ಹಾಲನ್ನು ಜೇನಿನೊಂದಿಗೆ ಸೇವಿಸುವುದರ ಆರೋಗ್ಯ ಲಾಭಗಳು ಗೊತ್ತೇ?

Update: 2017-11-09 10:41 GMT

ನಾವಿಂದು ಅವಸರದ ಯುಗದಲ್ಲಿ ಬದುಕುತ್ತಿದ್ದೇವೆ. ಮನೆ ಮತ್ತು ಕಚೇರಿಯ ನಡುವೆ ಧಾವಂತ, ಒತ್ತಡಗಳ ನಡುವೆ ಸ್ವಂತದ ಬಗ್ಗೆ ಕಾಳಜಿ ವಹಿಸಲೂ ಹೆಚ್ಚಿನವರಿಗೆ ಸಮಯವಿಲ್ಲ. ಇಂತಹ ಬದುಕು ಒಂದಲ್ಲ ಒಂದು ದಿನ ನಮ್ಮ ಆರೋಗ್ಯಕ್ಕೆ ದುಬಾರಿಯಾಗುತ್ತದೆ. ಆದರೆ ಪ್ರತಿದಿನವೂ ನಮಗಾಗಿ ಹಲವಾರು ಬದ್ಧತೆಗಳನ್ನು ಹೊತ್ತು ತರುವುದರಿಂದ ನಾವು ಅನಾರೋಗ್ಯಕ್ಕೆ ಸಿಲುಕದಂತೆ ಎಚ್ಚರಿಕೆ ವಹಿಸುವುದು ಅನಿವಾರ್ಯವೇ ಆಗಿದೆ.

 ನಮ್ಮ ಶರೀರವು ಒಂದು ಯಂತ್ರ ಮತ್ತು ನಾವು ಸೇವಿಸುವ ಆಹಾರ ಅದಕ್ಕೆ ಇಂಧನವನ್ನು ಒದಗಿಸುತ್ತದೆ. ಆದರೆ ಹೆಚ್ಚಿನವರಿಗೆ ಕೆಲಸದ ಒತ್ತಡಗಳ ನಡುವೆ ಮನೆಯ ಊಟ ಮಾಡಲೂ ಸಾಧ್ಯವಾಗುವುದಿಲ್ಲ ಮತ್ತು ಹೊರಗಡೆ ಹೋಟೆಲ್‌ಗಳಲ್ಲಿ ಸಿಕ್ಕಿದ್ದನ್ನು ಅವಸರದಲ್ಲಿ ತಿಂದು ಊಟದ ಶಾಸ್ತ್ರ ಮುಗಿಸುತ್ತಾರೆ. ಆದರೆ ಆರೋಗ್ಯಕರವಾದ ಮತ್ತು ಸಂತುಲಿತ ಆಹಾರ ಮಾತ್ರ ನಮ್ಮ ಶರೀರವೆಂಬ ಯಂತ್ರ ಸರಿಯಾಗಿ ಕಾರ್ಯ ನಿರ್ವಹಿಸುವಂತೆ ಮಾಡುತ್ತದೆ. ಇಂತಹ ಸಂದರ್ಭಗಳಲ್ಲಿ ಪುರಾತನ ಭಾರತೀಯ ವೈದ್ಯಪದ್ಧತಿಯಲ್ಲಿನ ಕೆಲವು ಸರಳ ಉಪಾಯಗಳು ನಮಗೆ ನೆರವಾಗುತ್ತವೆ. ಹಾಲನ್ನು ಜೇನಿನೊಂದಿಗೆ ಬೆರೆಸಿ ಸೇವಿಸುವುದು ಇಂತಹ ಸರಳ ಉಪಾಯಗಳಲ್ಲೊಂದಾಗಿದೆ. ಪ್ರತಿದಿನ ಇದನ್ನು ಸೇವಿಸುವುದರಿಂದ ಒತ್ತಡದ ಬದುಕಿನಲ್ಲಿಯೂ ಆರೋಗ್ಯದ ಕಡೆ ಗಮನ ನೀಡಬಹುದಾಗಿದೆ.

