ನೋಟ್ ಬ್ಯಾನ್ ನಂತರ ಜನವರಿ - ಎಪ್ರಿಲ್ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡವರು ಎಷ್ಟು ಲಕ್ಷ ಮಂದಿ ಗೊತ್ತೇ ?

Update: 2017-11-08 07:06 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ನ.8 : ನೋಟು ಅಮಾನ್ಯೀಕರಣಕ್ಕೆ ಒಂದು ವರ್ಷವಾಗಿದೆ.  ಹಲವು ಸಮಸ್ಯೆಗಳು ದೇಶದ ಆರ್ಥಿಕತೆಯನ್ನು ಬಾಧಿಸುತ್ತಿವೆ. ಇವುಗಳ  ನಡುವೆ ಸರಕಾರ ಆಶ್ವಾಸನೆ ನೀಡಿದಂತೆ ಉದ್ಯೋಗಗಳಲ್ಲಿ ಹೆಚ್ಚಳವಾಗದೆ ಉದ್ಯೋಗಾವಕಾಶಗಳು ಕುಂಠಿತಗೊಂಡಿರುವುದು ಸ್ಪಷ್ಟವಾಗಿದೆ. ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ ಇದಗಿಸಿದ ಅಂಕಿಸಂಖ್ಯೆಗಳಂತೆ ನೋಟ್ ಬ್ಯಾನ್ ನಂತರ ಜನವರಿ-ಎಪ್ರಿಲ್ 2017ರ ಅವಧಿಯಲ್ಲಿ 15  ಲಕ್ಷ ಉದ್ಯೋಗಗಳು ಕಡಿತಗೊಂಡಿದ್ದು ಹೆಚ್ಚಿನ ಪ್ರಮುಖ ಕಂಪೆನಿಗಳಲ್ಲಿ 2016-17ರಲ್ಲಿ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಉದ್ಯೋಗಾವಕಾಶಗಳು ಕಡಿಮೆಯಾಗಿವೆ.

ಜನವರಿಯಿಂದ ಎಪ್ರಿಲ್ 2017ರ ಅವಧಿಯಲ್ಲಿ  ಒಟ್ಟು 40.5 ಕೋಟಿ ಉದ್ಯೋಗಿಗಳಿದ್ದರೆ,  ಅದಕ್ಕಿಂತ ಮೊದಲ ನಾಲ್ಕು ತಿಂಗಳಲ್ಲಿದ್ದ ಉದ್ಯೋಗಿಗಳ ಸಂಖ್ಯೆ 40.65 ಕೋಟಿ ಆಗಿದೆ.

ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನಾದಲ್ಲಿ ಜುಲೈ 2017ರ ಮೊದಲ ವಾರದ ತನಕ ಒಟ್ಟು 30.67 ಲಕ್ಷ ಅಭ್ಯರ್ಥಿಗಳು ತರಬೇತಿ ಪಡೆದಿದ್ದರೆ ಅಥವಾ ತರಬೇತಿ ಪಡೆಯುತ್ತಿದ್ದರೆ, ಅವರಲ್ಲಿ ಕೇವಲ 2.9 ಲಕ್ಷ ಅಭ್ಯರ್ಥಿಗಳಿಗೆ ಉದ್ಯೋಗ ಆಫರ್ ಬಂದಿದೆ ಎಂದು ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಮಾಹಿತಿ ತಿಳಿಸುತ್ತದೆ.

2016-17ರಲ್ಲಿ ಸಮೀಕ್ಷೆಗೊಳಪಟ್ಟ 107 ಕಂಪೆನಿಗಳಲ್ಲಿ ಒಟ್ಟು 14,668 ಉದ್ಯೋಗಗಳು ಕಡಿತವಾಗಿವೆ. ಈ ಸಂಸ್ಥೆಗಳಲ್ಲಿ ಮಾರ್ಚ್ 2015 ಅಂತ್ಯಕ್ಕೆ 6,84,452 ಉದ್ಯೋಗಿಗಳಿದ್ದರೆ, ಮಾರ್ಚ್ 2016ರಲ್ಲಿ ಅದು 6,77,296ಗೆ ಇಳಿದು ಮಾರ್ಚ್ 2017ರಲ್ಲಿ 6,69,784ಗೆ ಇಳಿದಿದೆ. 

ಖ್ಯಾತ ಕಂಪೆನಿಗಳಾದ ಎಲ್ &ಟಿ, ಹಿಂದುಸ್ಥಾನ್ ಯುನಿಲಿವರ್, ಐಡಿಯಾ ಸೆಲ್ಯುಲರ್, ಎಸಿಸಿ, ಟಾಟಾ ಮೋಟಾರ್ಸ್, ಟಾಟಾ ಸ್ಟೀಲ್, ಹಿಂಡಾಲ್ಕೊ, ಟೈಟನ್ ಇಂಡಸ್ಟ್ರೀಸ್ ನಲ್ಲಿ ಕ್ರಮವಾಗಿ 1,888, 1453, 707, 535, 534, 450, 439 ಹಾಗೂ 422 ಉದ್ಯೋಗ ಕಡಿತವಾಗಿದೆ.

ಅಮಾನ್ಯೀಕರಣ ಅವಧಿ ಒಳಗೊಂಡ ಅಕ್ಟೋಬರ್-ಡಿಸೆಂಬರ್ 2016ರ ತ್ರೈಮಾಸಿಕ ಉದ್ಯೋಗ ಸಮೀಕ್ಷೆಯ ಪ್ರಕಾರ  ಉತ್ಪಾದನಾ ಕ್ಷೇತ್ರದಲ್ಲಿ ಗರಿಷ್ಠ 1.13 ಲಕ್ಷ ಉದ್ಯೋಗ ಕಡಿತವಾಗಿದ್ದರೆ, ಐಟಿ/ಬಿಪಿಒ ಕ್ಷೇತ್ರದಲ್ಲಿ 20,000 ಉದ್ಯೋಗ ನಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News