ನಿಮ್ಮಲ್ಲಿ ಈ ಲಕ್ಷಣಗಳು ಕಂಡುಬಂದರೆ ಕಡೆಗಣಿಸದಿರಿ: ಅದು ರಕ್ತಹೀನತೆಯಾಗಿರಬಹುದು...

Update: 2017-11-09 13:19 GMT

ಶರೀರದಾದ್ಯಂತ ಆಮ್ಲಜನಕವನ್ನು ಸಾಗಿಸುವ ಕೆಂಪು ರಕ್ತಕೋಶಗಳ ಕೊರತೆಯುಂಟಾ ಗಿರುವ ಸ್ಥಿತಿಯನ್ನು ಅನೀಮಿಯಾ ಅಥವಾ ರಕ್ತಹೀನತೆ ಎಂದು ಕರೆಯುತ್ತಾರೆ. ಕಬ್ಬಿಣದ ಕೊರತೆ, ಗಾಯ ಅಥವಾ ರಜೋಚಕ್ರದಲ್ಲಿ ಅತಿಯಾದ ರಕ್ತಸ್ರಾವದಿಂದಾಗಿ ಶರೀರದಲ್ಲಿ ರಕ್ತ ನಷ್ಟ ಇವು ರಕ್ತಹೀನತೆಗೆ ಮುಖ್ಯ ಕಾರಣಗಳಾಗಿವೆ. ಹೆಚ್ಚಿನ ಸಂದರ್ಭದಲ್ಲಿ ರಕ್ತಹೀನತೆಯ ಲಕ್ಷಣಗಳು ಅಸ್ಪಷ್ಟವಾಗಿರುವುದರಿಂದ ನಾವು ಅವುಗಳನ್ನು ಕಡೆಗಣಿಸುತ್ತೇವೆ. ಆದರೆ ಈ ಲಕ್ಷಣಗಳನ್ನು ಕಡೆಗಣಿಸುತ್ತಿದ್ದರೆ ಕಾಲಕ್ರಮೇಣ ಹಾನಿಕಾರಕ ಪರಿಣಾಮ ಗಳನ್ನು ಅನುಭವಿಸಬೇಕಾಗುತ್ತದೆ.

ನಮ್ಮ ಆರೋಗ್ಯವನ್ನು ಕಾಯ್ದಕೊಳ್ಳಲು ನಾವು ಗಮನವಿರಿಸಬೇಕಾದ ರಕ್ತಹೀನತೆಯ ಲಕ್ಷಣಗಳಿಲ್ಲಿವೆ

ದಣಿವು

ವ್ಯಕ್ತಿಯು ರಕ್ತತಹೀನತೆಗೆ ತುತ್ತಾದಾಗ ಕೆಂಪು ರಕ್ತಕೋಶಗಳು ಶರೀರದ ಎಲ್ಲ ಭಾಗಗಳಿಗೆ ಸಾಕಷ್ಟು ಆಮ್ಲಜನಕವನ್ನು ಸಾಗಿಸುವುದಿಲ್ಲ ಮತ್ತು ಇದು ಅಂತಿಮವಾಗಿ ಪದೇ ಪದೇ ಆಯಾಸಗೊಳ್ಳಲು ಕಾರಣವಾಗುತ್ತದೆ.

ಉಸಿರಾಟದ ತೊಂದರೆ

ವ್ಯಾಯಾಮ ಮಾಡುವಾಗ, ಮೆಟ್ಟಿಲುಗಳನ್ನು ಹತ್ತುವಾಗ ಅಥವಾ ಏನನ್ನಾದರೂ ಎತ್ತುವಾಗ ಏದುಸಿರಿನ ಅನುಭವವಾಗಬಹುದು, ಉಸಿರಾಟವನ್ನು ಕಳೆದುಕೊಂಡಂತೆ ಭಾಸವಾಗಬಹುದು. ಇದನ್ನು ಕಡೆಗಣಿಸಬಾರದು. ಇದು ಶರೀರದಲ್ಲಿ ಆಮ್ಲಜನಕದ ಕೊರತೆಯನ್ನು ಸೂಚಿಸುವುದರಿಂದ ರಕ್ತಹೀನತೆಯ ಸ್ಪಷ್ಟ ಸಂಕೇತವಾಗಿದೆ.

ದುರ್ಬಲ ಉಗುರುಗಳು

ನಿಮ್ಮ ಉಗುರುಗಳು ತೆಳ್ಳಗಾಗಿದ್ದರೆ ಮತ್ತು ಸುಲಭದಲ್ಲಿ ಒಡೆಯುತ್ತಿದ್ದರೆ ಅದು ಕಬ್ಬಿಣಾಂಶದ ಕೊರತೆಯನ್ನು ಸೂಚಿಸುತ್ತದೆ.