ಹಾಲು ಹಲವಾರು ಪೋಷಕಾಂಶಗಳನ್ನು ಒಳಗೊಂಡಿರುವ ಪರಿಪೂರ್ಣ ಆಹಾರವಾಗಿದೆ. ಅದರಲ್ಲಿರುವ ಕ್ಯಾಲ್ಶಿಯಂ ಮತ್ತು ವಿಟಾಮಿನ್‌ಗಳು ನಮ್ಮ ಮೂಳೆಗಳಿಗೆ ಆರೋಗ್ಯ ನೀಡುವ ಜೊತೆಗೆ ಅವುಗಳಿಗೆ ಬಲ ನೀಡುತ್ತವೆ. ಜೇನು ಅತ್ಯುತ್ತಮ ಉತ್ಕರ್ಷಣ ನಿರೋಧಕ, ಬ್ಯಾಕ್ಟೀರಿಯಾ ನಿರೋಧಕ ಮತ್ತು ಊರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಹಲವಾರು ಸೋಂಕುಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡುತ್ತದೆ.

ಹಾಲನ್ನು ಜೇನಿನೊಡನೆ ಬೆರೆಸಿಕೊಂಡು ಪ್ರತಿದಿನ ಸೇವಿಸಿದರೆ ಅದು ನಮ್ಮ ಶರೀರದ ಮೇಲೆ ಅದ್ಭುತ ಪರಿಣಾಮಗಳನ್ನು ಬೀರುತ್ತದೆ. ಇದು ತಯಾರಿಸಲು ಸುಲಭ ಮತ್ತು ಸೇವಿಸಲೂ ರುಚಿ, ಹೀಗಾಗಿ ಇದನ್ನು ಕುಡಿಯಲು ಹಿಂಜರಿಯುವುದಕ್ಕೆ ಕಾರಣವೇ ಇಲ್ಲ.

ದೇಹಬಲವನ್ನು ಹೆಚ್ಚಿಸುತ್ತದೆ

ಬೆಳಿಗ್ಗೆ ಒಂದು ಗ್ಲಾಸ್ ಜೇನು ಬೆರೆತ ಹಾಲನ್ನು ಸೇವಿಸುವುದಕ್ಕಿಂತ ಉತ್ತಮ ಆರಂಭ ಬೇರೊಂದಿಲ್ಲ. ಜೇನಿನಲ್ಲಿರುವ ಕಾರ್ಬೊಹೈಡ್ರೇಟ್‌ಗಳು ತಕ್ಷಣ ನಮ್ಮ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಲಿನಲ್ಲಿರುವ ಪ್ರೋಟಿನ್ ಬಲವನ್ನು ನೀಡುತ್ತದೆ. ಈ ಪೇಯ ದಿನವಿಡೀ ನಾವು ಚೈತನ್ಯದಿಂದ ಕೂಡಿರುವಂತೆ ಮಾಡುತ್ತದೆ. ಮಕ್ಕಳಿಗೆ ಮತ್ತು ವಯಸ್ಕರಿಗೆ ತಮ್ಮ ದೇಹಬಲವನ್ನು ಹೆಚ್ಚಿಸಿಕೊಳ್ಳಲು ಇದೊಂದು ಅದ್ಭುತ ಪಾನೀಯವಾಗಿದೆ.

ಮೂಳೆಗಳಿಗೆ ಒಳ್ಳೆಯದು

ಹಾಲು ಕ್ಯಾಲ್ಶಿಯಮ್‌ನ ಅತ್ಯುತ್ತಮ ಮೂಲವಾಗಿದೆ. ಆದರೆ ನಮ್ಮ ಶರೀರವು ಕ್ಯಾಲ್ಶಿಯಂ ಅನ್ನು ಹೀರಿಕೊಳ್ಳುವಲ್ಲಿ ಹೆಚ್ಚಿನ ಕ್ಷಮತೆಯನ್ನು ಹೊಂದಿಲ್ಲ. ರಕ್ತವು ಹಾಲಿನಲ್ಲಿಯ ಎಲ್ಲ ಕ್ಯಾಲ್ಶಿಯಂ ಅನ್ನು ಹೀರಿಕೊಳ್ಳಲು ಮತ್ತು ಅದನ್ನು ಮೂಳೆಗಳಿಗೆ ರವಾನಿಸಲು ಜೇನು ನೆರವಾಗುತ್ತದೆ.

