ಅಪ್ಪನನಗೇಕೆ ಮೋಸ ಮಾಡಿದರು?

Update: 2017-11-07 06:50 GMT

ಹೆತ್ತವರಿಂದ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಂಡ ನಂತರ ಅವರನ್ನು ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗುವ, ಅನಾಥಾಶ್ರಮಕ್ಕೆ ದಾಖಲಿಸುವ ಮಕ್ಕಳು ಇದ್ದಾರೆಂದು ನಿಮಗೆಲ್ಲ ಗೊತ್ತೇ ಇದೆ. ಇರುವ ಆಸ್ತಿ-ಜವಿೂನುಗಳನ್ನು ತನ್ನ ಮರಣಾನಂತರ ವೀಲುನಾಮೆ ಪ್ರಕಾರ ವರ್ಗಾವಣೆಗೆ ವ್ಯವಸ್ಥೆಗೊಳಿಸುವುದೊಂದೇ ಈ ಸಮಸ್ಯೆಗೆ ಸದ್ಯ ಹೊಳೆಯುತ್ತಿರುವ ಪರಿಹಾರ. ಯುವಕರು ಹೆತ್ತವರನ್ನು ಬೀದಿಪಾಲು ಮಾಡಿ ಆಸ್ತಿ ಲಪಟಾಯಿಸುತ್ತಿರುವುದನ್ನು ನಿಯಂತ್ರಿಸುವ ಉದ್ದೇಶದಲ್ಲಿ ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆಯೇ ಅಸ್ತಿತ್ವಕ್ಕೆ ಬಂದಿದೆ.

ಅಪರೂಪದಲ್ಲಿ ಅಪರೂಪ ಎಂಬಂತೆ ತಂದೆ ತನ್ನ ಸ್ವಂತ ಮಗಳಿಂದ ಹಣ ಪಡೆದುಕೊಂಡು ಜವಿೂನನ್ನು ನೋಂದಣೆ ಮೂಲಕ ವರ್ಗಾಯಿಸಿಯೂ ಅದೇ ಜಮೀನನ್ನು ಹೆಂಡತಿಗೆ ವೀಲುನಾಮೆ ಮಾಡಿರುವ ಉದಾಹರಣೆಯಿದು. ಸಂಪತ್ತಿನ ಎದುರು ಮಾನವ ಸಂಬಂಧ-ಆದರ್ಶಗಳೆಲ್ಲ ಶಿಥಿಲವಾಗಿರುವುದನ್ನು ಸಾರಿ ಹೇಳುತ್ತದೆ ಈ ಸತ್ಯ ಕಥೆ. ಈ ಕಥೆಯಲ್ಲಿ ಮೋಸಕ್ಕೆ ಒಳಗಾದವರ ಹೆಸರು ಕವಿತಾ (ನಿಜ ಹೆಸರಲ್ಲ). ಕಥೆಯನ್ನು ಅವರ ಮಾತುಗಳಲ್ಲೇ ಕೇಳುವುದಾದರೆ :