ಅವಿಶ್ರಾಂತ ಕಾಲುಗಳು

ನಿಮ್ಮ ಕಾಲುಗಳನ್ನು, ವಿಶೇಷವಾಗಿ ರಾತ್ರಿ ನಿದ್ರೆಯಲ್ಲ್ಲಿಯೂ ಅಲುಗಾಡಿಸುತ್ತಿರಬೇಕೆಂಬ ತುಡಿತವುಂಟಾಗುತ್ತಿದ್ದರೆ ಅದು ನೀವು ಕಬ್ಬಿಣಾಂಶ ಕೊರತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದೀರಿ ಎನ್ನುವುದನ್ನು ಸೂಚಿಸುತ್ತಿರಬಹುದು.

ಪೇಲವ ಚರ್ಮ

ವಿಟಾಮಿನ್ ಬಿ 12 ಮತ್ತು ಕಬ್ಬಿಣದ ಕೊರತೆಯು ಚರ್ಮಕ್ಕೆ ಸಾಕಷ್ಟು ರಕ್ತಪೂರೈಕೆಯಾಗದಂತೆ ಮಾಡುತ್ತದೆ ಮತ್ತು ಇದರಿಂದಾಗಿ ಚರ್ಮವು ತನ್ನ ಕಸುವನ್ನು ಕಳೆದುಕೊಂಡು ಪೇಲವವಾಗುತ್ತದೆ.

ಏನನ್ನಾದರೂ ತಿನ್ನುವ ವಿಚಿತ್ರ ಬಯಕೆ

ಮಂಜುಗಡ್ಡೆ, ಅಡುಗೆ ಸೋಡಾ, ಆವೆಮಣ್ಣು, ಸೀಮೆಸುಣ್ಣ ಅಥವಾ ಪೆನ್ಸಿಲ್‌ನಂತಹ ಯಾವುದೇ ಪೋಷಕಾಂಶಗಳಿಲ್ಲದ ವಸ್ತುಗಳನ್ನು ತಿನ್ನಬೇಕೆಂದು ನೀವು ಬಯಸಬಹುದು. ಇದು ರಕ್ತಹೀನತೆಯ ಲಕ್ಷಣವೆಂದು ಗುರುತಿಸಲ್ಪಟ್ಟಿದೆ.

ಎದೆನೋವು

ಅಷ್ಟೇನೂ ತೀವ್ರವಲ್ಲದ, ನಿರಂತರವಾದ ಎದೆನೋವು ಕಾಣಿಸಿಕೊಂಡರೆ ಅದು ರಕ್ತಹೀನತೆಯ ಲಕ್ಷಣವಾಗಿದೆ.

ಮರಗಟ್ಟುವುದು: ಕೈ-ಕಾಲುಗಳಲ್ಲಿ ಆಗಾಗ್ಗೆ ಮರಗಟ್ಟಿದ, ಸೂಜಿಯಿಂದ ಚುಚ್ಚಿದಂತಹ ಅನುಭವವಾಗುತ್ತಿದ್ದರೆ ಅದು ಬಿ ವಿಟಾಮಿನ್ ಕೊರತೆಯು ಕಾರಣವಾಗಿರುವ ರಕ್ತಹೀನತೆಯಾಗಿರಬಹುದು.

ಕಪ್ಪು ಮಲ: ಮಲದ ಬಣ್ಣ ಕಪ್ಪಾಗಿದ್ದರೆ, ಮಲದಲ್ಲಿ ರಕ್ತವಿದ್ದರೆ ಅಥವಾ ಗುದದ್ವಾರದಲ್ಲಿ ರಕ್ತಸ್ರಾವವಾಗುತ್ತಿದ್ದರೆ ಅದು ಅನೀಮಿಯಾವನ್ನು ಸೂಚಿಸಬಹುದು ಅಥವಾ ಕರುಳಿನ ಸಮಸ್ಯೆಯೂ ಆಗಿರಬಹುದು. ಇಂತಹ ಸಂದರ್ಭದಲ್ಲಿ ವೈದ್ಯರನ್ನು ತಕ್ಷಣ ಸಂಪರ್ಕಿಸಬೇಕು.

ಮಾಸಿಕ ಚಕ್ರದಲ್ಲಿ ಅತಿಯಾದ ರಕ್ತಸ್ರಾವ: ಋತುಚಕ್ರದಿಂದಾಗಿ ಮಹಿಳೆಯರು ರಕ್ತಹೀನತೆಗೆ ಗುರಿಯಾಗುವ ಸಾಧ್ಯತೆಯು ಹೆಚ್ಚು. ಗರ್ಭಾಶಯ ಕುಹರದಲ್ಲಿ ಫೈಬ್ರಾಯ್ಡ್ಸಾಗಳ ಉಪಸ್ಥಿತಿ ವಿಪರೀತ, ಅನಿಯಮಿತ ಮತ್ತು ನೋವಿನಿಂದ ಕೂಡಿದ ರಕ್ತಸ್ರಾವಕ್ಕೆ ಕಾರಣವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News