ಮಲಬದ್ಧತೆಯನ್ನು ಗುಣಪಡಿಸುತ್ತದೆ

 ರಾತ್ರಿ ಮಲಗುವ ಮುನ್ನ ಜೇನನ್ನು ಬೆಚ್ಚಗಿನ ಹಾಲಿನೊಂದಿಗೆ ಸೇವಿಸುವುದು ಮಲಬದ್ಧತೆಯ ವಿರುದ್ಧ ಪರಿಣಾಮಕಾರಿಯಾಗಿದೆ. ಹಾಲು ದೊಡ್ಡಕರುಳಿನ ಚಲನವಲನಗಳಿಗೆ ನೆರವಾಗುತ್ತದೆ. ಜೇನಿನಲ್ಲಿಯ ಕೆಲವು ಕಿಣ್ವಗಳು ಗುದನಾಳವನ್ನು ಸುಗಮಗೊಳಿಸುತ್ತವೆ. ಹಾಲು ಜೇನಿನ ಮಿಶ್ರಣ ಸ್ಟಾಫಿಲೊಕೋಕಸ್ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ, ವಾಯು ಮತ್ತು ಕರುಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತಡೆಯುತ್ತದೆ.

ಜೀರ್ಣಕ್ರಿಯೆಗೆ ನೆರವು

ಜೇನಿನಲ್ಲಿರುವ ಕೆಲವು ಪ್ರಿಬಯಾಟಿಕ್‌ಗಳು ಹಾಲಿನಲ್ಲಿಯ ಪ್ರಿಬಯಾಟಿಕ್‌ಗಳನ್ನು ಕ್ರಿಯಾಶೀಲಗೊಳಿಸುವ ಮೂಲಕ ಪಚನ ಕ್ರಿಯೆಯನ್ನು ಉತ್ತಮಗೊಳಿಸುತ್ತವೆ. ಇದರಿಂದ ಜೀರ್ಣನಾಳದಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತದೆ. ಜೀರ್ಣನಾಳವು ಆರೋಗ್ಯದಿಂದಿದ್ದರೆ ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರಿಕೆಯಂತಹ ಸಮಸ್ಯೆಗಳು ದೂರವೇ ಇರುತ್ತವೆ.

ನಿದ್ರಾಹೀನತೆಯನ್ನು ನಿವಾರಿಸುತ್ತದೆ

ಹಾಲುಜೇನಿನ ಮಿಶ್ರಣ ನಿದ್ರಾಹೀನತೆಗೆ ಪರಿಣಾಮಕಾರಿ ಪರಿಹಾರವಾಗಿದೆ. ಜೇನು ಸಕ್ಕರೆಯನ್ನು ಒಳಗೊಂಡಿದ್ದರೂ ಅದು ಶರೀರದಲ್ಲಿ ಉತ್ಪತ್ತಿಯಾಗುವ ಇನ್ಸುಲಿನ್ ಅನ್ನು ನಿಯಂತ್ರಿಸುತ್ತದೆ ಮತ್ತು ಟ್ರಿಪ್ಟೋಫ್ಯಾನ್‌ನ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ಟ್ರಿಪ್ಟೋಫ್ಯಾನ್ ನಿದ್ದೆಯ ಹಾರ್ಮೋನ್ ಆಗಿರುವ ಸೆರೊಟೋನಿನ್ ಆಗಿ ಪರಿವರ್ತನೆಗೊಳ್ಳುತ್ತದೆ.

ವಯಸ್ಸಾಗುವುದನ್ನು ತಡೆಯುತ್ತದೆ

ಹಾಲು ಮತ್ತು ಜೇನಿನಲ್ಲಿರುವ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು ಶರೀರದಲ್ಲಿ ಫ್ರೀ ರ್ಯಾಡಿಕಲ್‌ಗಳ ಪರಿಣಾಮಗಳನ್ನು ತಗ್ಗಿಸುವ ಮೂಲಕ ವಯಸ್ಸಾಗುವುದನ್ನು ತಡೆಯುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ. ಫ್ರೀ ರ್ಯಾಡಿಕಲ್‌ಗಳು ನಮ್ಮ ಆಂತರಿಕ ಅಂಗಾಂಗಗಳಿಗೆ ಬಹಳಷ್ಟು ಹಾನಿಯನ್ನುಂಟು ಮಾಡಿ, ಅವುಗಳು ಕ್ಷಮತೆಯನ್ನು ಕಳೆದುಕೊಳ್ಳುವಂತೆ ಮಾಡುತ್ತವೆ.