ನನಗೆ ಹದಿನೆಂಟು ವರ್ಷ ವಯಸ್ಸಿನಲ್ಲಿ ಮದುವೆಯಾಗಿತ್ತು. ಮದುವೆ ಯಾಗಿ ನಾನು ಬೆಂಗಳೂರನ್ನು ಸೇರಿ ಸುಮಾರು ಇಪ್ಪತ್ತೆರಡು ವರ್ಷಗಳೇ ದಾಟಿರಬೇಕು. ಅದೊಂದು ದಿನ ಅಪ್ಪನ ಫೋನ್ ಬಂತು. ನಾನು ಆರ್ಥಿಕ ಸಂಕಷ್ಟದಲ್ಲಿದೇನೆ. ನಮ್ಮ ಊರಾದ ಮೂಡುಬಿದಿರೆಯಲ್ಲಿರುವ ಒಂದು ಎಕರೆ ಜವಿೂನಿನಲ್ಲಿ ಹತ್ತು ಸೆಂಟ್ಸು ಮಾರಬೇಕಾಗಿದೆ. ಹುಡುಕಿದರೆ ಗಿರಾಕಿ ಸಿಗ್ತಿಲ್ಲ. ಮಾರಲು ಇಚ್ಛಿಸುವ ಹತ್ತು ಸೆಂಟ್ಸು ಜವಿೂನಿನಲ್ಲಿ ಮನೆಯಿದೆ. ಮನೆಯನ್ನು ಬಾಡಿಗೆಗೆ ಹಾಕಿದ್ದೇನೆ. ಬಾಡಿಗೆದಾರರಿಗೆ ಮನೆ ಖರೀದಿಸುವ ಶಕ್ತಿ ಇಲ್ಲ. ದುಡ್ಡಿಲ್ಲದೇ ನಾನು ಪಡುವ ಕಷ್ಟ ಯಾರಿಗೂ ಬೇಡ ... ನಿನ್ನ ಹತ್ತಿರ ದುಡ್ಡು ಇದ್ದರೆ ನೀನಾದರೂ ಖರೀದಿಸಿದ್ದರೆ ನನಗೆ ಉಪಕಾರವಾಗುತಿತ್ತು... ಅಪ್ಪ ಫೋನಿನಲ್ಲಿ ಕಷ್ಟವನ್ನೇ ಹೇಳುತ್ತ ಹೋದರು. ಅಪ್ಪನ ಕಷ್ಟಕ್ಕೆ ಸ್ಪಂದಿಸದೇ ಇರುವುದು ತಪ್ಪುಎನ್ನುವ ಭಾವನೆಯಲ್ಲಿ ನಾನು ಅವರು ಹೇಳಿದ ರೇಟು ಕೊಟ್ಟು ಹತ್ತು ಸೆಂಟ್ಸ್ ಜಾಗ ಮತ್ತು ಅದರಲ್ಲಿರುವ ಮನೆಯನ್ನು ನನ್ನ ಹೆಸರಿಗೆ ನೋಂದಾಯಿಸಿಕೊಂಡೆ. ಇದು ನಡೆದದ್ದು 2007ರಲ್ಲಿ. ಅಪ್ಪ2016ರಲ್ಲಿ ಮೃತರಾದರು. ಅವರು ನನಗೆ ಮಾರಾಟ ಮಾಡಿದ್ದ ಜವಿೂನಿನಲ್ಲಿದ್ದ ಮನೆಯ ಬಾಡಿಗೆಯನ್ನು ಅಪ್ಪನೇ ವಸೂಲು ಮಾಡುತ್ತಿದ್ದರು. ಅವರು ಜೀವಂತ ಇರುವಾಗ ನನಗೆ ಚಿಕ್ಕಾಸು ಬಾಡಿಗೆ ಸಿಗಲಿಲ್ಲ. ಅವರು ತೀರಿಹೋದ ನಂತರ ಮೊನ್ನೆ ಅಕ್ಟೋಬರ್ 2017ರಲ್ಲಿ ನನಗೆ ಈ ಹತ್ತು ಸೆಂಟ್ಸ್ ಜವಿೂನನ್ನು ಮಾರಾಟ ಮಾಡಬೇಕಾಗಿ ಬಂತು. ಜವಿೂನು ಖರೀದಿಸಲು ಬಂದ ಗಿರಾಕಿಯು ನಾನು ಯಾವೆಲ್ಲ ದಾಖಲೆಗಳನ್ನು ಹಾಜರು ಪಡಿಸಬೇಕೆನ್ನುವ ದಾಖಲೆ ಪತ್ರಗಳ ಪಟ್ಟಿ ನೀಡಿದರು. ಗಿರಾಕಿ ಕೊಟ್ಟ ಪಟ್ಟಿಯಲ್ಲಿ ಪುರಸಭೆಯಿಂದ ನನ್ನ ಹೆಸರಿನಲ್ಲಿರುವ ಖಾತೆ ಬೇಕು ಎಂದು ನಮೂದಿಸಲಾಗಿತ್ತು. ಜವಿೂನನ್ನು ದುಡ್ಡು ಕೊಟ್ಟು ಖರೀದಿಸಿದ್ದರೂ ಅಪ್ಪನ ಮೇಲಿನ ವಿಶ್ವಾಸದಲ್ಲಿ ಯಾವುದನ್ನೂ ಪರೀಕ್ಷಿಸಲು ಹೋಗಿರಲಿಲ್ಲ. ಬಾಡಿಗೆಯನ್ನು ಅಪ್ಪನೇ ವಸೂಲು ಮಾಡಿ ಅವರ ಸ್ವಂತಕ್ಕಾಗಿ ಖರ್ಚು ಮಾಡುತ್ತಲೇ ಇದ್ದರೂ, ನಾನು ಏನೂ ಬೇಸರ ಮಾಡಿರಲಿಲ್ಲ. ಆದರೆ ನಾನು ಯಾವಾಗ ಜವಿೂನನ್ನು ಮಾರಾಟ ಮಾಡಲು ಇಚ್ಛಿಸಿ ಗಿರಾಕಿಯ ವಕೀಲರನ್ನು ಭೇಟಿಯಾದೆನೋ ಆಗ ಅಪ್ಪನನಗೆ ಮಾಡಿದ್ದ ಉಪಕಾರ ಬೆಳಕಿಗೆ ಬಂತು.

