೆಸ್ ಒಂದು ಮಿಲಿಟರಿ ಶಕ್ತಿಯಾಗಿ ಬೆಳೆಯಬೇಕೆಂದು ಮುಂಜೆ ಬಯಸಿದ್ದರು. ಇದಕ್ಕಾಗಿ ಅವರು ಜರ್ಮನಿಗೆ ಹೋಗಿ, ಮುಸಲೋನಿಯ ಮಾರ್ಗದರ್ಶನ ಪಡೆದು ಬಂದರು. ಇಟಲಿಯ ಫ್ಯಾಶಿಸ್ಟ್ ಆಳ್ವಿಕೆ ಮತ್ತು ಸರ್ವಾಧಿಕಾರಿ ಜೊತೆ ಮೊದಲ ಸಂಪರ್ಕ ಹೊಂದಿದ ಮೊದಲ ಹಿಂದೂ ರಾಷ್ಟ್ರೀಯವಾದಿಯೆಂದರೆ ಬಾಲಕೃಷ್ಣ ಶಿವರಾಮ ಮುಂಜೆ. ಇವರು ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಜೊತೆ ಏಕಕಾಲದಲ್ಲಿ ಸಂಬಂಧ ಹೊಂದಿದ್ದರು. ವಾಸ್ತವವಾಗಿ ಹೆಗಡೆವಾರ ಅವರಿಗೆ ಸೈದ್ಧಾಂತಿಕ ಗುರುವಾಗಿದ್ದರು. ಇವರಿಬ್ಬರ ನಡುವೆ ಗಳಸ್ಯ-ಕಂಠಸ್ಯ ಸಂಬಂಧವಿತ್ತು.

1931ರ ಫೆಬ್ರವರಿಯಲ್ಲಿ ಲಂಡನ್‌ನಲ್ಲಿ ನಡೆದ ದುಂಡು ಮೇಜಿನ ಸಭೆಯಿಂದ ವಾಪಸ್ ಆಗುವ ದಾರಿಯಲ್ಲಿ ಯುರೋಪ್ ಪ್ರವಾಸ ಕೈಗೊಂಡಿದ್ದ ಮುಂಜೆ ಅವರು ಇಟಲಿಯ ರಾಜಧಾನಿ ರೋಮ್‌ನಲ್ಲಿ ವಾಸ್ತವ್ಯ ಮಾಡುತ್ತಾರೆ. ಅಲ್ಲಿನ ಫ್ಯಾಶಿಸ್ಟ್ ಪಾರ್ಟಿಯ ಕಚೇರಿಗೆ ಭೇಟಿ ನೀಡಿ, ಅಲ್ಲಿನ ಸಂಘಟನಾ ವಿಧಾನ ಅಧ್ಯಯನ ಮಾಡುತ್ತಾರೆ. 1931 ಮಾರ್ಚ್ 15 ರಿಂದ 24ರವರೆಗೆ ರೋಮ್‌ನಲ್ಲಿ ತಂಗಿದ್ದ ಮುಂಜೆಯವರು ಫ್ಯಾಶಿಸ್ಟ್ ಪಾರ್ಟಿ ತನ್ನ ಕಾರ್ಯಕರ್ತರಿಗೆ ನೀಡುವ ದೈಹಿಕ ಶಿಕ್ಷಣವನ್ನು ಅಧ್ಯಯನ ಮಾಡುತ್ತಾರೆ. ಅದರ ಪ್ರಣಾಳಿಕೆಯನ್ನು ಓದುತ್ತಾರೆ. ಅದರ ಆಧಾರದಲ್ಲಿ ಭಾರತದಲ್ಲಿ ಆರೆಸ್ಸೆಸ್ ಸ್ಥಾಪಿಸಲು ತೀರ್ಮಾನಿಸುತ್ತಾರೆ.

ನಾಗಪುರದಲ್ಲಿ ಆರೆಸ್ಸೆಸ್ 1925ರಲ್ಲಿ ಸ್ಥಾಪನೆಯಾಗಿದ್ದರೂ ಅದು ಸ್ಪಷ್ಟವಾದ ಸೈದ್ಧಾಂತಿಕ ಸ್ವರೂಪ ಪಡೆದದ್ದು ಮುಂಜೆಯವರು ಇಟಲಿಯಿಂದ ವಾಪಸ್ ಬಂದ ನಂತರ. ಮುಂಜೆಯವರ ಇಟಲಿ ಪ್ರವಾಸದ ನಂತರ, ಹಿಂದೂ ಸಂಘಟನೆಗಳಿಗೂ ಇಟಲಿ ಸರಕಾರಕ್ಕೂ ಯಾವ ಸಂಪರ್ಕವೂ ಇರಲಿಲ್ಲ. ನಂತರ ಈ ಸಂಪರ್ಕ ಪುನಶ್ಚೇತನಗೊಂಡಿತು ಎಂದು ಲೇಖಕರು ವಿವರಿಸಿದ್ದಾರೆ.

ಮುಂಜೆ ಮಾತ್ರವಲ್ಲ ಸಾವರ್ಕರ್ ಮತ್ತು ಗೋಳ್ವಾಲ್ಕರ್ ಅವರು ಮುಸಲೋನಿ ಮತ್ತು ಹಿಟ್ಲರ್ ಅವರ ಆರಾಧಕರಾಗಿದ್ದರು. ಈ ಬಗ್ಗೆ ಲೇಖಕರು ಸಾಕಷ್ಟು ಸಾಕ್ಷ್ಯಾಧಾರ ಒದಗಿಸಿದ್ದಾರೆ. ಬಾಲ ಗಂಗಾಧರ ತಿಲಕ್ ಅವರ ಕೇಸರಿ ಪತ್ರಿಕೆ ಕೂಡ ಇಟಲಿಯ ಸರ್ವಾಧಿಕಾರಿಯಿಂದ ಸ್ಫೂರ್ತಿ ಪಡೆದಿತ್ತು ಎಂದು ಲೇಖಕರು ತಿಳಿಸಿದ್ದಾರೆ.

ಬೆಂಗಳೂರಿನ ಕ್ರಿಯಾ ಪ್ರಕಾಶನ ಪ್ರಕಟಿಸಿರುವ ಈ ಪುಸ್ತಕದ ಭಾಷಾಂತರವನ್ನು ಯಶವಂತ್ ಸರಳವಾಗಿ ಮಾಡಿದ್ದಾರೆ. ದಿನ ನಿತ್ಯದ ಜನಪರ ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಯಶವಂತರು ಬಿಡುವು ಮಾಡಿಕೊಂಡು ಇಂಥದೊಂದು ಪುಸ್ತಕವನ್ನು ಕನ್ನಡಕ್ಕೆ ತಂದಿದ್ದಾರೆ.

ಉಳಿದವರ ರಾಷ್ಟ್ರೀಯತೆ ಪ್ರಶ್ನಿಸುವ ಸಂಘ ಪರಿವಾರದ ವಿದೇಶಿ ಮೂಲವನ್ನು ತಿಳಿದುಕೊಳ್ಳಬೇಕಿದ್ದರೆ, ಈ ಪುಸ್ತಕವನ್ನು ಓದಬೇಕು. ಇದನ್ನು ಓದಿದರೆ, ಹಿಂದುತ್ವದ ಮುಖವಾಡದೊಳಗಿನ ಕರಾಳ ಮುಖ ಬಯಲಿಗೆ ಬರುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News