ಕೆಮ್ಮನ್ನು ಶಮನಗೊಳಿಸುತ್ತದೆ

ಹಾಲು ಮತ್ತು ಜೇನಿನ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಎದೆಯಲ್ಲಿನ ದಟ್ಟಣೆಯನ್ನು ತಗ್ಗಿಸಲು ನೆರವಾಗುತ್ತವೆ. ಅದರ ಊರಿಯೂತ ನಿವಾರಕ ಗುಣವು ಗಂಟಲಿನ ಕೆರಳುವಿಕೆ ಮತ್ತು ಊತವನ್ನು ತಗ್ಗಿಸುತ್ತದೆ ಮತ್ತು ಕೆಮ್ಮನ್ನು ಕಡಿಮೆ ಮಾಡುತ್ತದೆ. ಶರೀರದಲ್ಲಿಯ ಲೋಳೆಯನ್ನು ಹೊರಹಾಕಲೂ ಹಾಲು ಮತ್ತು ಜೇನಿನ ಮಿಶ್ರಣ ನೆರವಾಗುತ್ತದೆ.

ಒತ್ತಡ ನಿವಾರಿಸುತ್ತದೆ

ಬೆಚ್ಚಗಿನ ಹಾಲು ಮತ್ತು ಜೇನಿನ ಪೇಯವು ಒತ್ತಡಕ್ಕೆ ಕಾರಣವಾಗುವ ಕಾರ್ಟಿಸಲ್ ಹಾರ್ಮೋನ್‌ನ ಮಟ್ಟವನ್ನು ನಿಗ್ರಹಿಸುತ್ತದೆ, ಅಲ್ಲದೆ ಹಾರ್ಮೋನ್ ಆಂತರಿಕ ಅಂಗಾಂಗಳಿಗೆ ಮಾಡಿರುವ ಹಾನಿಯನ್ನೂ ತಗ್ಗಿಸುತ್ತದೆ. ಮಿದುಳಿನ ನರಗಳನ್ನು ಶಾಂತಗೊಳಿಸುತ್ತದೆ.

ಏಕಾಗ್ರತೆಯನ್ನು ಹೆಚ್ಚಿಸುತ್ತದೆ

ಈ ಅದ್ಭುತ ಪೇಯವು ಮಿದುಳಿನ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಒತ್ತಡಗಳನ್ನು ನಿವಾರಿಸುತ್ತದೆ. ಜ್ಞಾಪಕ ಶಕ್ತಿಯನ್ನು ಉತ್ತಮಗೊಳಿಸುತ್ತದೆ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ.

ಹೊಟ್ಟೆಯ ಸೋಂಕುಗಳ ವಿರುದ್ಧ ಹೋರಾಡುತ್ತದೆ

ಜೇನಿನಲ್ಲಿರುವ ಪ್ರಬಲ ಬ್ಯಾಕ್ಟೀರಿಯಾ ನಿವಾರಕ ಗುಣವು ಸೋಂಕಿಗೆ ಕಾರಣವಾಗು ವ ಬ್ಯಾಕ್ಟೀರಿಯಾಗಳನ್ನು ನಾಶಗೊಳಿಸುತ್ತದೆ. ಹಾಲಿನಲ್ಲಿಯ ಕಿಣ್ವಗಳೂ ಉತ್ತಮ ಪಚನ ಕ್ರಿಯೆಗೆ ನೆರವಾಗುತ್ತವೆ ಮತ್ತು ಒಟ್ಟಾರೆಯಾಗಿ ಹೊಟ್ಟೆಯನ್ನು ಸುಸ್ಥಿತಿಯಲ್ಲಿರಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News