ನಾನು ಅಪ್ಪನ ಹತ್ತು ಸೆಂಟ್ಸು ಜವಿೂನು ಖರೀದಿಸುವಾಗ ಅವರು ಕೇಳಿದಷ್ಟೂ ಮೊತ್ತವನ್ನು ನನ್ನ ಬ್ಯಾಂಕ್ ಖಾತೆಯಿಂದ ಅವರ ಬ್ಯಾಂಕ್ ಖಾತೆಗೆ ಚೆಕ್ ಮೂಲಕವೇ ವರ್ಗಾಯಿಸಿದ್ದೆ. ಆದರೆ ಅಪ್ಪನನಗೆ ವ್ಯವಸ್ಥಾ ಪತ್ರ ನೋಂದಾಯಿಸುವುದರ ಮೂಲಕ ಜವಿೂನು ವರ್ಗಾಯಿಸಿದ್ದರು. ಮಗಳಿಗೆ ಪ್ರೀತಿಯಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ವ್ಯವಸ್ಥಾ ಪತ್ರದ ಮೂಲಕ ಜವಿೂನನ್ನು ನೀಡುತ್ತಿರುವುದಾಗಿ ನೋಂದಾಯಿತ ದಸ್ತಾವೇಜಿನಲ್ಲಿ ದಾಖಲಿಸಿದ್ದರು. ಈ ಮಾಹಿತಿಯನ್ನು ನನಗೆ ಗಿರಾಕಿಯ ವಕೀಲರು ಹೇಳುವಾಗ ಅಪ್ಪನ ಮೇಲೆ ನಾನು ಇರಿಸಿದ್ದ ಅಭಿಮಾನ ಉಳಿಯಲು ಸಾಧ್ಯವೇ?

ನನಗೆ ಅಪ್ಪಪ್ರೀತಿಯಲ್ಲಿ ಪ್ರತಿಫಲಾಪೇಕ್ಷೆ ಇಲ್ಲದೆ ನೀಡಿರುವ ಜವಿೂನಿನಲ್ಲಿರುವ ಮನೆಯ ತೆರಿಗೆ ಕಟ್ಟಿರಲಿಲ್ಲ. ಖಾತೆ ನನ್ನ ಹೆಸರಿನಲ್ಲಿ ಇರಲಿಲ್ಲ. ಅದನ್ನೂ ಮಾಡಬೇಕಾಗಿತ್ತು. ಪುರಸಭೆ ಸಂದರ್ಶಿಸಿದರೆ ಅಲ್ಲಿಯೂ ಆಘಾತ ಕಾದಿತ್ತು. ಅಪ್ಪ ನನಗೆ ಮಾರಾಟ ಮಾಡಿದ್ದ ಮನೆಯ ಖಾತೆ ಅಮ್ಮನ ಹೆಸರಿಗೆ ಇತ್ತೀಚೆಗಷ್ಟೇ ವರ್ಗಾವಣೆಯಾಗಿತ್ತು. ಇದು ಹೇಗೆ ಸಾಧ್ಯವಾಯಿತೆಂದು ಅರ್ಥವಾಗದೇ ಮಾಹಿತಿ ಹಕ್ಕು (್ಕ..ಐ) ಮೂಲಕ ಪರಸಭೆಯಿಂದ ಅಮ್ಮನ ಹೆಸರಿಗೆ ಖಾತಾ ಬದಲಾವಣೆ ಆಗಿರುವ ಕಡತವನ್ನು ಪಡೆದುಕೊಂಡಾಗ ನನಗೆ ಇನ್ನೊಂದು ಶಾಕ್ ಕಾದಿತ್ತು.

ನಾನು ಖರೀದಿಸಿದ್ದ ಮನೆಯ ಖಾತೆ ಅಮ್ಮನ ಹೆಸರಿಗೆ ಬಂದದ್ದು ಹೇಗೆ ಗೊತ್ತೇ ? 2007ರಲ್ಲಿ ಅಪ್ಪಮಾರ್ಕೆಟ್ ರೇಟು ಪಡೆದುಕೊಂಡು ನನಗೆ ಜವಿೂನು ಮಾರಾಟ ಮಾಡಿದ್ದರು. 2016ರಲ್ಲಿ ಅಪ್ಪ ಮೃತರಾದದ್ದು. ತನ್ನ ಜೀವಿತಾವಧಿಯಲ್ಲಿ 2006ರಲ್ಲಿ ಅಪ್ಪತನ್ನ ಸಂಪೂರ್ಣ ಜವಿೂನನ್ನು (ಒಂದು ಎಕರೆ)ಮರಣಾನಂತರ ಅಮ್ಮನ ಹೆಸರಿಗೆ ವರ್ಗಾವಣೆಯಾಗುವಂತೆ ವೀಲುನಾಮೆ ನೋಂದಾಯಿಸಿದ್ದರು. ಅಪ್ಪನ ಮರಣಾನಂತರ ಅವರ ಡೆತ್ ಸರ್ಟಿಫಿಕೇಟ್ ಹಾಗೂ ವಿಲ್ ನೀಡಿ ಅಮ್ಮ ತನ್ನ ಹೆಸರಿಗೆ ಪುರಸಭೆಯಲ್ಲಿ ಅವಸರವಸರದಲ್ಲಿ ಖಾತೆ ಬದಲಾವಣೆ ಮಾಡಿಸಿಕೊಂಡುಬಿಟ್ಟಿದ್ದಳು.

ನಾನು ದುಡ್ಡು ಕೊಟ್ಟು ಖರೀದಿಸಿದ್ದರೂ ಕ್ರಯಪತ್ರ (Sale Deed) ಹಾಗೂ ಪ್ರತಿಫಲಾಪೇಕ್ಷೆ ಇಲ್ಲದೆ ನೀಡಿರುವ ಜವಿೂನಿನ ವ್ಯವಸ್ಥಾ ಪತ್ರಕ್ಕೂ ವ್ಯತ್ಯಾಸ ತಿಳಿಯದೇ ಮೂರ್ಖಳಾಗಿದ್ದೆ. 2007ರಲ್ಲಿ ರಿಜಿಸ್ಟ್ರೇಶನ್ ಮಾಡಿಕೊಂಡಿದ್ದರೂ ಅಪ್ಪನ ಮೇಲಿನ ಅಭಿಮಾನದಲ್ಲಿ ಅವರು ಜೀವಂತ ಇರುವಾಗ ದಾಖಲೆ ಪರಿಶೀಲಿಸದೇ ಖಾತಾ ಬದಲಾವಣೆ ಮಾಡಲು ಯತ್ನಿಸದೇ ಕೋಲು ಕೊಟ್ಟು ಹೊಡೆಸಿಕೊಂಡಿದ್ದೆ.

ನಾನು ಚೆಕ್ ಮೂಲಕ ಪಾವತಿಸಿದ್ದರೂ, ಪಾವತಿಗೆ ಸಾಕ್ಷಿ ಇದ್ದರೂ ಅಮ್ಮನಾಗಲೀ ಒಡಹುಟ್ಟಿದವರಾಗಲೀ ಈಗ ನನ್ನ ಕಥೆ ನಂಬುವುದಿಲ್ಲ. ಅಪ್ಪನನಗೇಕೆ ಮೋಸ ಮಾಡಿದರು? ಇರುವ ಒಂದು ಎಕರೆ ಜವಿೂನನ್ನು ಪೂರ್ತಿಯಾಗಿ ವೀಲುನಾಮೆಯಲ್ಲಿ ಅಮ್ಮನಿಗೆ ಬರೆದರೆ ನನಗೆ ಬೇಸರವಿಲ್ಲ. ಆದರೆ ಅದೇ ಒಂದು ಎಕರೆಯಲ್ಲಿ ನನಗೆ ಹತ್ತು ಸೆಂಟ್ಸು ಮಾರಿ ಅದರಲ್ಲಿರುವ ಮನೆ ಬಾಡಿಗೆಯನ್ನು ತಾನೆ ವಸೂಲಿ ಮಾಡಿ, ಮನೆ ತೆರಿಗೆ ನನ್ನಿಂದಲೇ ಕಟ್ಟಿಸಿಕೊಂಡಿದ್ದರೂ ವೀಲುನಾಮೆಯ ಬಗ್ಗೆ ನನಗೇಕೆ ಹೇಳಲಿಲ್ಲ? ನನಗೆ ಹತ್ತು ಸೆಂಟ್ಸು ಮಾರಾಟ ಮಾಡಿರುವೆಯೆಂದು ಅಮ್ಮನಿಗೆ ಏಕೆ ಹೇಳಲಿಲ್ಲ? ಪ್ರಶ್ನೆ ಕೇಳುತ್ತಲೇ ಇದ್ದೇನೆ. ಉತ್ತರಿಸಬೇಕಾದ ಅಪ್ಪಜೀವಂತ ಇಲ್ಲ.

ನೀತಿ:- ವ್ಯವಹಾರ ಬೇರೆ. ಸಂಬಂಧ ಬೇರೆ.

Writer - ರಾಜೇಂದ್ರ ಪೈ

contributor

Editor - ರಾಜೇಂದ್ರ ಪೈ

contributor

Similar News